ಆಟೋ ಎಕ್ಸ್‌ಪೋ 2020: ಹತ್ತಕ್ಕೂ ಹೆಚ್ಚು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ರೆನಾಲ್ಟ್
ಡೀಸೆಲ್ ಕಾರುಗಳ ಮಾರಾಟದಲ್ಲಿ ಮಹತ್ವದ ನಿರ್ಣಯ ತೆಗೆದುಕೊಂಡಿರುವ ರೆನಾಲ್ಟ್ ಸಂಸ್ಥೆಯು ಏಪ್ರಿಲ್ 1ರ ನಂತರ ಸಂಪೂರ್ಣವಾಗಿ ಡೀಸೆಲ್ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದ್ದು, ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಕಾರು ಆವೃತ್ತಿಗಳ ಮೇಲೆ ಹೆಚ್ಚು ಒತ್ತು ನೀಡುತ್ತಿದೆ.

ಡೀಸೆಲ್ ಎಂಜಿನ್ ಬದಲಿಗೆ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಕಾರುಗಳ ಆಯ್ಕೆಯನ್ನು ಹೆಚ್ಚಿಸುವತ್ತ ಬೃಹತ್ ಯೋಜನೆ ರೂಪಿಸಿರುವ ರೆನಾಲ್ಟ್ ಸಂಸ್ಥೆಯು ವಿವಿಧ ಮಾದರಿಯ ಹೊಸ ಕಾರುಗಳನ್ನು ಅಭಿವೃದ್ದಿಗೊಳಿಸುತ್ತಿದ್ದು, ಇದೇ ತಿಂಗಳು 7ರಿಂದ ನೋಯ್ಡಾದಲ್ಲಿ ಆರಂಭವಾಗಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಒಳಗೊಂಡಂತೆ ಒಟ್ಟು 12 ಹೊಸ ಕಾರುಗಳನ್ನು ಪ್ರದರ್ಶನಗೊಳಿಸುವುದಾಗಿ ಸುಳಿವು ನೀಡಿದೆ.

ಸದ್ಯ ಟ್ರೈಬರ್ ಕಾರು ಮಾರಾಟದ ಮೂಲಕ ಗ್ರಾಹಕರ ಆಕರ್ಷಣೆಗೆ ಕಾರಣವಾಗಿರುವ ರೆನಾಲ್ಟ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ 12 ಕಾರು ಮಾದರಿಗಳನ್ನು ಪ್ರದರ್ಶನಗೊಳಿಸುತ್ತಿದ್ದು, ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಕಾರು ಆವೃತ್ತಿಗಳನ್ನು ಮಾತ್ರವೇ ಅನಾವರಣಗೊಳಿಸುತ್ತಿದೆ.

ಅನಾವರಣಗೊಳ್ಳಲಿರುವ ಕಾರುಗಳಲ್ಲಿ ಡಸ್ಟರ್ ನ್ಯೂ ಜನರೇಷನ್, ಕ್ಯಾಪ್ಚರ್ ಫೇಸ್‌ಲಿಫ್ಟ್, ಕ್ವಿಡ್ ಫೇಸ್‌ಲಿಫ್ಟ್, ಕ್ವಿಡ್ ಎಲೆಕ್ಟ್ರಿಕ್ ಮತ್ತು ಹೊಚ್ಚ ಹೊಸ ಕಾರು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ಕಿಗರ್ ಸೇರಿ ಹಲವು ಹೊಸ ಕಾರುಗಳು ಅನಾವರಣಗೊಳ್ಳಲಿವೆ.

