ರಿಕಾಲ್ ಆಗುತ್ತಿದೆ ದೋಷಪೂರಿತ 19 ಸಾವಿರಕ್ಕೂ ಹೆಚ್ಚು ಮಾರುತಿ ಸುಜುಕಿ ಇಕೋ
ದೇಶದ ಅತಿ ದೊಡ್ಡ ವಾಹನ ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಇಕೋ ಮಾದರಿಯಲ್ಲಿ ಕೆಲವು ದೋಷ ಕಂಡು ಬಂದ ಹಿನ್ನಲೆಯಲ್ಲಿ ಅವುಗಳನ್ನು ಹಿಂಪಡೆಯುವುದಾಗಿ ಘೋಷಿಸಿದೆ. ಮಾರುತಿ ಸುಜುಕಿ ಸರಿಸುಮಾರು 19,731 ಇಕೋ ವಾಹನಗಳನ್ನು ಹಿಂಪಡೆಯುತ್ತದೆ.

2021ರ ಜುಲೈ ತಿಂಗಳಿನಿಂದ 2021ರ ಅಕ್ಟೋಬರ್ 5ರ ನಡುವಿನ ಅವಧಿಯಲ್ಲಿ ತಯಾರಿಸಲಾದ ಇಕೋ ವಾಹನಗಳಲ್ಲಿ ದೋಷ ಕಂಡು ಬಂದಿದೆ. ಪ್ರಾಥಮಿಕ ಸಮಸ್ಯೆ ತಪ್ಪು ರಿಮ್ ಗಾತ್ರಕ್ಕೆ ಕಾರಣವಾಗಿದೆ. ನಿಯಮಿತ ತಪಾಸಣೆಯ ವೇಳೆ ಈ ದೋಷ ಪತ್ತೆಯಾಗಿದೆ. ಈ ಅವಧಿಯಲ್ಲಿ ತಯಾರಿಸಲಾದ ಎಲ್ಲಾ ಇಕೋ ವಾಹನಗಳಲ್ಲಿ ಸಮಸ್ಯೆಯನ್ನು ಹೊಂದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಆದರೆ ತಪ್ಪಾದ ವ್ಹೀಲ್ ರಿಮ್ ಗಾತ್ರವನ್ನು ಹೊಂದಿರುವುದನ್ನು ಕಂಡುಹಿಡಿಯಲು ವಾಹನಗಳನ್ನು ಪರಿಶೀಲಿಸಬೇಕಾಗಿದೆ.

ದೋಷಪೂರಿತ ವಾಹನಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಸಮಸ್ಯೆ ಇದ್ದರೆ, ಸರಿಪಡಿಸಲಾಗುತ್ತದೆ. ದೋಷಪೂರಿತ ಇಕೋ ವಾಹನದ ಮಾಲೀಕರನ್ನು ಪ್ರತ್ಯೇಕವಾಗಿ ಸಂಪರ್ಕಿಸಲಾಗುತ್ತದೆ ಮತ್ತು ಅವರ ವಾಹನವನ್ನು ತಪಾಸಣೆಗೆ ತೆಗೆದುಕೊಳ್ಳಲು ವಿನಂತಿಸಲಾಗುತ್ತದೆ. ಸಮಸ್ಯೆ ಇದ್ದಲ್ಲಿ ಅದನ್ನು ಸರಿಪಡಿಸಲಾಗುವುದು. ಇಕೋ ಮಾಲೀಕರು ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಮತ್ತು "IMP ಗ್ರಾಹಕ ಮಾಹಿತಿ" ವಿಭಾಗವನ್ನು ಪ್ರವೇಶಿಸಬಹುದು.

ಚಾಸಿಸ್ ಸಂಖ್ಯೆಯನ್ನು ನಮೂದಿಸುವ ಮೂಲಕ ಅವರು ತಮ್ಮ ವಾಹನವನ್ನು ಹಿಂಪಡೆಯಲು ಒಳಪಟ್ಟಿದೆಯೇ ಎಂದು ಪರಿಶೀಲಿಸಬಹುದು. ದೋಷ ಪೂರಿತ ವಾಹನಗಳ ಮಾಲೀಕರನ್ನು ಮಾರುತಿ ಸುಜುಕಿ ಅಧಿಕೃತ ಡೀಲರುಗಳು ಸರಿಯಾದ ಸಮಯದಲ್ಲಿ ಸಂಪರ್ಕಿಸುವ ಸಾಧ್ಯತೆಗಳು ಕೂಡ ಇದೆ.

