ಸ್ಪೋರ್ಟಿ ಡಿಸೈನ್ ಹೊಂದಿರುವ ವೆನ್ಯೂ ಎನ್-ಲೈನ್ ಖರೀದಿಗೆ ಬುಕಿಂಗ್ ಆರಂಭಿಸಿದ ಹ್ಯುಂಡೈ
ಪ್ರೀಮಿಯಂ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಇಂಡಿಯಾ ಕಂಪನಿಯು ಪರ್ಫಾಮೆನ್ಸ್ ಪ್ರಿಯರಿಗಾಗಿ ತನ್ನ ಕಾರು ಮಾದರಿಗಳಲ್ಲಿ ಎನ್-ಲೈನ್ ಆವೃತ್ತಿಗಳನ್ನು ಪರಿಚಯಿಸುತ್ತಿದೆ.
Recommended Video
ಶೀಘ್ರದಲ್ಲಿಯೇ ಕಂಪನಿಯು ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿಯಲ್ಲೂ ಎನ್-ಲೈನ್ ಪರಿಚಯಿಸುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಬುಕಿಂಗ್ ಆರಂಭಿಸಲಾಗಿದೆ.

ಹೊಸ ವೆನ್ಯೂ ಎನ್-ಲೈನ್ ಮಾದರಿಗಾಗಿ ಹ್ಯುಂಡೈ ಕಂಪನಿಯು ರೂ. 21 ಸಾವಿರ ಮುಂಗಡದೊಂದಿಗೆ ಬುಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಹೊಸ ಆವೃತ್ತಿಗಾಗಿ ಗ್ರಾಹಕರ ಆನ್‌ಲೈನ್ ಅಥವಾ ನೇರವಾಗಿ ಡೀಲರ್ಸ್ ಬಳಿಯಲ್ಲಿ ಮುಂಗಡ ಹಣ ಪಾವತಿ ಮಾಡಬಹುದಾಗಿದೆ.

ವೆನ್ಯೂ ಎನ್-ಲೈನ್ ಮಾದರಿಯ ಮುಂದಿನ ತಿಂಗಳು 6ರಂದು ಮಾರುಕಟ್ಟೆ ಪ್ರವೇಶಿಸಲಿದ್ದು, ಹೊಸ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಅತ್ಯುತ್ತಮ ಫೀಚರ್ಸ ಮತ್ತು ಸ್ಪೋರ್ಟಿ ಡಿಸೈನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಭಾರತದಲ್ಲಿ ಹ್ಯುಂಡೈ ಕಂಪನಿಯು ಈಗಾಗಲೇ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಎನ್-ಲೈನ್ ಆವೃತ್ತಿಯನ್ನು ಮಾರಾಟಗೊಳಿಸುತ್ತಿದ್ದು, ಈ ವರ್ಷಾಂತ್ಯದೊಳಗಾಗಿ ಮತ್ತೆರಡು ಹೊಸ ಕಾರು ಮಾದರಿಗಳಲ್ಲಿ ಹೊಸ ಪರ್ಫಾಮೆನ್ಸ್ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ವೆನ್ಯೂ ಜೊತೆಗೆ ಕ್ರೆಟಾ ಕಾರು ಮಾದರಿಯಲ್ಲೂ ಸಹ ಎನ್-ಲೈನ್ ಆವೃತ್ತಿಯನ್ನು ಪರಿಚಯಿಸಬಹುದಾದ ಸಾಧ್ಯತೆಗಳಿದ್ದು, ಎನ್-ಲೈನ್ ಆವೃತ್ತಿಗಳು ಹ್ಯುಂಡೈ ಪ್ರಮುಖ ಕಾರುಗಳ ಪರ್ಫಾಮೆನ್ಸ್ ಆವೃತ್ತಿಯಾಗಿದೆ.

ವೆನ್ಯೂ ಎನ್-ಲೈನ್ ಮಾದರಿಯು ಐ20 ಎನ್-ಲೈನ್ ಮಾದರಿಯೆಂತೆ ಎನ್6 ಮತ್ತು ಎನ್8 ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಬಹುದಾಗಿದ್ದು, ಹೈ ಎಂಡ್ ಮಾದರಿಯಲ್ಲಿರುವ 1.0-ಲೀಟರ್ ಮೂರು-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಜೋಡಿಸಬಹುದಾಗಿದೆ.

ಹೊಸ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿರುವ ವೆನ್ಯೂ ಎನ್-ಲೈನ್ ಕಾರು ಮಾದರಿಯು ಸೆಮಿ ಆಟೋಮ್ಯಾಟಿಕ್ ಮಾದರಿಯಾದ ಐಎಂಟಿ ಗೇರ್‌ಬಾಕ್ಸ್ ಇಲ್ಲವೆ 7 ಸ್ಪೀಡ್ ಡಿಸಿಟಿ ಸ್ವಯಂಚಾಲಿತ ಗೇರ್‌ಬಾಕ್ಸ್ ನೀಡಲಿದೆ.

ಇದಲ್ಲದೆ ಹೊಸ ಕಾರಿನಲ್ಲಿ ಹ್ಯುಂಡೈ ಕಂಪನಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಸೇರಿಸಲಿದ್ದು, ಮುಂಭಾಗದ ಫೆಂಡರ್‌ಗಳಲ್ಲಿ ಎನ್-ಲೈನ್ ಬ್ಯಾಡ್ಜಿಂಗ್, ಕಾರಿನ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳಲ್ಲಿ ಕೆಂಪು ಆಕ್ಸೆಂಟ್, ಛಾವಣಿಯ ಹಳಿಗಳ ಮೇಲೆ ರೆಡ್ ಇನ್ಸರ್ಟ್ ಮತ್ತು ಹೊಸದಾದ ಮಿಶ್ರಲೋಹದ ಚಕ್ರಗಳನ್ನು ನೀಡಬಹುದು.

