ಶೀಘ್ರದಲ್ಲಿಯೇ ಡೀಸೆಲ್ ಕಾರುಗಳ ಮಾರಾಟಕ್ಕೆ ಗುಡ್‌ಬೈ ಹೇಳಲಿದೆ ಹೋಂಡಾ ಕಾರ್ಸ್ ಇಂಡಿಯಾ
ಪ್ರೀಮಿಯಂ ಕಾರು ಮಾರಾಟ ಕಂಪನಿಯಾಗಿರುವ ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮುಂಬರುವ ದಿನಗಳಲ್ಲಿ ಹಂತ-ಹಂತವಾಗಿ ಡೀಸೆಲ್ ಕಾರುಗಳನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಬಹಿರಂಗಪಡಿಸಿದೆ.

ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ಮುಂದಿನ ವರ್ಷ ರಿಯರ್ ಡ್ರೈವಿಂಗ್ ಎಮಿಷನ್ ಜಾರಿಗೆ ಸಿದ್ದವಾಗುತ್ತಿದ್ದು, ಹೊಸ ಮಾಲಿನ್ಯ ಹೊರಸೂಸುವಿಕೆ ಮಾನದಂಡಗಳನ್ನು ಪೂರೈಸಲು ಸಾಧ್ಯವಿಲ್ಲದ ಹಲವು ಡೀಸೆಲ್ ವಾಹನಗಳ ಮಾರಾಟಕ್ಕೆ ಬ್ರೇಕ್ ಬೀಳಲಿದೆ.

ಹೊಸ ಮಾಲಿನ್ಯ ಹೊರಸೂಸುವಿಕೆ ಮಾನದಂಡಗಳಿಗೆ ಅನುಸಾರವಾಗಿ ಪ್ರಸ್ತುತ ಡೀಸೆಲ್ ಕಾರುಗಳ ಕಾರ್ಯಸಾಧ್ಯತೆಯನ್ನು ಮೌಲ್ಯಮಾಪನ ಮಾಡುತ್ತಿರುವ ಹೋಂಡಾ ಕಂಪನಿಯು ಡೀಸೆಲ್ ಕಾರುಗಳ ಬದಲಾಗಿ ಪರ್ಯಾಯ ಇಂಧನ ಬಳಕೆಯ ವಾಹನಗಳತ್ತ ಗಮನಹರಿಸುತ್ತಿದೆ.

ಒಂದು ವೇಳೆ ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಹೊಸ ಮಾಲಿನ್ಯ ಹೊರಸೂಸುವಿಕೆ ಮಾನದಂಡಗಳಿಗೆ ಅನುಸಾರವಾಗಿ ಹೊಸ ಡೀಸೆಲ್ ಕಾರುಗಳನ್ನು ಪರಿಚಯಿಸುವುದಾದರೆ ಸಾಕಷ್ಟು ದುಬಾರಿಯಾಗಲಿದ್ದು, ಈ ಕಾರಣಕ್ಕೆ ಹೋಂಡಾ ಕಂಪನಿಯು ಡೀಸೆಲ್ ಕಾರುಗಳನ್ನು ಸ್ಥಗಿತಗೊಳಿಸಿ ಕೇವಲ ಪೆಟ್ರೋಲ್ ಮತ್ತು ಹೈಬ್ರಿಡ್ ಮಾದರಿಗಳ ಮಾರಾಟ ಮಾಡಲು ನಿರ್ಧರಿಸಿದೆ.

ಹೊಸ ಮಾಲಿನ್ಯ ಹೊರಸೂಸುವಿಕೆ ಮಾನದಂಡಗಳ ಕುರಿತಾಗಿ ಮಾತನಾಡಿರುವ ಹೋಂಡಾ ಇಂಡಿಯಾ ಸಿಇಒ ಟಕುಯಾ ಸುಮುರಾ(Takuya Tsumura) ಅವರು, ಹೊಸ ನಿಯಮದಡಿಯಲ್ಲಿ ಡೀಸೆಲ್ ಕಾರುಗಳ ಮಾರಾಟ ಕಷ್ಟಕರವಾಗಲಿದೆ ಎಂದಿದ್ದಾರೆ. ಒಂದು ವೇಳೆ ಹೊಸ ನಿಯಮ ಪಾಲನೆ ಮಾಡಿದರೂ ಕಾರುಗಳ ಬೆಲೆ ಹೆಚ್ಚಳವು ನೇರವಾಗಿ ಮಾರಾಟದ ಪರಿಣಾಮ ಬೀರಲಿದೆ ಎಂದಿದ್ದಾರೆ.

