ಸ್ಲಾವಿಯಾ ಸೆಡಾನ್ ಕಾರಿನ ಮೊದಲ ಇಂಟಿರಿಯರ್ ಚಿತ್ರ ಹಂಚಿಕೊಂಡ ಸ್ಕೋಡಾ ಇಂಡಿಯಾ
ಸ್ಕೋಡಾ ಇಂಡಿಯಾ(Skoda India) ಕಂಪನಿಯು ಇದೇ ತಿಂಗಳು 18ರಂದು ತನ್ನ ಹೊಸ ಸ್ಲಾವಿಯಾ ಸೆಡಾನ್ ಮಾದರಿಯನ್ನು ಉತ್ಪಾದನಾ ಆವೃತ್ತಿಯೊಂದಿಗೆ ಅನಾವರಣಗೊಳಿಸುತ್ತಿದ್ದು, ಹೊಸ ಕಾರಿನ ಅನಾವರಣಕ್ಕೂ ಮುನ್ನ ಸ್ಕೋಡಾ ಕಂಪನಿಯು ಸ್ಲಾವಿಯಾ ಕಾರಿನ ಮೊದಲ ಇಂಟಿರಿಯರ್ ಚಿತ್ರವನ್ನು ಹಂಚಿಕೊಂಡಿದೆ.

ಹೊಸ ಸ್ಲಾವಿಯಾ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ರ‍್ಯಾಪಿಡ್ ಸ್ಥಾನದಲ್ಲಿ ಮಾರಾಟಗೊಳ್ಳಲಿದ್ದು, ಕಳೆದ ವಾರವಷ್ಟೇ ಕಂಪನಿಯು ಹೊಸ ಕಾರಿನ ಹೊರವಿನ್ಯಾಸದ ಚಿತ್ರಗಳನ್ನು ಹಂಚಿಕೊಂಡಿತ್ತು. ಇದೀಗ ಹೊಸ ಕಾರಿನ ಅನಾವರಣಕ್ಕೆ ಒಂದು ವಾರ ಬಾಕಿಯಿರುವಾಗ ಕಾರಿನ ಇಂಟಿರಿಯರ್ ಚಿತ್ರವನ್ನು ಬಿಡುಗಡೆ ಮಾಡಿದ್ದು, ಯಾವುದೇ ತಾಂತ್ರಿಕ ಮಾಹಿತಿಗಳನ್ನು ಹಂಚಿಕೊಂಡಿಲ್ಲ.

ಸ್ಕೋಡಾ ಕಂಪನಿಯು ರ‍್ಯಾಪಿಡ್ ಮಾದರಿಯನ್ನು ಸ್ಥಗಿತಗೊಳಿಸಿ ಸಂಪೂರ್ಣವಾಗಿ ಹೊಸ ಮಾದರಿಯಾದ ಸ್ಲಾವಿಯಾ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ರ‍್ಯಾಪಿಡ್ ಮಾದರಿಗಿಂತಲೂ ಅತ್ಯುತ್ತಮ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಅತ್ಯುತ್ತಮ ವಿನ್ಯಾಸವನ್ನು ಹೊಂದಿದೆ.

ಸ್ಲಾವಿಯಾ ಕಾರಿನ ಒಳ ಮತ್ತು ಹೊರಭಾಗ ವಿನ್ಯಾಸದ ಚಿತ್ರಗಳ ಬಿಡುಗಡೆ ಹೊರತಾಗಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲವಾದರೂ ಕಂಪನಿಯು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೊಸ ಕಾರು ಅತ್ಯುತ್ತಮವಾಗಿರಲಿದೆ ಎನ್ನುವ ಸುಳಿವು ನೀಡಿದ್ದು, ಮುಂದಿನ ವಾರ ಅನಾವರಣಗೊಳ್ಳಲಿರುವ ಉತ್ಪಾದನಾ ಮಾದರಿಯು ಹೇಗಿರಲಿದೆ? ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿರಲಿದೆ ಎನ್ನುವ ನಿಖರ ಮಾಹಿತಿ ದೊರೆಯಲಿದೆ.

