ಬೆಲೆ ಏರಿಕೆ: ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ರೂ.12 ಸಾವಿರದಷ್ಟು ಹೆಚ್ಚಳ
ಮಾರುತಿ ಸುಜುಕಿ(Maruti Suzuki) ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಹೆಚ್ಚಳ ಘೋಷಣೆ ಮಾಡಿದ್ದು, ಹೊಸ ದರ ಪಟ್ಟಿಯಲ್ಲಿ ಪ್ರಮುಖ ಕಾರುಗಳ ಬೆಲೆಯಲ್ಲಿ ಸಾಕಷ್ಟು ಹೆಚ್ಚಳ ಮಾಡಲಾಗಿದೆ.

ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಕಂಪನಿಯು ಪ್ರಮುಖ ಕಾರು ಮಾದರಿಗಳ ಬೆಲೆಯಲ್ಲಿ ಶೇ. 1ರಿಂದ ಶೇ. 1.30ರಷ್ಟು ಬೆಲೆ ಹೆಚ್ಚಳ ಮಾಡಲಾಗಿದೆ.

ಕೋವಿಡ್ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ಕೊರತೆಯೇ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ಹೆಚ್ಚುತ್ತಿರುವ ವೆಚ್ಚಗಳ ನಿರ್ವಹಣೆಗಾಗಿ ಆಟೋ ಕಂಪನಿಗಳು ನಿರಂತರವಾಗಿ ಬೆಲೆ ಪರಿಷ್ಕರಣೆ ಮಾಡುತ್ತಿವೆ.

ಉತ್ಪಾದನಾ ವೆಚ್ಚ ಹೆಚ್ಚಳ ಪರಿಣಾಮ ಕಳೆದ ಜನವರಿಯಲ್ಲೂ ಬೆಲೆ ಹೆಚ್ಚಳ ಮಾಡಿದ್ದ ಮಾರುತಿ ಸುಜುಕಿ ಕಂಪನಿಯು ಇದೀಗ ಮತ್ತೊಮ್ಮೆ ಬೆಲೆ ಹೆಚ್ಚಳ ಮಾಡಿದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ವಾಹನ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ.

ಹೊಸ ದರಪಟ್ಟಿಯಲ್ಲಿ ಆಲ್ಟೊ ಮಾದರಿಯ ಬೆಲೆಯು ರೂ. 5,304 ಹೆಚ್ಚಳವಾಗಿದ್ದರೆ ಎಸ್-ಪ್ರೆಸ್ಸೊ ಮಾದರಿಯ ಬೆಲೆಯಲ್ಲಿ ರೂ. 5,913, ಇಕೋ ಮಾದರಿಯ ಬೆಲೆಯಲ್ಲಿ ರೂ.6,002, ಸ್ವಿಫ್ಟ್ ಕಾರಿನ ಬೆಲೆಯಲ್ಲಿ ರೂ.7,695, ವ್ಯಾಗನ್‌ಆರ್ ಮಾದರಿಯ ಬೆಲೆಯಲ್ಲಿ ರೂ. 7,117, ಸೆಲೆರಿಯೊ ಮಾದರಿಯ ಬೆಲೆಯಲ್ಲಿ ರೂ.7 ಸಾವಿರ, ಡಿಜೈರ್ ಮಾದರಿಯ ಬೆಲೆಯಲ್ಲಿ ರೂ, 8,112 ಬೆಲೆ ಹೆಚ್ಚಿಸಲಾಗಿದೆ.

ಹಾಗೆಯೇ ಇನ್ನುಳಿದ ಮಾದರಿಗಳಾದ ವಿಟಾರಾ ಬ್ರೆಝಾ ಮಾದರಿಯ ಬೆಲೆಯಲ್ಲಿ ರೂ.10,192 ಹೆಚ್ಚಳವಾಗಿದ್ದು, ಇಗ್ನಿಸ್ ಬೆಲೆಯಲ್ಲಿ ರೂ. 6,955, ಬಲೆನೊ ಮಾದರಿಯ ಬೆಲೆಯಲ್ಲಿ ರೂ. 8,437 ಮತ್ತು ಎಸ್-ಕ್ರಾಸ್ ಬೆಲೆಯಲ್ಲಿ ರೂ.11,635 ಬೆಲೆ ಹೆಚ್ಚಿಸಲಾಗಿದೆ.

