ವಿಶ್ವದ ಮೊದಲ ಸೋಲಾರ್ ಚಾಲಿತ ಹಂಬಲ್ ಒನ್ ಕಾರಿನ 5 ವಿಶೇಷತೆಗಳಿವು!
ಹಂಬಲ್ ಮೋಟಾರ್ಸ್ ಅಮೆರಿಕಾ ಮೂಲದ ಸ್ಟಾರ್ಟ್ ಅಪ್ ವಾಹನ ತಯಾರಕ ಕಂಪನಿಯಾಗಿದೆ. ಕ್ಯಾಲಿಫೋರ್ನಿಯಾ ರಾಜ್ಯದಲ್ಲಿರುವ ಈ ಕಂಪನಿಯು ಸೂರ್ಯನ ಬೆಳಕಿನಿಂದ ಚಲಿಸುವ ಎಸ್‌ಯುವಿಯನ್ನು ಅಭಿವೃದ್ಧಿಪಡಿಸಿದೆ.

ಈ ಹಂಬಲ್ ಮೋಟಾರ್ಸ್ ಕಂಪನಿಯು ಕಳೆದ ವರ್ಷ ಮಾರ್ಚ್‌ನಲ್ಲಿ ಹಂಬಲ್ ಒನ್ ಹೆಸರಿನಲ್ಲಿ ಸೌರಶಕ್ತಿ ಚಾಲಿತ ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿತ್ತು, ಈ ಪರಿಕಲ್ಪನೆಯು ವಾಸ್ತವದಲ್ಲಿ ಯಶಸ್ವಿಯಾಗಿ ಬದಲಾದರೆ, ಈ ವಾಹನವು ಜಗತ್ತಿನ ಮೊದಲ ಸೋಲಾರ್ ಆಧರಿತ ಎಸ್‌ಯುವಿ ಎಂಬ ಕೀರ್ತಿಗೆ ಪಾತ್ರವಾಗಲಿದೆ. ಹಾಗಾಗಿ ಈ ಕಾರಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಐದು ಪ್ರಮುಖ ವಿಷಯಗಳನ್ನು ಇಲ್ಲಿ ಒದಗಿಸಲಾಗಿದೆ.

ವಿಶ್ವದ ಮೊದಲ ಸೋಲಾರ್ ಕಾರ್?
ಹಂಬಲ್ ಒನ್ ವಿಶ್ವದ ಮೊದಲ ಸೌರಶಕ್ತಿ ಚಾಲಿತ ಕಾರಾಗಿದೆಯೇ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಏಕೆಂದರೆ ಹ್ಯುಂಡೈ ಸೊನಾಟಾ ಮತ್ತು ಕರ್ಮ ರೆವೆರೊ ಸೇರಿದಂತೆ ಇನ್ನು ಕೆಲ ಕಾರುಗಳು ಈಗಾಗಲೇ ಸೋಲಾರ್ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲ್ಪಟ್ಟಿವೆ. ಆದರೆ ಹಂಬಲ್ ಒನ್ ಛಾವಣಿಯ ಮೇಲೆ ಸೋಲಾರ್ ಪ್ಯಾನಲ್‌ಗಳನ್ನು ಒಳಗೊಂಡ ಸೌರಶಕ್ತಿ ಚಾಲಿತ ಮೊದಲ SUV ಕಾರು ಮಾದರಿಯಾಗಿದೆ.

ಆದ್ದರಿಂದಲೇ ಇದನ್ನು ವಿಶ್ವದ ಮೊದಲ ಸೌರಶಕ್ತಿ ಚಾಲಿತ SUV ಕಾರು ಎಂದು ಕರೆಯಲಾಗುತ್ತಿದೆ. ಈ ಸೋಲಾರ್ ಪ್ಯಾನೆಲ್ ಮೂಲಕ ಪ್ರತಿದಿನ 96 ಕಿ.ಮೀ ಸಂಚರಿಸಲು ಬೇಕಾಗುವ ಶಕ್ತಿಯನ್ನು ಈ ಕಾರ್ ಪಡೆಯುತ್ತದೆ. ಹಾಗಾಗಿ ಪ್ರತ್ಯೇಕ ಚಾರ್ಜಿಂಗ್ ಸ್ಟೇಷನ್ ನಲ್ಲಿಟ್ಟು ಚಾರ್ಜ್ ಮಾಡುವ ಅಗತ್ಯವಿಲ್ಲ. ಉಳಿದಂತೆ ಆಫ್-ಪೀಕ್ ಸಮಯದಲ್ಲಿ ಚಾರ್ಜಿಂಗ್ ಸ್ಟೇಷನ್‌ನ ಸಹಾಯ ಅಗತ್ಯವಾಗಬಹುದು.

