ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್
ಕರೋನಾ ವಿರುದ್ಧ ಹೋರಾಟಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸ್ಪಂದಿಸಿರುವ ಆಟೋ ಉತ್ಪಾದನಾ ಸಂಸ್ಥೆಗಳು ಭಾರೀ ಪ್ರಮಾಣದ ಧನಸಹಾಯ ಮತ್ತು ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಚಾಲನೆ ನೀಡಿವೆ.

ಕರೋನಾ ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಬಹುತೇಕ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಂಡಿವೆ. ಈ ಹಿನ್ನಲೆಯಲ್ಲಿ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪಿದ್ದು, ಕರೋನಾ ವಿರುದ್ಧ ಹೋರಾಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಣಿಗೆ ಸಂಗ್ರಹ ಅಭಿಯಾನವನ್ನು ಕೈಗೊಂಡಿವೆ. ದೇಣಿಗೆ ಸಂಗ್ರಹ ಅಭಿಯಾನಕ್ಕೆ ಈಗಾಗಲೇ ಭಾರೀ ಪ್ರಮಾಣದ ನೆರವು ಹರಿದು ಬಂದಿದ್ದು, ಉದ್ಯಮಿಗಳು, ಚಿತ್ರ ನಟರು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಹ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಕರೋನಾ ವಿರುದ್ಧ ಸರ್ಕಾರದ ಹೋರಾಟಕ್ಕೆ ಶಕ್ತಿ ತುಂಬುತ್ತಿದ್ದಾರೆ.

ಅದರಲ್ಲೂ ಆಟೋ ಉತ್ಪಾದನಾ ಕಂಪನಿಗಳು ಕರೋನಾ ವಿರುದ್ದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ನಿಂತಿರುವುದಲ್ಲದೆ ವೈದ್ಯಕೀಯ ಉಪಕರಣಗಳ ತಯಾರಿಕೆಯ ಜೊತೆಗೆ ಧನಸಹಾಯವನ್ನು ಕೂಡಾ ಮಾಡುತ್ತಿವೆ.

ಟಿವಿಎಸ್ ಮೋಟಾರ್ ಮತ್ತು ಅದರ ಅಂಗಸಂಸ್ಥೆಯಾದ ಸುಂದರಂ ಕ್ಲೈಟನ್ ಕಂಪನಿಯು ಕರೋನಾ ವಿರುದ್ಧ ಹೋರಾಟಕ್ಕಾಗಿ ಸರ್ಕಾರಕ್ಕೆ ರೂ.30 ಕೋಟಿ ಧನಸಹಾಯ ಘೋಷಣೆ ಮಾಡಿದ್ದು, ಇದರೊಂದಗೆ 10 ಲಕ್ಷ ಫೇಸ್ ಮಾಸ್ಕ್‌ಗಳನ್ನು ಸಿದ್ದಪಡಿಸುವುದಾಗಿ ಹೇಳಿಕೊಂಡಿದೆ.

ಟಿವಿಎಸ್ ಮೋಟಾರ್ ಕಂಪನಿಯ ಸಾಮಾಜಿಕ ಸೇವಾ ವಿಭಾಗದ ಶ್ರೀನಿವಾಸನ್ ಸರ್ವಿಸ್ ಟ್ರಸ್ಟ್ ಮೂಲಕ ಅಗತ್ಯ ನೆರವು ನೀಡಲಾಗುತ್ತಿದ್ದು, ರೂ.30 ಧನಸಹಾಯದಲ್ಲೇ ವೆಂಟಿಲೆಟರ್‌ಗಳನ್ನು ನಿರ್ಮಾಣ ಮಾಡಿ ಅಗತ್ಯವಿರುವ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಲಿದೆ. ಜೊತೆಗೆ ಗ್ರಾಮೀಣ ಭಾಗದಲ್ಲಿ ಸ್ವಚ್ಚತೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಶ್ರೀನಿವಾಸನ್ ಸರ್ವಿಸ್ ಟ್ರಸ್ಟ್ ಸಂಸ್ಥೆಯು ಹೊಸರು ಮತ್ತು ಮೈಸೂರಿನಲ್ಲಿ 10 ಟ್ರಕ್‌ಗಳ ಮೂಲಕ ನಂಜು ನಿರೋಧಕ(ಡಿಸ್ ಇನ್ಫೆಕ್ಷನ್) ರಾಸಾಯನಿಕವನ್ನು ಸಿಂಪರಣೆ ಮಾಡುತ್ತಿದೆ.

