ಮಹೀಂದ್ರಾ ಹೊಸ ಎಕ್ಸ್ಯುವಿ300 ಸ್ಪೋರ್ಟ್ಜ್ ಬಿಡುಗಡೆ ಮಾಹಿತಿ ಬಹಿರಂಗ
ಮಹೀಂದ್ರಾ ಸಂಸ್ಥೆಯು ತನ್ನ ಪ್ರಮುಖ ಕಾರುಗಳ ಎಂಜಿನ್ ಬದಲಾವಣೆಯಲ್ಲಿ ಸಾಕಷ್ಟು ಆಸಕ್ತಿ ವಹಿಸಿದ್ದು, ಎಕ್ಸ್ಯುವಿ300 ಮಾದರಿಯಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ 1.2-ಲೀಟರ್ ಪೆಟ್ರೋಲ್ ಎಂಜಿನ್ನಲ್ಲೇ ಅತಿ ಹೆಚ್ಚು ಬಿಎಚ್ಪಿ ಉತ್ಪಾದನಾ ವೈಶಿಷ್ಟ್ಯತೆಯ ಸ್ಪೋರ್ಟ್ಜ್ ವರ್ಷನ್ ಬಿಡುಗಡೆ ಮಾಡುತ್ತಿದೆ.

ಹೊಸದಾಗಿ ಅಭಿವೃದ್ದಿಗೊಳಿಸಲಾಗಿರುವ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಎಂಸ್ಟಾಲಿನ್ ಎಂದು ಹೆಸರಿಸಿರುವ ಮಹೀಂದ್ರಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಮಾದರಿಯ 1.2-ಲೀಟರ್ ಪೆಟ್ರೋಲ್ ಎಂಜಿನ್ಗಿಂತಲೂ ಹೆಚ್ಚು ಸುಧಾರಿತ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಳಿಸಲಾಗಿದೆ. ಹೊಸ ಎಂಜಿನ್ ಅನ್ನು ಸ್ಪೋರ್ಟ್ಜ್ ವರ್ಷನ್ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ಹೊಸ ಕಾರು ಮುಂಬರುವ ಎಪ್ರಿಲ್ ಅಂತ್ಯಕ್ಕೆ ಮಾರುಕಟ್ಟೆ ಪ್ರವೇಶಿಸಲಿದೆ.

ಹೊಸ ಎಂಜಿನ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ 6-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆ ಹೊಂದಲಿದ್ದು, ಸಾಮಾನ್ಯ ಮಾದರಿಯ 1.2-ಲೀಟರ್ ಪೆಟ್ರೋಲ್ ಎಂಜಿನ್ಗಿಂತಲೂ ಹೆಚ್ಚು ಸುಧಾರಿತ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಳಿಸಿದೆ.

ಹೊಸ ಎಂಸ್ಟಾಲಿನ್ ಪೆಟ್ರೋಲ್ ಎಂಜಿನ್ ಮಾದರಿಯು 130-ಬಿಎಚ್ಪಿ ಮತ್ತು 230-ಎನ್ಎಂ ಟಾರ್ಕ್ ಉತ್ಪಾದನಾ ಸಾಮಾರ್ಥ್ಯ ಹೊಂದಿದ್ದು, ಇದು ಸಾಮಾನ್ಯ ಮಾದರಿಯ 1.2-ಲೀಟರ್ ಪೆಟ್ರೋಲ್ ಎಂಜಿನ್ಗಿಂತಲೂ ಹೆಚ್ಚು ಬಿಎಚ್ಪಿ ಉತ್ಪಾದನೆ ಮಾಡಲಿದೆ.

ಹೊಸ ಎಂಜಿನ್ ಮಾದರಿಯನ್ನ ಕೇವಲ ಎಕ್ಸ್ಯುವಿ300 ಸ್ಪೋರ್ಟ್ಜ್ ವರ್ಷನ್ನಲ್ಲಿ ಮಾತ್ರವಲ್ಲದೇ ಮುಂಬರುವ ಫೋರ್ಡ್ ಹೊಸ ಇಕೋಸ್ಪೋರ್ಟ್ಸ್ ಆವೃತ್ತಿಯಲ್ಲೂ ಇದೇ ಎಂಜಿನ್ ಅನ್ನು ಬಳಕೆ ಮಾಡಲಾಗುತ್ತಿದ್ದು, ಸಹಭಾಗಿತ್ವ ಯೋಜನೆಯಲ್ಲಿ ಕಾರು ಉತ್ಪಾದನೆ ಮಾಡುತ್ತಿರುವ ಫೋರ್ಡ್ ಮತ್ತು ಮಹೀಂದ್ರಾ ಸಂಸ್ಥೆಯು ಹೊಸ ಎಂಜಿನ್ ಅನ್ನು ವಿವಿಧ ಕಾರು ಮಾದರಿಗಳಲ್ಲಿ ಬಳಕೆ ಮಾಡಿಕೊಳ್ಳಲಿವೆ.