ಹೊಸ ಸ್ಲಾವಿಯಾ ಬಿಡುಗಡೆಯ ನಂತರ ಸ್ಕೋಡಾ ರ‍್ಯಾಪಿಡ್ ಮಾತ್ರವಲ್ಲದೆ ಮಾತೃಸಂಸ್ಥೆಯಾದ ಫೋಕ್ಸ್‌ವ್ಯಾಗನ್ ನಿರ್ಮಾಣದ ವೆಂಟೊ ಕಾರು ಮಾದರಿಯು ಕೂಡಾ ಮಾರಾಟದಿಂದ ಸ್ಥಗಿತಗೊಳ್ಳುತ್ತಿದ್ದು, ರ‍್ಯಾಪಿಡ್ ಮತ್ತು ವೆಂಟೊ ಸ್ಥಾನಕ್ಕೆ ಹೊಸ ವಿನ್ಯಾಸ ಮತ್ತು ಪವರ್‌ಫುಲ್ ಎಂಜಿನ್ ಆಯ್ಕೆಯ ಹೊಸ ಸೆಡಾನ್ ಕಾರನ್ನು ಬಿಡುಗಡೆ ಮಾಡಲಾಗುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ರ‍್ಯಾಪಿಡ್ ಕಾರು ಮಾದರಿಯನ್ನು ಮುಂದಿನ ಕೆಲವೇ ದಿನಗಳಲ್ಲಿ ಮಾರಾಟದಿಂದ ಸ್ಥಗಿತಗೊಳಿಸಲಿರುವ ಸ್ಕೋಡಾ ಕಂಪನಿಯು ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ರ‍್ಯಾಪಿಡ್ ಸ್ಥಾನದಲ್ಲಿ ಸಂಪೂರ್ಣವಾಗಿ ಹೊಸ ಮಾದರಿಯಾದ ಸ್ಲಾವಿಯಾ ಪರಿಚಯಿಸುತ್ತಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ರ‍್ಯಾಪಿಡ್‌ಗಿಂತಲೂ ಆಕರ್ಷಕ ವಿನ್ಯಾಸದೊಂದಿಗೆ ಲಾಂಗ್‌ವೀಲ್ಹ್ ಬೆಸ್ ಪಡೆದುಕೊಂಡಿದೆ.

ಸಹಭಾಗಿತ್ವ ಯೋಜನೆ ಅಡಿ ಅಭಿವೃದ್ದಿಗೊಳ್ಳುತ್ತಿರುವ ಫೋಕ್ಸ್‌ವ್ಯಾಗನ್ ಮತ್ತು ಸ್ಕೋಡಾ ಹೊಸ ಸೆಡಾನ್ ಕಾರು ಮಾದರಿಯು ತಾಂತ್ರಿಕವಾಗಿ ಮತ್ತು ಎಂಜಿನ್ ಆಯ್ಕೆಯಲ್ಲಿ ಬಹುತೇಕ ಒಂದೇ ಆಗಿರಲಿದ್ದು, ವಿನ್ಯಾಸದಲ್ಲಿ ತುಸು ಬದಲಾವಣೆಯೊಂದಿಗೆ ತಮ್ಮದೇ ಆದ ಗ್ರಾಹಕ ವರ್ಗವನ್ನು ಸೆಳೆಯಲಿವೆ.

ಹೊಸ ಸ್ಕೋಡಾ ಸ್ಲಾವಿಯಾ ಫೋಕ್ಸ್‌ವ್ಯಾಗನ್ ಕಂಪನಿಯ ಹೊಸ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಕುಶಾಕ್ ಕಾಂಪ್ಯಾಕ್ಟ್ ಎಸ್‍ಯುವಿಯು ಇದೇ ಪ್ಲಾಟ್‌ಫಾರ್ಮ್ ಆಧಾರಿಸಿ ನಿರ್ಮಾಣಗೊಂಡಿದೆ. ಹೀಗಾಗಿ ಹೊಸ ಕಾರನ್ನು ಸ್ಕೋಡಾ ಕಂಪನಿಯು ಸ್ಲಾವಿಯಾ ಎಂದು ಕರೆದರೆ ಫೋಕ್ಸ್‌ವ್ಯಾಗನ್ ಕಂಪನಿಯು ಅದೇ ಕಾರನ್ನು ಕೆಲವು ಬದಲಾವಣೆಗಳೊಂದಿಗೆ ವರ್ಚಸ್ ಹೆಸರಿನಲ್ಲಿ ಬಿಡುಗಡೆ ಮಾಡಲಿದೆ.

ಸ್ಲಾವಿಯಾ ಕಾರು ಮಾದರಿಯು 4,541 ಎಂಎಂ ಉದ್ದ, 1,752 ಅಗಲ ಮತ್ತು 1,487 ಎಂಎಂ ಎತ್ತರವನ್ನು ಹೊಂದಿದ್ದು, 2,651 ಎಂಎಂ ವ್ಹೀಲ್‌ಬೇಸ್ ಅನ್ನು ಒಳಗೊಂಡಿದ್ದು, ಹೊಸ ಕಾರು ಹೋಂಡಾ ಸಿಟಿ ಸೆಡಾನ್ ಮಾದರಿಗಿಂತೂ ಹೆಚ್ಚು ಉದ್ದವಾಗಿರುವುದಲ್ಲದೆ ಎತ್ತರವಾಗಿದೆ.

ಜೊತೆಗೆ ಹ್ಯುಂಡೈ ವೆರ್ನಾ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳಿಗೂ ಭರ್ಜರಿ ಪೈಪೋಟಿ ನೀಡಲಿರುವ ಸ್ಲಾವಿಯಾ ಕಾರು ಕುಶಾಕ್ ಮಾದರಿಯಂತೆ 1.0-ಲೀಟರ್ ಟಿಎಸ್ಐ ಮೂರು-ಸಿಲಿಂಡರ್ ಎಂಜಿನ್ ಮತ್ತು 1.5-ಲೀಟರ್ ನಾಲ್ಕು-ಸಿಲಿಂಡರ್ ಟಿಎಸ್ಐ ಎಂಜಿನ್ ಜೊತೆಗೆ ಎರಡೂ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪಡೆಯಲಿದೆ.

ಹೊಸ ಕಾರಿನ 1.0-ಲೀಟರ್ ಟಿಎಸ್ಐ ಮೂರು-ಸಿಲಿಂಡರ್ ಎಂಜಿನ್ 113 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಆಯ್ಕೆಯನ್ನು ನೀಡಲಾಗುತ್ತದೆ.

ಹೈ ಎಂಡ್ ಮಾದರಿಯಲ್ಲಿರುವ 1.5-ಲೀಟರ್ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಅಲ್ಲದೆ ಹೊಸ ಕಾರು ಕುಶಾಕ್‌ನಲ್ಲಿರುವಂತೆ 1.5-ಲೀಟರ್ ಎಂಜಿನ್ ಹೊಂದಿರುವ ಸ್ಲಾವಿಯಾ ಸಕ್ರಿಯ ಸಿಲಿಂಡರ್ ತಂತ್ರಜ್ಞಾನದೊಂದಿಗೆ ಬರುತ್ತದೆ (ACT) ಇದು ಎಂಜಿನ್ ವೇಗದಲ್ಲಿದ್ದಾಗ ಎರಡು ಸಿಲಿಂಡರ್‌ಗಳನ್ನು ಆಟೋಮ್ಯಾಟಿಕ್ ಆಗಿ ಸ್ಥಗಿತಗೊಳಿಸುತ್ತದೆ. ಹೀಗಾಗಿ ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ.

ಇನ್ನು ಸ್ಲಾವಿಯಾ ಸೆಡಾನ್ ನಾಚ್ ಬ್ಯಾಕ್ ತರಹದ ಸ್ಟೈಲಿಂಗ್ ಅನ್ನು ಹೊಂದಿರಲಿದ್ದು, ಕ್ರೋಮ್ ಸರೌಂಡ್‌ನೊಂದಿಗೆ ಸಿಗ್ನೆಚರ್ ಬಟರ್‌ಫ್ಲೈ ಗ್ರಿಲ್, ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಚೂಪಾದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ವಿಭಿನ್ನ ಕ್ಯಾರೆಕ್ಟರ್ ಲೈನ್‌ಗಳು, ಸ್ಲೋಪಿಂಗ್ ರೂಫ್‌ಲೈನ್, ಎಲ್‌ಇಡಿ ಟೈಲ್-ಲೈಟ್ಸ್ ಮತ್ತು ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳನ್ನು ಕೂಡಾ ಪಡೆಯಲಿದೆ.

ಹಾಗೆಯೇ ಸ್ಕೋಡಾ ಸ್ಲಾವಿಯಾ ಕಾರು ಫಾಕ್ಟರಿ ಫಿಟೆಡ್ ಎಲೆಕ್ಟ್ರಿಕ್ ಸನ್ ರೂಫ್, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಮತ್ತು ಆಟೋಮ್ಯಾಟಿಕ್ ವೈಪರ್ ಗಳು ಒಳಗೊಂಡಿರಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.9 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ.


Click it and Unblock the Notifications