ಹೊಸ ಇವಿ ನೀತಿ ಅಡಿಯಲ್ಲಿ ಎಲೆಕ್ಟ್ರಿಕ್ ಕಾರು ಖರೀದಿ ಮೇಲೆ ರೂ. 2.75 ಲಕ್ಷ ಸಬ್ಸಡಿ
ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವ ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹವು ಹೊಸ ಬದಲಾವಣೆಗೆ ಕಾರಣವಾಗಿದೆ.

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.

ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಫೇಮ್ 2 ಹೊರತುಪಡಿಸಿ ರಾಜ್ಯಗಳ ಮಟ್ಟದಲ್ಲಿ ದೆಹಲಿ ಸರ್ಕಾರವು ಹೆಚ್ಚಿನ ಮಟ್ಟದ ಪ್ರೊತ್ಸಾಹ ನೀಡುತ್ತಿದ್ದು, ತದನಂತರ ಗುಜರಾತ್ ಸರ್ಕಾರವು ಸಹ ರಾಜ್ಯ ಮಟ್ಟದಲ್ಲಿ ಹೊಸ ಇವಿ ನೀತಿ ಅಳವಡಿಸಿಕೊಂಡಿದೆ. ಇದೀಗ ಮಹಾರಾಷ್ಟ್ರ ಸರ್ಕಾರವು ಸಹ ಹೊಸ ಇವಿ ವಾಹನ ನೀತಿಯನ್ನು ಪ್ರಕಟಿಸಿದ್ದು, ಮಾಹಾರಾಷ್ಟ್ರದಲ್ಲಿ ಇವಿ ವಾಹನಗಳನ್ನು ಖರೀದಿಸುವವರಿಗಾಗಿ ಭಾರೀ ಪ್ರಮಾಣದ ಸಬ್ಸಡಿ ಆರಂಭಿಸಿದೆ.

ಮಹಾರಾಷ್ಟ್ರ ಸರ್ಕಾರವು 2021ರ ಕೊನೆಗೆಯಲ್ಲಿ ರಾಜ್ಯಾದ್ಯಂತ ಲಕ್ಷಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಉದ್ದೇಶ ಹೊಂದಿದ್ದು, ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ತ್ರಿ ಚಕ್ರ ವಾಹನ ಮತ್ತು ಕಾರು ಮಾದರಿಗಳಿಗೆ ಗರಿಷ್ಠ ಪ್ರಮಾಣದ ಸಬ್ಸಡಿ ನೀಡಲು ಚಾಲನೆ ನೀಡಿದೆ.

ಹೊಸ ಎಲೆಕ್ಟ್ರಿಕ್ ವಾಹನ ನೀತಿ ಅಡಿಯಲ್ಲಿ ದ್ವಿಚಕ್ರ ವಾಹನಗಳಿಗಾಗಿ ಗರಿಷ್ಠ ರೂ.44 ಸಾವಿರ, ತ್ರಿ ಚಕ್ರ ವಾಹಗಳಿಗಾಗಿ ಗರಿಷ್ಠ ರೂ. 90 ಸಾವಿರ ಮತ್ತು ಎಲೆಕ್ಟ್ರಿಕ್ ಕಾರುಗಳಿಗಾಗಿ ಗರಿಷ್ಠ ರೂ. 2.75 ಲಕ್ಷ ಸಬ್ಸಡಿ ನೀಡುತ್ತಿದೆ.

ಹೊಸ ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರು 2021ರ ಡಿಸೆಂಬರ್ 31ರ ಒಳಗಾಗಿ ಖರೀದಿಸಿದ್ದಲ್ಲಿ ಹೆಚ್ಚಿನ ಮಟ್ಟದ ಸಬ್ಸಡಿ ದೊರೆಯಲಿದ್ದು, 2022ರ ಜನವರಿ 1ರಿಂದ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಸಬ್ಸಡಿ ಲಭ್ಯವಿದ್ದರೂ ಪ್ರಸ್ತುತ ವರ್ಷದ ಸಬ್ಸಡಿ ಪ್ರಮಾಣಕ್ಕಿಂತಲೂ ತುಸು ಕಡಿಮೆಯಾಗಲಿದೆ.