ಇನ್ನು ಮಹೀಂದ್ರಾ ಸಂಸ್ಥೆಯು ಎಕ್ಸ್ಯುವಿ300 ಸ್ಪೋರ್ಟ್ಜ್ ಆವೃತ್ತಿಯನ್ನು ಪೆಟ್ರೋಲ್ ಮಾದರಿಯಲ್ಲಿ ಮಾತ್ರವೇ ಬಿಡುಗಡೆ ಮಾಡಲಿದ್ದು, ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್ಯುವಿ ಮಾದರಿಗಳಲ್ಲೇ ಇದು ಅತಿ ಹೆಚ್ಚು ಬಿಎಚ್ಪಿ ಉತ್ಪಾದನಾ ಆವೃತ್ತಿಯಾಗಿರಲಿದೆ.

ಹಾಗೆಯೇ ಹೊಸ ಕಾರನ್ನು ಸ್ಪೋರ್ಟ್ಜ್ ಮಾದರಿಯಾಗಿ ಗುರುತಿಸಿಕೊಳ್ಳಲು ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದ್ದು, ಸ್ಪೋರ್ಟಿ ಗ್ರಾಫಿಕ್ಸ್ ಮತ್ತು ಕಾರಿನ ಒಳಭಾಗದಲ್ಲಿ ರೆಡ್ ಲೈನ್ಗಳನ್ನು ಬಳಕೆ ಮಾಡಿರುವುದು ಆಕರ್ಷಣಿವಾಗಿದೆ.

ಇನ್ನುಳಿದಂತೆ ಹೊಸ ಕಾರು ಸಾಮಾನ್ಯ ಕಾರಿನ ಮಾದರಿಯಲ್ಲೇ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಸಾಮಾನ್ಯ ಪೆಟ್ರೋಲ್ ಆವೃತ್ತಿಗಿಂತಲೂ ಹೊಸ ಕಾರು ಹೆಚ್ಚುವರಿಯಾಗಿ ರೂ. 50 ಸಾವಿರದಿಂದ ರೂ.80 ಸಾವಿರ ಹೆಚ್ಚುವರಿ ಬೆಲೆ ಪಡೆಯಲಿದೆ.

ಸಾಮಾನ್ಯ ಆವೃತ್ತಿಯಲ್ಲಿ ಪೆಟ್ರೋಲ್ ಮಾದರಿಯ 1.2-ಲೀಟರ್ ಎಂಜಿನ್ನೊಂದಿಗೆ 110-ಬಿಎಚ್ಪಿ ಸಾಮರ್ಥ್ಯವನ್ನು ಹೊಂದಿದ್ದು, ಹೊಸ ಸ್ಪೋರ್ಟ್ಜ್ ಆವೃತ್ತಿಯು ಹೆಚ್ಚುವರಿಯಾಗಿ 20-ಬಿಎಚ್ಪಿ ಉತ್ಪಾದನಾ ಗುಣಹೊಂದಿದೆ.

ಇದು ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲಿದ್ದು, ಪ್ರತಿಸ್ಪರ್ಧಿ ಮಾದರಿಗಳಾದ ವಿಟಾರಾ ಬ್ರೆಝಾ ಪೆಟ್ರೋಲ್ ಮತ್ತು ವೆನ್ಯೂ ಪೆಟ್ರೋಲ್ ಟರ್ಬೋ ಆವೃತ್ತಿಗೆ ಪೈಪೋಟಿ ನೀಡುವುದಲ್ಲದೇ ಸಣ್ಣ ಗಾತ್ರದ ಎಂಜಿನ್ ಮೂಲಕ ಉತ್ತಮ ಪರ್ಫಾಮೆನ್ಸ್ ಪ್ರಿಯರ ಖರೀದಿಗೆ ಉತ್ತಮವಾಗಿದೆ.


Click it and Unblock the Notifications