ಬಜೆಟ್ 2022: ಭಾರತದಲ್ಲಿ ಇವಿ ಮಾರಾಟವನ್ನು ಹೆಚ್ಚಿಸಲು ಹೊಸ ಬ್ಯಾಟರಿ ವಿನಿಮಯ ನೀತಿ ಜಾರಿ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2022-23 ಅನ್ನು ಮಂಡಿಸಿದ್ದು, ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಒತ್ತು ನೀಡಲು ತ್ವರಿತಗತಿ ಚಾರ್ಜಿಂಗ್ ಸೌಲಭ್ಯಕ್ಕಾಗಿ ಬ್ಯಾಟರಿ ವಿನಿಮಯ ನೀತಿ ಪ್ರಕಟಿಸಿದ್ದಾರೆ.

ಭಾರತದಲ್ಲಿ ಇಂಧನ ಆಧಾರಿತ ವಾಹನಗಳನ್ನು ಖಡಿತಗೊಳಿಸುವುದು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲು ಬ್ಯಾಟರಿ ವಿನಿಮಯ ನೀತಿಯು ಪ್ರಮುಖ ಅಂಶವಾಗಿದೆ. ತಂತ್ರಜ್ಞಾನವು ಬಳಕೆದಾರರಿಗೆ ತಮ್ಮ ವಾಹನಗಳನ್ನು ಕೆಲವೇ ನಿಮಿಷಗಳಲ್ಲಿ ರೀಚಾರ್ಜ್ ಮಾಡಲು ಮತ್ತು ಬ್ಯಾಟರಿ ರೇಂಜ್ ಆತಂಕವನ್ನು ತೊಡೆದುಹಾಕಲು ಸಾಕಷ್ಟು ಸಹಕಾರಿಯಾಗಲಿದೆ.

ಬ್ಯಾಟರಿ ವಿನಿಮಯ ತಂತ್ರಜ್ಞಾನವನ್ನು ಸಾಮೂಹಿಕ ಅಳವಡಿಕೆಯಲ್ಲಿ ಹಲವಾರು ಸವಾಲುಗಳಿದ್ದು, ಹೊಸ ನೀತಿಯ ಮೂಲಕ ಭಾರತದಲ್ಲಿ ಇವಿ ಬಳಕೆಗೆ ಇರುವ ಸವಾಲುಗಳನ್ನು ಪರಿಹರಿಸಲು ಮತ್ತು ಇವಿ ವಾಹನ ಮಾರಾಟ ಹೆಚ್ಚಿಸಲು ಗುರಿಯನ್ನು ಹೊಂದಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪ್ರಕಾರ, ಬ್ಯಾಟರಿ ವಿನಿಮಯ ನೀತಿಯು ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯು ತ್ವರಿತ ಗತಿಯಲ್ಲಿ ಬೆಳೆಯಲು ಮತ್ತು ಭಾರತದಲ್ಲಿ ಇವಿ ವಾಹನಗಳನ್ನು ವೇಗವಾಗಿ ಅಳವಡಿಸಿಕೊಳ್ಳಲು ಸಹಾಯ ಮಾಡಲಿ ಎನ್ನುವ ಆಶಯ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಹೊಸ ಬ್ಯಾಟರಿ ವಿನಿಮಯ ನೀತಿಯು ಬ್ಯಾಟರಿ ವಿನಿಮಯ ಯೋಜನೆ ಅನುಷ್ಠಾನವನ್ನು ಸುಲಭಗೊಳಿಸಲು ಮತ್ತು ದೇಶಾದ್ಯಂತ ಇವಿ ತಯಾರಕರಿಗೆ ಹೆಚ್ಚಿನ ಪ್ರೊತ್ಸಾಹ ನೀಡಲು ಸಹಾಯಕಾರಿಯಾಗಲಿದೆ. ಈ ಮೂಲಕ ಇವಿ ವ್ಯವಹಾರದ ದಕ್ಷತೆಯನ್ನು ಸುಧಾರಿಸಲು ಸರ್ಕಾರವು ಪರಸ್ಪರ ಕಾರ್ಯಸಾಧ್ಯತೆಯ ಮಾನದಂಡಗಳನ್ನು ರೂಪಿಸುತ್ತಿದ್ದು, ಸಂಪರ್ಕಿತ ತಂತ್ರಜ್ಞಾನದ ಮೂಲಕ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಕೇಂದ್ರೀಕೃತವಾಗಿಸುತ್ತದೆ.

ಇದರಿಂದಾಗಿ ಇವಿ ವಾಹನ ತಯಾರಕರು ಇವಿ ವಾಹನಗಳಲ್ಲಿ ಕಡ್ಡಾಯವಾಗಿ ಬ್ಯಾಟರಿ ವಿನಿಮಯ ತಂತ್ರಜ್ಞಾನಗಳನ್ನು ಬಳಸಲಿದ್ದು, ಇದರಿಂದ ಮಾಲೀಕರು ತಮ್ಮ ವಾಹನವನ್ನು ನಿಮಿಷಗಳಲ್ಲಿಯೇ ರೀಚಾರ್ಜ್ ಮಾಡಲು ಅನುಮತಿಸುತ್ತದೆ.

