ಆಕ್ಸೆಸರಿಸ್ ಪ್ಯಾಕೇಜ್‌ನೊಂದಿಗೆ ಹೈ ಎಂಡ್ ಮಾದರಿಯೆಂತೆ ಮಿಂಚಿದ 2021ರ ಸ್ವಿಫ್ಟ್ ಬೆಸ್ ವೆರಿಯೆಂಟ್
ಮಾರುತಿ ಸುಜುಕಿ ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಸ್ವಿಫ್ಟ್ 2021ರ ಆವೃತ್ತಿಯನ್ನು ಬಿಡುಗಡೆಗೊಳಿಸಿ ವಿತರಣೆ ಆರಂಭಿಸಿದ್ದು, ಗ್ರಾಹಕರ ಬೇಡಿಕೆ ಅನುಸಾರವಾಗಿ ಹೊಸ ಕಾರಿಗೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಒಳಗೊಂಡ ಆಕ್ಸೆಸರಿಸ್ ಪ್ಯಾಕೇಜ್ ಸಿದ್ದಪಡಿಸಿದೆ.

2021ರ ಸ್ವಿಫ್ಟ್ ಕಾರು ಮಾದರಿಯು ಉನ್ನತೀಕರಿಸಿದ ಎಂಜಿನ್ ಸೇರಿದಂತೆ ಪ್ರಮುಖ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರು ಮಾದರಿಯು ಎಲ್ಎಕ್ಸ್ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ ಪ್ಲಸ್ ಎನ್ನುವ ಪ್ರಮುಖ ನಾಲ್ಕು ವೆರಿಯೆಂಟ್ ಪಡೆದುಕೊಂಡಿದೆ. ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.73 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8.41 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಹೊಸ ಕಾರಿನ ಆಕರ್ಷಣೆಗಾಗಿ ಆಸಕ್ತ ಗ್ರಾಹಕರು ಹೆಚ್ಚುವರಿ ಸೌಲಭ್ಯಗಳನ್ನು ಒಳಗೊಂಡ ಪ್ರೀಮಿಯಂ ಲಿಮಿಟೆಡ್ ಎಡಿಷನ್ ಆಕ್ಸೆಸರಿಸ್ ಪ್ಯಾಕೇಜ್ ಅನ್ನು ಆಯ್ಕೆ ಮಾಡಬಹುದಾಗಿದ್ದು, ವಿವಿಧ ದರಗಳಲ್ಲಿ ಹೊಸ ಆಕ್ಸೆಸರಿಸ್ ಪ್ಯಾಕೇಜ್ ಲಭ್ಯವಿವೆ.

ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಹೊರತುಪಡಿಸಿ ಮುಂಭಾಗ ಗ್ರಿಲ್, ಬಂಪರ್, ಫಾಗ್ ಲ್ಯಾಂಪ್, ಟೈಲ್ ಲ್ಯಾಂಪ್‌ಗಳಿಗೆ ಗಾರ್ನಿಶ್, ವೀಲ್ಹ್ ಕವರ್, ಡೋರ್ ವಿಸರ್, ಬಾಡಿ ಸೈಡ್ ಮೊಲ್ಡಿಂಗ್ ಸೌಲಭ್ಯಗಳಿವೆ.

ಒಳಭಾಗದ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಏರ್ ಪ್ಯೂರಿಫೈರ್, ಡಿಜಿಟಲ್ ಟೈರ್ ಇನ್ಪ್ಲಾಟರ್, ವ್ಯಾಕೂಮ್ ಕ್ಲಿನರ್, ರೈನ್ ರಿಪ್ಲೆಂಟ್, ಫಾಸ್ಟ್ ಚಾರ್ಜರ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ವಿವಿಧ ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಸೀಟುಗಳು, ವೀಂಡೋ ಸನ್‌ಶೆಡ್, ರಿಪ್ಲಕ್ಟರ್ ಮ್ಯಾಟ್, ಗಾರ್ನಿಶ್ ಹೊಂದಿರುವ ಗೇರ್‌ನಾಬ್ ಮತ್ತು ರಿಯರ್ ಸೀಟ್ ಎಂಟರ್‌ಟೈನ್‌ಮೆಂಟ್ ಸೌಲಭ್ಯಗಳಿರುವುದು ಬೆಸ್ ವೆರಿಯೆಂಟ್‌ಗಳಿಗೆ ಸೂಕ್ತವಾಗಿದೆ.
ಇನ್ನು ಆಕ್ಸೆಸರಿಸ್ ಹೊರತುಪಡಿಸಿ ಹೊಸ ಸ್ವಿಫ್ಟ್ ಮಾದರಿಯಲ್ಲಿ ಈ ಬಾರಿ ವಿಎಕ್ಸ್ಐ ವೆರಿಯೆಂಟ್‌ನಲ್ಲೂ ಟಚ್ ಸ್ಕ್ರೀನ್ ಹೊಂದಿರುವ ಹೊಸ ಆಡಿಯೋ ಹೆಡ್ ಯುನಿಟ್ ನೀಡಲಾಗಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಕ್ರೂಸ್ ಕಂಟ್ರೋಲ್, ವಿವಿಧ ಬಣ್ಣಗಳನ್ನು ಮಲ್ಟಿ ಇನ್ಪಾರ್ಮೆಷನ್ ಡಿಸ್‌ಪ್ಲೇ ಮತ್ತು ಆಟೋ ಫ್ಲೋಡಿಂಗ್ ಹೊಂದಿರುವ ರಿಯಲ್ ವ್ಯೂ ಮಿರರ್ ನೀಡಲಾಗಿದೆ.