2021ರಿಂದ ಮಾರುತಿ ಸುಜುಕಿಯು ತನ್ನ ಪ್ರಮುಖ ಕಾರುಗಳ ಬೆಲೆಯಲ್ಲಿ ಐದನೇ ಬಾರಿಗೆ ಬೆಲೆ ಏರಿಕೆ ಮಾಡಿದಂತಾಗಿದ್ದು, ಇದರಿದ ಕಳೆದ ಒಂದು ವರ್ಷದಲ್ಲಿ ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಶೇ.7 ರಿಂದ ಶೇ. 9 ರಷ್ಟು ದುಬಾರಿಯಾಗಿವೆ.

ಹೊಸ ದರಪಟ್ಟಿಯಲ್ಲಿ ಕಂಪನಿಯು ಇತ್ತೀಚೆಗೆ ಬಿಡುಗಡೆಯಾದ ಎರ್ಟಿಗಾ ಫೇಸ್‌ಲಿಫ್ಟ್ ಹೊರತುಪಡಿಸಿ ಉಳಿದೆಲ್ಲಾ ಮಾದರಿಗಳ ಬೆಲೆಯಲ್ಲೂ ಹೆಚ್ಚಳ ಮಾಡಿದ್ದು, ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ದರ ಹೆಚ್ಚಿಸುತ್ತಿವೆ.

ಉತ್ಪಾದನಾ ವೆಚ್ಚಗಳನ್ನು ಸರಿದೂಗಿಸಲು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಮೂಲ ಬೆಲೆಯಲ್ಲಿ ಶೇ.1 ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸುತ್ತಿದ್ದು, ಕಳೆದ ಕೆಲ ತಿಂಗಳಿನಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿ ರೂ. 50 ಸಾವಿರದಿಂದ ರೂ.1.20 ಲಕ್ಷದಷ್ಟು ದುಬಾರಿಯಾಗಿವೆ.

ಇನ್ನು ಮಾರುತಿ ಸುಜುಕಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರುಗಳಲ್ಲಿ ಸಾಕಷ್ಟು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, 2022ರ ಎರ್ಟಿಗಾದಲ್ಲಿ ಮಾರುತಿ ಸುಜುಕಿ ಕಂಪನಿಯು ಎಂಜಿನ್ ಬದಲಾವಣೆ ಸೇರಿದಂತೆ ಹಲವಾರು ಹೆಚ್ಚುವರಿ ಸುರಕ್ಷಾ ಸೌಲಭ್ಯಗಳು ಮತ್ತು ಪ್ರಮುಖ ಪ್ರೀಮಿಯಂ ಸೌಲಭ್ಯಗಳನ್ನು ಅಳವಡಿಸಿದೆ.

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.35 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.79 ಲಕ್ಷ ಬೆಲೆ ಹೊಂದಿದ್ದು, ಎಲ್ಎಕ್ಸ್ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಡ್‌ಎಕ್ಸ್ಐ ಪ್ಲಸ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

2022ರ ಎರ್ಟಿಗಾ ಮಾದರಿಯ ನವೀಕೃತ ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್‌ಜಿ ಮಾದರಿಯ ಆಯ್ಕೆಯನ್ನು ಸಹ ಹೊಂದಿದ್ದು, ಹೊಸ ಮಾದರಿಯಲ್ಲಿ ಈ ಹಿಂದಿನ 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಬದಲಾಗಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.5 ಲೀಟರ್ ಕೆ15ಸಿ ಡ್ಯುಯಲ್‌ಜೆಟ್ ಪೆಟ್ರೋಲ್ ಮಾದರಿಯನ್ನು ಅಳವಡಿಸಲಾಗಿದೆ.

2022ರ ಎರ್ಟಿಗಾ ಮಾದರಿಯು ಹೊಸ ಎಂಜಿನ್ ಆಯ್ಕೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಮ್ಯಾನುವಲ್ ಮಾದರಿಯು 20.51 ಕಿ.ಮೀ ಮತ್ತು ಆಟೋಮ್ಯಾಟಿಕ್ ಮಾದರಿಯು 20.03 ಕಿ.ಮೀ ಮೈಲೇಜ್ ನೀಡಿದಲ್ಲಿ ಸಿಎನ್‌ಜಿ ಮಾದರಿಯು ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಪ್ರತಿ ಕೆ.ಜಿ ಸಿಎನ್‌ಜಿಗೆ ಗರಿಷ್ಠ 26.11 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.


Click it and Unblock the Notifications