ಹಲವಾರು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ಮಹೀಂದ್ರಾ ನ್ಯೂ ಜನರೇಷನ್ ಬೊಲೆರೊ
ಮಹೀಂದ್ರಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರಮುಖ ಕಾರು ಮಾದರಿಗಳ ನ್ಯೂ ಜನರೇಷನ್ ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಬೊಲೆರೊ ನ್ಯೂ ಜನರೇಷನ್ ಎಸ್‍ಯುವಿ ಮಾದರಿಯನ್ನು ಸಹ ಮಹತ್ವದ ಬದಲಾವಣೆಯೊಂದಿಗೆ ಪರಿಚಯಿಸುವ ಯೋಜನೆಯಲ್ಲಿದೆ.

ಬೊಲೆರೊ ಕಾರು ಭಾರತೀಯ ಮಾರುಕಟ್ಟೆಯಲ್ಲಿ ದೀರ್ಘಕಾಲದಿಂದ ಮಾರಾಟವಾಗುತ್ತಿರುವ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದ್ದು, ಹೊಸ ಎಸ್‍ಯುವಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಲ್ಯಾಡರ್-ಆನ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿ ನಿರ್ಮಾಣಗೊಳ್ಳಲಿದೆ. ಇದು ಹೊಸ ಥಾರ್‌ಗೆ ಸಹ ಆಧಾರವಾಗಿದ್ದು, ನ್ಯೂ ಜನರೇಷನ್ ಸ್ಕಾರ್ಪಿಯೋ ಮತ್ತು 5-ಡೋರಿನ ಥಾರ್ ಎಸ್‍ಯುವಿಯನ್ನು ಕೂಡಾ ಇದೇ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ದಿಗೊಳ್ಳುತ್ತಿದೆ.

ನ್ಯೂ ಜನರೇಷನ್ ಬೊಲೆರೊ ಎಸ್‍ಯುವಿಯನ್ನು ಪರಿಚಯಿಸುವ ಮೊದಲು ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ಪ್ರಸ್ತುತ ಮಾರಾಟವಾಗುತ್ತಿರುವ ಬೊಲೆರೊ ಮಾದರಿಯ ಮಿಡ್-ಲೈಫ್ ಫೇಸ್‌ಲಿಫ್ಟ್ ಅನ್ನು ಪಡೆಯುತ್ತದೆ.

ನವೀಕರಿಸಿದ ಮಾದರಿಯು ಸೂಕ್ಷ್ಮ ವಿನ್ಯಾಸ ಬದಲಾವಣೆಗಳು ಮತ್ತು ನವೀಕರಿಸಿದ ಇಂಟಿರಿಯರ್ ಅನ್ನು ಹೊಂದಿರಲಿದ್ದು, ನ್ಯೂ ಜನರೇಷನ್ ಬೊಲೆರೊ ಅದೇ ಆಕರ್ಷಕ ಬಾಕ್ಸ್ ವಿನ್ಯಾಸವನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಬೊಲೆರೊ ಎಸ್‍ಯುವಿಯು ಸಣ್ಣ ನಗರಗಳಲ್ಲಿ ಮತ್ತು ಗ್ರಾಮಿಣ ಭಾಗಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ್ದು, ನ್ಯೂ ಜನರೇಷನ್ ಮಾದರಿಯಲ್ಲಿ ಮತ್ತಷ್ಟು ಹೊಸ ಪ್ರೀಮಿಯಂ ಫೀಚರ್ಸ್ ನೀಡಲಾಗುತ್ತಿದೆ.

ನ್ಯೂ ಜನರೇಷನ್ ಬೊಲೆರೊ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ರೇರ್ ಎಸಿ ವೆಂಟ್ ಗಳೊಂದಿಗೆ ಹೊಸ ಎಸಿ ಯುನಿಟ್, ಪವರ್ ವಿಂಡೋಸ್, ಮಲ್ಟಿ-ಫಂಕ್ಷನಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಇತರೆ ಆಧುನಿಕ ವೈಶಿಷ್ಟ್ಯಗಳನ್ನು ಪಡೆಯುವ ನಿರೀಕ್ಷೆಯಿದೆ.