ಹಾಗೆಯೇ ಸ್ಪೋರ್ಟಿ ಲುಕ್ ಹೆಚ್ಚಿಸಲು ಹೊಸ ಕಾರಿನಲ್ಲಿ ಡ್ಯುಯಲ್-ಟಿಪ್ ಹೊಂದಿರುವ ಎಕ್ಸಾಸ್ಟ್ ಪೈಪ್ ಅನ್ನು ಬಳಸಲಾಗಿದ್ದು, ಎನ್-ಲೈನ್ ಮಾದರಿಗೆ ಕೆಲವು ವಿನ್ಯಾಸ ಬದಲಾವಣೆಗಳನ್ನು ಮಾಡಲಾಗಿದೆ. 'ಪ್ಯಾರಾಮೆಟ್ರಿಕ್' ಗ್ರಿಲ್ ವಿನ್ಯಾಸದೊಂದಿಗೆ ಹೊಸ ಮುಂಭಾಗದ ಶೈಲಿಯು ಹೊಸ ಕಾರಿಗೆ ಮತ್ತಷ್ಟು ಮೆರಗು ನೀಡಲಿದ್ದು, ಸ್ಪೋರ್ಟಿ ವಿನ್ಯಾದಸದ ಪರಿಷ್ಕೃತ ಹೆಡ್‌ಲೈಟ್ಸ್ ಮತ್ತು ಸ್ಲೀಕರ್ ಟೈಲ್-ಲೈಟ್‌ಗಳನ್ನು ವೆನ್ಯೂ ಎನ್-ಲೈನ್‌ನಲ್ಲಿ ಕಾಣಬಹುದು.

ಸದ್ಯ ಹ್ಯುಂಡೈ ಕಂಪನಿಯು ವೆನ್ಯೂ ಮಾದರಿಯನ್ನು ವಿವಿಧ ವೆರಿಯೆಂಟ್‌ಗಳೊಂದಿಗೆ ಆಕರ್ಷಕ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದು, ಹೊಸ ಮಾದರಿಯು ಸದ್ಯ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.53 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.72 ಲಕ್ಷ ಬೆಲೆ ಹೊಂದಿದೆ.

ವೆನ್ಯೂ ಎನ್-ಲೈನ್ ಮಾದರಿಯು ಸ್ಟ್ಯಾಂಡರ್ಡ್ ವೆನ್ಯೂ ಮಾದರಿಗಿಂತಲೂ ತುಸು ದುಬಾರಿಯಾಗಿರಲಿದ್ದು, ಹ್ಯುಂಡೈ ಕಂಪನಿಯು ಸ್ಟ್ಯಾಂಡರ್ಸ್ ವೆನ್ಯೂ ಮಾದರಿಯನ್ನು ಈ ಹಿಂದಿನಂತೆ 1.2 ಲೀಟರ್ ಪೆಟ್ರೋಲ್, 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ವೆರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಿದೆ.

ಆದರೆ ವೆನ್ಯೂ ಎನ್-ಲೈನ್ ಮಾದರಿಯು ಪರ್ಫಾಮೆನ್ಸ್ ಆವೃತ್ತಿಯಾಗಿರುವುದರಿಂದ ಕಂಪನಿಯು ಕೇವಲ 1.-0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದ್ದು, ಹೊಸ ಮಾದರಿಯು ಸ್ಟ್ಯಾಂಡರ್ಡ್ ಮಾದರಿಯ ಹೈ ಎಂಡ್ ಆವೃತ್ತಿಗಿಂತ ರೂ. 70 ಸಾವಿರದಿಂದ ರೂ. 1 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಿರಲಿದೆ.

ಇನ್ನು ವೆನ್ಯೂ 2022ರ ಮಾದರಿಯು ಈ ಬಾರಿ ಹಲವಾರು ನವೀಕೃತ ವಿನ್ಯಾಸಗಳೊಂದಿಗೆ ಮಧ್ಯಮ ಕ್ರಮಾಂಕದ ಐಷಾರಾಮಿ ಎಸ್‌ಯುವಿ ಟ್ಯೂಸಾನ್ ಮಾದರಿಯಿಂದಲೂ ಪ್ರೇರಣೆ ಹೊಂದಿದ್ದು, 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್, ಎಲ್ಇಡಿ ಟೈಲ್‌ಲೈಲ್, ಸಿಲ್ವರ್ ಫಾಕ್ಸ್ ಬ್ಯಾಷ್ ಪ್ಲೇಟ್ ಜೊತೆಗೆ ಸ್ಕೂಪ್-ಔಟ್‌ನೊಂದಿಗೆ ನವೀಕೃತಗೊಂಡಿದೆ.

ಹೊಸ ಕಾರಿನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಗೆ ಬೆಂಬಲ ನೀಡುವ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಹೊಸ ಡಿಜಿಟಲ್ ಡ್ರೈವರ್ ಸೈಡ್ ಡಿಸ್ಪ್ಲೇ ನೀಡಲಾಗಿದ್ದು, ಬ್ಲೂಲಿಂಕ್ ಸಂಪರ್ಕಿತ ಕಾರ್ ಸೂಟ್ ಮೂಲಕ 60ಕ್ಕೂ ಹೆಚ್ಚು ಸಂಪರ್ಕಿತ ಕಾರ್ ವೈಶಿಷ್ಟ್ಯಗಳನ್ನು ನೀಡಿದೆ.


Click it and Unblock the Notifications