2022ರ ಬಲೆನೊ ಮಾದರಿಯ ವಿತರಣೆಗೆ ಅಧಿಕೃತ ಚಾಲನೆ ನೀಡಿದ ಮಾರುತಿ ಸುಜುಕಿ
ದೇಶದ ಅತಿದೊಡ್ಡ ಕಾರು ಮಾರಾಟ ಕಂಪನಿಯಾಗಿ ಹೊರಹೊಮ್ಮಿರುವ ಮಾರುತಿ ಸುಜುಕಿಯು ತನ್ನ ಪ್ರಮುಖ ಕಾರು ಮಾದರಿಗಳ 2022ರ ಆವೃತ್ತಿಗಳನ್ನು ವಿನೂತನ ಫೀಚರ್ಸ್‌ಗಳೊಂದಿಗೆ ಉನ್ನತೀಕರಿಸಿ ಬಿಡುಗಡೆಗೊಳಿಸುತ್ತಿದ್ದು, ಕಂಪನಿಯು ಬಲೆನೊ ಹೊಸ ಆವೃತ್ತಿಯನ್ನು ಸಹ ನಿನ್ನೆಯಷ್ಟೇ ವಿನೂತನ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಳಿಸಿತು.

ಹೊಸ ಬಲೆನೊ ಮಾದರಿಯನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ ದೇಶಾದ್ಯಂತ ವಿತರಣೆ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಹೊಸ ಕಾರು ಇದುವರೆಗೆ ಸುಮಾರು 25 ಸಾವಿರ ಗ್ರಾಹಕರಿಂದ ಮುಂಗಡ ಬುಕ್ಕಿಂಗ್ ಪಡೆದುಕೊಂಡಿದೆ. ಹೊಸ ಕಾರು ಮಾದರಿಯು ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಗೊಂಡಿದ್ದು, ಹೊಸ ಕಾರು ಆಕರ್ಷಕ ಬೆಲೆಯೊಂದಿಗೆ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಬಲೆನೊ ಹ್ಯಾಚ್‌ಬ್ಯಾಕ್ ಕಾರು ಮಾದರಿಯು ಪ್ರಮುಖ ನಾಲ್ಕು ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.35 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.49 ಲಕ್ಷ ಬೆಲೆ ಹೊಂದಿದ್ದು, ಸಿಗ್ಮಾ, ಡೆಲ್ಟಾ, ಜೆಟಾ ಮತ್ತು ಅಲ್ಫಾ ಎಂಬ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಹೊಸ ಕಾರು ಈ ಹಿಂದಿನ ಮಾದರಿಯಲ್ಲಿರುವಂತೆ ಎಂಜಿನ್ ಆಯ್ಕೆ ಹೊಂದಿದ್ದರೂ ಪ್ರೀಮಿಯಂ ಫೀಚರ್ಸ್ ಮತ್ತು ಬದಲಾವಣೆಗೊಳಿಸಲಾದ ವಿನ್ಯಾಸವು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದ್ದು, ಹೊಸ ಕಾರಿನಲ್ಲಿ ಈ ಹಿಂದಿನಂತೆಯೇ 1.2 ಲೀಟರ್ ಡ್ಯುಯಲ್ ಜೆಟ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದೆ.

1.2 ಲೀಟರ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಮತ್ತು 5 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 90 ಬಿಎಚ್‌ಪಿ ಮತ್ತು 115 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಹೊಸ ಕಾರಿನಲ್ಲಿ ಮಾರುತಿ ಸುಜುಕಿಯು ಈ ಬಾರಿ ಹಿಂದಿನ ಮಾದರಿಯಲ್ಲಿನ 4 ಸ್ಪೀಡ್ ಆಟೋ ಕನ್ವರ್ಟ್ ಗೇರ್‌ಬಾಕ್ಸ್ ಬದಲಾಗಿ 5-ಸ್ಪೀಡ್ ಆಟೋಮ್ಯಾಟಿಕ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ನೀಡಿದೆ.

