ಕರೋನಾ ಎಫೆಕ್ಟ್- ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಫೋಕ್ಸ್‌ವ್ಯಾಗನ್
ವಿಶ್ವಾದ್ಯಂತ ಸಾವಿರಾರು ಜನರನ್ನು ಬಲಿ ಪಡೆದಿರುವ ಕರೋನಾ ವೈರಸ್‌ನಿಂದಾಗಿ ಬಹುತೇಕ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿಗೆ ತಲುಪುತ್ತಿದ್ದು, ಆಟೋ ಉದ್ಯಮವು ಕೂಡಾ ಭಾರೀ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

ಕರೋನಾ ವೈರಸ್ ಅಟ್ಟಹಾಸವು ಚೀನಾದಲ್ಲಿ ಮಾತ್ರವಲ್ಲದೇ ವಿಶ್ವದ ಪ್ರಮುಖ ರಾಷ್ಟ್ರಗಳಿಗೂ ವ್ಯಾಪಿಸಿದ್ದು, ವೈರಸ್ ಪರಿಣಾಮದಿಂದಾಗಿ ಜನ-ಜೀವನ ಮಾತ್ರವಲ್ಲದೇ ಆರ್ಥಿಕ ಕುಸಿತವು ಕೂಡಾ ತಳಮಟ್ಟಕ್ಕೆ ಕುಸಿಯುವಂತೆ ಮಾಡಿದೆ. ವೈರಸ್ ತಡೆಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರೂ ಕೂಡಾ ಸಾವಿನ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇದರ ನಡುವೆ ಕರೋನಾ ವೈರಸ್ ಭೀತಿಯಿಂದಾಗಿ ಆಟೋ ಉತ್ಪಾದನಾ ಘಟಕಗಳು ಕದಮುಚ್ಚುತ್ತಿವೆ.

ಚೀನಾದಲ್ಲಿ ಹ್ಯುಂಡೈ ಕಂಪನಿಯು ತನ್ನ ಏಷ್ಯಾದ ಅತಿದೊಡ್ಡ ಕಾರು ಉತ್ಪಾದನಾ ಘಟಕವನ್ನು ಮುಚ್ಚಿದ ಬೆನ್ನಲ್ಲೇ ಇದೀಗ ಫೋಕ್ಸ್‌ವ್ಯಾಗನ್ ಕೂಡಾ ಯುರೋಪ್‌ನಲ್ಲಿರುವ ತನ್ನ ಪ್ರಮುಖ ಕಾರು ಉತ್ಪಾದನಾ ಘಟಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಬಗ್ಗೆ ಸ್ಪಷ್ಟನೆ ನೀಡಿದೆ.

ವೈರಸ್ ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿರುವ ಸರ್ಕಾರಗಳ ಪ್ರಯತ್ನಗಳಿಗೆ ತಾವು ಎಲ್ಲಾ ಸಹಕಾರ ನೀಡುವುದಾಗಿ ಹೇಳಿಕೊಂಡಿರುವ ಫೋಕ್ಸ್‌ವ್ಯಾಗನ್ ಗ್ರೂಪ್ ಕಂಪನಿಗಳು ಒಟ್ಟು 7 ಕ್ಕೂ ಹೆಚ್ಚು ವಾಹನ ಉತ್ಪಾದನಾ ಘಟಕಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿವೆ.

ಯುರೋಪಿನಲ್ಲಿ ಪ್ರಮುಖ ಕಾರು ಮಾರಾಟ ಕಂಪನಿಗಳಲ್ಲಿ ಒಂದಾಗಿರುವ ಫೋಕ್ಸ್‌ವ್ಯಾಗನ್ ಗ್ರೂಪ್ ಕಂಪನಿಗಳು ಮುಂದಿನ ಎರಡು ವಾರಗಳ ಕಾಲ ಯಾವುದೇ ಉತ್ಪಾದನಾ ಚಟುವಟಿಕೆಯನ್ನು ಕೈಗೊಳ್ಳದಿರಲು ನಿರ್ಧರಿಸಿದ್ದು, ಕಾರ್ಮಿಕರಿಗೆ ಸೋಂಕು ಹರಡದಂತೆ ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳವಾಗಿದೆ. ಫೋಕ್ಸ್‌ವ್ಯಾಗನ್ ಮಾತ್ರವಲ್ಲದೆ ಅಂಗಸಂಸ್ಥೆಗಳಾದ ಸ್ಕೋಡಾ, ಆಡಿ, ಫೋರ್ಷೆ ಮತ್ತು ಬುಗಾಟಿ ಕಾರುಗಳ ಉತ್ಪಾದನೆಯಲ್ಲೂ ಕುಂಠಿತಗೊಳ್ಳಲಿದೆ.

