ಮಹೀಂದ್ರಾದೊಂದಿಗೆ ಪಂಜಾಬ್ ಸರ್ಕಾರ ಒಪ್ಪಂದ: 12 ನಗರಗಳಿಗೆ 500 ಎಲೆಕ್ಟ್ರಿಕ್ ಆಟೋಗಳ ವಿತರಣೆ
ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆಗಳಿಂದ ಇತ್ತೀಚಿನ ವರ್ಷಗಳಲ್ಲಿ ಪೆಟ್ರೋಲ್ ಚಾಲಿತ ವಾಹನಗಳಿಗೆ ಬೇಡಿಕೆ ಕಡಿಮೆಯಾಗಿ ಮಾರಾಟದಲ್ಲಿ ಭಾರೀ ಇಳಿಕೆಯಾಗಿದೆ. ಇದೇ ವೇಳೆ ಹೆಚ್ಚು ಜನಪ್ರಿಯವಾಗುತ್ತಿರುವ ಇವಿ ವಾಹನಗಳತ್ತ ಜನರು ಆಸಕ್ತಿ ತೋರುತ್ತಿದ್ದು, ಇದಕ್ಕೆ ಆಯಾ ರಾಜ್ಯ ಸರ್ಕಾರಗಳು ಕೂಡ ಪ್ರೋತ್ಸಾಹಿಸುತ್ತಿರುವುದು ಇವಿ ವಾಹನಗಳ ಏಳಿಗೆಗೆ ಕಾರಣವಾಗಿದೆ.

ಇದು ಕೇವಲ ದ್ವಿಚಕ್ರ, ನಾಲ್ಕು ಚಕ್ರ ವಾಹನಗಳಿಗೆ ಮಾತ್ರವಲ್ಲದೇ ಸರ್ಕಾರಗಳು ತ್ರಿಚಕ್ರ ಇವಿ ವಾಹನಗಳ ಬಳಕೆಗೂ ಪ್ರೋತ್ಸಾಹಿಸುತ್ತಿವೆ. ಈ ನಿಟ್ಟಿನಲ್ಲಿ ಭಾರತದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ಎಲೆಕ್ಟ್ರಿಕ್‌ನೊಂದಿಗೆ ಪಂಜಾಬ್ ಸರ್ಕಾರ ಮಾಡಿಕೊಂಡಿದ್ದ ಒಪ್ಪಂದಂತೆ ಮಹೀಂದ್ರಾ ಟ್ರಿಯೊ ತ್ರಿಚಕ್ರ ವಾಹನಗಳನ್ನು ರಾಹಿ ಯೋಜನೆಯಡಿಯಲ್ಲಿ ಅಮೃತಸರದಲ್ಲಿ ತನ್ನ ಮೊದಲ ಗ್ರಾಹಕರಿಗೆ ವಿತರಿಸಿದೆ.

RAAHI ಯೋಜನೆಯಡಿಯಲ್ಲಿ ಪಂಜಾಬ್ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿ ಚಲಿಸುವ ಆಟೋ-ರಿಕ್ಷಾಗಳನ್ನು ಬದಲಿಸಿ ಎಲೆಕ್ಟ್ರಿಕ್ ರಿಕ್ಷಾಗಳನ್ನು ಬಳಸಲು ಅಭಿಯಾನವನ್ನು ಪ್ರಾರಂಭಿಸಿದೆ. ಈ ಯೋಜನೆಯು ಅಮೃತಸರ ಸೇರಿದಂತೆ 12 ನಗರಗಳನ್ನು ಒಳಗೊಂಡಿದ್ದು, ಈ ನಗರಗಳಲ್ಲಿ ಮಹೀಂದ್ರಾ ಎಲೆಕ್ಟ್ರಿಕ್ ಮುಂದಿನ ಕೆಲವು ತಿಂಗಳುಗಳಲ್ಲಿ ಟ್ರಿಯೊ ಎಲೆಕ್ಟ್ರಿಕ್ ಆಟೋ ರಿಕ್ಷಾದ 500 ಯುನಿಟ್‌ಗಳನ್ನು ವಿತರಿಸಲಿದೆ.

ರಾಹಿ ಯೋಜನೆಯಡಿ ಪ್ರತಿ ಫಲಾನುಭವಿಗೆ 75,000 ರೂ. ಸಹಾಯಧನ ನೀಡಲಾಗುತ್ತಿದೆ. ಗ್ರಾಹಕರು ಮುಂಗಡವಾಗಿ ಟ್ರಿಯೊ ಖರೀದಿಸಲು ನಿರ್ಧರಿಸಿದರೆ, ಸಂಪೂರ್ಣ ಸಬ್ಸಿಡಿಯನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ, ಆದರೆ ಗ್ರಾಹಕರು ಸಾಲವನ್ನು ತೆಗೆದುಕೊಂಡರೆ, 15,000 ರೂ.ಗಳನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ರೂ 60,000 ಬಾಕಿ ಮೊತ್ತವನ್ನು ಸಾಲದ ಮೊತ್ತಕ್ಕೆ ಹೊಂದಿಸಲಾಗುತ್ತದೆ.