ಆದಾಗ್ಯೂ ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸಲಾದ ಬ್ಯಾಟರಿ ಪ್ಯಾಕ್ ಅನ್ನು ಸಾಮಾನ್ಯೀಕರಿಸಲು ಎಲ್ಲಾ ಇವಿ ವಾಹನ ತಯಾರಕರು ಒಂದೇ ಮಾನದಂಡವನ್ನು ಅನುಸರಿಸುವ ಅಗತ್ಯವಿದೆ. ಇದನ್ನು ಹೊಸ ಬ್ಯಾಟರಿ ವಿನಿಮಯ ನೀತಿಯಲ್ಲಿ ಉಲ್ಲೇಖಿಸಲಾಗಿದ್ದು, ಹೊಸ ನೀತಿಯಲ್ಲಿ ಮಾನದಂಡಗಳನ್ನು ಶೀಘ್ರದಲ್ಲಿಯೇ ಕಡ್ಡಾಯಗೊಳ್ಳಲಿವೆ.

ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ವಿನಿಮಯ ಎಂದರೇನು?
ವೇಗದ ಚಾರ್ಜಿಂಗ್ ತಂತ್ರಜ್ಞಾನದ ಅಗತ್ಯವಿಲ್ಲದೇ ಎಲೆಕ್ಟ್ರಿಕ್ ವಾಹನಗಳಿಗೆ ತ್ವರಿತವಾಗಿ ಚಾರ್ಜ್ ಮಾಡಲಾದ ಬ್ಯಾಟರಿ ಒದಗಿಸುವ ಮಾರ್ಗವಾಗಿದೆ. ಇವಿ ಬಳಕೆದಾರರು ಬ್ಯಾಟರಿ ವಿನಿಮಯ ಕೇಂದ್ರಗಳಿಗೆ ಅಗತ್ಯವಾದಾಗ ಭೇಟಿ ನೀಡಬಹುದು ಮತ್ತು ಖಾಲಿಯಾದ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲಾದ ಬ್ಯಾಟರಿಯೊಂದಿಗೆ ಬದಲಾಯಿಕೊಳ್ಳಬಹುದು.

ಈ ಪ್ರಕ್ರಿಯೆಯು ಎಲೆಕ್ಟ್ರಿಕ್ ವಾಹನವನ್ನು ಪೂರ್ಣ ಚಾರ್ಜ್ ಪಡೆಯಲು ಕನಿಷ್ಠ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ವೇಗದ ಚಾರ್ಜಿಂಗ್ ಅನ್ನು ಬಳಸದಂತೆ ಬ್ಯಾಟರಿ ಪ್ಯಾಕ್ ಅನ್ನು ರಕ್ಷಿಸುವುದರ ಜೊತೆಗೆ ಇವಿ ಖರೀದಿದಾರರಲ್ಲಿ ಬ್ಯಾಟರಿ ವ್ಯಾಪ್ತಿಯ ಆತಂಕದ ಸಮಸ್ಯೆಯನ್ನು ಪರಿಹರಿಸುತ್ತದೆ.

ಕೇಂದ್ರ ಸರ್ಕಾರವು ಇದೀಗ ಹೊಸ ಬ್ಯಾಟರಿ ವಿನಿಮಯ ನೀತಿ ಅಡಿಯಲ್ಲಿ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಿದ್ದು, ಇದರಿಂದ ಇವಿ ವಾಹನ ಮಾಲೀಕರು ಚಾರ್ಜಿಂಗ್ ನಿಲ್ದಾಣದ ಭಯವಿಲ್ಲದೆ ದೇಶಾದ್ಯಂತ ಇವಿ ವಾಹನ ಮೂಲಕ ತಡೆಹರಿತವಾಗಿ ಸಂಚರಿಸಬಹುದಾಗಿದೆ.

ಬ್ಯಾಟರಿ ವಿನಿಮಯ ನೀತಿ ಅಳವಡಿಕೆಯಲ್ಲಿನ ಸವಾಲುಗಳೇನು?
ಎಲೆಕ್ಟ್ರಿಕ್ ವಾಹನವನ್ನು ಕೆಲವೇ ನಿಮಿಷಗಳಲ್ಲಿ ರೀಚಾರ್ಜ್ ಮಾಡಲು ಮತ್ತು ಬ್ಯಾಟರಿ ರೇಂಜ್ ಆತಂಕವನ್ನು ತೊಡೆದುಹಾಕಲು ಹೊಸ ಸೌಲಭ್ಯವು ತ್ವರಿತ ಮಾರ್ಗವಾಗಿದ್ದರೂ, ತಂತ್ರಜ್ಞಾನವನ್ನು ಕಾರ್ಯಗತಗೊಳಿಸಲು ಮತ್ತು ಹೊಂದಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳಲಿದೆ.