ಹೀಗಾಗಿ ನಾವು ಭವಿಷ್ಯದಲ್ಲಿ ಡೀಸೆಲ್ ಕಾರುಗಳನ್ನು ಭಾರತದಲ್ಲಿ ಮಾತ್ರವಲ್ಲ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಹಂತ-ಹಂತವಾಗಿ ಕೈಬಿಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು, ನಮ್ಮ ಮುಂದಿನ ಆದ್ಯತೆ ಕೇವಲ ಪೆಟ್ರೋಲ್, ಹೈಬ್ರಿಡ್ ಮತ್ತು ಪರ್ಯಾಯ ಇಂಧನ ಮಾದರಿಗಳತ್ತ ಎಂದಿದ್ದಾರೆ.

ಯುರೋಪ್ ರಾಷ್ಟ್ರಗಳಲ್ಲಿ ಜಾರಿಯಾಗಿರುವ ಹೊಸ ಮಾಲಿನ್ಯ ಹೊರಸೂಸುವಿಕೆ ಮಾನದಂಡಗಳು ಕೂಡಾ ಡೀಸೆಲ್ ಕಾರುಗಳ ಮಾರಾಟಕ್ಕೆ ಸಾಕಷ್ಟು ಇಳಿಕೆ ಕಾರಣವಾಗಿದ್ದು, ಇದೀಗ ಮುಂಬರುವ ದಿನಗಳಲ್ಲಿ ಭಾರತದಲ್ಲೂ ಕೂಡಾ ರಿಯಲ್ ಡ್ರೈವಿಂಗ್ ಎಮಿಷನ್ ಜಾರಿಗೆ ಬರಲಿದೆ.

ರಿಯಲ್ ಡ್ರೈವಿಂಗ್ ಎಮಿಷನ್ ಜಾರಿ ಕಾರಣಕ್ಕಾಗಿಯೇ ಮಾರುತಿ ಸುಜುಕಿ ಈಗಾಗಲೇ ತನ್ನ ಎಲ್ಲಾ ಡೀಸೆಲ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದು, ಮಾರುತಿ ಸುಜುಕಿ ನಂತರ ಹ್ಯುಂಡೈ, ಟಾಟಾ ಮೋಟಾರ್ಸ್ ಸೇರಿದಂತೆ ಪ್ರಮುಖ ಕಾರು ಕಂಪನಿಗಳು ನಿಧಾನವಾಗಿ ಡೀಸೆಲ್ ಮಾದರಿಗಳ ಮಾರಾಟವನ್ನು ಸ್ಥಗಿತಗೊಳಿಸುತ್ತಿವೆ.

ಇದೀಗ ಹೋಂಡಾ ಕಾರ್ಸ್ ಕೂಡಾ ಮಹತ್ವದ ನಿರ್ಧಾರದೊಂದಿಗೆ ಡೀಸೆಲ್ ಮಾದರಿಗಳ ಮಾರಾಟವನ್ನು ಸ್ಥಗಿತಗೊಳಿಸಲು ಮುಂದಾಗಿದ್ದು, ಒಂದು ವೇಳೆ ಹೊಸ ನಿಯಮದೊಂದಿಗೆ ಡೀಸೆಲ್ ಮಾದರಿಗಳನ್ನು ಬಿಡುಗಡೆ ಮಾಡಿದರೂ ಅವು ಪ್ರಸ್ತುತ ಮಾರುಕಟ್ಟೆಯಲ್ಲಿನ ಮಾದರಿಗಿಂತಲೂ ರೂ. 1.50 ಲಕ್ಷದಿಂದ ರೂ. 2 ಲಕ್ಷದ ತನಕ ಒಂದೇ ಬಾರಿಗೆ ಹೆಚ್ಚಿನ ಬೆಲೆ ಪಡೆದುಕೊಳ್ಳಬಹುದು.

