ಭಾರತದಲ್ಲಿ ಬಿಡುಗಡೆಯಾಗಲಿರುವ ವೊಲ್ವೊ ಮೊದಲ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಮಾಹಿತಿ ಬಹಿರಂಗ
ಸ್ವೀಡಿಷ್ ಕಾರು ಉತ್ಪಾದನಾ ಕಂಪನಿಯಾದ ವೊಲ್ವೊ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಭರ್ಜರಿ ಸಿದ್ದತೆ ನಡೆಸಿದ್ದು, ಮೊದಲ ಹಂತದಲ್ಲಿ ಬಿಡುಗಡೆಯಾಗಲಿರುವ ಎಕ್ಸ್‌ಸಿ40 ಎಸ್‌ಯುವಿ ಎಲೆಕ್ಟ್ರಿಕ್ ತಾಂತ್ರಿಕ ಅಂಶಗಳನ್ನು ಕುರಿತಾಗಿ ಕೆಲವು ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸಿದೆ.

ಹೈಬ್ರಿಡ್ ವಾಹನಗಳ ಉತ್ಪಾದನೆ ಹೊಸ ಸಂಚಲನಕ್ಕೆ ಕಾರಣವಾಗಿರುವ ವೊಲ್ವೊ ಕಂಪನಿಯು 2021ರಿಂದ ಪೂರ್ಣ ಪ್ರಮಾಣದಲ್ಲಿ ಡೀಸೆಲ್ ಮತ್ತು ಸಾಮಾನ್ಯ ಪೆಟ್ರೋಲ್ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದ್ದು, ಕೇವಲ ಹೈಬ್ರಿಡ್ ಮತ್ತು ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಆವೃತ್ತಿಗಳನ್ನು ಮಾತ್ರವೇ ಉತ್ಪಾದನೆ ಕೈಗೊಳ್ಳಲು ನಿರ್ಧರಿಸಿದೆ.

ಇದಕ್ಕಾಗಿ ಭಾರತದಲ್ಲೂ ಹೊಸ ಯೋಜನೆ ರೂಪಿಸುತ್ತಿರುವ ವೊಲ್ವೊ ಕಂಪನಿಯು ಮುಂದಿನ 2 ವರ್ಷಗಳಲ್ಲಿ 3 ವಿವಿಧ ಮಾದರಿಯ ಎಲೆಕ್ಟ್ರಿಕ್ ಎಸ್‌ಯುವಿ ಆವೃತ್ತಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಇದಕ್ಕಾಗಿ ಮಾರುಕಟ್ಟೆ ಅಧ್ಯಯನ ನಡೆಸುತ್ತಿದೆ.

ಹೊಸ ಎಲೆಕ್ಟ್ರಿಕ್ ಕಾರುಗಳ ತಾಂತ್ರಿಕ ಅಂಶಗಳ ಕುರಿತಾಗಿ ಗ್ರಾಹಕರ ಅಭಿರುಚಿ ಮತ್ತು ಸಲಹೆಗಳನ್ನು ಪಡೆದುಕೊಳ್ಳಲಾಗುತ್ತಿದ್ದು, ಮೊದಲ ಹಂತದಲ್ಲಿ ಕಂಪನಿಯ ಜನಪ್ರಿಯ ಎಸ್‌ಯುವಿ ಮಾದರಿಯಾದ ಎಕ್ಸ್‌ಸಿ40 ಎಸ್‌ಯುವಿ ಮಾದರಿಯನ್ನು ಎಲೆಕ್ಟ್ರಿಕ್ ಮಾದರಿಯಲ್ಲಿ ಪರಿಚಯಿಸಲಿದೆ.

ಎಕ್ಸ್‌ಸಿ40 ಎಲೆಕ್ಟ್ರಿಕ್ ಆವೃತ್ತಿಯು ಮುಂಬರುವ 2021ಕ್ಕೆ ರಸ್ತೆಗಿಳಿಯುವ ಸಾಧ್ಯತೆಗಳಿದ್ದು, ಹೊಸ ಕಾರಿನಲ್ಲಿ 150kW ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ 78kWh ಲೀಥಿಯಂ ಅಯಾನ್ ಬ್ಯಾಟರಿಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ.

150kW ಎಲೆಕ್ಟ್ರಿಕ್ ಮೋಟಾರ್ ಸೌಲಭ್ಯದೊಂದಿಗೆ 402-ಬಿಎಚ್‌ಪಿ ಮತ್ತು 659-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿರುವ ಎಕ್ಸ್‌ಸಿ40 ಎಲೆಕ್ಟ್ರಿಕ್ ಕಾರು ಡೀಸೆಲ್ ಕಾರಿನ ಮಾದರಿಯಲ್ಲೇ ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಅಧಿಕ ಮೈಲೇಜ್ ಪ್ರೇರಣೆ ಪಡೆದುಕೊಳ್ಳಲಿದೆ.
MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಎಕ್ಸ್‌ಸಿ40 ಇವಿ ಕಾರು 78kWh ಲೀಥಿಯಂ ಅಯಾನ್ ಬ್ಯಾಟರಿಯೊಂದಿಗೆ ಗರಿಷ್ಠ 400ಕಿ.ಮೀ ಮೈಲೇಜ್ ರೇಂಜ್ ಪಡೆದುಕೊಳ್ಳಲಿದ್ದು, ಕೇವಲ 40 ನಿಮಿಷಗಳಲ್ಲಿ ಶೇ.80 ರಷ್ಟು ಬ್ಯಾಟರಿ ರೀಚಾರ್ಜ್ ಮಾಡಬಹುದಾದ ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.

ಜೊತೆಗೆ ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಿರುವ ವೊಲ್ವೊ ಕಂಪನಿಯು ಕಾರು ಬಿಡುಗಡೆಯ ಹೊತ್ತಿಗೆ ತಾಂತ್ರಿಕ ಅಂಶಗಳಲ್ಲಿ ಮತ್ತಷ್ಟು ಬದಲಾವಣೆ ಮಾಡುವ ಸಾಧ್ಯತೆಗಳಿದ್ದು, ಹೊಸ ಕಾರು 2021ರ ಆರಂಭದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.
MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ತದನಂತರ ವಿವಿಧ ಕಾರು ಮಾದರಿಯಲ್ಲೂ ಎಲೆಕ್ಟ್ರಿಕ್ ವರ್ಷನ್ ಬಿಡುಗಡೆ ಮಾಡಲಿದ್ದು, ಎಕ್ಸ್‌ಸಿ40 ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.50 ಲಕ್ಷಕ್ಕಿಂತಲೂ ಅಧಿಕ ಬೆಲೆಯೊಂದಿಗೆ ಬಿಡುಗಡೆಯಾಗುವ ನೀರಿಕ್ಷೆಯಿದೆ


Click it and Unblock the Notifications








