2030ರ ವೇಳೆಗೆ ದೇಶಾದ್ಯಂತ 50 ಸಾವಿರ ಇವಿ ಬಸ್‌ಗಳ ನಿಯೋಜನೆಗೆ ಸಿದ್ದವಾಗಿದೆ ಹೊಸ ಯೋಜನೆ
ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಗುರುತರ ಬದಲಾವಣೆಗಾಗಿ ಎಲೆಕ್ಟ್ರಿಕ್ ಬಸ್ ಮಾದರಿಗಳನ್ನು ಅಳವಡಿಸಿಕೊಳ್ಳಲು ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯು ಬೃಹತ್ ಯೋಜನೆ ರೂಪಿಸಿದೆ.
ಹೊಸ ಯೋಜನೆ ಅಡಿ ದೇಶಾದ್ಯಂತ ಪ್ರಮುಖ ರಾಜ್ಯಗಳು ನಗರ ಸಾರಿಗೆ ವಿಭಾಗದಲ್ಲಿ ಇವಿ ಬಸ್‌ಗಳನ್ನು ವೇಗವಾಗಿ ಅವಡಿಸಿಕೊಳ್ಳಲು ಸಹಕಾರಿಯಾಗಲಿದ್ದು, 2030 ರ ವೇಳೆಗೆ 50 ಸಾವಿರ ಎಲೆಕ್ಟ್ರಿಕ್ ಬಸ್‌ಗಳ (ಇ-ಬಸ್‌ಗಳು) ನಿಯೋಜನೆಗೊಳಿಸಲು ಸಿದ್ದತೆ ನಡೆಸುತ್ತಿದೆ.

ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಕಡಿತಗೊಳಿಸಲು ವಿವಿಧ ರಾಜ್ಯ ಸರ್ಕಾರಗಳು ಸಾರ್ವಜನಿಕ ಬಳಕೆಯ ವಾಹನಗಳಲ್ಲಿ ಇವಿ ಮಾದರಿಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ (CESL) ಸಂಸ್ಥೆಯು ವರ್ಲ್ಡ್ ರಿಸೋರ್ಸ್ ಇನ್‌ಸ್ಟಿಟ್ಯೂಟ್ ಇಂಡಿಯಾ (WRI ಇಂಡಿಯಾ) ಸಹಾಯದೊಂದಿಗೆ ಹೊಸ ಯೋಜನೆ ಕುರಿತಂತೆ ಮಾತುಕತೆ ನಡೆಸುತ್ತಿದೆ.

ಗ್ರ್ಯಾಂಡ್ ಚಾಲೆಂಜ್‌ನ ಯಶಸ್ಸಿನ ನಂತರ CESL ಸಂಸ್ಥೆಯು ಭಾರತದ ಪ್ರಮುಖ 25 ರಾಜ್ಯಗಳಲ್ಲಿ 2030ರ ವೇಳೆಗೆ 50,000 ಎಲೆಕ್ಟ್ರಿಕ್ ಬಸ್‌ಗಳ (ಇ-ಬಸ್‌ಗಳು) ನಿಯೋಜನೆಯನ್ನು ಮಾಡುವ ಗುರಿಹೊಂದಿದೆ.

ಡೀಸೆಲ್ ಮತ್ತು ಸಿಎನ್‌ಜಿ ಬಸ್‌ಗಳಿಗಿಂತಲೂ ಕ್ರಮವಾಗಿ ಶೇಕಡಾ 27 ಮತ್ತು ಶೇಕಡಾ 23 ಅಗ್ಗವಾಗಿರುವ ಎಲೆಕ್ಟ್ರಿಕ್ ಬಸ್ ಮಾದರಿಗಳು ಮಾಲಿನ್ಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲಿದ್ದು, ಹಂತ-ಹಂತವಾಗಿ ಇವಿ ಬಸ್‌ಗಳ ಅಳವಡಿಕೆ ಹೆಚ್ಚಿಸಬಹುದಾಗಿದೆ.

