ಲಾಕ್‌ಡೌನ್ ವಿನಾಯ್ತಿ: ಭಾರತದಲ್ಲಿ ಕಾರು ಮಾರಾಟವನ್ನು ಪುನಾರಂಭಿಸಿದ ಪೋರ್ಷೆ
ಪೋರ್ಷೆ ಇಂಡಿಯಾ ಕಂಪನಿಯು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯ ಪ್ರಕಾರ ಕಾರು ಮಾರಾಟ ಮತ್ತು ಗ್ರಾಹಕರ ಸೇವೆಗಳಿಗೆ ಚಾಲನೆ ನೀಡಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ಮಾರಾಟ ಮಳಿಗೆಗಳಲ್ಲಿ ಹಲವಾರು ಗರಿಷ್ಠ ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡಿದೆ.

ಕೇಂದ್ರ ಸರ್ಕಾರ ನೀಡಿರುವ ಹೊಸ ಗೈಡ್‌ಲೆನ್ಸ್ ಪ್ರಕಾರ, ಹಸಿರು ವಲಯದಲ್ಲಿರುವ ಮುನ್ಸಿಪಲ್ ಕಾರ್ಪೊರೇಶನ್ ಮಿತಿ ಹೊರಗಿನ ಕೈಗಾರಿಕಾ ಸಂಸ್ಥೆಗಳಿಗೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಅನುಮತಿ ನೀಡಲಾಗುತ್ತಿದ್ದು, ಗರಿಷ್ಠ ಪ್ರಮಾಣದ ಸುರಕ್ಷಾ ಸಾಧನಗಳನ್ನು ಬಳಕೆ ಮಾಡುವುದು ಕಡ್ಡಾಯವಾಗಿದೆ. ಹೊಸ ಮಾರ್ಗಸೂಚಿ ಅನ್ವಯ ಕಾರು ಮಾರಾಟ ಮತ್ತು ಗ್ರಾಹಕರ ಸೇವೆಗಳನ್ನು ಶುರು ಮಾಡಿರುವ ಪೋರ್ಷೆ ಕಂಪನಿಯು ದೇಶದ ಪ್ರಮುಖ ಮೆಟ್ರೋ ಸಿಟಿಗಳಲ್ಲಿ ಹತ್ತಾರು ಮಾರಾಟ ಮಳಿಗೆಗಳಿಗೆ ಮರುಚಾಲನೆ ನೀಡಿದೆ.

ಸದ್ಯ ಉತ್ಪಾದನೆಗೆ ಅನುಮತಿ ಪಡೆದುಕೊಂಡಿರುವ ಆಟೋ ಕಂಪನಿಗಳು ಶೇ.50ಕ್ಕಿಂತಲೂ ಕಡಿಮೆ ಪ್ರಮಾಣದ ಉದ್ಯೋಗಿಗಳೊಂದಿಗೆ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದ್ದು, ಉದ್ಯೋಗದ ಸ್ಥಳದಲ್ಲಿ ಸಾಮಾಜಿಕ ಅಂತರದ ಜೊತೆ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್ ಮತ್ತು ಹ್ಯಾಂಡ್ ಗ್ಲೌಸ್ ಬಳಕೆಯು ಕಡ್ಡಾಯವಾಗಿ ಬಳಕೆಮಾಡಬೇಕು.

ಈ ನಿಟ್ಟಿನಲ್ಲಿ ಹೊಸ ನಿಯಮ ಅನ್ವಯ ಪೋರ್ಷೆ ಕೂಡಾ ಗರಿಷ್ಠ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದು, ಮಾರಾಟ ಮಳಿಗೆಗಳಿಗೆ ಗ್ರಾಹಕರ ಆಗಮನ ತಡೆಯುವುದಕ್ಕಾಗಿ ಕಂಪನಿಯೇ ಆನ್‌ಲೈನ್ ವ್ಯವಹಾರಗಳ ಮೂಲಕ ಪತ್ರ ವ್ಯವಹಾರ ಮುಗಿಸಿ ಅಂತಿಮವಾಗಿ ಕಾರು ಉತ್ಪನ್ನಗಳನ್ನು ಗ್ರಾಹಕರ ಬಾಗಿಲಿಗೆ ತಲುಪಿಸಲಿವೆ.