ಇನ್ನುಳಿದಂತೆ ಹಳೆಯ ಮಾದರಿಯಲ್ಲಿರುವಂತೆ ಎಲ್ಇಡಿ ಹೆಡ್‌ಲ್ಯಾಂಪ್ಸ್, 7.0-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಕೀ ಲೆಸ್ ಎಂಟ್ರಿ, ಆಟೋ ಕ್ಲೈಮೆಟ್ ಕಂಟ್ರೋಲ್, ಲೈವ್ ಟ್ರಾಫಿಕ್ ಅಪ್‌ಡೆಟ್ ನೀಡುವ ಸ್ಮಾರ್ಟ್ ಸ್ಟುಡಿಯೋ ಆ್ಯಪ್ ಕನೆಕ್ಟ್ ಸೌಲಭ್ಯಗಳಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಈ ಬಾರಿ ಮೂರು ಹೊಸ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ನೀಡಲಾಗಿದೆ.

ಈ ಬಾರಿ 2021ರ ಸ್ವಿಫ್ಟ್ ಕಾರಿನ ಮತ್ತೊಂದು ಪ್ರಮುಖ ಬದಲಾವಣೆಯೆಂದರೆ ಅದು ಹೊಸದಾಗಿ ಜೋಡಣೆ ಮಾಡಲಾಗಿರುವ 1.2-ಲೀಟರ್ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್ ಮಾದರಿಯು ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಲಿದ್ದು, ಈ ಹಿಂದಿನ 83-ಬಿಎಚ್‌ಪಿ ಪ್ರೇರಿತ 1.2-ಲೀಟರ್ ಕೆ12 ಪೆಟ್ರೋಲ್ ಮಾದರಿಗಿಂತಲೂ ಉತ್ತಮ ಕಾರ್ಯಕ್ಷಮತೆ ಮತ್ತು ಹೆಚ್ಚು ಇಂಧನ ದಕ್ಷತೆ ಹೊಂದಿರುವ ಡ್ಯುಯಲ್‌ಜೆಟ್ ಎಂಜಿನ್ ಮಾದರಿಯು ಸ್ವಿಫ್ಟ್ ಕಾರಿನ ಆಯ್ಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ.

ಹೊಸ ಎಂಜಿನ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 90-ಬಿಎಚ್‌ಪಿ, 113-ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಹೊಸ ಕಾರಿನ ಪೆಟ್ರೋಲ್ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ 23.20 ಕಿ.ಮೀ ಮತ್ತು ಆಟೋಮ್ಯಾಟಿಕ್ ಆವೃತ್ತಿಯು 23.76 ಕಿ.ಮೀ ಮೈಲೇಜ್ ಹಿಂದಿರುಸುತ್ತದೆ.

ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಅತ್ಯಧಿಕ ಮೈಲೇಜ್ ಪಡೆದುಕೊಂಡಿರುವ ಹೊಸ ಸ್ವಿಫ್ಟ್ ಕಾರು ಇದೀಗ ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಹ್ಯುಂಡೈ ಗ್ರಾಂಡ್ ಐ10 ನಿಯೋಸ್, ಫೋರ್ಡ ಫಿಗೊ ಕಾರು ಮಾದರಿಗಳಿಗೆ ಮತ್ತಷ್ಟು ಪೈಟೋಟಿ ನೀಡಲಿದ್ದು, ಹೊಸ ಕಾರಿನಲ್ಲಿ ಹೊಸದಾಗಿ ನೀಡಿರುವ ಡ್ಯುಯಲ್ ಆವೃತ್ತಿಗಳು ಸಹ ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿವೆ.


Click it and Unblock the Notifications