ವಿನ್ಯಾಸ:
ಇತ್ತೀಚೆಗೆ ಅನಾವರಣಗೊಂಡ ಹಂಬಲ್ ಒನ್ ಸೋಲಾರ್ ಕಾರಿನ ನೋಟವನ್ನು ಆರಂಭಿಕರ ಅಭಿವೃದ್ಧಿಗಾಗಿ ವಿನ್ಯಾಸಗೊಳಿಸಲಾಗಿದೆ. ಅಂದರೆ, ಕಂಪನಿಯು ಇನ್ನೂ ಉತ್ಪಾದನೆಗೆ ಸಿದ್ಧವಾದ ಮಾದರಿಯನ್ನು ಪ್ರದರ್ಶಿಸಿಲ್ಲ. ಇದು ವಿವಿಧ ಬದಲಾವಣೆಗಳೊಂದಿಗೆ ವಿಕಸನಗೊಳ್ಳುತ್ತಿದೆ. ಇಳಿಜಾರಾದ ರೂಫ್‌ಲೈನ್, ದೊಡ್ಡ ಕಪ್ಪು ಗ್ರಿಲ್ ಮತ್ತು ಸ್ಲಿಮ್ ಎಲ್ಇಡಿ ಹೆಡ್‌ಲೈಟ್‌ಗಳನ್ನು ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಇದರ ಜೊತೆಗೆ, ಪಿಲ್ಲರ್-ಮುಕ್ತ ಬಾಗಿಲುಗಳು ಸಾಂಪ್ರದಾಯಿಕ ಕನ್ನಡಿಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಜೊತೆಗೆ ಸೈಡ್‌ವಾಲ್‌ಗಳನ್ನು ಏರ್ ಸ್ಕೂಪ್‌ಗಳು ಮತ್ತು ಕಪ್ಪು ಅಲಾಯ್ ವ್ಹೀಲ್‌ಗಳಿಂದ ಅಲಂಕರಿಸಲಾಗಿದೆ. ಕಾರಿನ ಹೊರಭಾಗವು ಬೂಮರಾಂಗ್ ಟೈಲ್ ಲೈಟ್ ಗೋಚರಿಸುವ ಟೈರ್‌ಗಳಿಂದ ಅಲಂಕರಿಸಲ್ಪಟ್ಟಿದೆ. ಇದರ ಜೊತೆಗೆ ಕಾರಿನ ಸ್ಪೋರ್ಟಿ ಲುಕ್ ಅನ್ನು ಹೆಚ್ಚಿಸಲು ಸ್ಪ್ಲಿಟರ್ ಸೇರಿದಂತೆ ಹಿಂಭಾಗದ ಸ್ಪಾಯ್ಲರ್ ಅನ್ನು ಬಳಸಲಾಗಿದೆ.

ವಿಶೇಷತೆಗಳು:
ಸೋಲಾರ್ ಆಧರಿತ ಹಂಬಲ್ ಒನ್ ಎಸ್‌ಯುವಿ ಬ್ಯಾಟರಿ ಪವರ್‌ನಿಂದ ಚಲಿಸುತ್ತದೆ. ಆದರೆ, ಬ್ಯಾಟರಿ ಚಾರ್ಜ್ ಆಗಲು ವಿದ್ಯುತ್ ಬಳಸುವ ಅಗತ್ಯವಿಲ್ಲ. ಬದಲಿಗೆ, ಈ ಎಸ್‌ಯುವಿ ವಾಹನದ ಮೇಲ್ಚಾವಣಿ ಮತ್ತು ವಿಂಡೋಗಳಿಗೆ ಅಳವಡಿಸಲಾಗಿರುವ ಅತ್ಯಂತ ದಕ್ಷತೆಯ 82.35 ಚದರ ಅಡಿ ಸೋಲಾರ್ ಸೆಲ್‌ಗಳು ಬ್ಯಾಟರಿ ಚಾರ್ಜ್‌ಗೆ ಅಗತ್ಯವಿರುವ ವಿದ್ಯುತ್ ಉತ್ಪಾದಿಸಲಿವೆ.

ಅಮೆರಿಕದ ಪತ್ರಿಕೆಗಳಿಗೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಈ ಕಾರಿನಲ್ಲಿ ನಾಲ್ಕು ಜನರು ಆರಾಮವಾಗಿ ಕುಳಿತುಕೊಂಡು ಪ್ರಯಾಯಣಿಸಬಹುದು. ಇದು ಒಮ್ಮೆ ಸೋಲಾರ್‌ನಿಂದ ಚಾರ್ಜ್ ಆದರೆ 800 ಕಿ.ಮೀ.ವರೆಗೂ ಓಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಹಗಲಿನಲ್ಲಿ ಈ ಎಸ್‌ಯುವಿ 97 ಕಿಲೋ ಮೀಟರ್‌ಗೆ ಮರುಪೂರಣಗೊಳ್ಳಲಿದೆ.

