ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ 2021ರ ಸ್ಕೋಡಾ ಆಕ್ಟೀವಿಯಾ ಕಾರು
ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ಇಂಡಿಯಾ ತನ್ನ ನಾಲ್ಕನೇ ತಲೆಮಾರಿನ ಆಕ್ಟೀವಿಯಾ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಯುರೋಪ್ ಮಾರುಕಟ್ಟೆಗಳಲ್ಲಿ ಈಗಾಗಲೇ ಈ ನಾಲ್ಕನೇ ತಲೆಮಾರಿನ ಸ್ಕೋಡಾ ಆಕ್ಟೀವಿಯಾ ಕಾರು ಮಾರಾಟವಾಗುತ್ತಿದೆ.

ಹಿಂದಿನ ತಲೆಮಾರಿನ ಸ್ಕೋಡಾ ಆಕ್ಟೀವಿಯಾ ಕಾರನ್ನು 2013ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿದ್ದರು. ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಯೊಂದಿಗೆ ಉತ್ತಮ ಮಾರಾಟವನ್ನು ಕಂಡಿತ್ತು. ಆದರೆ ಸ್ಕೋಡಾ ಕಂಪನಿಯು ಈ ಆಕ್ಟೀವಿಯಾ ಕಾರನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿಲ್ಲ. ಕಳೆದ ವರ್ಷದಲ್ಲೇ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಆಕ್ಟೀವಿಯಾ ಕಾರನ್ನು ಬಿಡುಗಡೆಗೊಳಿಸಬೇಕಿತ್ತು. ಆದರೆ ಸ್ಕೋಡಾ ಕಂಪನಿಯು ಈ ಕಾರಿನ ಬಿಡುಗಡೆಯನ್ನು ಈ ವರ್ಷಕ್ಕೆ ಮುಂದೂಡಿದರು.

ಹೊಸ ಆಕ್ಟೀವಿಯಾ ಕಾರನ್ನು ಮುಂದಿನ ಎರಡು ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ ಎಂದು ಸ್ಕೋಡಾ ಕಂಪನಿ ಹೇಳಿದೆ. ನಾಲ್ಕನೇ ತಲೆಮಾರಿ ಸ್ಕೋಡಾ ಆಕ್ಟೀವಿಯಾ ಕಾರು ಹಲವು ಬದಲಾವಣೆಗಳೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ.

ಸ್ಕೋಡಾ ಕಂಪನಿಯು ತನ್ನ ನಾಲ್ಕನೇ ತಲೆಮಾರಿನ ಆಕ್ಟೀವಿಯಾ ಕಾರನ್ನು ಬಿಡುಗಡೆಗೂ ಮುನ್ನ ಖಾಸಗಿಯಾಗಿ ಅನಾವರಣಗೊಳಿಸಿದೆ. ಇದರ ಚಿತ್ರಗಳನ್ನು ಟೀಂ ಬಿಹೆಚ್‍ಪಿ ಬಹಿರಂಗಪಡಿಸಿದೆ. ಚಿತ್ರದಲ್ಲಿ ನಾಲ್ಕನೇ ತಲೆಮಾರಿನ ಸ್ಕೋಡಾ ಆಕ್ಟೀವಿಯಾದ ವಿನ್ಯಾಸ ಮಾಹಿತಿ ಬಹಿರಂಗವಾಗಿದೆ.

ಈ ಹೊಸ ಸ್ಕೋಡಾ ಆಕ್ಟೀವಿಯಾ ಕಾರಿನ ಹಿಂದಿನ ಮಾದರಿಗೆ ಹೋಲಿಸಿದರೆ ನಯವಾದ ವಿನ್ಯಾಸವನ್ನು ಹೊಂದಿದೆ. ಈ ಹೊಸ ಕಾರಿನ ಗ್ರಿಲ್ ಅಗಲ ಮತ್ತು ಅಗ್ರೇಸಿವ್ ಆಗಿದೆ. ಮುಂಭಾಗದ ಬಂಪರ್ ವಿನ್ಯಾಸವನ್ನು ಸಹ ಬದಲಾಯಿಸಲಾಗಿದೆ.

