ವರ್ಷದಲ್ಲೇ 3ನೇ ಬಾರಿಗೆ ಕಾರುಗಳ ಬೆಲೆ ಹೆಚ್ಚಿಸಿದ ಮಾರುತಿ ಸುಜುಕಿ
ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನ ಬೆಲೆಯಲ್ಲಿ ಸಾಕಷ್ಟು ಏರಿಕೆಯಾಗುತ್ತಿದ್ದು, ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಹೆಚ್ಚಿಸಿದೆ.

ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬೆಲೆ ಪರಿಷ್ಕರಣೆ ಮಾಡುತ್ತಿದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ವಾಹನ ಮಾಲೀಕತ್ವವು ದುಬಾರಿಯಾಗಿ ಪರಿಣಮಿಸಿದೆ.

ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಮೂಲ ಬೆಲೆಯಲ್ಲಿ ಶೇ. 1.50ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸುತ್ತಿದ್ದು, ಕಳೆದ ಕೆಲ ತಿಂಗಳಿನಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿಯಾಗಿ ರೂ. 50 ಸಾವಿರದಿಂದ ರೂ.1 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ರೂ. 70 ಸಾವಿರದಿಂದ ರೂ. 1.50 ಲಕ್ಷದವರೆಗೆ ಬೆಲೆ ಹೆಚ್ಚಳವಾಗಿದ್ದು, ವಿದೇಶಿ ಮಾರುಕಟ್ಟೆಗಳಿಂದ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗುತ್ತಿರುವ ಪರಿಣಾಮ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದೆ.

ಬಿಡಿಭಾಗಗಳ ಬೆಲೆ ಹೆಚ್ಚಳ ಪರಿಣಾಮ ಕಳೆದ ಜನವರಿ ಮತ್ತು ಏಪ್ರಿಲ್‌ನಲ್ಲಿ ಬೆಲೆ ಏರಿಕೆ ಮಾಡಿದ್ದ ಮಾರುತಿ ಸುಜುಕಿಯು ಇದೀಗ ಮತ್ತೊಮ್ಮೆ ಅರೆನಾ ಮತ್ತು ನೆಕ್ಸಾ ಎರಡು ಮಾದರಿಗಳಲ್ಲೂ ದರ ಹೆಚ್ಚಿಸಿದ್ದು, ವಿವಿಧ ಮಾದರಿಗಳಿಗೆ ಅನುಗುಣವಾಗಿ ಕಂಪನಿಯು ರೂ. 5 ಸಾವಿರದಿಂದ ರೂ. 15 ಸಾವಿರ ತನಕ ಬೆಲೆ ಏರಿಕೆ ಮಾಡಿದೆ.

ಹೊಸ ದರ ಪಟ್ಟಿಯಲ್ಲಿ ಸಿಎನ್‌ಜಿ ಆವೃತ್ತಿಗಳಾದ ಆಲ್ಟೊ 800, ಎಸ್-ಪ್ರೆಸ್ಸೊ, ವ್ಯಾಗನ್‌ಆರ್, ಇಕೋ, ಸೂಪರ್ ಕ್ಯಾರಿ, ಎರ್ಟಿಗಾ, ಡಿಜೈರ್ ಟೂರ್ ಬೆಲೆಯಲ್ಲಿ ರೂ. 10 ಸಾವಿರ ತನಕ ಹೆಚ್ಚಳವಾಗಿದ್ದು, ಹೊಸ ದರ ಈ ತಿಂಗಳು 12ರ ನಂತರ ಬುಕ್ಕಿಂಗ್ ಮಾಡಲಾದ ಮಾದರಿಗಳಿಗೆ ಹೊಸ ದರ ಅನ್ವಯಿಸುತ್ತದೆ.

ಮಾರುತಿ ಸುಜುಕಿಯು ಸದ್ಯ ಬೆಲೆ ಹೆಚ್ಚಳ ಮಾಹಿತಿ ನೀಡಿದ್ದರೂ ಯಾವ ಮಾದರಿಯ ಬೆಲೆಯಲ್ಲಿ ಎಷ್ಟು ಹೆಚ್ಚಿಸಲಾಗಿದೆ ಎನ್ನುವ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಹೇಳಿಕೊಂಡಿದ್ದು, ಬೆಲೆ ಏರಿಕೆಯ ಅಂದಾಜು ಮೊತ್ತದ ವಿವರಗಳನ್ನು ಮಾತ್ರ ಹಂಚಿಕೊಂಡಿದೆ.

ಮಾರುತಿ ಸುಜುಕಿಯು ವಿವಿಧ ಕಾರು ಮಾದರಿಗಳಿಗೆ ಅನುಗುಣವಾಗಿ ಎರಡು ಮಾದರಿಯ ಮಾರಾಟ ಸೌಲಭ್ಯವನ್ನು ಹೊಂದಿದ್ದು, ಸಾಮಾನ್ಯ ಕಾರು ಮಾದರಿಗಳನ್ನು ಅರೆನಾ ಮಾರಾಟ ಮಳಿಗೆಗಳಲ್ಲಿ ಮತ್ತು ಪ್ರೀಮಿಯಂ ಕಾರು ಮಾದರಿಗಳನ್ನು ನೆಕ್ಸಾ ಮಾರಾಟ ಮಳಿಗೆಗಳಲ್ಲಿ ಮಾರಾಟ ಮಾಡುತ್ತದೆ.

ಅರೆನಾ ಮಾರಾಟ ಮಳಿಗೆಯಲ್ಲಿ ಎಸ್-ಪ್ರೆಸ್ಸೊ, ಸ್ವಿಫ್ಟ್, ವಿಟಾರಾ ಬ್ರೆಝಾ, ಆಲ್ಟೊ, ವ್ಯಾಗನ್ಆರ್, ಡಿಸೈರ್, ಇಕೋ, ಸೆಲೆರಿಯೊ, ಎರ್ಟಿಗಾ ಕಾರುಗಳ ಮಾರಾಟ ಸೌಲಭ್ಯ ಹೊಂದಿದ್ದರೆ ನೆಕ್ಸಾದಲ್ಲಿ ಇಗ್ನಿಸ್, ಬಲೆನೊ, ಎರ್ಟಿಗಾ ಎಕ್ಸ್6, ಎಸ್-ಕ್ರಾಸ್ ಮತ್ತು ಸಿಯಾಜ್ ಕಾರುಗಳ ಮಾರಾಟ ಸೌಲಭ್ಯ ಹೊಂದಿದೆ.


Click it and Unblock the Notifications