ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹೋಂಡಾ ಅಮೇಜ್ ಫೇಸ್‌ಲಿಫ್ಟ್
ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯ ಜನಪ್ರಿಯ ಕಾರು ಮಾದರಿಯಾದ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಅಗಸ್ಟ್ 17ರಂದು ಫೇಸ್‌ಲಿಫ್ಟ್ ಮಾದರಿಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಹೊಸ ಕಾರುಗಳು ಪ್ರಸ್ತುತ ಮಾರುಕಟ್ಟೆಯಲ್ಲಿನ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ.

ಕಂಪ್ಯಾಕ್ಟ್ ಸೆಡಾನ್ ಮಾದರಿದಗಳ ಮಾರಾಟದಲ್ಲಿ ಉತ್ತಮ ಬೇಡಿಕೆ ಹೊಂದಿರುವ ಅಮೇಜ್ ಕಾರು ಫೇಸ್‌ಲಿಫ್ಟ್ ಮಾದರಿಯೊಂದಿಗೆ ಹ್ಯುಂಡೈ ಔರಾ ಮತ್ತು ಮಾರುತಿ ಸುಜುಕಿ ಡಿಜೈರ್ ಕಾರು ಮಾದರಿಗಳಿಗೆ ಮತ್ತಷ್ಟು ಪೈಪೋಟಿ ನೀಡುವ ತವಕದಲ್ಲಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿನ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಸುಧಾರಿತ ತಂತ್ರಜ್ಞಾನ ಸೌಲಭ್ಯಗಳನ್ನು ಹೊಂದಿರಲಿದೆ.

ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಹೋಂಡಾ ಕಂಪನಿಯು ಹೊಸ ವಿನ್ಯಾಸದ 16-ಇಂಚಿನ ಅಲಾಯ್ ವ್ಹೀಲ್, ಮರು ವಿನ್ಯಾಸಗೊಳಿಸಲಾದ ಫ್ರಂಟ್ ಮತ್ತು ರಿಯರ್ ಬಂಪರ್, ಆಯ್ದ ವೆರಿಯೆಂಟ್‌ಗಳಲ್ಲಿ ಎಲೆಕ್ಟ್ರಿಕ್ ಸನ್‌ರೂಫ್, ಹೈ ಎಂಡ್ ಮಾದರಿಗಳಲ್ಲಿ ಕನೆಕ್ಟೆಡ್ ಫೀಚರ್ಸ್ ಜೋಡಣೆ ಮಾಡಲಿದೆ.

ಜೊತೆಗೆ ಹೊಸ ಕಾರಿನಲ್ಲಿ ಡ್ಯುಯಲ್ ಟೋನ್ ಬಣ್ಣಗಳನ್ನು ನೀಡಲಾಗುತ್ತಿದ್ದು, ಕಂಪ್ಯಾಕ್ಟ್ ಸೆಡಾನ್ ಮಾದರಿಯು ಮತ್ತಷ್ಟು ಆಕರ್ಷಕವಾಗಿದೆ. ಆದರೆ ಹೊಸ ಕಾರಿನಲ್ಲಿ ಈ ಹಿಂದಿನಂತೆಯೇ ಎಂಜಿನ್ ಆಯ್ಕೆ ಮುಂದುವರಿಯಲಿದ್ದು, ಹೊಸ ಬದಲಾವಣೆಗಳೊಂದಿಗೆ ಅಮೇಜ್ ಕಾರು ಮತ್ತಷ್ಟು ದುಬಾರಿಯಾಗಲಿದೆ.

ಅಮೇಜ್ ಕಾರು ಮಾದರಿಯು ಸದ್ಯ ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿದ್ದು, ಪ್ರತಿ ಮಾದರಿಯಲ್ಲೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ಹೊಸ ಕಾರಿನಲ್ಲಿ ಅಮೇಜ್ ಕಾರಿನ ವಿವಿಧ ಸೌಲಭ್ಯಗಳನ್ನು ಹೊಂದಿರುವ ಪ್ರಮುಖ ಸ್ಪೆಷಲ್ ಎಡಿಷನ್‌ಗಳಲ್ಲೂ ಮಾರಾಟವಾಗುತ್ತಿದ್ದು, ಇದೀಗ ಬಿಡುಗಡೆಗೆ ಸಿದ್ದವಾಗಿರುವ ಫೇಸ್‌ಲಿಫ್ಟ್ ಮಾದರಿಯು ಸಾಕಷ್ಟು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ.

ಅಮೇಜ್ ಕಾರಿನಲ್ಲಿ ಎಂಜಿನ್ ಆಯ್ಕೆಗೆ ಅನುಗುಣವಾಗಿ ಇ, ಎಸ್, ವಿ ಮತ್ತು ವಿಎಕ್ಸ್ ವೆರಿಯೆಂಟ್‌ಗಳಲ್ಲಿ ಮಾರಾಟಗೊಳ್ಳುತ್ತಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.22 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.9.99 ಲಕ್ಷ ಬೆಲೆ ಹೊಂದಿದೆ.

ಪೆಟ್ರೋಲ್ ಮಾದರಿಯು 1.2-ಲೀಟರ್ ಎಂಜಿನ್ ಹೊಂದಿದ್ದರೆ ಡೀಸೆಲ್ ಮಾದರಿಯು 1.-5-ಲೀಟರ್ ಎಂಜಿನ್ ಆಯ್ಕೆ ಹೊಂದಿದ್ದು, ಪ್ರತಿ ಮಾದರಿಯಲ್ಲೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳನ್ನು ನೀಡಲಾಗುತ್ತಿದೆ.

1.2-ಲೀಟರ್ ಪೆಟ್ರೋಲ್ ಎಂಜಿನ್ 89-ಬಿಎಚ್‌ಪಿ ಮತ್ತು 110-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, 1.5-ಲೀಟರ್ ಡೀಸೆಲ್ ಮಾದರಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 79-ಬಿಎಚ್‌ಪಿ ಮತ್ತು 160-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದೆ.

ಹೊಸ ಎಮಿಷನ್ ಅನುಸಾರವಾಗಿ ಬಿಎಸ್-6 ಎಂಜಿನ್ ಆಯ್ಕೆ ಪಡೆದುಕೊಂಡಿರುವ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಮಾದರಿಯು ಹ್ಯುಂಡೈ ಔರಾ, ಮಾರುತಿ ಸುಜುಕಿ ಡಿಜೈರ್, ಫೋರ್ಡ್ ಆಸ್ಪೈರ್, ಟಾಟಾ ಟಿಗೋರ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುತ್ತಿದ್ದು, ಕಂಪ್ಯಾಕ್ಟ್ ಸೆಡಾನ್ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಡಿಜೈರ್ ನಂತರ ಎರಡನೇ ಸ್ಥಾನದಲ್ಲಿದೆ.


Click it and Unblock the Notifications