ಹೊಸ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ 22.35 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಇದರ ಜೊತೆಗೆ ಹೊಸದಾಗಿ ಹೊಸ ಸಸ್ಷೆಷನ್ ಸೆಟಪ್‌ನೊಂದಿಗೆ ಹೈ ಎಂಡ್ ಮಾದರಿಯಲ್ಲಿ 14 ಇಂಚಿನ ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಜೋಡಿಸಿದೆ.

ಇದಲ್ಲದೆ 16 ಇಂಚಿನ ಅಲಾಯ್ ವ್ಹೀಲ್, ಅರ್ಕಾಮಿಸ್ ಸರೌಂಡ್ ಸೌಂಡ್ ಸಿಸ್ಟಂ ಸೌಲಭ್ಯವು ಕಾರು ಚಾಲನೆಯನ್ನು ಮತ್ತಷ್ಟು ಅರಾಮದಾಯಕಗೊಳಿಸಲಿದ್ದು, ನೆಕ್ಸಾವೆವ್ ಹನಿಕೊಂಬ್ ಗ್ರಿಲ್, ಫ್ಲಾಟರ್ ಕ್ಲಾಮ್‌ಶೆಲ್ ಬಾನೆಟ್ ಮತ್ತು ಪರಿಷ್ಕೃತ ಮುಂಭಾಗದ ಬಂಪರ್ ಜೊತೆಗೆ ದೊಡ್ಡ ಫಾಗ್ ಲ್ಯಾಂಪ್ ಹೌಸಿಂಗ್‌ಗಳನ್ನು ನೀಡಲಾಗಿದೆ. ಸೈಡ್ ಪ್ರೊಫೈಲ್ ಹಿಂದಿನ ಮಾದರಿಯಂತೆಯೇ ಕಂಡರೂ ಕ್ರೋಮ್ ಸ್ಟ್ರಿಪ್ ಅನ್ನು ಹೊರತುಪಡಿಸಿ ಈಗ ಕೆಳಗಿನ ವಿಂಡೋ ಲೈನ್‌ನಿಂದ ಹಿಂದಿನ ಕ್ವಾರ್ಟರ್ ಗ್ಲಾಸ್‌ಗೆ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಹೊಸ ಬಲೆನೊ ಹಿಂಬದಿಯಲ್ಲಿ ಹೊಸ ಟೈಲ್‌ಗೇಟ್ ವಿನ್ಯಾಸ, ಹೊಸ ಸಿ-ಆಕಾರದ ಎಲ್‌ಇಡಿ ಟೈಲ್-ಲೈಟ್‌ಗಳು ಮತ್ತು ರಿಪ್ರೊಫೈಲ್ಡ್ ರಿಯರ್ ಬಂಪರ್‌ನೊಂದಿಗೆ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಂಪರ್ಕದೊಂದಿಗೆ 9.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹಿಂದಿನ ಮಾದರಿಗಳಿಂತೆ ಎಸಿ ವೆಂಟ್‌ಗಳು, ಫಾಸ್ಟ್ ಚಾರ್ಜಿಂಗ್ ಯುಎಸ್‌ಬಿ ಪೋರ್ಟ್, ಹೆಡ್ ಅಪ್ ಡಿಸ್ಪ್ಲೇ(ಎಚ್‌ಯುಡಿ) ಅನ್ನು ಒಳಗೊಂಡಿದೆ.

ಹೊಸ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಮಾರುತಿ ಸುಜುಕಿಯು ಈ ಬಾರಿ ಹೆಚ್ಚಿನ ಸುರಕ್ಷತೆಗೆ ಒತ್ತು ನೀಡಿದ್ದು, ಹೊಸ ಸುರಕ್ಷತಾ ವೈಶಿಷ್ಟ್ಯಗಳಲ್ಲಿ 6 ಏರ್‌ಬ್ಯಾಗ್, ಹಿಲ್ ಹೋಲ್ಡ್ ಅಸಿಸ್ಟ್, ಕ್ರೂಸ್ ಕಂಟ್ರೋಲ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ಎಬಿಎಸ್, ಕೀ ಲೆಸ್ ಎಂಟ್ರಿ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಇಎಸ್‌ಪಿ ಮತ್ತು ಇಬಿಡಿ ಸಹ ಸೇರ್ಪಡೆಯಾಗಲಿದ್ದು, ಸುಜುಕಿ ಕಾರ್ ಕನೆಕ್ಟ್ ತಂತ್ರಜ್ಞಾನದಲ್ಲೂ ಸಹ ಸುಧಾರಿತ ವೈಶಿಷ್ಟ್ಯತೆಗಳನ್ನು ಸೇರ್ಪಡೆಗೊಳಿಸಿದೆ.