2022ರ ಜನವರಿ 1ರಿಂದ ಖರೀದಿ ಮಾಡಲಾಗುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ರೂ. 29 ಸಾವಿರ ಸಬ್ಸಡಿ, ತ್ರಿ ಚಕ್ರ ವಾಹನಗಳಿಗೆ ರೂ. 57 ಸಾವಿರ ಮತ್ತು ಇವಿ ಕಾರುಗಳಿಗೆ ರೂ. 1.75 ಲಕ್ಷ ಸಬ್ಸಡಿ ಲಭ್ಯವಿರಲಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ತೀವ್ರಗೊಳಿಸುವ ಉದ್ದೇಶದಿಂದ ಮಾಹಾರಾಷ್ಟ್ರ ಸರ್ಕಾರ ಡಿಸೆಂಬರ್ 31ರ ಒಳಗಾಗಿ ಇವಿ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಹೆಚ್ಚಿನ ಮಟ್ಟದ ಸಬ್ಸಡಿ ಘೋಷಣೆ ಮಾಡಿದ್ದು, ಹೊಸ ಸಬ್ಸಡಿ ಯೋಜನೆಗಾಗಿ ಕನಿಷ್ಠ ಪ್ರಮಾಣ ಬ್ಯಾಟರಿ ಸಾಮರ್ಥ್ಯವನ್ನು ನಿಗದಿಪಡಿಸಲಾಗಿದೆ.

ಎಲೆಕ್ಟ್ರಿಕ್ ದ್ವಿಚಕ್ರವಾಹನಗಳು ಸಬ್ಸಡಿಗೆ ಅರ್ಹವಾಗಲು ಕನಿಷ್ಠ 3kWh ಬ್ಯಾಟರಿ ಪ್ಯಾಕ್ ಹೊಂದಿರಬೇಕಿದ್ದು, ತ್ರಿ ಚಕ್ರ ಎಲೆಕ್ಟ್ರಿಕ್ ವಾಹನಗಳಿಗೆ 7kWh ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಕಾರುಗಳಿಗೆ 30kWh ಬ್ಯಾಟರಿ ಪ್ಯಾಕ್ ಹೊಂದಿರಬೇಕಾಗುತ್ತದೆ.

ಇದರೊಂದಿಗೆ ಮಹಾರಾಷ್ಟ್ರ ಸರ್ಕಾರವು ಮುಂಬೈ, ಪುಣೆ, ನಾಗಪುರ್, ಔರಂಗಾಬಾದ್, ನಾಸಿಕ್, ಅಮರಾವತಿ ಮತ್ತು ಸೋಲಾಪುರ್‌ನಲ್ಲಿ 2500 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಉದ್ದೇಶಿಸಿದ್ದು, ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಗೊಳ್ಳುವ ಚಾರ್ಜಿಂಗ್ ನಿಲ್ದಾಣಗಳಿಗೆ ಗರಿಷ್ಠ ರೂ. 5 ಲಕ್ಷದ ತನಕ ಸಬ್ಸಡಿ ನೀಡಲು ಒಪ್ಪಿಗೆ ಸೂಚಿಸಿದೆ.

ಮಹಾರಾಷ್ಟ್ರ ಸರ್ಕಾರದ ಹೊಸ ಇವಿ ನೀತಿಯಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂದರೆ ಅದು ಸಾರ್ವಜನಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಖಾಸಗಿ ಸ್ವತ್ತಿನಲ್ಲಿ ಚಾರ್ಜಿಂಗ್ ನಿಲ್ದಾಣಗಳನ್ನು ಸ್ಥಾಪಿಸಲು ಅನುಮತಿಯೊಂದಿಗೆ ತೆರಿಗೆ ವಿನಾಯ್ತಿಯ ಅವಕಾಶ ನೀಡಿದೆ.


Click it and Unblock the Notifications