ಗ್ರ್ಯಾಂಡ್ ಚಾಲೆಂಜ್ ಅಡಿಯಲ್ಲಿ, CESL ಸಂಸ್ಥೆಯು ಮೊದಲ ಹಂತವಾಗಿ ಐದು ಪ್ರಮುಖ ಮಾಹಾನಗರಗಳಲ್ಲಿ 5,450 ಇ-ಬಸ್‌ಗಳನ್ನು ನಿಯೋಜಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದ್ದು, ಬೆಂಗಳೂರು, ದೆಹಲಿ, ಹೈದರಾಬಾದ್, ಕೋಲ್ಕತ್ತಾ ಮತ್ತು ಸೂರತ್‌ನಲ್ಲಿ ಹೊಸ ಯೋಜನೆಯ ಮೊದಲ ಹಂತದ ಇ-ಬಸ್‌ಗಳು ರೋಡಿಗಿಳಿಯಲಿವೆ.

ಹೊಸ ಯೋಜನೆ ಕುರಿತಂತೆ ಥಿಂಕ್-ಟ್ಯಾಂಕ್, ನೀತಿ ಆಯೋಗದೊಂದಿಗೂ ಗ್ರ್ಯಾಂಡ್ ಚಾಲೆಂಜ್‌ನ ವ್ಯಾಪ್ತಿಯನ್ನು ವಿಸ್ತರಿಸಿರುವ CESl ಸಂಸ್ಥೆಯು ಮತ್ತು ಮುಂದಿನ ಏಳು ವರ್ಷಗಳಲ್ಲಿ 50,000 ಇ-ಬಸ್‌ಗಳ ಬೇಡಿಕೆಯನ್ನು ಅಭಿವೃದ್ಧಿಪಡಿಸಲು ನಿರ್ದೇಶಿಸಿದೆ.

CESL ಸಂಸ್ಥೆಯ ಮೊದಲ ಹಂತದಲ್ಲಿ ಪರಿಚಯಿಸಲಾಗುತ್ತಿರುವ ಪ್ರಮುಖ ಐದು ರಾಜ್ಯಗಳಲ್ಲಿನ ಹಳೆಯ ಬಸ್‌ಗಳ ಡೇಟಾವನ್ನು ಸಿದ್ಧಪಡಿಸುತ್ತಿದ್ದು, ಹೊಸ ಇವಿ ಬಸ್‌ಗಳು ಸೇರ್ಪಡೆಯಾಗುತ್ತಿದ್ದಂತೆ ಹಳೆಯ ಡೀಸೆಲ್ ಬಸ್‌ಗಳನ್ನು ಹಂತಹಂತವಾಗಿ ಬದಲಾಯಿಸಲಾಗುತ್ತದೆ.

ಇದಕ್ಕಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು 25 ರಾಜ್ಯಗಳಲ್ಲಿ ಸುಮಾರು 30,000 ಹಳೆಯ ಬಸ್‌ಗಳನ್ನು ಸ್ಕ್ರ್ಯಾಪ್ ಮಾಡಲು ಯೋಜನೆ ಸಿದ್ಧಪಡಿಸಲು CESL ಗೆ ವಿನಂತಿಸಿದ್ದು, ಗ್ರ್ಯಾಂಡ್ ಚಾಲೆಂಜ್ ಅಡಿ ಇ-ಬಸ್‌ಗಳ ಖರೀದಿಗಾಗಿ ವಿಶ್ವದ ಅತಿದೊಡ್ಡ ಟೆಂಡರ್ ಕರೆಯಲಾಗುತ್ತಿದೆ.

