ಭಾರತದಲ್ಲಿ ಹೀಗೆ ಬಂದು ಹಾಗೆ ಹೋದ ಮಹೀಂದ್ರಾ ಕಾರುಗಳಿವು..!
ಮಹೀಂದ್ರಾ ಅಂಡ್ ಮಹೀಂದ್ರಾ ಭಾರತದ ಅತ್ಯಂತ ಹಳೆಯ ಕಾರು ತಯಾರಕ ಕಂಪನಿಗಳಲ್ಲಿ ಒಂದು. ಮಿಲಿಟರಿ ಹಾಗೂ ನಾಗರಿಕ ಬಳಕೆಗಾಗಿ ಜೀಪ್ ಹಾಗೂ ಎಸ್‌ಯುವಿಗಳನ್ನು ವಿನ್ಯಾಸಗೊಳಿಸುವ ದೀರ್ಘ ದಾಖಲೆಯನ್ನು ಮಹೀಂದ್ರಾ ಕಂಪನಿಯು ಹೊಂದಿದೆ. ಮಹೀಂದ್ರಾ ಅನೇಕ ಕಾರುಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಅವುಗಳಲ್ಲಿ ಕೆಲವು ಕಾರುಗಳು ಸಾಕಷ್ಟು ಜನಪ್ರಿಯತೆಯನ್ನು ಹೊಂದಿದರೆ, ಇನ್ನೂ ಕೆಲವು ಕಾರುಗಳು ಮಾರುಕಟ್ಟೆಯಲ್ಲಿ ಬಂದು ಮರೆಯಾಗಿ ಹೋದವು.

ಹೀಗೆ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ತಮ್ಮ ಛಾಪನ್ನು ಒತ್ತದೆ ಮರೆಯಾದ ಮಹೀಂದ್ರಾ ಕಾರುಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.
1. ಮಹೀಂದ್ರಾ ಲೆಜೆಂಡ್
ಮಹೀಂದ್ರಾ ಲೆಜೆಂಡ್, ಒಂದು ಸೀಮಿತ ಆವೃತ್ತಿಯ ಕಾರು. ಈ ಕಾರ್ ಅನ್ನು ವಿಶೇಷವಾಗಿ ಭಾರತೀಯ ಸೇನೆಗಾಗಿ ತಯಾರಿಸಲಾಗಿತ್ತು. ಮಹೀಂದ್ರಾ ಥಾರ್ ಕಾರ್ ಅನ್ನು ಈ ಕಾರಿನ ಆಧಾರದ ಮೇಲೆ ನಿರ್ಮಿಸಲಾಗಿದೆ. ಈ ಕಾರು ಎರಡು ಡೋರುಗಳನ್ನು ಹೊಂದಿರುವ ಆಫ್ ರೋಡ್ ಎಸ್ ಯುವಿಯಾಗಿತ್ತು. ಮಹೀಂದ್ರಾ ಲೆಜೆಂಡ್ ಕ್ಲಾಸಿಕ್ ಕಾಣುವ ಕಾರು. ಈ ಕಾರಿನಲ್ಲಿ ಹಿಂಭಾಗದ ಪ್ರಯಾಣಿಕರಿಗಾಗಿ ಸೀಟುಗಳನ್ನು ಹಾಗೂ ರೂಫ್ ನೀಡಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಮಾರಾಟವಾಗದ ಕಾರಣಕ್ಕೆ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಯಿತು.

2. ಮಹೀಂದ್ರಾ ಗ್ರ್ಯಾಂಡ್ ಆರ್ಮಾಡಾ
ಮಹೀಂದ್ರಾ ಆರ್ಮಾಡಾ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು. ಮಹೀಂದ್ರಾ ಗ್ರ್ಯಾಂಡ್ ಆರ್ಮಾಡಾ 4x4 ಮಾದರಿಯಲ್ಲಿತ್ತು. ಈ ಕಾರು ಸ್ಟಾಂಡರ್ಡ ಆರ್ಮಾಡಾಗಿಂತ ಹೆಚ್ಚಿನ ಸ್ಪೇಸ್ ಅನ್ನು ಹೊಂದಿತ್ತು. 10 ಜನರು ಈ ಕಾರಿನಲ್ಲಿ ಆರಾಮವಾಗಿ ಕುಳಿತುಕೊಳ್ಳಬಹುದಿತ್ತು. ಈ ಕಾರು ಸಾಕಷ್ಟು ಬಲಶಾಲಿಯಾಗಿತ್ತು. ಈ ಕಾರು ಭಾರತೀಯ ಗ್ರಾಹಕರಲ್ಲಿ ಜನಪ್ರಿಯವಾಗದ ಕಾರಣಕ್ಕೆ ಸ್ಥಗಿತಗೊಳಿಸಲಾಯಿತು.