ಹಾಗಂತ ಇದು ಸಂಪೂರ್ಣವಾಗಿ ಸೂರ್ಯನ ಕಿರಣಗಳ ಆಧಾರಿತವಾಗಿಯೇ ಇರುತ್ತದೆ ಎಂದೇನಲ್ಲ. ಸೋಲಾರ್ ಪವರ್ ಜೊತೆಗೆ ವಿದ್ಯುತ್ ಚಾರ್ಜಿಂಗ್‌ಗೂ ಅವಕಾಶವಿರುತ್ತದೆ. ಅಂದರೆ, ಈ ಎಸ್‌ಯುವಿಯಲ್ಲಿ ನಿಮಗೆ ಎಸಿ ಮತ್ತು ಡಿಸಿ ಚಾರ್ಜಿಂಗ್ ಪಾಯಿಂಟ್‌ಗಳು ಇರುತ್ತವೆ. ಅಗತ್ಯ ಬಿದ್ದಾಗ ನೀವು ವಿದ್ಯುತ್‌ನಿದಂಲೂ ಚಾರ್ಜ್ ಮಾಡಿಕೊಳ್ಳಬಹುದು.

ಮಾರುಕಟ್ಟೆಯಲ್ಲಿ ಬಿಡುಗಡೆ ಯಾವಾಗ?
ಹಂಬಲ್ ಮೋಟರ್ಸ್ ಕಂಪನಿಯು ಈಗ ಜಗತ್ತಿನ ಮೊದಲ ಸೋಲಾರ್ ಆಧರಿತ ಎಸ್‌ಯುವಿ ಪರಿಕಲ್ಪನೆಯನ್ನು ಸಿದ್ಧಪಡಿಸಿದೆ. ಈ ಎಸ್‌ಯುವಿ ಉತ್ಪಾದನೆಯು 2024ರಲ್ಲಿ ಆರಂಭವಾಗಲಿದ್ದು, ಗ್ರಾಹಕರಿಗೆ ಬಳಕೆಗೆ ಈ ಎಸ್‌ಯುವಿ 2025ರ ಹೊತ್ತಿಗೆ ಸಿಗಲಿದೆ. ಹಾಗಾಗಿ, ಈಗಿನಿಂದಲೇ ಗ್ರಾಹಕರು ಬೇಕಿದ್ದರೆ ತಮ್ಮ ಎಸ್‌ಯುವಿಯನ್ನು ಕಾಯ್ದಿರಿಕೊಳ್ಳಬಹುದು. ಅದೇ ವರ್ಷ ಕಾರಿನ ವಿತರಣೆಯನ್ನು ನೀಡಲಾಗುವುದು. ಇದರಿಂದಾಗಿ ಜನರು ಸೂರ್ಯನ ಬೆಳಕಿನಿಂದ ಚಲಿಸುವ ಈ ಎಸ್‌ಯುವಿಯಲ್ಲಿ ಪ್ರಯಾಣಿಸಲು ಇನ್ನೂ ಮೂರು ವರ್ಷ ಕಾಯುವುದು ಅನಿವಾರ್ಯ.

ಬೆಲೆಯ ನಿರೀಕ್ಷೆ:
ಸೋಲಾರ್ ಆಧರಿತ ಈ ಹಂಬಲ್ ಒನ್ ಎಸ್‌ಯುವಿ ಬೆಲೆ ಎಲ್ಲ ತೆರಿಗೆಗಳು ಸೇರಿ 1,09,000 ಡಾಲರ್ ಇರಲಿದೆ ಎನ್ನಲಾಗುತ್ತಿದೆ. ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ.80.2 ಲಕ್ಷಗಳಾಗಲಿದೆ. ಕಂಪನಿಯು ಹೇಳುವ ಪ್ರಕಾರ, ಈಗಾಗಲೇ ಪ್ರೀ ಆರ್ಡರ್‌ನಿಂದಾಗಿ(ಬುಕ್ಕಿಂಗ್) 20 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಹಣ ಸಂಗ್ರಹವಾಗಿದೆ.

ಅಮೆರಿಕವೊಂದರಲ್ಲಿ ಕಾರು ಕಾಯ್ದಿರಿಸುವ ಸಂಬಂಧದ ಪ್ರಮಾಣದಲ್ಲಿ ಶೇ.426ರಷ್ಟು ಏರಿಕೆಯಾಗಿದೆ ಎನ್ನಲಾಗಿದೆ. ಹಲವು ಫೀಚರ್'ಗಳನ್ನು ಹೊಂದಿರುವ ಈ ಎಸ್‌ಯುವಿಯು ಅಮೇರಿಕಾದಲ್ಲಿ ಬಿಡುಗಡೆಯಾಗುವುದು ಖಚಿತ. ಆದರೆ ಭಾರತದಲ್ಲಿ ಈ ಎಸ್‌ಯುವಿಯನ್ನು ಬಿಡುಗಡೆಗೊಳಿಸುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications