ಇ-ವಾಣಿಜ್ಯ ವಾಹನ ಅಳವಡಿಸಿಕೊಳ್ಳುವ ಖಾಸಗಿ ಕಂಪನಿಗಳಿಗಾಗಿ ಹೊಸ ಯೋಜನೆ ಆರಂಭಿಸಿದ ಲಾಗ್9
ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಂತ್ರಜ್ಞಾನದಲ್ಲಿ ಮುಂಚೂಣಿ ಸಾಧಿಸುತ್ತಿರುವ ನಮ್ಮ ಬೆಂಗಳೂರಿನ ಲಾಗ್9 ಮೊಬಿಲಿಟಿ ಕಂಪನಿಯು ಇ-ವಾಣಿಜ್ಯ ವಾಹನಗಳನ್ನು ಅಳವಡಿಸಿಕೊಳ್ಳುವ ಖಾಸಗಿ ಕಂಪನಿಗಳಿಗೆ ಹಣಕಾಸು ನೆರವು ನೀಡಲು ಕ್ರೆಕ್ಸ್ ಫೈನಾನ್ಸ್ ಕಂಪನಿಯೊಂದಿಗೆ ಹೊಸ ಸಹಭಾಗಿತ್ವ ಯೋಜನೆ ಆರಂಭಿಸಿದೆ.

ದುಬಾರಿ ಇಂಧನಗಳ ದರ ಪರಿಣಾಮ ಇವಿ ವಾಹನಗಳ ಬೇಡಿಕೆ ಸಾಕಷ್ಟು ಏರಿಕೆಯಾಗುತ್ತಿದ್ದು, ವ್ಯಯಕ್ತಿಕ ಇವಿ ವಾಹನಗಳಷ್ಟೇ ಅಲ್ಲದೆ ವಾಣಿಜ್ಯ ವಾಹನಗಳ ವಿಭಾಗದಲ್ಲೂ ಕೂಡಾ ಇವಿ ವಾಹನಗಳ ಬಳಕೆಯೂ ಹೆಚ್ಚಿನ ಆದ್ಯತೆ ಪಡೆದುಕೊಳ್ಳುತ್ತಿದೆ. ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ಇವಿ ಬ್ಯಾಟರಿ ತಂತ್ರಜ್ಞಾನ ಅಭಿವೃದ್ದಿಯಲ್ಲಿ ಮುಂಚೂಣಿಯಲ್ಲಿರುವ ಲಾಗ್9 ಕಂಪನಿಯು ಕೂಡಾ ವಿವಿಧ ಕಂಪನಿಗಳ ಜೊತೆಗೂಡಿ ಹೊಸ ಪಾಲುದಾರಿಕೆ ಯೋಜನೆಗಳನ್ನು ಪ್ರಕಟಿಸುತ್ತಿದೆ.

ಲಾಗ್9 ಕಂಪನಿಯು ಇದೀಗ ಹೊಸ ಸಹಭಾಗಿತ್ವ ಯೋಜನೆ ಅಡಿಯಲ್ಲಿ ಮೊಬಿಲಿಟಿ ಸರ್ವಿಸ್ ಅಳವಡಿಸಿಕೊಳ್ಳುವ ಗ್ರಾಹಕರಿಗೆ ಕ್ರೆಕ್ಸ್ ಫೈನಾನ್ಸ್ ಕಂಪನಿಯ ಮೂಲಕ ಹಣಕಾಸು ಸಹಕಾರಗಳನ್ನು ನೀಡಲಿದ್ದು, ಹೊಸ ಯೋಜನೆ ಅಡಿಯಲ್ಲಿ ಅಳವಡಿಸಿಕೊಳ್ಳುವ ಇ-ವಾಹನಗಳು ಲಾಗ್9 ಕಂಪನಿಯ ಬ್ಯಾಟರಿ ಪ್ರೇರಣೆ ಪಡೆದುಕೊಂಡಿರಲಿವೆ.

ಹೊಸ ಯೋಜನೆಯ ಮೂಲಕ ಭಾರತದಲ್ಲಿ ಲಾಗ್9 ಬ್ಯಾಟರಿ ಆಧಾರಿತ ವಾಹನಗಳ ನಿಯೋಜನೆಯನ್ನು ಸಕ್ರಿಯಗೊಳಿಸಲು ಪ್ರಮುಖ ಪಾತ್ರವಹಿಸಲಿದ್ದು, ಹೊಸ ಯೋಜನೆಯಡಿ ಬ್ಯಾಟರಿ ತಂತ್ರಜ್ಞಾನ ಯೋಜನೆಗೆ ಪೂರಕವಾಗಿ ಕ್ರೆಕ್ಸ್ ಫೈನಾನ್ಸ್ ಕಂಪನಿಯು ಲಾಗ್9 ಕಂಪನಿಗೆ ರೂ.10 ಕೋಟಿ ಆರ್ಥಿಕ ನೆರವು ಘೋಷಣೆ ಮಾಡಿದೆ.

ಹೊಸ ಪಾಲುದಾರಿಕೆಯಲ್ಲಿ ಇ-ಕಾಮರ್ಸ್ ವಾಹನಗಳನ್ನು ಹೆಚ್ಚಿಸಲು ಎದುರುನೋಡುತ್ತಿರುವ ಲಾಗ್9 ಮತ್ತು ಕ್ರೆಕ್ಸ್ ಫೈನಾನ್ಸ್ ಕಂಪನಿಗಳು ಹೊಸ ಜಂಟಿ ಉದ್ಯಮದಿಂದ ಭಾರೀ ಆದಾಯ ನೀರಿಕ್ಷೆಯಲ್ಲಿದ್ದು, ಕಡಿಮೆ ಹಣಕಾಸು ಸೌಲಭ್ಯಗಳೊಂದಿಗೆ ಇ-ವಾಹನಗಳ ಅಳವಡಿಕೆಗೆ ಇದು ಸಹಕಾರಿಯಾಗಲಿದೆ.

ಇನ್ನು ಲಾಗ್9 ಕಂಪನಿಯು ತನ್ನದೆ ಆದ ಹೊಸ ತಂತ್ರಜ್ಞಾನ ಅಭಿವೃದ್ದಿ ಯೋಜನೆ ಅಡಿ ಪ್ರಮುಖ ಇವಿ ವಾಹನ ತಯಾರಕ ಕಂಪನಿಗಳಿಗೆ ಇನ್‌ಸ್ಟಾಚಾರ್ಜ್ ಬ್ಯಾಟರಿ ಒದಗಿಸುತ್ತಿದ್ದು, ಜೊತೆಗೆ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸೇವೆಯನ್ನು ಒದಗಿಸುತ್ತಿದೆ.

ಪಾಲದಾರಿಕೆ ಯೋಜನೆ ಅಡಿ ಪ್ರಮುಖ ಕಂಪನಿಗಳು ತಮ್ಮ ಇವಿ ವಾಹನಗಳಿಗೆ ಲಾಗ್9 ನಿರ್ಮಾಣದ ಬ್ಯಾಟರಿ ಪ್ಯಾಕ್ ಅಳವಡಿಸಿಕೊಳ್ಳಲಿದ್ದು, ಲಾಗ್9 ಚಾರ್ಜಿಂಗ್ ನಿಲ್ದಾಣಗಳಲ್ಲಿಯೇ ಕೇವಲ 35 ನಿಮಿಷಗಳಲ್ಲಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ಮಾಡುವ ಲಾಗ್9 ಇನ್‌ಸ್ಟಾಚಾರ್ಜ್ ಬ್ಯಾಟರಿ ಸೌಲಭ್ಯವು ಸಾಮಾನ್ಯ ಲೀಥಿಯಂ ಅಯಾನ್ ಬ್ಯಾಟರಿಗಿಂತಲೂ 9 ಪಟ್ಟು ಹೆಚ್ಚು ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನು ಹೊಂದಿದ್ದು, ಹೊಸ ಬ್ಯಾಟರಿಯು -30 ಡಿಗ್ರಿಯಿಂದ 60 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲೂ ಅಚ್ಚುಕಟ್ಟಾಗಿ ಕಾರ್ಯಾನಿರ್ವಹಿಸುದಲ್ಲದೆ 15 ಸಾವಿರಕ್ಕೂ ಹೆಚ್ಚು ಬಾರಿ ಬ್ಯಾಟರಿ ಚಾರ್ಜಿಂಗ್ ವೈಶಿಷ್ಟ್ಯತೆ ಹೊಂದಿದೆ.

ಹೀಗಾಗಿ ಲಾಗ್9 ಹೊಸ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಮಾದರಿಗಾಗಿ ಪ್ರಮುಖ ಇವಿ ಕಂಪನಿಗಳು ಸಹಭಾಗಿತ್ವ ಪ್ರಕಟಿಸುತ್ತಿದ್ದು, ಗ್ರಾಹಕರ ಸ್ನೇಹಿಯಾಗಿ ಹೊಸ ಯೋಜನೆಗಳನ್ನು ರೂಪಗೊಳಿಸುತ್ತಿದೆ.

ಇನ್ನು ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸ್ಥಳೀಯವಾಗಿ ಇವಿ ವಾಹನಗಳ ಉತ್ಪಾದನೆ ಹೆಚ್ಚುತ್ತಿದ್ದರೂ ಇವಿ ವಾಹನಗಳ ಮುಖ್ಯ ತಾಂತ್ರಿಕ ಅಂಶವಾಗಿರುವ ಬ್ಯಾಟರಿ ಸೌಲಭ್ಯಕ್ಕಾಗಿ ವಿದೇಶಿ ಮಾರುಕಟ್ಟೆಗಳನ್ನು ಅವಲಂಬಿಸಿರುವುದೇ ಇವಿ ವಾಹನಗಳು ದುಬಾರಿಯಾಗಿರಲು ಮುಖ್ಯ ಕಾರಣವಾಗಿದೆ.

ಭಾರತದಲ್ಲಿ ಸದ್ಯ ಪ್ರಮುಖ ಇವಿ ವಾಹನಗಳ ಕಂಪನಿಗಳು ಇವಿ ವಾಹನ ಉತ್ಪಾದನೆ ಸ್ಥಳೀಕರಣ ಅಳವಡಿಸಿಕೊಂಡರೂ ಬ್ಯಾಟರಿ ಸೌಲಭ್ಯಕ್ಕಾಗಿ ವಿದೇಶಿ ಮಾರುಕಟ್ಟೆಗಳನ್ನು ಅವಲಂಬಿಸಿರುವುದು ಹೆಚ್ಚಿನ ಮಟ್ಟದ ಬೆಲೆ ಹೊಂದಿರುವುದಕ್ಕೆ ಪ್ರಮುಖ ಕಾರಣವಾಗಿದ್ದು, ಸ್ಥಳೀಯವಾಗಿ ಬ್ಯಾಟರಿ ನಿರ್ಮಾಣ ಮಾಡಲು ಸದ್ಯ ಪ್ರಮುಖ ಕಂಪನಿಗಳು ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಬ್ಯಾಟರಿ ಉತ್ಪಾದನಾ ಘಟಕಗಳನ್ನು ನಿರ್ಮಾಣ ಮಾಡುತ್ತಿವೆ.

