ಆಟೋ ಎಕ್ಸ್‌ಪೋ 2020: ದುಬಾರಿ ಬೆಲೆಯೊಂದಿಗೆ ಬಿಎಸ್-6 ಟಾಟಾ ಹ್ಯಾರಿಯರ್ ಬಿಡುಗಡೆ
ಟಾಟಾ ಮೋಟಾರ್ಸ್ ಸಂಸ್ಥೆಯು ಎಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಬಹುತೇಕ ಕಾರು ಮಾದರಿಗಳನ್ನು ಉನ್ನತೀಕರಿಸಿ ಬಿಡುಗಡೆ ಮಾಡುತ್ತಿದ್ದು, ಇದೀಗ 2020ರ ಆಟೋ ಎಕ್ಸ್‌ಪೋದಲ್ಲಿ ಹ್ಯಾರಿಯರ್ ಬಿಎಸ್-6 ಮಾದರಿಯನ್ನು ಬಿಡುಗಡೆಗೊಳಿಸಿದೆ.

ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ಜೊತೆಗೆ ನೆಕ್ಸಾನ್, ಟಿಗೋರ್, ಟಿಯಾಗೋ ಕಾರುಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಬಿಡುಗಡೆ ಮಾಡಿರುವ ಟಾಟಾ ಸಂಸ್ಥೆಯು ಸದ್ಯ ಹ್ಯಾರಿಯರ್ ಫೇಸ್‌ಲಿಫ್ಟ್ ಮಾದರಿಗಳನ್ನು ಬಿಡುಗಡೆಗೊಳಿಸಿದ್ದು, ಹೊಸ ಕಾರಿನಲ್ಲಿ ಈ ಬಾರಿ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿರುವುದು ಎಸ್‌ಯುವಿ ಖರೀದಿದಾರರ ಗಮನಸೆಳೆಯಲಿದೆ.

ಟಾಟಾ ಹ್ಯಾರಿಯರ್ ಎಸ್‌ಯುವಿ ಫೇಸ್‌ಲಿಫ್ಟ್ ಆವೃತ್ತಿಯು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್, ಆಟೋಮ್ಯಾಟಿಕ್ ಸನ್‌ರೂಫ್, ಹೆಚ್ಚುವರಿ ಬಣ್ಣಗಳ ಆಯ್ಕೆ ಸೇರಿದಂತೆ ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿದೆ.

ಜೊತೆಗೆ ಹೊಸ ಕಾರು ದುಬಾರಿ ಬೆಲೆ ಹೊಂದಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.69 ಲಕ್ಷದಿಂದ ಟಾಪ್ ಎಂಡ್ ಮಾದರಿಯು 20.25 ಲಕ್ಷ ಬೆಲೆ ಪಡೆದುಕೊಂಡಿದೆ.

ಏಪ್ರಿಲ್ 1ರಿಂದ ಬಿಎಸ್-6 ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಟಾಟಾ ಸೇರಿದಂತೆ ಹಲವು ಕಾರು ಉತ್ಪಾದನಾ ಸಂಸ್ಥೆಗಳು ಬಿಎಸ್-6 ವಾಹನಗಳ ಮಾರಾಟಕ್ಕೆ ಭರ್ಜರಿ ಚಾಲನೆ ನೀಡಿರುವುದು ಮಹತ್ವದ ಬದಲಾವಣೆಗೆ ಕಾರಣವಾಗಿದೆ. ಹೊಸ ಎಮಿಷನ್ ನಿಯಮದಿಂದಾಗಿ ಸಣ್ಣ ಗಾತ್ರದ ಡೀಸೆಲ್ ಎಂಜಿನ್ ಮಾರಾಟಕ್ಕೆ ಬ್ರೇಕ್ ಹಾಕಲಾಗುತ್ತಿದ್ದು, ಪೆಟ್ರೋಲ್ ಕಾರುಗಳ ಎಂಜಿನ್ ಪರ್ಫಾಮೆನ್ಸ್‌ನಲ್ಲೂ ಸಾಕಷ್ಟು ಸುಧಾರಣೆ ತಂದಿರುವುದು ಮಾಲಿನ್ಯ ತಡೆಗೆ ಸಾಕಷ್ಟು ಸಹಕಾರಿಯಾಗಲಿದೆ.