ಮಾರುತಿ ಸುಜುಕಿ ಇಕೋ ಮಾದರಿಯ ಬಗ್ಗೆ ಹೇಳುವುದಾದರೆ, 2020ರ ಸೆಪ್ಟೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ ಕಂಪನಿಯ ಇಕೋ ಮಾದರಿಯು ಮಾರಾಟದಲ್ಲಿ ಹೊಸ ಮೈಲುಗಲ್ಲು ಸಾಧಿಸಿತು. ಮಾರುತಿ ಸುಜುಕಿ ಕಂಪನಿಯು ಕಳೆದ 10 ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಇಕೋ ಮಾದರಿಯ 7 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಮಾರುತಿ ಸುಜುಕಿ ಕಂಪನಿಯು ಇಕೋ ವ್ಯಾನ್ ಅನ್ನು ಭಾರತದಲ್ಲಿ 2010ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿದ್ದರು. ಮಾರುತಿ ಸುಜುಕಿ ಕಂಪನಿಯು ಕೇವಲ ಎರಡು ವರ್ಷಗಳಲ್ಲಿ ಇಕೋದ 1 ಲಕ್ಷ ಯೂನಿಟ್‌ಗಳನ್ನು ಮಾರಾಟ ಮಾಡಿದ್ದರು. 2014ರಲ್ಲಿ ಮಾರುತಿ ಮತ್ತೆ 1 ಲಕ್ಷ ಯುನಿಟ್ ಇಕೋವನ್ನು ಮಾರಾಟ ಮಾಡಲಾಗಿತ್ತು.

ಇನ್ನು ಬೇಡಿಕೆ ಹೆಚ್ಚಾದಾಗ ಬೇಡಿಕೆಗೆ ತಕ್ಕಂತೆ ಪೂರೈಸಲು ಇಕೋ ಮಾದರಿಯ ಕಾರ್ಗೋ ಎಂಬ ಹೊಸ ರೂಪಾಂತರವನ್ನು ಪರಿಚಯಿಸಿದ್ದರು. ನಂತರ ಮೂರು ವರ್ಷಗಳಲ್ಲಿ ಸತತವಾಗಿ 1 ಲಕ್ಷ ಯೂನಿಟ್ ಇಕೋವನ್ನು ಮಾರಾಟವನ್ನು ಮಾಡಲಾಗಿತ್ತು.

2018ರ ವೇಳೆಗೆ ಮಾರುತಿ ಸುಜುಕಿ ಕಂಪನಿಯು ಒಟ್ಟು 5 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದರು. ಇನ್ನು ಮಾರುತಿ ಸುಜುಕಿ ಕಂಪನಿಯು ತನ್ನ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಒಂದಾದ ಇಕೋ ವ್ಯಾನ್ ಅನ್ನು ಸಿಎನ್‌ಜಿ ಆವೃತ್ತಿಯಲ್ಲಿ ಈ ವರ್ಷದ ಮಾರ್ಚ್ ತಿಂಗಳಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಈ ಮಾರುತಿ ಸುಜುಕಿ ಇಕೋ ಮಾದರಿಯಲ್ಲಿ 5 ರಿಂದ 7 ಸೀಟುಗಳನ್ನು ಹೊಂದಿದೆ. ಈ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 73 ಬಿಹೆಚ್‌ಪಿ ಮತ್ತು 101 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನಲ್ಲಿ 5 ಸ್ಪೀಡಿನ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಜೋಡಿಸಲಾಗಿದೆ.