3. ಮಹೀಂದ್ರಾ ವಯೋಜರ್
ಮಹೀಂದ್ರಾ ವಯೋಜರ್ ಅನ್ನು 90ರ ದಶಕದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಆ ಸಮಯದಲ್ಲಿ ಈ ಕಾರು ಭಾರತದ ಮೊದಲ ಎಂಪಿವಿಯಾಗಿತ್ತು. ಈ ಕಾರು ಮಿತ್ಸುಬಿಷಿ ಎಲ್ಎಸ್ 300ರ ರಿಬ್ರಾಂಡ್ ಮಾದರಿಯಾಗಿತ್ತು. ಈ ಕಾರಿನಲ್ಲಿ ಪಿಯುಜಿಯೊ 2.5 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅಳವಡಿಸಲಾಗಿತ್ತು. ದುಬಾರಿ ಬೆಲೆಯನ್ನು ಹೊಂದಿದ್ದ ಕಾರಣಕ್ಕೆ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಿಸಲಿಲ್ಲ.

4. ಮಹೀಂದ್ರಾ ಕಮಾಂಡರ್
ಮಹೀಂದ್ರಾ ಕಮಾಂಡರ್ ಅನ್ನು 1991ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ನಂತರ ಈ ಕಾರಿನ ವಿವಿಧ ಮಾದರಿಗಳನ್ನು ಬಿಡುಗಡೆಗೊಳಿಸಲಾಯಿತು. ಈ ಕಾರ್ ಅನ್ನು ಹಲವಾರು ಸೀಟಿನ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಬಲಿಷ್ಟವಾದ ನಿರ್ಮಾಣಕ್ಕಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು. ಕಾರು 2 ವೀಲ್ ಡ್ರೈವ್ ಹಾಗೂ 4 ವೀಲ್ ಡ್ರೈವ್‌ನಲ್ಲಿ ಲಭ್ಯವಿತ್ತು. ಜನಪ್ರಿಯತೆ ಕುಸಿಯುತ್ತಿದ್ದಂತೆ ಈ ಕಾರಿನ ಮಾರಾಟವನ್ನು ನಿಲ್ಲಿಸಬೇಕಾಯಿತು.

5. ಮಹೀಂದ್ರಾ ಬೊಲೆರೊ ಇನ್ವೆಡರ್
ಮಹೀಂದ್ರಾ ಬೊಲೆರೊ ಇನ್ವೆಡರ್ ಕಂಪನಿಯ ಜನಪ್ರಿಯ ಬೊಲೆರೊ ಕಾರಿನ ಆಧಾರದ ಮೇಲೆ ತಯಾರಾಗಿತ್ತು. ಮಾರುತಿ ಜಿಪ್ಸಿಗೆ ಪೈಪೋಟಿ ನೀಡಲು ಈ ಕಾರ್ ಅನ್ನು ಬಿಡುಗಡೆಗೊಳಿಸಲಾಗಿತ್ತು. ಕಾರಿನಲ್ಲಿ ಎರಡು ಮುಂಭಾಗ ಹಾಗೂ ಹಿಂಭಾಗದ ಡೋರುಗಳಿದ್ದವು. ಕಾರಿನ ಹಿಂಭಾಗದಲ್ಲಿ ಎದುರು ಬದುರಾದ ಸೀಟುಗಳಿದ್ದವು. ಯುವ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಈ ಕಾರ್ ಅನ್ನು
ತಯಾರಿಸಲಾಗಿತ್ತು. ಇನ್ವೆಡರ್ ನಲ್ಲಿ 2.5-ಲೀಟರ್ ಡೀಸೆಲ್ ಎಂಜಿನ್ ಅಳವಡಿಸಲಾಗಿತ್ತು. ಬೇಡಿಕೆ ಕುಸಿದ ಕಾರಣಕ್ಕೆ ಈ ಕಾರ್ ಅನ್ನು ಸ್ಥಗಿತಗೊಳಿಸಲಾಯಿತು.

6. ಮಹೀಂದ್ರಾ ಆಕ್ಸ್
ಮಹೀಂದ್ರಾ ಅಂಡ್ ಮಹೀಂದ್ರಾ ತನ್ನ ವಾಹನಗಳನ್ನು ವಿಶ್ವದ ಅನೇಕ ರಕ್ಷಣಾ ಇಲಾಖೆಗಳಿಗೆ ಪೂರೈಸುತ್ತದೆ. ಮಹೀಂದ್ರಾ ಆಕ್ಸ್ ಅನ್ನು ನಿರ್ದಿಷ್ಟವಾಗಿ ವಿಶ್ವದ ಅನೇಕ ರಕ್ಷಣಾ ಪಡೆಗಳನ್ನು ಪೂರೈಸಲು ನಿರ್ಮಿಸಲಾಗಿದೆ. ಕಂಪನಿಯು ಈ ಕಾರಿನ ನಾಗರಿಕ ಆವೃತ್ತಿಯನ್ನು ಸಹ ಬಿಡುಗಡೆಗೊಳಿಸಿತ್ತು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಲಿಲ್ಲ. ಈ ಕಾರನ್ನು ದೇಸಿ ಹಮ್ಮರ್ ಎಂದೂ ಕರೆಯಲಾಗುತ್ತಿತ್ತು.


Click it and Unblock the Notifications