ಬೊಲೆರೊ ಎಸ್‍ಯುವಿಯ ಟಾಪ್-ಸ್ಪೆಕ್ ಮಾದರಿಯಲ್ಲಿ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಎಲ್ಇಡಿ ಹೆಡ್ ಲ್ಯಾಂಪ್ ಗಳನ್ನು ಮತ್ತು ಎಲ್ಇಡಿ ಟೈಲ್-ಲ್ಯಾಂಪ್ ಗಳನ್ನು ಸಹ ಪಡೆಯಬಹುದಾಗಿದ್ದು, ಇದು ಸ್ಕಿಡ್ ಪ್ಲೇಟ್, ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿರುವ ಒಆರ್‌ವಿಎಂಗಳು ಮತ್ತು ಹೊಸ ಫ್ರಂಟ್ ಗ್ರಿಲ್ ಪಡೆಯಲಿದೆ.

ಹಾಗೆಯೇ ಹೊಸ ಬೊಲೆರೊದಲ್ಲಿ ಹೊಸ ಸುರಕ್ಷತೆ ಮತ್ತು ಕ್ರ್ಯಾಶ್ ಪರೀಕ್ಷಾ ಮಾನದಂಡಗಳಿಗೆ ಅನುಗುಣವಾಗಿ ಅಭಿವೃದ್ದಿ ಹೊಂದಲಿದ್ದು, ಹೊಸ ಹೊಸ ಮಾದರಿಯಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ಡ್ರೈವರ್ ಮತ್ತು ಕೋ-ಡ್ರೈವರ್ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ಅಲರ್ಟ್ ಸಿಸ್ಟಮ್, ವೆಹಿಕಲ್ ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಸೆಂಟ್ರಲ್ ಲಾಕಿಂಗ್ ಸಿಸ್ಟಂಗಾಗಿ ಮ್ಯಾನ್ಯುವಲ್ ಓವರ್‌ರೈಡ್ ಅನ್ನು ಸ್ಟಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳಾಗಿ ಅಳವಡಿಸಲಾಗುತ್ತದೆ.

ಸದ್ಯ ಮಾರುಕಟ್ಟೆಯಲ್ಲಿರುವ ಬೊಲೆರೊ ಎಸ್‌ಯುವಿ ಕಾರು ಮಾದರಿಯು ಪ್ರಮುಖ ಮೂರು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, 1.5-ಲೀಟರ್ ಮ್ಯಾನುವಲ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಮಾರಾಟಗೊಳ್ಳುತ್ತಿದೆ.

ನ್ಯೂ ಜನರೇಷನ್ ಬೊಲೆರೊ ಹೊಸ 2.2-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಜೊತೆಗೆ 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಸಹ ಪಡೆಯಬಹುದಾಗಿದ್ದು, ನ್ಯೂ ಜನರೇಷನ್ ಎಸ್‍ಯುವಿಯು ಹೊಸ ಫೀಚರ್ಸ್ ಮತ್ತು ಕೆಲವು ವಿನ್ಯಾಸ ಬದಲಾವಣೆಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ 2022ರ ಕೊನೆಯಲ್ಲಿ ಇಲ್ಲವೆ 2023ರ ಆರಂಭದಲ್ಲಿ ಬಿಡುಗಡೆಯಾಗಬಹುದು.

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಬೊಲೆರೊ ಕಾರು ಮಾದರಿಯ ಆರಂಭಿಕವಾಗಿ ರೂ.8.42 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.9.41 ಲಕ್ಷ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ನ್ಯೂ ಜನರೇಷನ್ ಬೊಲೆರೊ ಕಾರು ಮಾದರಿಯು ಪ್ರಸ್ತುತ ಮಾದರಿಗಿಂತಲೂ ರೂ.1 ಲಕ್ಷದಿಂದ 1.50 ಲಕ್ಷದ ತನಕ ಹೆಚ್ಚುವರಿ ಬೆಲೆ ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