ಈ ಯೋಜನೆಯಡಿಯಲ್ಲಿ, ಖರೀದಿದಾರರಿಗೆ 4 ವರ್ಷಗಳವರೆಗೆ ಆಕರ್ಷಕ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುವುದು ಮತ್ತು ಗರಿಷ್ಠ 2.5 ಲಕ್ಷ ರೂ. FAME-II ವಿನಾಯಿತಿಗೆ ಹೆಚ್ಚುವರಿಯಾಗಿ ಈ ಸಹಾಯಧನವನ್ನು ನೀಡಲಾಗುತ್ತಿದೆ ಎಂಬುದು ಗಮನಾರ್ಹ. ಈ ಯೋಜನೆಯು ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಸಿಟಿ ಇನ್ವೆಸ್ಟ್‌ಮೆಂಟ್ಸ್ ಟು ಇನ್ನೋವೇಟ್, ಇಂಟಿಗ್ರೇಟ್ ಮತ್ತು ಸಸ್ಟೈನ್ (CITIIS) ಕಾರ್ಯಕ್ರಮದ ಭಾಗವಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಎಲೆಕ್ಟ್ರಿಕ್ ವಾಹನಗಳ ವ್ಯಾಪ್ತಿಯನ್ನು ಹೆಚ್ಚಿಸಲು ಮಹೀಂದ್ರಾ ಎಲೆಕ್ಟ್ರಿಕ್ ಕಾಮನ್ ಸರ್ವಿಸ್ ಸೆಂಟರ್ (CSC) ನೊಂದಿಗೆ ಪಾಲುದಾರಿಕೆ ಹೊಂದಿದೆ. ಈ ಪಾಲುದಾರಿಕೆಯ ಅಡಿಯಲ್ಲಿ, ಮಹೀಂದ್ರಾ ಎಲೆಕ್ಟ್ರಿಕ್ ತನ್ನ ಟ್ರೀಯೊ ಮತ್ತು ಆಲ್ಫಾ ಶ್ರೇಣಿಯ ಎಲೆಕ್ಟ್ರಿಕ್ ವಾಹನಗಳನ್ನು ಗ್ರಾಮೀಣ ಮಾರುಕಟ್ಟೆಗಳಲ್ಲಿ ಲಭ್ಯವಾಗುವಂತೆ ಮಾಡಲಿದೆ.

ಮಹೀಂದ್ರಾ ಎಲೆಕ್ಟ್ರಿಕ್ ಆಯ್ದ CSC ಕೇಂದ್ರಗಳಲ್ಲಿ ಸ್ಥಳೀಯ ಉದ್ಯಮಿಗಳನ್ನು ನೇಮಿಸಿಕೊಳ್ಳುತ್ತಿದೆ. ಈ ಉದ್ಯಮಿಗಳು ಸಂಭಾವ್ಯ ಗ್ರಾಹಕರಿಗೆ ಮಹೀಂದ್ರಾದ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಜೊತೆಗೆ ಟ್ರೀಯೊ ಮತ್ತು ಆಲ್ಫಾ ಶ್ರೇಣಿಯ ವಾಹನಗಳನ್ನು ಖರೀದಿಸಲು ಅವರನ್ನು ಪ್ರೇರೇಪಿಸುತ್ತಾರೆ.

ಇದಲ್ಲದೆ, ಎಲೆಕ್ಟ್ರಿಕ್ ವಾಹನಗಳಿಗಾಗಿ ನಡೆಸುತ್ತಿರುವ ಸರ್ಕಾರದ ಯೋಜನೆಗಳ ಬಗ್ಗೆಯೂ ಗ್ರಾಹಕರಿಗೆ ತಿಳಿಸಲಾಗುವುದು. ಮಹೀಂದ್ರ ಟ್ರಿಯೊ ಮೂರು-ಚಕ್ರ ವಾಹನಗಳ ಪ್ರಯಾಣಿಕ ಮತ್ತು ಸರಕು ಶ್ರೇಣಿಯನ್ನು ನೀಡುತ್ತದೆ. ಇದರ ಬೆಲೆ 1.69 ಲಕ್ಷದಿಂದ ಪ್ರಾರಂಭವಾಗುತ್ತದೆ. ಟಾಪ್ ರೂಪಾಂತರಕ್ಕೆ 2.79 ಲಕ್ಷ ರೂ.ವರೆಗೆ ಇದೆ.

ಮಹೀಂದ್ರ ಟ್ರಿಯೊ ಕಂಪನಿಯ NEMO ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ತ್ರಿಚಕ್ರ ವಾಹನವು 8 kW ಪವರ್ ಮತ್ತು 42 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿ, ಕಂಪನಿಯು IP65 ರೇಟಿಂಗ್‌ನ ಸುಧಾರಿತ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಬಳಸಿದೆ.

ಇದು 1.50 ಲಕ್ಷ ಕಿ.ಮೀ ಬ್ಯಾಟರಿ ಬಾಳಿಕೆ ಹೊಂದಿದ್ದು, ನಿರ್ವಹಣೆ ಮುಕ್ತ ವಾಹನವಾಗಿದೆ. ಮಹೀಂದ್ರಾ ಟ್ರಿಯೊವನ್ನು 15 ಆಂಪ್ಸ್‌ಗಳ ಸಾಕೆಟ್‌ನೊಂದಿಗೆ ಚಾರ್ಜ್ ಮಾಡಬಹುದು. ಡೀಸೆಲ್ ಆಟೋ-ರಿಕ್ಷಾಕ್ಕೆ ಹೋಲಿಸಿದರೆ ಇದು ವರ್ಷಕ್ಕೆ ರೂ. 60,000 ಉಳಿಸುತ್ತದೆ.

ಮೂರು-ಚಕ್ರ ವಾಹನಗಳು ಕೊನೆಯ ಮೈಲಿ ಚಲನಶೀಲತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಟ್ರೀಯೊ ಫ್ಲೀಟ್ ಆಂತರಿಕ ದಹನಕಾರಿ ಎಂಜಿನ್-ಚಾಲಿತ ವಾಹನಗಳ ಮೇಲೆ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತದೆ, ಇದರಿಂದಾಗಿ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಗಣನೀಯವಾಗಿ ಹೆಚ್ಚಿನ ಗಳಿಕೆ ಮತ್ತು ಸುಧಾರಿತ ಜೀವನಶೈಲಿಯೊಂದಿಗೆ, ನಮ್ಮ ಚಾಲಕ-ಪಾಲುದಾರರು ಟ್ರೆಂಡ್‌ಸೆಟರ್‌ಗಳಾಗಲಿದ್ದಾರೆ ಎಂದು ಎಂಇಎಂಎಲ್‌ನ ಸಿಇಒ ಸುಮನ್ ಮಿಶ್ರಾ ಹೇಳಿದರು.

2019 ರಲ್ಲಿ ಪ್ರಾರಂಭಿಸಲಾದ RAAHI ಯೋಜನೆಯು ಆರು ಅಂತರ್ ಸಂಪರ್ಕಿತ ಘಟಕಗಳನ್ನು ಹೊಂದಿದೆ. ಬಹು ಎಲೆಕ್ಟ್ರಿಕ್ ಆಟೋ ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆಯೊಂದಿಗೆ ಎಲೆಕ್ಟ್ರಿಕ್ ಮೂರು-ಚಕ್ರ ವಾಹನ ವಲಯ ಬಲಗೊಳ್ಳಲಿದೆ. ಇದರಿಂದ ಜೀವನೋಪಾಯದ ಅವಕಾಶ, ಪಾದಚಾರಿ ಸುರಕ್ಷತೆ, ಪರಿಸರದಲ್ಲಿ ಉತ್ತಮ ಗಾಳಿಯ ಗುಣಮಟ್ಟ ಹೆಚ್ಚಾಗಲಿದೆ.

ಈ ಯೋಜನೆಯು ನಗರದಲ್ಲಿ 12,000 ಹಳೆಯದಾದ ಡೀಸೆಲ್ ತ್ರಿಚಕ್ರ ವಾಹನಗಳನ್ನು ಬದಲಾಯಿಸುವ ಗುರಿಯನ್ನು ಹೊಂದಿದ್ದು, ಅಮೃತಸರ ಸ್ಮಾರ್ಟ್ ಸಿಟಿ ಲಿಮಿಟೆಡ್ ತಂಡದಿಂದ ಈಗಾಗಲೇ ಎಲ್ಲಾ ಫಲಾನುಭವಿಗಳ ಆಯ್ಕೆ ಮತ್ತು ಪರಿಶೀಲನಾ ಪ್ರಕ್ರಿಯೆ ಮುಂದುವರೆದಿದೆ.


Click it and Unblock the Notifications