ಆಟೋ ಎಕ್ಸ್‌ಪೋ 2020: ಅನಾವರಣಕ್ಕೂ ಮುನ್ನ ಟಾಟಾ ಮೈಕ್ರೊ ಎಸ್‌ಯುವಿ ಟೀಸರ್ ಬಿಡುಗಡೆ
ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಟಾಟಾ ಮೋಟಾರ್ಸ್ ತನ್ನ ಹೊಸ ಮಾದರಿಯ ವಾಹನಗಳ ಉತ್ಪನ್ನಗಳನ್ನು ಅನಾವರಣಗೊಳಿಸಲು ಭರ್ಜರಿ ಸಿದ್ದತೆ ನಡೆಸಿದ್ದು, ಇದೇ ತಿಂಗಳು 7ರಿಂದ ಆರಂಭವಾಗುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರಯಾಣಿಕ ವಾಹನಗಳು ಮತ್ತು ವಾಣಿಜ್ಯ ವಾಹನಗಳು ಸೇರಿದಂತೆ ಬರೋಬ್ಬರಿ 26 ಹೊಸ ವಾಹನಗಳನ್ನು ಪ್ರದರ್ಶನಗೊಳಿಸಲಿದೆ.

ಹೊಸ ವಾಹನಗಳ ಉತ್ಪಾದನೆಯಲ್ಲಿ ಸದ್ಯ ಭಾರೀ ಬದಲಾವಣೆ ತರುವ ಮೂಲಕ ಗ್ರಾಹಕರ ಆಕರ್ಷಣೆ ಕಾರಣವಾಗಿರುವ ಟಾಟಾ ಮೋಟಾರ್ಸ್ ಸಂಸ್ಥೆಯು 2020ರ ಆಟೋ ಎಕ್ಸ್‌ಪೋ ಬಹುನೀರಿಕ್ಷಿತ ಕಾರು ಮಾದರಿಗಳ ಜೊತೆಗೆ ವಾಣಿಜ್ಯ ವಾಹನಗಳನ್ನು ಪ್ರದರ್ಶನಗೊಳಿಸಲಿದ್ದು, ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಜೊತೆಗೆ ಈ ಬಾರಿ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಸಹ ಅನಾವರಣಗೊಳಿಸುತ್ತಿರುವ ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಮಾಹಿತಿಗಳ ಪ್ರಕಾರ, ಟಾಟಾ ಸಂಸ್ಥೆಯು ಒಟ್ಟು 26 ವಾಹನಗಳನ್ನು ಅನಾವರಣಗೊಳಿಸಲಿದ್ದು, ಇದರಲ್ಲಿ 14 ವಾಣಿಜ್ಯ ಬಳಕೆಯ ವಾಹನಗಳು ಮತ್ತು 12 ಪ್ರಯಾಣಿಕ ಬಳಕೆಯ ಕಾರು ಮಾದರಿಗಳು ಸೇರಿವೆ.

ಜೊತೆಗೆ ಪ್ರದರ್ಶನಗೊಳ್ಳಲಿರುವ ವಾಹನಗಳಲ್ಲಿ ಕೆಲವು ಕೆಲವು ಮಾತ್ರವೇ ಹೊಸ ವಾಹನ ಮಾದರಿಗಳಾಗಿದ್ದು, ಇನ್ನುಳಿದ ವಾಹನ ಮಾದರಿಗಳು ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಯಾಗಿರುವ ಬಿಎಸ್-6 ನಿಯಮದಂತೆ ಹೊಸ ಎಂಜಿನ್‌ನೊಂದಿಗೆ ಅನಾವರಣಗೊಳ್ಳಲಿವೆ.

ಹೊಸ ಕಾರು ಮಾದರಿಗಳಾದ ಗ್ರಾವಿಟಾಸ್, ಆಲ್‌ಟ್ರೊಜ್, ಆಲ್‌ಟ್ರೊಜ್ ಎಲೆಕ್ಟ್ರಿಕ್, ನೆಕ್ಸಾನ್ ಎಲೆಕ್ಟ್ರಿಕ್, ನ್ಯೂ ಜನರೇಷನ್ ಟಿಗೋರ್, ಟಿಯಾಗೋ, ಹೆಚ್ಎಕ್ಸ್2 ಕಾನ್ಸೆಪ್ಟ್, ಹ್ಯಾರಿಯರ್ ಪೆಟ್ರೋಲ್ ಮಾದರಿಗಳ ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಾಹನಗಳ ಬಿಎಸ್-6 ಆವೃತ್ತಿಗಳು ಅನಾವರಣಗೊಳ್ಳಲಿದ್ದು, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲೂ ಹೊಸ ಸಂಚಲನ ಮೂಡಿಸುವ ನೀರಿಕ್ಷೆಯಲ್ಲಿದೆ.

