ಹೋಂಡಾ ಕಾರುಗಳ ಬೆಲೆ ಹೆಚ್ಚಳ: ಹೊಸ ಕಾರು ಖರೀದಿದಾರರಿಗೆ ಬೆಲೆ ಏರಿಕೆ ಬಿಸಿ!
ಹೆಚ್ಚುತ್ತಿರುವ ಬಿಡಿಭಾಗಗಳ ಬೆಲೆ ಹೆಚ್ಚಳ ಪರಿಣಾಮ ಹೊಸ ವಾಹನಗಳ ಬೆಲೆಯಲ್ಲಿ ಕಳೆದ ಕೆಲ ತಿಂಗಳಿನಿಂದ ಸಾಕಷ್ಟು ಹೆಚ್ಚಳವಾಗುತ್ತಿದ್ದು, ಜಪಾನ್ ಕಾರು ಉತ್ಪಾದನಾ ಕಂಪನಿಯಾಗಿರುವ ಹೋಂಡಾ ಕಾರ್ಸ್ ಕೂಡಾ ಭಾರತದಲ್ಲಿ ತನ್ನ ಪ್ರಮುಖ ಕಾರುಗಳ ಬೆಲೆ ಹೆಚ್ಚಳ ಮಾಡಿದೆ.

ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಕಾರ್ಸ್ ಕಂಪನಿಯು ತನ್ನ ಪ್ರಮುಖ ಕಾರುಗಳ ಬೆಲೆಯನ್ನು ವಿವಿಧ ಕಾರು ಮಾದರಿಗಳಿಗೆ ಅನುಗುಣವಾಗಿ ಶೇ.1ರಿಂದ ಶೇ.1.50 ರಷ್ಟು ಬೆಲೆ ಹೆಚ್ಚಿಸಿದ್ದು, ಹೊಸ ದರಪಟ್ಟಿಯಲ್ಲಿ ಪ್ರಮುಖ ಮಾದರಿಗಳ ಬೆಲೆಯಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ. 6 ಸಾವಿರದಿಂದ ರೂ. 39 ಸಾವಿರದಷ್ಟು ಹೆಚ್ಚಿಸಲಾಗಿದೆ.

ಹೊಸ ವರ್ಷದ ಆರಂಭದಲ್ಲಿ ಮತ್ತು ಮಾರ್ಚ್ ಮಧ್ಯಂತರದಲ್ಲಿ ಪ್ರಮುಖ ಕಾರುಗಳ ಬೆಲೆ ಹೆಚ್ಚಳ ಮಾಡಿದ್ದ ಹೋಂಡಾ ಕಂಪನಿಯು ಇದೀಗ ಈ ವರ್ಷದ ಮೂರನೇ ಬೆಲೆ ಏರಿಕೆ ಘೋಷಣೆ ಮಾಡಿದ್ದು, ಹೊಸ ಕಾರುಗಳ ಕೆಲವು ಕಾರಣಾಂತರಗಳಿಂದ ನಿರಂತರವಾಗಿ ಬೆಲೆ ಹೆಚ್ಚಳ ಪಡೆದುಕೊಳ್ಳುತ್ತಿವೆ.

ಪರಿಷ್ಕೃತ ದರ ಪಟ್ಟಿಯಲ್ಲಿ ಹೋಂಡಾ ಕಂಪನಿಯು ಅಮೇಜ್ ಕಾರು ಮಾದರಿಯ ಡೀಸೆಲ್ ರೂಪಾಂತರಗಳನ್ನು ಹೊರತುಪಡಿಸಿ ಪೆಟ್ರೋಲ್ ಮಾದರಿಗಳ ಬೆಲೆಯಲ್ಲಿ ರೂ. 6,300 ರಿಂದ ರೂ. 11 ಸಾವಿರ ತನಕ ಬೆಲೆ ಹೆಚ್ಚಿಸಲಾಗಿದ್ದು, ಡಬ್ಲ್ಯುಆರ್-ವಿ ಮಾದರಿಯ ಎಲ್ಲಾ ಡೀಸೆಲ್ ರೂಪಾಂತರಗಳ ಬೆಲೆಯಲ್ಲಿ ರೂ. 11 ಸಾವಿರ ಏರಿಕೆ ಮಾಡಲಾಗಿದೆ.

ಜಾಝ್ ಹ್ಯಾಚ್‌ಬ್ಯಾಕ್ ಮಾದರಿಯ ಪ್ರಮುಖ ರೂಪಾಂತರಗಳಲ್ಲೂ ಕೂಡಾ ರೂ. 11 ಸಾವಿರ ತನಕ ಹೆಚ್ಚಳ ಮಾಡಲಾಗಿದ್ದು, 4ನೇ ತಲೆಮಾರಿನ ಸಿಟಿ ಸೆಡಾನ್ ಮಾದರಿಯ ಬೆಲೆಯಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ.

ಆದರೆ 5ನೇ ತಲೆಮಾರಿನ ಸಿಟಿ ಸೆಡಾನ್ ಮಾದರಿಯ ಬೆಲೆಯಲ್ಲಿ ಸುಮಾರು ರೂ.15 ಸಾವಿರದಿಂದ ರೂ. 39,100 ಬೆಲೆ ಹೆಚ್ಚಿಸಲಾಗಿದ್ದು, ಸಿಟಿ ಹೈಬ್ರಿಡ್ ಕಾರಿನ ಬೆಲೆಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ.