ಮುಂಬರುವ ದಿನಗಳಲ್ಲಿ ವಿವಿಧ ಕಂಪನಿಗಳು ಸ್ಥಳೀಯ ಬ್ಯಾಟರಿ ಪ್ಯಾಕ್ ಅಭಿವೃದ್ದಿಪಡಿಸಿದರೂ ಸಹ ಅದಕ್ಕೆ ಮುಖ್ಯವಾಗಿರುವ ಬೇಕಿರುವ ಸೆಲ್ ಅಳವಡಿಕೆಗೆ ಮತ್ತೆ ವಿದೇಶಿ ಕಂಪನಿಗಳನ್ನೇ ಅವಲಂಬನೆ ಮಾಡುಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಮಹತ್ವದ ಯೋಜನೆ ಆರಂಭಿಸಿರುವ ನಮ್ಮ ಬೆಂಗಳೂರು ಮೂಲದ ಲಾಗ್9 ಮೆಟೀರಿಯಲ್ಸ್ ಕಂಪನಿಯು ಸ್ಥಳೀಯವಾಗಿ ಬ್ಯಾಟರಿ ಸೆಲ್ ಉತ್ಪಾದನೆಯನ್ನು ಆರಂಭಿಸಿದ್ದು, ಪ್ರಾಯೋಗಿಕ ಪರೀಕ್ಷೆಗಳಲ್ಲಿ ಯಶಸ್ವಿ ಹೊಂದಿರುವ ಕಂಪನಿಯು ಇದೀಗ ಬೃಹತ್ ಪ್ರಮಾಣದಲ್ಲಿ ಬ್ಯಾಟರಿ ಸೆಲ್ ನಿರ್ಮಾಣಕ್ಕಾಗಿ ಪ್ರತ್ಯೇಕ ನಿಯಂತ್ರಿತ ಕಾರ್ಖಾನೆಯನ್ನು ಆರಂಭಿಸಿದೆ.

ಬೆಂಗಳೂರಿನ ಜಕ್ಕೂರಿನಲ್ಲಿರುವ ಲಾಗ್9 ಮೆಟೀರಿಯಲ್ಸ್ ಹೊಸ ಬ್ಯಾಟರಿ ಸೆಲ್ ಅಭಿವೃದ್ದಿ ಕೇಂದ್ರವು ಇವಿ ಬ್ಯಾಟರಿ ಬೇಕಿರುವ ಸೆಲ್ ನಿರ್ಮಾಣಗೊಳಿಸಲಿದ್ದು, ಇದು ಭಾರತದಲ್ಲಿ ಮಾತ್ರವಲ್ಲ ಆಗ್ನೇಯ ಏಷ್ಯಾದಲ್ಲಿ ಅತಿದೊಡ್ಡ ಸೆಲ್ ಉತ್ಪಾದನಾ ಘಟಕವಾಗಿದೆ.

ಲಾಗ್9 ಮೆಟೀರಿಯಲ್ಸ್‌ನಿಂದ ದೇಶದ ಮೊದಲ ಸೆಲ್ ಉತ್ಪಾದನಾ ಘಟಕದ ಉದ್ಘಾಟನಾ ದಿನದಂದು ಕಂಪನಿಯು 'ಡೇ ಝೀರೋ' ಎಂದು ಘೋಷಣೆ ಮಾಡಿದ್ದು, 2015ರಲ್ಲಿ ಈ ದಿನದಂದು ಸ್ಥಾಪನೆಗೊಂಡಿದ್ದ ಕಂಪನಿಯು ತನ್ನ 7ನೇ ವಾರ್ಷಿಕೋತ್ಸದ ವೇಳೆಗೆ ಹೊಸ ಬ್ಯಾಟರಿ ಸೆಲ್ ಅಭಿವೃದ್ದಿ ಕೇಂದ್ರದಲ್ಲಿ ಅಧಿಕೃತ ಉತ್ಪಾದನೆಗೆ ಚಾಲನೆ ನೀಡಿದೆ.

ಹೊಸ ಯೋಜನೆಯೊಂದಿಗೆ ಮುಂದಿನ 3 ರಿಂದ 5 ವರ್ಷಗಳಲ್ಲಿ 5GWh ಗಿಂತ ಹೆಚ್ಚಿನ ಬ್ಯಾಟರಿ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರಲಿದ್ದು, ಸಾಮಾನ್ಯ ಲೀಥಿಯಂ-ಐಯಾನ್ ಬ್ಯಾಟರಿಗಳಿಗಿಂತ 9 ಪಟ್ಟು ವೇಗವಾಗಿ ಚಾರ್ಜಿಂಗ್ ವೈಶಿಷ್ಟ್ಯತೆ ಹೊಂದಿರಲಿದೆ.


Click it and Unblock the Notifications