ಜರ್ಮನ್ ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾದ ಪೋರ್ಷೆ ಇತ್ತೀಚೆಗಷ್ಟೇ ತನ್ನ ಬಹುನೀರಿಕ್ಷಿತ ಕಯೆನಿ ಕೂಪೆ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.1.31 ಕೋಟಿ ಬೆಲೆ ಪಡೆದುಕೊಂಡಿದೆ.

ಪೋರ್ಷೆ ಕಂಪನಿಯ ಐಷಾರಾಮಿ ಎಸ್‌ಯುವಿ ಮಾದರಿಯು ಲಂಬೋರ್ಗಿನಿ ಉರುಸ್, ರೇಂಜ್ ರೋವರ್ ಸ್ಪೋರ್ಟ್ ಮತ್ತು ಬಿಡುಗಡೆಗೆ ಸಿದ್ದವಾಗಿರುವ ಆಡಿ ಕ್ಯೂ8 ಕಾರುಗಳಿಗೆ ಪೈಪೋಟಿಯಾಗಿ ಕಯೆನಿ ಕೂಪೆ ಎಸ್‌ಯುವಿ ಬಿಡುಗಡೆಗೊಳಿಸಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಎರಡು ಮಾದರಿಗಳಲ್ಲಿ ಕಯೆನಿ ಕೂಪೆ ಎಸ್‌ಯುವಿ ಕಾರನ್ನು ಆಯ್ಕೆ ಮಾಡಬಹುದಾಗಿದೆ.

ಎರಡು ಮಾದರಿಗಳು ಸಂಪೂರ್ಣವಾಗಿ ವಿಭಿನ್ನ ಡ್ರೈವ್ ತಂತ್ರಜ್ಞಾನವನ್ನು ಹೊಂದಿದ್ದು, ಹೈ ಎಂಡ್ ಮಾದರಿಯು ಬೆಲೆಯಲ್ಲಿ ತುಸು ದುಬಾರಿ ಎನ್ನಿಸಲಿದೆ. ಕಯೆನಿ ಕೂಪೆ ಎಸ್‌ಯುವಿನಲ್ಲಿ ಆರಂಭಿಕ ಆವೃತ್ತಿಯು ವಿ6 ಎಂಜಿನ್‌ನೊಂದಿಗೆ ರೂ.1.31 ಕೋಟಿ(ಎಕ್ಸ್‌ಶೋರೂಂ) ಹೊಂದಿದ್ದರೆ, ಹೈ ಎಂಡ್ ಮಾದರಿಯು ವಿ8 ಎಂಜಿನ್‌ನೊಂದಿಗೆ ರೂ.1.97 ಕೋಟಿ(ಎಕ್ಸ್‌ಶೋರೂಂ) ಬೆಲೆ ಪಡೆದಿದೆ.

ಪೋರ್ಷೆ ಕಂಪನಿಯು ಕಯೆನಿ ಕೂಪೆ ಬಿಡುಗಡೆಗೂ ಮುನ್ನವೇ ಸ್ಟ್ಯಾಂಡರ್ಡ್ ಕಯೆನಿ ಎಸ್‌ಯುವಿ ಮಾರಾಟ ಮಾಡುತ್ತಿದ್ದು, ಇದೀಗ ಬಿಡುಗಡೆಯಾಗಿರುವ ಹೊಸ ಕಾರು ಸ್ಟ್ಯಾಂಡರ್ಡ್ ಮಾದರಿಗಿಂತಲೂ ರೂ.12 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಿದೆ.


Click it and Unblock the Notifications