ಹಾಗೆಯೇ ಮಾರುತಿ ಸುಜುಕಿ ಕಂಪನಿಯ ಹೊಸ ಕಾರಿನಲ್ಲಿ ಸುಜುಕಿ ಕನೆಕ್ಟ್ ಟೆಕ್ನಾಲಜಿ ಮೂಲಕ ಒಂದೇ ಸೂರಿನಡಿ 40ಕ್ಕೂ ಹೆಚ್ಚು ತಾಂತ್ರಿಕ ಸೌಲಭ್ಯಗಳನ್ನು ಒದಗಿಸುವ ಕನೆಕ್ಟೆಡ್ ಫೀಚರ್ಸ್ ನೀಡಿದ್ದು, ಸ್ಮಾರ್ಟ್‌ಫೋನ್ ಮೂಲಕವೇ ನಿರ್ವಹಣೆ ಮಾಡಬಹುದಲ್ಲದೆ ಅಮೆಜಾನ್ ಅಲೆಕ್ಸಾ ವಾಯ್ಸ್ ಕಮಾಂಡ್ ಮೂಲತ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದು.

ಜೊತೆಗೆ ತುರ್ತುಸೇವೆಗಳಿಗಾಗಿ ಸುಧಾರಿತ ಟೆಲಿಮ್ಯಾಟಿಕ್ಸ್ ಪರಿಹಾರಗಳನ್ನು ಒಳಗೊಂಡಿರಲಿದ್ದು, ಸುಜುಕಿ ಕಾರ್ ಕನೆಕ್ಟ್ ಫೀಚರ್ಸ್‍ಗಳನ್ನು ಸ್ಮಾರ್ಟ್‌ಫೋನ್ ಅಪ್ಲಿಕೇಷನ್ ಮೂಲಕ ಇಂಧನ ಲಭ್ಯತೆ, ಸಾಗಬಹುದಾದ ದೂರ, ಓಡೋಮೀಟರ್, ಕಾರ್ ಡಯಾಗ್ನೋಸಿಸ್, ಒಳಗೊಂಡಂತೆ ವಿವಿಧ ಮಾಹಿತಿಗಳ ಸಂಪೂರ್ಣ ಡೇಟಾ ಪಡೆದುಕೊಳ್ಳಬಹುದು.

ಕನೆಕ್ಟೆಡ್ ಕಾರ್ ಟೆಕ್ ವೈಶಿಷ್ಟ್ಯದ ಜೊತೆಗೆ ಮಾರುತಿ ಕಂಪನಿಯು ಹೊಸ ಬಲೆನೊದಲ್ಲಿ 9-ಇಂಚಿನ ಡಿಜಿಟಲ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, 360 ಡಿಗ್ರಿ ವ್ಯೂ ಕ್ಯಾಮೆರಾ ಸೇರಿದಂತೆ ಈ ವಿಭಾಗದ ಮೊದಲ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ.

ಹೊಸ ಕಾರು ಪರ್ಲ್ ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಗ್ರಾಂಡ್ಯೂರ್ ಗ್ರೇ, ಸೆಲೆಸ್ಟಿಯಲ್ ಬ್ಲೂ, ಓಪ್ಯುಲೆಂಟ್ ರೆಡ್ ಮತ್ತು ಲಕ್ಸ್ ಬೀಜ್ ಎನ್ನುವ ಆರು ಬಣ್ಣಗಳ ಆಯ್ಕೆ ಹೊಂದಿದ್ದು, ಮಾರುತಿ ಸುಜುಕಿ ಕಂಪನಿಯು ಈ ಬಾರಿ ಹೊಸ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಹೆಚ್ಚಿನ ಸುರಕ್ಷತೆಗೆ ಒತ್ತು ನೀಡಿರುವ ಮಹತ್ವದ ಬದಲಾಣೆಯಾಗಿದೆ.


Click it and Unblock the Notifications