ಮಾರುತಿ ಸುಜುಕಿ ಇಕೋ ಸಿಎನ್‌ಜಿ ಮಾದರಿಯು ಪ್ರತಿ ಲೀಟರ್‌ಗೆ 21.8 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇಕೋ ಮಾದರಿಯ ಒಟ್ಟು ಮಾರಾಟದಲ್ಲಿ ಶೇ.17 ರಷ್ಟು ಸಿಎನ್‌ಜಿ ರೂಪಾಂತರ ಕೊಡುಗೆಯನ್ನು ನೀಡಿದೆ. ಮಾರುತಿ ಸುಜುಕಿ ಇಕೋ ಕಾರು ಭಾರತದ ಮಧ್ಯಮ ವರ್ಗದವರನ್ನು ಗುರಿಯಾಗಿಸಿಕೊಂಡು ಬಿಡುಗಡೆಗೊಳಿಸಿದೆ.

ಮಾರುತಿ ಸುಜುಕಿ ಇಂಡಿಯಾ 2022ರ ಮಾರ್ಚ್ ತಿಂಗಳ ಮಾರಾಟದ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿತು. ವರದಿ ಪ್ರಕಾರ, ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು 170,395 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. 2021ರ ಮಾರ್ಚ್ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು 167,014 ವಾಹನಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಇಂಡೋ-ಜಪಾನೀಸ್ ಕಾರು ತಯಾರಕರು ವರ್ಷದಿಂದ ವರ್ಷಕ್ಕೆ ಕೇವಲ 2 ಪ್ರತಿಶತದಷ್ಟು ಬೆಳವಣಿಗೆಯನ್ನು ಕಂಡಿದ್ದಾರೆ. ಇನ್ನು 2022ರ ಫೆಬ್ರವರಿ ತಿಂಗಳಿನಲ್ಲಿ 164,056 ಯುನಿಟ್‌ಗಳನ್ನು ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಮಾರುತಿ ಸುಜುಕಿ ತಿಂಗಳಿನಿಂದ ತಿಂಗಳಿಗೆ ಶೇಕಡಾ 3.8 ರಷ್ಟು ಬೆಳವಣಿಗೆಯನ್ನು ಕಂಡಿದೆ

2021-22 ರ ಸಂಪೂರ್ಣ ಹಣಕಾಸು ವರ್ಷಕ್ಕೆ ಕಂಪನಿಯ ಸಂಚಿತ ಮಾರಾಟವು 16,52,653 ಯುನಿಟ್‌ಗಳಷ್ಟಿದೆ, ಇದು 2020-21ರ ಆರ್ಥಿಕ ವರ್ಷಗಿಂತ ಶೇಕಡಾ 13.4 ಬೆಳವಣಿಗೆಯಾಗಿದೆ, ಈ ಸಮಯದಲ್ಲಿ ಕಂಪನಿಯು 14,57,861 ವಾಹನಗಳನ್ನು ಮಾರಾಟ ಮಾಡಲಾಗಿತ್ತು. 2021-22ರ ಆರ್ಧಿಕ ವರ್ಷದಲ್ಲಿ ಎಲೆಕ್ಟ್ರಾನಿಕ್ ಯುನಿಟ್ ಗಳ ಕೊರತೆಯು ವಾಹನ ಉತ್ಪಾದನೆಯ ಮೇಲೆ ಸ್ವಲ್ಪ ಪರಿಣಾಮ ಬೀರಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಹೇಳಿದೆ. ಕಂಪನಿಯು ಪರಿಣಾಮವನ್ನು ಕಡಿಮೆ ಮಾಡಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿತು.

ಜನಪ್ರಿಯ ಒಮ್ನಿ ವ್ಯಾನ್ ಸ್ಥಗಿತಗೊಂಡ ಬಳಿಕ ಮಾರುತಿ ಸುಜುಕಿ ಕಂಪನಿಯ ಇಕೋ ಭಾರತೀಯ ಮಾರುಕಟ್ಟೆಯಲ್ಲಿರುವ ಏಕೈಕ ವ್ಯಾನ್ ಆಗಿದೆ. ಮಾರುತಿ ಸುಜುಕಿ ಕಂಪನಿಯ ಕಾರುಗಳ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ. ಇಕೋ ಭಾರತದಲ್ಲಿ ಮಾರಾಟವಾಗುವ ವಾಹನಗಳ ಟಾಪ್-10 ಪಟ್ಟಿಯಲ್ಲಿ ಸ್ಥಿರವಾಗಿ ಸ್ಥಾನ ಪಡೆದುಕೊಂಡಿದೆ.


Click it and Unblock the Notifications