ರಿಯಲ್ ಡ್ರೈವಿಂಗ್ ಎಮಿಷನ್ ಮಾನದಂಡಗಳಲ್ಲಿ ಕಾರ್ಪೊರೇಟ್ ಸರಾಸರಿ ಇಂಧನ ಆರ್ಥಿಕತೆ 2.0 ಅನುಸರಿಸಬೇಕಿದ್ದು, ಇದಕ್ಕಾಗಿ ಸುಧಾರಿತ ತಂತ್ರಜ್ಞಾನ ಅಳವಡಿಕೆ ಮಾಡಬೇಕಾಗುತ್ತದೆ. ಇದು ಸಹಜವಾಗಿ ಕಾರಿನ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದ್ದು, ಒಂದೇ ಬಾರಿಗೆ ಬೆಲೆ ದುಬಾರಿ ಮಾಡುವುದು ಕಾರು ಕಂಪನಿಗಳಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುವ ಸಾಧ್ಯತೆಗಳಿವೆ.

ಈ ಕಾರಣದಿಂದಾಗಿ ಪೆಟ್ರೋಲ್ ಮತ್ತು ಹೈಬ್ರಿಡ್ ಮಾದರಿಗಳತ್ತ ಗಮನಹರಿಸುತ್ತಿರುವ ಹೋಂಡಾ ಕಂಪನಿಯು 2023ರ ಮಾದರಿಗಳಲ್ಲಿ ಡೀಸೆಲ್ ಆಯ್ಕೆ ಸ್ಥಗಿತಗೊಳಿಸುತ್ತಿದ್ದು, ಡೀಸೆಲ್ ಕಾರುಗಳ ಸ್ಥಾನ ತುಂಬಲು ಹೈಬ್ರಿಡ್ ಮಾದರಿಗಳು ಸೂಕ್ತ ಎಂದು ಪರಿಗಣಿಸಿದೆ.

ಇದೇ ಕಾರಣಕ್ಕೆ ಕಂಪನಿಯು ಸಿಟಿ ಸೆಡಾನ್ ಮಾದರಿಯಲ್ಲಿ ಮೊದಲ ಹಂತವಾಗಿ ಹೈಬ್ರಿಡ್ ಎಂಜಿನ್ ಪರಿಚಯಿಸಿದ ಹೋಂಡಾ ಕಂಪನಿಯು ಮುಂಬರುವ ಹೊಸ ಮಾದರಿಗಳಲ್ಲೂ ಹೈಬ್ರಿಡ್ ಎಂಜಿನ್ ಆಯ್ಕೆ ಹೆಚ್ಚಿಸಲು ನಿರ್ಧರಿಸಿದ್ದು, ಪೆಟ್ರೋಲ್, ಹೈಬ್ರಿಡ್ ಜೊತೆ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೂ ಯೋಜನೆ ರೂಪಿಸಿದೆ.

ಇತ್ತೀಚೆಗೆ ಮಾರಾಟದಲ್ಲಿ 5 ಲಕ್ಷ ಯುನಿಟ್ ತಲುಪಿದ ಅಮೇಜ್ ಕಂಪ್ಯಾಕ್ಟ್ ಸೆಡಾನ್‌ನಲ್ಲಿ ಗ್ರಾಹಕರು ಡೀಸೆಲ್ ಮಾದರಿಗಳಿಂತಲೂ ಹೆಚ್ಚು ಪೆಟ್ರೋಲ್ ಮಾದರಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸ್ಪಷ್ಟವಾಗಿದ್ದು, 2022ರ ಮಾದರಿಯಲ್ಲಿ ಶೇ. 93 ರಷ್ಟು ಗ್ರಾಹಕರು ಪೆಟ್ರೋಲ್ ಮಾದರಿಯನ್ನು ಖರೀದಿಸಿದ್ದಾರೆ.

ಡೀಸೆಲ್ ಮಾದರಿಗಳು ಕೇವಲ ಹೆಚ್ಚು ಇಂಧನ ದಕ್ಷತೆ ಎಂಬುವುದನ್ನು ಹೊರತುಪಡಿಸಿದರೆ ಪೆಟ್ರೋಲ್ ಮಾದರಿಗಿಂತಲೂ ಹೆಚ್ಚಿನ ನಿರ್ವಹಣೆ ಹೊಂದಿದ್ದು, ಭವಿಷ್ಯದಲ್ಲಿ ಡೀಸೆಲ್ ಮಾದರಿಗಳಿಗೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಾಗುತ್ತಿರುವುದು ಗ್ರಾಹಕರ ಆದ್ಯತೆ ಬದಲಾವಣೆಗೆ ಕಾರಣವಾಗಿದೆ.


Click it and Unblock the Notifications