ಕಳೆದ ಕೆಲ ತಿಂಗಳ ಹಿಂದಷ್ಟೇ ಸಿಟಿ ಹೈಬ್ರಿಡ್ ಮಾದರಿಯನ್ನು ಪರಿಚಯಾತ್ಮಕ ಬೆಲೆಯಲ್ಲಿ ಬಿಡುಗಡೆ ಮಾಡಿದ್ದ ಹೋಂಡಾ ಕಂಪನಿಯು ಇದೀಗ ಮೊದಲ ಬಾರಿಗೆ ಹೆಚ್ಚಳ ಮಾಡಿದ್ದು, ಇನ್ನುಳಿದ ಸ್ಟ್ಯಾಂಡರ್ಡ್ ಸಿಟಿ ಮಾದರಿಯಲ್ಲಿ ಪ್ರಮುಖ ಮಾದರಿಗಳಲ್ಲಿ ಒಂದಿಷ್ಟು ಬೆಲೆ ಹೆಚ್ಚಳವಾಗಿವೆ.

ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ಹೊಸ ವಾಹನಗಳ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಹೊಸ ವಾಹನಗಳ ಬೆಲೆಯು ಸಾಕಷ್ಟು ಏರಿಕೆಯಾಗಿದ್ದು, ಈ ಹಿಂದೆ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ವಾಹನ ಉತ್ಪಾದನಾ ಕಂಪನಿಗಳು ಇದೀಗ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ದರ ಹೆಚ್ಚಿಸುತ್ತಿವೆ.

ಹೊಸ ವಾಹನಗಳ ದರ ಹೆಚ್ಚಳಕ್ಕೆ ಪ್ರಮುಖ ಕಾರಣಗಳಲ್ಲಿ ಸೆಮಿಕಂಡಕ್ಟರ್ ಕೊರೆತೆ ಪ್ರಮುಖವಾಗಿದ್ದು, ಹೊಸ ಕಾರಿನ ಬೇಡಿಕೆಯು ಹೆಚ್ಚಿರುವ ಸಂದರ್ಭದಲ್ಲಿಯೇ ಆಟೋ ಕಂಪನಿಗಳಿಗೆ ಸೆಮಿಕಂಡಕ್ಟರ್ ಕೊರತೆಯು ತೀವ್ರವಾಗಿ ಕಾಡುತ್ತಿದೆ.

ಕೋವಿಡ್ ನಂತರ ಆರ್ಥಿಕ ಬೆಳವಣಿಗೆ ಸುಧಾರಿಸುತ್ತಿರುವುದರಿಂದ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಇಂತಹ ಸಂದರ್ಭದಲ್ಲೇ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆ ಆಟೋ ಉದ್ಯಮಕ್ಕೆ ಭಾರೀ ಹೊಡೆತ ನೀಡುತ್ತಿದೆ. ಹೊಸ ತಂತ್ರಜ್ಞಾನ ಪ್ರೇರಿತ ವಾಹನಗಳ ಉತ್ಪಾದನೆಗೆ ಅವಶ್ಯವಾಗಿರುವ ಎಲೆಕ್ಟ್ರಾನಿಕ್ ಚಿಪ್(ಸೆಮಿಕಂಡಕ್ಟರ್) ಕೊರತೆಯು ಜಾಗತಿಕ ಆಟೋ ಉದ್ಯಮದ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದೆ.

ಎಲೆಕ್ಟ್ರಾನಿಕ್ ಚಿಪ್ ಕೊರತೆಯಿಂದಾಗಿ ಭಾರತದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳಿಗೂ ಬಿಸಿ ತಟ್ಟಿದ್ದು, ಪ್ರಮುಖ ವಾಹನಗಳ ಉತ್ಪಾದನಾ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿರುವುದು ಆಟೋ ಉತ್ಪಾದನಾ ಕಂಪನಿಗಳ ಆದಾಯಕ್ಕೆ ಹೊಡೆತ ನೀಡುತ್ತದೆ.

ಚೀನಿ ಮಾರುಕಟ್ಟೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದುಗೊಳ್ಳುತ್ತಿದ್ದ ಎಲೆಕ್ಟ್ರಾನಿಕ್ ಚಿಪ್ ಪ್ರಮಾಣವನ್ನು ಕಡಿತಗೊಳಿಸಿರುವುದರಿಂದ ಇತರೆ ದೇಶಗಳಲ್ಲಿನ ಉತ್ಪಾದನಾ ಲಭ್ಯತೆ ಆಧರಿಸಿ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆಯೂ ಹೆಚ್ಚಳವಾಗುತ್ತಿದ್ದು, ಎಲೆಕ್ಟ್ರಾನಿಕ್ ಚಿಪ್‌ಗಳಿಲ್ಲದೆ ಪ್ರಮುಖ ಕಾರು ಕಂಪನಿಯು ಉತ್ಪಾದನೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿವೆ.v

ಹೀಗಾಗಿ ಎಲೆಕ್ಟ್ರಾನಿಕ್ ಚಿಪ್ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬವು ವಿಶ್ವಾದ್ಯಂತ ಪ್ರಮುಖ ಕಾರು ಕಂಪನಿಗಳಿಗೆ ಹೊಡೆತ ನೀಡುತ್ತಿದ್ದು, ಭಾರತದಲ್ಲೂ ದಿನಂಪ್ರತಿ ಸಾವಿರಾರು ಕಾರುಗಳನ್ನು ಉತ್ಪಾದಿಸುವ ಪ್ರಮುಖ ಕಂಪನಿಗಳ ಕಾರುಗಳ ಉತ್ಪಾದನೆಗೆ ಸಾಕಷ್ಟು ಹೊಡೆತ ನೀಡಿದೆ.


Click it and Unblock the Notifications