ಎಲೆಕ್ಟ್ರಿಕ್ ವಾಹನಗಳು ವೇಗವಾಗಿ ಬೆಳೆಯುತ್ತಿರುವ ಹಿನ್ನಲೆಯಲ್ಲಿ ಅದಕ್ಕೆ ಪೂರಕವಾಗಿ ಚಾರ್ಜಿಂಗ್ ನಿಲ್ದಾಣಗಳ ಜಾಲವನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದ್ದು, ಮುಂದಿನ ಎರಡು ವರ್ಷದೊಳಗಾಗಿ 25 ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಬಳಕೆಯ ಇವಿ ಚಾರ್ಜಿಂಗ್ ನಿಲ್ದಾಣಗಳು ಕಾರ್ಯನಿರ್ವಹಣೆಗೆ ಸಿದ್ದವಾಗುತ್ತಿವೆ.

ಕೇಂದ್ರ ಸಾರಿಗೆ ಸಚಿವಾಲಯದ ವಾಹನ್ ಪೋರ್ಟಲ್ ಪ್ರಕಾರ ದೇಶದಲ್ಲಿ ಇದುವರೆಗೆ ಸುಮಾರು 10.60 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿದ್ದು, ಅದೇ ಸಮಯದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 1,742 ಚಾರ್ಜಿಂಗ್ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ.

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಕಳೆದ ಎರಡು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದ್ದು, 2021-22ರ ಹಣಕಾಸು ವರ್ಷದಲ್ಲಿ ಒಟ್ಟು ಎಲೆಕ್ಟ್ರಿಕ್ ವಾಹನಗಳ ಮಾರಾಟವು 4,29,217 ಯುನಿಟ್‌ಗಳಾಗಿದ್ದರೆ, 2020-21 ರ ಆರ್ಥಿಕ ವರ್ಷದಲ್ಲಿ ಇದು 1,34,821 ಯುನಿಟ್‌ಗಳಾಗಿತ್ತು.

2019-20 ರ ಆರ್ಥಿಕ ವರ್ಷದಲ್ಲಿ ಎಲೆಕ್ಟ್ರಿಕ್ ವಾಹನಗಳ ಒಟ್ಟು ಮಾರಾಟವು 1,68,300 ಯುನಿಟ್‌ಗಳಾಗಿದ್ದು, ಕಳೆದು ಮೂರು ವರ್ಷಗಳ ಇವಿ ವಾಹನ ಮಾರಾಟ ಸಂಖ್ಯೆಯು ತೀವ್ರಗತಿಯಲ್ಲಿ ಹೆಚ್ಚಳವಾಗಿರುವ ಸ್ಪಷ್ಟವಾಗಿದೆ.

ಸದ್ಯ ವ್ಯಯಕ್ತಿಕ ಬಳಕೆಯ ಇವಿ ವಾಹನಗಳ ಅಳವಡಿಕೆ ತೀವ್ರವಾಗುತ್ತಿದ್ದರೂ ಸಾರ್ವಜನಿಕ ಬಳಕೆಯ ಇವಿ ವಾಹನಗಳ ಅಳವಡಿಕೆ ಪ್ರಕ್ರಿಯೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿದ್ದು, ಕಾರಣಾಂತರಗಳಿಂದ ಸಾರ್ವಜನಿಕ ಬಳಕೆಯ ಇವಿ ವಾಹನಗಳ ಅಳವಡಿಕೆಯಲ್ಲಿ ನಿಧಾನವಾಗುತ್ತಿದೆ.

ಇದರಿಂದ ಸಾರ್ವಜನಿಕ ಬಳಕೆ ಇವಿ ವಾಹನಗಳ ಅಳವಡಿಕೆಯನ್ನು ತೀವ್ರಗೊಳಿಸಲು CESL ಸಂಸ್ಥೆಯ ಮೊದಲ ಹಂತದಲ್ಲಿ ಕೆಲವೇ ದಿನಗಳಲ್ಲಿ 5,450 ಇ-ಬಸ್‌ಗಳನ್ನು ನಿಯೋಜಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದ್ದು, ಹಂತ-ಹಂತವಾಗಿ 2030ರ ವೇಳೆಗೆ 50,000 ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸಲು ಯೋಜನೆ ರೂಪಿಸಲಾಗಿದೆ.


Click it and Unblock the Notifications