ಜರ್ಮನ್‌ನಲ್ಲಿ ವುಲ್ಫ್‌ಬರ್ಗ್‌ನಲ್ಲಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯ ಅತಿದೊಡ್ಡ ಉತ್ಪಾದನಾ ಘಟಕವು ಸಹ ಸ್ಥಗಿತಗೊಂಡಿದ್ದು, ಇದು ವಿಶ್ವದ ಅತಿ ಕಾರು ಉತ್ಪಾದನಾ ಘಟಕಗಳಲ್ಲಿ ಒಂದಾಗಿದೆ. ಇದಲ್ಲದೆ ಇಟಾಲಿಯಲ್ಲಿಯಲ್ಲಿ ಡುಕಾಟಿ ಮತ್ತು ಲಂಬೋರ್ಗಿನಿ ವಾಹನ ಉತ್ಪಾದನಾ ಘಟಕಗಳು ಕೂಡಾ ಕಳೆದ ವಾರದಿಂದಲೇ ಸ್ಥಗಿತಗೊಂಡಿವೆ.

ಇನ್ನುಳಿದಂತೆ ಯುರೋಪ್ ರಾಷ್ಟ್ರಗಳಲ್ಲಿ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳಾದ ಟೊಯೊಟಾ, ಸುಜುಕಿ, ಫಿಯೆಟ್ ಕ್ಲೈಸರ್, ರೆನಾಲ್ಟ್, ಪಿಎಸ್ಎ ಗ್ರೂಪ್‌ಗೆ ಸೇರಿದ 35ಕ್ಕೂ ಹೆಚ್ಚು ವಾಹನ ಉತ್ಪಾದನಾ ಘಟಕಗಳು ತಾತ್ಕಲಿಕವಾಗಿ ಸ್ಥಗಿತಗೊಂಡಿವೆ.

ಆದರೆ ಭಾರತದಲ್ಲಿ ಮಾತ್ರ ಇದುವರೆಗೂ ಯಾವುದೇ ವಾಹನ ಉತ್ಪಾದನಾ ಕಂಪನಿಗಳು ಉತ್ಪಾದನಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವ ಬಗ್ಗೆ ಸುಳಿವು ನೀಡಿಲ್ಲವಾದರೂ ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿವೆ.

ವೊಲ್ವೊ ಇಂಡಿಯಾ ಕಂಪನಿ ಮಾತ್ರವೇ ಅಗತ್ಯ ಸಿಬ್ಬಂದಿ ಹೊರತುಪಡಿಸಿ ಇನ್ನುಳಿದ ಸಿಬ್ಬಂದಿಗೆ ಮನೆಯಿಂದಲೇ ಕಾರ್ಯನಿರ್ವಹಣೆ ಮಾಡುವ(ವರ್ಕ್ ಫರ್ಮ್ ಹೋಂ) ಆಯ್ಕೆಯನ್ನು ನೀಡಿದ್ದು, ಕಾರು ಮಾರಾಟವನ್ನು ಸಹ ಅತ್ಯಂತ ವ್ಯವಸ್ಥಿತವಾಗಿ ಕಾರ್ಯನಿರ್ವಹಣೆ ಮಾಡುವ ಮೂಲಕ ಡಿಜಿಟಲ್ ಫ್ಯಾಟ್‌ಫಾರ್ಮ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ.


Click it and Unblock the Notifications