ಟಾಟಾ ಸಂಸ್ಥೆಯು ಸದ್ಯ ಹೊಸ ಕಾರುಗಳ ಅಭಿವೃದ್ಧಿಗಾಗಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಅಲ್ಫಾ(ALFA) ಮತ್ತು ಒಮೇಗಾ(OMEGA) ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡುತ್ತಿದ್ದು, ಫೇಸ್‌ಲಿಫ್ಟ್ ಕಾರುಗಳ ವಿನ್ಯಾಸದಲ್ಲಿ ಮತ್ತಷ್ಟು ಹೊಸ ಮೆರಗು ತಂದಿದೆ.

ಕಳೆದ ವರ್ಷ ಬಿಡುಗಡೆಯಾದ ಹ್ಯಾರಿಯರ್ ಕೂಡಾ ಒಮೇಗಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಸಿದ್ದಗೊಂಡಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮತ್ತು ಮಹೀಂದ್ರಾ ಕೆಯುವಿ100 ಕಾರುಗಳಿಗೆ ಪೈಪೋಟಿಯಾಗಿ ಬಿಡುಗಡೆಯಾಗುತ್ತಿರುವ ಹೆಚ್ಎಕ್ಸ್2 ಕಾನ್ಸೆಪ್ಟ್ ಮೈಕ್ರೊ ಎಸ್‌ಯುವಿ ಮಾದರಿಯು ಪ್ರಮುಖ ಆಕರ್ಷಣೆಯಾಗಲಿದೆ.

ಹೆಚ್ಎಕ್ಸ್2 ಕಾನ್ಸೆಪ್ಟ್ ಮೈಕ್ರೊ ಎಸ್‌ಯುವಿ ಮಾದರಿಯ ಹೆಸರು ಅಧಿಕೃತವಾಗಿಲ್ಲವಾದರೂ ಮಾಹಿತಿಗಳ ಪ್ರಕಾರ ಹಾರ್ನ್‌ಬಿಲ್ ನೆಮ್ ಪ್ಲೇಟ್ ಅಂತಿಮಗೊಳಿಸುವ ಸಾಧ್ಯತೆಗಳಿದ್ದು, ಹೊಸ ಕಾರು ಆಲ್‌ಟ್ರೊಜ್ ಮಾದರಿಯಲ್ಲೇ 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಹೊಸ ಹಾರ್ನ್‌ಬಿಲ್ ಕಾರಿನಲ್ಲಿ ಡೀಸೆಲ್ ಎಂಜಿನ್ ಪರಿಚಯಿಸದಿರಲು ನಿರ್ಧರಿಸಿರುವ ಟಾಟಾ ಸಂಸ್ಥೆಯು ಪೆಟ್ರೋಲ್ ಮಾದರಿಯ ಜೊತೆ ಎಲೆಕ್ಟ್ರಿಕ್ ಆವೃತ್ತಿಯನ್ನು ಸಹ ಪ್ರದರ್ಶನಗೊಳಿಸುತ್ತಿದ್ದು, ಮೊದಲು ಪೆಟ್ರೋಲ್ ವರ್ಷನ್ ನಂತರ 2021ಕ್ಕೆ ಎಲೆಕ್ಟ್ರಿಕ್ ವರ್ಷನ್ ಬಿಡುಗಡೆ ಮಾಡಲಿದೆ.

ಇದರ ಹೊರತಾಗಿ ಹೊಸ ಕಾರಿನ ವಿವಿಧ ತಾಂತ್ರಿಕ ಅಂಶಗಳು ಲಭ್ಯವಿಲ್ಲವಾದರೂ ಪೆಟ್ರೋಲ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ.4.50 ಲಕ್ಷದಿಂದ ರೂ.6 ಲಕ್ಷ ಮತ್ತು ಎಲೆಕ್ಟ್ರಿಕ್ ಕಾರು ಮಾದರಿಯು ರೂ. 9 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.


Click it and Unblock the Notifications








