ವೆನ್ಯೂ ಮತ್ತು ವಿಟಾರಾ ಬ್ರೆಝಾ ಪ್ರತಿಸ್ಪರ್ಧಿ ರೆನಾಲ್ಟ್ ಕಿಗರ್ ಬಿಡುಗಡೆಯ ಮಾಹಿತಿ ಬಹಿರಂಗ
ರೆನಾಲ್ಟ್ ಸಂಸ್ಥೆಯು ಬಿಎಸ್-6 ನಿಯಮ ಅನುಗುಣವಾಗಿ ಹೊಸ ಕಾರುಗಳ ಮಾರಾಟದಲ್ಲಿ ಭಾರೀ ಬದಲಾವಣೆ ಪರಿಚಯಿಸುತ್ತಿದ್ದು, ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿ ಪೆಟ್ರೋಲ್ ಎಂಜಿನ್ ಪ್ರೇರಿತ ವಿವಿಧ ಮಾದರಿಯ ಹೊಸ ಕಾರುಗಳನ್ನು ರಸ್ತೆಗಿಳಿಸುತ್ತಿದೆ.

ಟ್ರೈಬರ್ ಮಿನಿ ಎಂಪಿವಿ, ಡಸ್ಟರ್ ಫೇಸ್‌ಲಿಫ್ಟ್ ಮತ್ತು ಕ್ವಿಡ್ ಫೇಸ್‌ಲಿಫ್ಟ್ ಕಾರುಗಳ ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡಿರುವ ರೆನಾಲ್ಟ್ ಸಂಸ್ಥೆಯು ಸದ್ಯದಲ್ಲೇ ಮತ್ತಷ್ಟು ಹೊಸ ಕಾರುಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು, ವಿನೂತನ ವಿನ್ಯಾಸದ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆ ನಡೆಸಿದೆ. ಮಾಹಿತಿಗಳ ಪ್ರಕಾರ ಹೊಸ ಕಾರು 2020-21ರ ಹಣಕಾಸು ವರ್ಷದ 2ನೇ ತ್ರೈಮಾಸಿಕ ವೇಳೆಗೆ ಬಿಡುಗಡೆಗೊಳ್ಳಲಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ.

ಸದ್ಯ ಹೊಸ ಕಾರನ್ನು ಹೆಚ್‌ಬಿಸಿ ಕೋಡ್‌ನೆಮ್ ಆಧಾರದ ಮೇಲೆ ರೋಡ್ ಟೆಸ್ಟಿಂಗ್ ಮಾಡಲಾಗುತ್ತಿದ್ದು, ಕಿಗರ್ ಹೆಸರನ್ನೇ ಅಧಿಕೃತವಾಗಿ ಕರೆಯುವುದು ಬಹುತೇಕ ಖಚಿತವಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡಸ್ಟರ್ ಕಾರಿಗಿಂತಲೂ ತುಸು ಸಣ್ಣ ಗಾತ್ರವನ್ನು ಹೊಂದಲಿರುವ ಕಿಗರ್ ಕಾರು ನಗರ ಪ್ರದೇಶದಲ್ಲಿನ ಸಂಚಾರಕ್ಕೆ ಸೂಕ್ತ ಆಯ್ಕೆಯಾಗಲಿದ್ದು, ಕೈಗೆಟುಕುವ ಬೆಲೆಯೊಂದಿಗೆ ಮಧ್ಯಮ ವರ್ಗದ ಗ್ರಾಹಕರ ಗಮನಸೆಳೆಯಲಿದೆ.

ಇತರೆ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಂತಲೂ ಕಿಗರ್ ಕಾರು ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗುವ ಸುಳಿವು ನೀಡಿದ್ದು, ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300, ನಿಸ್ಸಾನ್ ಕಿಕ್ಸ್ ಕಾರುಗಳಿಗೆ ಪೈಪೋಟಿ ನೀಡಲಿರುವ ಹೊಸ ಕಾರ ಐದು ಆಸನ ಮಾದರಿಯಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ ಹೊಸ ಕಾರಿನ ಎಂಜಿನ್ ಆಯ್ಕೆ ಆಕರ್ಷಕವಾಗಿದ್ದು, ಪರ್ಫಾಮೆನ್ಸ್ ಜೊತೆಗೆ ಇಂಧನ ದಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಹೊಸ ಕಿಗರ್ ಕಾರಿನಲ್ಲಿ ರೆನಾಲ್ಟ್ ಸಂಸ್ಥೆಯು ಹೊಸದಾಗಿ ಅಭಿವೃದ್ದಿಗೊಳಿಸಲಾಗುತ್ತಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಜೋಡಣೆ ಮಾಡುವ ಸಾಧ್ಯತೆಗಳಿದ್ದು, ಇದೇ ಎಂಜಿನ್ ಅನ್ನು ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿರುವ ಟ್ರೈಬರ್ ಟರ್ಬೋ ಆವೃತ್ತಿಯಲ್ಲೂ ಜೋಡಣೆ ಮಾಡಲು ನಿರ್ಧರಿಸಲಾಗಿದೆ.

ಹೀಗಾಗಿ ಕಿಗರ್ ಕಾರು ಪೆಟ್ರೋಲ್ ಮಾದರಿಯಲ್ಲಿ ಮಾತ್ರವೇ ಮಾರಾಟವಾಗಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹಲವು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರಲಿದೆ.

ಬಿಡುಗಡೆಯ ಅವಧಿ ಮತ್ತು ಬೆಲೆ(ಅಂದಾಜು)
ಸದ್ಯ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯಲ್ಲಿ ನಿರತವಾಗಿರುವ ಹೊಸ ಕಿಗರ್ ಕಾರನ್ನು ಇದೇ ವರ್ಷ ಜೂನ್ ಅಥವಾ ಜುಲೈ ಹೊತ್ತಿಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿದ್ದು, ಹೊಸ ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.80 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.8 ಲಕ್ಷ ಬೆಲೆಯೊಂದಿಗೆ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿವೆ.

ಇನ್ನು ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರುಗಳನ್ನು ಉನ್ನತೀಕರಿಸುತ್ತಿರುವ ರೆನಾಲ್ಟ್ ಸಂಸ್ಥೆಯು ಡೀಸೆಲ್ ಕಾರುಗಳ ಮಾರಾಟ ಬಂದ್ ಮಾಡುವ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ಪೆಟ್ರೋಲ್ ಎಂಜಿನ್ ಕಾರುಗಳ ಮೇಲೆ ಹೆಚ್ಚಿನ ಒತ್ತು ನೀಡುತ್ತಿದೆ.

ಇದರಿಂದ ರೆನಾಲ್ಟ್ ಬಿಡುಗಡೆ ಮಾಡಲಿರುವ ಹೊಸ ಪೆಟ್ರೋಲ್ ಕಾರುಗಳಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರುಗಳಷ್ಟೇ ಅಲ್ಲದೇ ಇನ್ನು ಕೆಲವು ಹೊಸ ಮಾದರಿಗಳು ಸಹ ಗ್ರಾಹಕರನ್ನು ಸೆಳೆಯಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇನ್ನು ಕೆಲವು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.
Image Courtesy: Kleber Silva/Behance


Click it and Unblock the Notifications