ಇನ್ನು ದೇಶದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಬಜಾಜ್ ಗ್ರೂಪ್ ಕೂಡಾ ಕೋರನಾ ವೈರಸ್ ವಿರುದ್ಧ ಹೋರಾಟಕ್ಕೆ ಭಾರೀ ಪ್ರಮಾಣ ದೇಣಿಗೆ ನೀಡಿದ್ದು, ರೂ. 100 ಕೋಟಿ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಒದಗಿಸುವುದಾಗಿ ಘೋಷಣೆ ಮಾಡಿದೆ.

ಸುಮಾರು 200ಕ್ಕೂ ಹೆಚ್ಚು ಎನ್‌ಜಿಓ ಸಂಸ್ಥೆಗಳ ಮೂಲಕ ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಮತ್ತು ಐಸಿಯು ಯುನಿಟ್‌ಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದು, ಆರೋಗ್ಯ ಇಲಾಖೆಯ ಬೇಡಿಕೆಗಳನ್ನು ಪೂರೈಸಲು ಸಿದ್ದವಾಗಿದೆ.

ಇದರ ಜೊತೆಗೆ ಗ್ರಾಮೀಣ ಭಾಗದಲ್ಲಿನ ಆರೋಗ್ಯ ಸೌಕರ್ಯ ಮತ್ತು ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ವಿಶೇಷ ಆದ್ಯತೆ ನೀಡುವುದಾಗಿ ಹೇಳಿಕೊಂಡಿರುವ ಬಜಾಜ್ ಕಂಪನಿಯು ಪರಿಸರ ಮತ್ತು ಆರೋಗ್ಯ ಕಾಳಜಿಗೆ ವಿಶೇಷ ಆಸಕ್ತಿ ವಹಿಸಿದ್ದು, ಶೀಘ್ರದಲ್ಲೇ ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವುದಾಗಿ ಘೋಷಣೆ ಮಾಡಿದೆ. ಇನ್ನು ಬಜಾಜ್ ಮಾತ್ರವಲ್ಲದೇ ಪ್ರಮುಖ ಆಟೋ ಕಂಪನಿಗಳು ವಿವಿಧ ಮಾದರಿಯ ನೆರವು ಘೋಷಣೆ ಮಾಡಿವೆ.

ಎಂಜಿ ಮೋಟಾರ್ ಕಂಪನಿಯು ರೂ.2 ಕೋಟಿ ದೇಣಿಗೆ ನೀಡಿದಲ್ಲಿ ಮಹೀಂದ್ರಾ ಮತ್ತು ಮಾರುತಿ ಸುಜುಕಿ ಕಂಪನಿಗಳು ವೈದ್ಯಕೀಯ ಸೇವೆಗೆ ಬೇಕಿರುವ ಅಗತ್ಯ ಉಪಕರಣಗಳನ್ನು ಉತ್ಪಾದನೆ ಆರಂಭಿಸುವುದಾಗಿ ಹೇಳಿಕೊಂಡಿದೆ.

ಇನ್ನು ಚೀನಾದಿಂದ ಶುರುವಾದ ಕರೋನಾ ವೈರಸ್ ದಾಳಿಯು ಇದೀಗ ಇಡೀ ವಿಶ್ವವನ್ನೇ ವ್ಯಾಪಿಸಿದ್ದು, ಇದುವರೆಗೆ 6 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದಲ್ಲದೆ 27 ಸಾವಿರ ಜನ ಪ್ರಾಣಕಳೆದುಕೊಂಡಿದ್ದಾರೆ. 6 ಲಕ್ಷ ಜನರಲ್ಲಿ ಇದುವರೆಗೆ ಸುಮಾರು 1.33 ಲಕ್ಷದಷ್ಟು ಜನ ಗುಣಮುಖರಾಗಿದ್ದು, ಶೇ.7 ರಷ್ಟು ಸೋಂಕು ಪಿಡಿತರ ಸ್ಥಿತಿ ಶೋಚನೀಯವಾಗಿದೆ.


Click it and Unblock the Notifications