ಇನ್ನು ಮುಂಭಾಗದಲ್ಲಿ ವಿಶಾಲವಾದ ಏರ್ ಡ್ಯಾಮ್ ಜೊತೆಗೆ ಸಮತಲವಾದ ಎಲ್ಇಡಿ ಫಾಗ್ ಲ್ಯಾಂಪ್‌ಗಳನ್ನು ಎರಡೂ ಬದಿಗಳಲ್ಲಿ ಇರಿಸಲಾಗಿದ್ದು, ಎರಡು ಯುನಿಟ್ ಗಳನ್ನು ಕನೆಕ್ಟ್ ಮಾಡುವ ತೆಳುವಾದ ಕ್ರೋಮ್ ಸ್ಟ್ರಿಪ್ ಇದೆ. ಇದು ಕಂಪನಿಯ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್ ಲೈಟ್ ಅನ್ನು ಸಹ ಪಡೆಯುತ್ತದೆ.

ಹಿಂಭಾಗದಲ್ಲಿ ಅಗ್ರೇಸಿವ್ ಆಗಿ ಕಾಣುವ ಬೂಟ್ ಲಿಡ್ ಅನ್ನು ಹೊಂದಿದೆ. ಇನ್ನು ಹೊಸ ದಪ್ಪ ಅಕ್ಷರಗಳಲ್ಲಿ ಬೂಟ್ ಲಿಡ್ ಉದ್ದಕ್ಕೆ ಸ್ಕೋಡಾ ಎಂದು ಬರೆಯಲಾಗಿದೆ. ಸೆಡಾನ್ ಹೊಸ ಅಲಾಯ್ ವೀಲ್ ವಿನ್ಯಾಸವನ್ನು ಸಹ ಪಡೆಯುತ್ತದೆ, ಅದು ಬಹಳ ಆಕರ್ಷಕವಾಗಿದೆ

ಹೊಸ ಸ್ಕೋಡಾ ಆಕ್ಟೀವಿಯಾ ಕಾರಿನ ಒಳಭಾಗದಲ್ಲಿ ಹೊಸ ಕ್ಯಾಬಿನ್ ವಿನ್ಯಾಸವನ್ನು ಪಡೆಯುತ್ತದೆ. ಆಡಿಯೋ ಮತ್ತು ಇತರ ಕಾರ್ಯಗಳಿಗಾಗಿ ಮೌಂಟಡ್ ಕಂಟ್ರೋಲ್ ಗಳೊಂದಿಗೆ ಹೊಸ ಎರಡು-ಸ್ಪೋಕ್ ಸ್ಟೀಯರಿಂಗ್ ವ್ಹೀಲ್ ಅನ್ನು ಒಳಗೊಂಡಿದೆ.

ಇನ್ನು ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಈಗ ಬ್ರ್ಯಾಂಡ್‌ನ ಕಾಕ್‌ಪಿಟ್ ವಿನ್ಯಾಸವನ್ನು ಒಳಗೊಂಡ 10.25-ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಗಾಗಿ ಸೆಡಾನ್ ಮತ್ತೊಂದು 10.25-ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ.

ಸ್ಕೋಡಾ ಆಕ್ಟೀವಿಯಾ ಕಾರಿನಲ್ಲಿ ವಿಡಬ್ಲ್ಯೂ ಗ್ರೂಪ್‌ನ 2.0 ಎಲ್ ಟಿಎಸ್‌ಐ ಟರ್ಬೋಚಾರ್ಜ್ಡ್ ಡೈರೆಕ್ಟ್ ಇಂಜೆಕ್ಷನ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 190 ಬಿಹೆಚ್ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ

ಇನ್ನು ಈ ಸ್ಕೋಡಾ ಆಕ್ಟೀವಿಯಾ ಕಾರಿನಲ್ಲಿ 1.5-ಲೀಟರ್ ಟಿಎಸ್ಐ, ನಾಲ್ಕು ಸಿಲಿಂಡರ್, ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 148 ಬಿಹೆಚ್ಪಿ ಪವರ್ ಮತ್ತು 320 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ,

ನಾಲ್ಕನೇ ತಲೆಮಾರಿನ ಸ್ಕೋಡಾ ಆಕ್ಟೀವಿಯಾ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಸೆಡಾನ್ ಆಗಿರಲಿದೆ. ಇದರಿಂದ ಹೊಸ ಆಕ್ಟೀವಿಯಾ ಪರ್ಫಾಮೆನ್ಸ್ ಕಾರು ಪ್ರಿಯರನ್ನು ಕೂಡ ಸೆಳೆಯಬಹುದು. ಇನ್ನು ಯುರೋ ಎನ್‍ಸಿಎಪಿ ನಡೆಸಿದ ಕ್ರ್ಯಾಶ್ ಟೆಸ್ಟ್ ನಲ್ಲಿ ಸ್ಕೋಡಾ ಆಕ್ಟೀವಾ ಸಂಪೂರ್ಣ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.


Click it and Unblock the Notifications