ರೆನಾಲ್ಟ್ ಅನಾವರಣಗೊಳಿಸುವ ಕಾರುಗಳಲ್ಲಿ ಡಸ್ಟರ್ ಫೇಸ್‌ಲಿಫ್ಟ್ ಮತ್ತು ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಪ್ರಮುಖ ಆಕರ್ಷಣೆಯಾಗಲಿದ್ದು, ಹೆಚ್‌ಬಿಸಿ ಕೋಡ್‌ನೆಮ್ ಆಧಾರದ ಮೇಲೆ ಹೊಸ ಕಾರನ್ನು ಸದ್ಯ ರೋಡ್ ಟೆಸ್ಟಿಂಗ್ ಮಾಡಲಾಗುತ್ತಿದೆ. ಹ್ಯುಂಡೈ ವೆನ್ಯೂ ಮತ್ತು ಮಾರುತಿ ಸುಜುಕಿ ಬ್ರೆಝಾ ಕಾರುಗಳಿಗೆ ಪೈಪೋಟಿಯಾಗಿ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ರಸ್ತೆಗಿಳಿಯಲಿದ್ದು, ರೆನಾಲ್ಟ್ ಸಂಸ್ಥೆಯು ಹೊಸ ಕಾರಿನ ಟೀಸರ್ ಮೂಲಕ ಈಗಾಗಲೇ ಗ್ರಾಹಕರ ಕುತೂಹಲಕ್ಕೆ ಕಾರಣವಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡಸ್ಟರ್ ಕಾರಿಗಿಂತಲೂ ತುಸು ಸಣ್ಣ ಗಾತ್ರವನ್ನು ಹೊಂದಲಿರುವ ಕಿಗರ್ ಕಾರು ನಗರ ಪ್ರದೇಶದಲ್ಲಿನ ಸಂಚಾರಕ್ಕೆ ಸೂಕ್ತ ಆಯ್ಕೆಯಾಗಲಿದ್ದು, ಕೈಗೆಟುಕುವ ಬೆಲೆಯೊಂದಿಗೆ ಮಧ್ಯಮ ವರ್ಗದ ಗ್ರಾಹಕರ ಗಮನಸೆಳೆಯಲಿದೆ.

ಗ್ರಾಹಕರ ಬೇಡಿಕೆಯಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಸದ್ಯ ಭಾರೀ ಪ್ರಮಾಣದ ಬೇಡಿಕೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದು, ಇದೇ ಕಾರಣಕ್ಕಾಗಿ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ವಿಭಾಗದ ಮೇಲೆ ಹೆಚ್ಚಿನ ಗಮನಹರಿಸಿರುವ ರೆನಾಲ್ಟ್ ಸಂಸ್ಥೆಯು ಕಿಗರ್ ಬಿಡುಗಡೆಗೆ ಸಜ್ಜಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇತರೆ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಂತಲೂ ಕಿಗರ್ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗುವ ಸುಳಿವು ನೀಡಿದ್ದು, ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300, ನಿಸ್ಸಾನ್ ಕಿಕ್ಸ್ ಕಾರುಗಳಿಗೆ ಪೈಪೋಟಿ ನೀಡಲಿರುವ ಹೊಸ ಕಾರ ಐದು ಆಸನ ಮಾದರಿಯಲ್ಲಿ ಬಿಡುಗಡೆಯಾಗಲಿದೆ.

ಎಂಜಿನ್ ಸಾಮರ್ಥ್ಯ
ಬಿಡುಗಡೆಯಾಗುತ್ತಿರುವ ಹೊಸ ಕಿಗರ್ ಕಾರು ಟ್ರೈಬರ್ ಹೊಸ ಕಾರಿನಲ್ಲಿ ರೆನಾಲ್ಟ್ ಮತ್ತು ನಿಸ್ಸಾನ್ ಸಹಭಾಗಿತ್ವದಲ್ಲಿ ಅಭಿವೃದ್ದಿಪಡಿಸಲಾಗುತ್ತಿರುವ ಹೊಸ ತಂತ್ರಜ್ಞಾನ ಪ್ರೇರಿತ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, ಆಕರ್ಷಕ ನೋಟ ಮತ್ತು ಬಲಿಷ್ಠ ಬಾಡಿ ಕಿಟ್ ಜೋಡಣೆಯೊಂದಿಗೆ ರಸ್ತೆಗಿಳಿಯಲಿದೆ.

ಜೊತೆಗೆ ಹೊಸ ಕಾರು ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವಲ್ಲದೇ ಎಲೆಕ್ಟ್ರಿಕ್ ಆವೃತ್ತಿಯಲ್ಲೂ ಕೂಡಾ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿದ್ದು, ಹಲವು ಪ್ರೀಮಿಯಂ ಸೌಲಭ್ಯಗಳನ್ನು ಹೊಂದುವುದು ಬಹುತೇಕ ಖಚಿತ ಎನ್ನಲಾಗಿದೆ.

ಬಿಡುಗಡೆಯ ಅವಧಿ ಮತ್ತು ಬೆಲೆ(ಅಂದಾಜು)
ರೆನಾಲ್ಟ್ ಸಂಸ್ಥೆಯು ಹೊಸ ಕಾರನ್ನು ದೆಹಲಿ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಿದ ನಂತರ ಮತ್ತಷ್ಟು ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಳ್ಳಲಿದ್ದು, ಏಪ್ರಿಲ್ ಅಥವಾ ಮೇ ಹೊತ್ತಿಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಹಾಗೆಯೇ ಹೊಸ ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.8 ಲಕ್ಷ ಬೆಲೆಯೊಂದಿಗೆ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿವೆ.


Click it and Unblock the Notifications