ಅದಕ್ಕೂ ಮುನ್ನ ಬ್ಯಾಟರಿ ಪ್ಯಾಕ್ ತಂತ್ರಜ್ಞಾನವನ್ನು ಸಾಮಾನ್ಯೀಕರಿಸಲು ವಾಹನ ತಯಾರಕರು ಒಂದು ನಿರ್ದಿಷ್ಟವಾದ ಮಾನದಂಡವನ್ನು ಅನುಸರಿಸುವುದು ಅಗತ್ಯವಿರುತ್ತದೆ. ಇದೇ ಕಾರಣಕ್ಕೆ ಭಾರತದಲ್ಲಿ ಬ್ಯಾಟರಿ ವಿನಿಮಯ ತಂತ್ರಜ್ಞಾನವು ಆರಂಭಿಕ ಹಂತದಲ್ಲಿಯೇ ಉಳಿಯಲು ಇದು ಒಂದು ಪ್ರಮುಖ ಕಾರಣವಾಗಿದೆ.

ಇದೇ ಕಾರಣಕ್ಕೆ ಬ್ಯಾಟಿರಿ ವಿನಿಮಯ ನೀತಿಯು ಭಾರತದಲ್ಲಿನ ಬ್ಯಾಟರಿ ವಿನಿಮಯ ತಂತ್ರಜ್ಞಾನದ ಅನುಷ್ಠಾನದಲ್ಲಿನ ಸವಾಲುಗಳನ್ನು ಪರಿಹರಿಸಲು ಮತ್ತು ತಂತ್ರಜ್ಞಾನದ ತ್ವರಿತ ಅಳವಡಿಕೆಗಾಗಿ ತಯಾರಕರ ನಡುವೆ ಸಾಮಾನ್ಯೀಕರಣ, ಮೂಲಸೌಕರ್ಯದ ಸ್ಥಾಪನೆ ಮತ್ತು ಡೇಟಾ ಹಂಚಿಕೆಯನ್ನು ಇದು ಸರಳಗೊಳಿಸುತ್ತದೆ.

ಬ್ಯಾಟಿರಿ ವಿನಿಮಯವನ್ನು ಸರಳಗೊಳಿಸಲು ನಾಲ್ಕು ಚಕ್ರದ ವಾಹನಗಳಿಗೆ, ದ್ವಿಚಕ್ರ ವಾಹನಗಳಿಗೆ, ವಾಣಿಜ್ಯ ವಾಹನಗಳು ಸೇರಿದಂತೆ ವಿವಿಧ ವಿಭಾಗವನ್ನು ಅವಲಂಬಿಸಿ ಬ್ಯಾಟರಿ ಉತ್ಪಾದನೆಗೆ ವಿವಿಧ ಮಾನದಂಡಗಳ ಅಗತ್ಯವಿದ್ದು, ಹೊಸ ನೀತಿಯು ದೇಶಾದ್ಯಂತ ಬ್ಯಾಟರಿ ವಿನಿಯಮ ಕೇಂದ್ರಗಳ ಮೂಲಸೌಕರ್ಯ ಅಗತ್ಯಗಳನ್ನು ಸಹ ತಿಳಿಸುತ್ತದೆ.

ಹೀಗಾಗಿ ಕೇಂದ್ರ ಸರ್ಕಾರವು ಬ್ಯಾಟರಿ ವಿನಿಮಯ ನೀತಿಯ ಅಧಿಕೃತ ಜಾರಿಗೂ ಮುನ್ನ ಇನ್ನೂ ವಿವರವಾಗಿ ಈ ನೀತಿಯನ್ನು ಘೋಷಿಸಬೇಕಾಗಿದೆ. ಆದಾಗ್ಯೂ ಭಾರತದಲ್ಲಿ ಬ್ಯಾಟರಿ ವಿನಿಮಯ ತಂತ್ರಜ್ಞಾನದ ಅನುಷ್ಠಾನ ಮತ್ತು ಸಾಮಾನ್ಯೀಕರಣಕ್ಕಾಗಿ ಹೊಸ ನೀತಿಯ ಮಂಡನೆಯು ಮಹತ್ವವನ್ನು ಪಡೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಹೊಸ ನೀತಿಯ ಪರಿಣಾಮ ಚಾರ್ಜಿಂಗ್ ನಿಲ್ದಾಣಕ್ಕಿಂತಲೂ ಹೆಚ್ಚು ಬ್ಯಾಟರಿ ವಿನಿಯಮ ಕೇಂದ್ರಗಳನ್ನು ಸ್ಥಾಪನೆಗೊಳ್ಳಲಿವೆ ಎನ್ನಬಹುದು.


Click it and Unblock the Notifications