ಸದ್ಯ ಹ್ಯಾರಿಯರ್‌ನಲ್ಲೂ ಡಿಸೇಲ್ ಮ್ಯಾನುವಲ್ ಆವೃತ್ತಿಯನ್ನು ಮಾತ್ರವೇ ಮಾರಾಟ ಮಾಡಲಾಗುತ್ತಿದ್ದು, ಬಹುಬೇಡಿಕೆಯ ಡೀಸೆಲ್ ಆಟೋಮ್ಯಾಟಿಕ್ ಬಿಡುಗಡೆಗೆ ಮಾಡಿರುವುದು ಹೊಸ ಕಾರಿನ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ.

ಜೊತೆಗೆ ಟಾಟಾ ಸಂಸ್ಥೆಯು ಪ್ರತಿ ವೆರಿಯೆಂಟ್‌ನಲ್ಲೂ ಸ್ಟ್ಯಾಂಡರ್ಡ್ ಆಗಿ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಸ್, ಎಲ್ಇಡಿ ಟೈಲ್‌ಲೈಟ್ಸ್ ನೀಡಿದೆ.

ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್‌ಗಿಂತಲೂ ದೊಡ್ಡದಾದ ಸ್ಕ್ರೀನ್ ನೀಡಿದ್ದು, ಸುಧಾರಿತ ಮಾದರಿಯ ಡ್ಯಾಶ್‌ಬೋರ್ಡ್, ಆಟೋಮ್ಯಾಟಿಕ್ ಸನ್‌ರೂಫ್, ಸಾಫ್ಟ್ ಟಚ್ ಮೆಟಿರಿಯಲ್‌ಗಳು ಮತ್ತು ಹೆಚ್ಚುವರಿ ಬಣ್ಣಗಳ ಆಯ್ಕೆಯು ಎಸ್‌ಯುವಿ ಪ್ರಿಯರ ಗಮನಸೆಳೆಯಲಿವೆ.

ಈ ಮೂಲಕ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಮತ್ತು ಎಂಜಿ ಹೆಕ್ಟರ್ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡಲು ಸಜ್ಜಾಗುತ್ತಿರುವ ಹೊಸ ಹ್ಯಾರಿಯರ್ ಕಾರು ಅಧಿಕೃತ ಮಾರುಕಟ್ಟೆ ಪ್ರವೇಶಿಸಿದ್ದು, ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೆರಿಯೆಂಟ್‌ಗಳೊಂದಿಗೆ ಮಾರಾಟವಾಗಲಿದೆ. ಇದರಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದ್ದ ಡಾರ್ಕ್ ಎಡಿಷನ್ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ.

ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(1,956 ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ 140-ಬಿಹೆಚ್‍ಪಿ, 350-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಹೊಸ ಎಂಜಿನ್ ಪ್ರೇರಿತ ಮ್ಯಾನುವಲ್ ಆವೃತ್ತಿಯಲ್ಲಿ ರೂ.35 ಸಾವಿರದಿಂದ ರೂ.40 ಸಾವಿರ ಹೆಚ್ಚಳವಾದಲ್ಲಿ ಆಟೋಮ್ಯಾಟಿಕ್ ಆವೃತ್ತಿಯ ಬೆಲೆಯು ಆರಂಭಿಕವಾಗಿಯೇ ರೂ.16.25 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.20.25 ಲಕ್ಷ ಬೆಲೆ ಹೊಂದಿದೆ.


Click it and Unblock the Notifications








