ಭಾರತದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ವಾಹನಗಳು.. ಕಳೆದ ತಿಂಗಳು ದಾಖಲೆ ಸೃಷ್ಟಿ!

ದೇಶದ ಮಧ್ಯಮ ವರ್ಗದವರ ಜೀವನದೊಂದಿಗೆ ಬೆರೆತುಕೊಂಡಿರುವ ಮಾರುತಿ ಸುಜುಕಿ ಕಂಪನಿಯ ಕಾರುಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿರುವ ಮಾರುತಿ ಸುಜುಕಿ, ನವೆಂಬರ್ 2022ರ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಒಟ್ಟು 159,044 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಆ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ.

ಕಂಪನಿಯು ವರ್ಷದಿಂದ ವರ್ಷಕ್ಕೆ ತನ್ನ ಮಾರುಕಟ್ಟೆಯಲ್ಲಿ ಮಾರಾಟ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಲೇ ಬರುತ್ತಿದೆ. ಶೇಕಡ 14.26 ರಷ್ಟು (19,860 ಯುನಿಟ್‌ಗಳು) ಹೆಚ್ಚಾಗಿದೆ. 2021ರ ನವೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿಯು ಒಟ್ಟು 139,184 ವಾಹನಗಳನ್ನು ಮಾರಾಟ ಮಾಡಿತ್ತು. ಬಹುತೇಕ ವಾಹನಗಳಿಗೆ ಗ್ರಾಹಕರಿಂದ ಉತ್ತಮವಾಗಿ ಪ್ರತಿಕ್ರಿಯೆ ಇದ್ದು, ಚೆನ್ನಾಗಿಯೇ ಮಾರಾಟವಾಗುತ್ತಿವೆ. ಆದರೆ, ಕಂಪನಿಯ ರಫ್ತು ಮತ್ತು ವ್ಯಾನ್ (ಇಕೋ) ಮಾರಾಟವನ್ನು ಗಮನಿಸದಾಗ ಅದರಲ್ಲಿ ಸ್ವಲ್ಪ ಮಟ್ಟಿಗೆ ಕುಸಿತ ದಾಖಲಾಗಿದೆ ಎಂದು ಹೇಳಬಹುದು.

ಪ್ರಯಾಣಿಕ ವಾಹನ ವಿಭಾಗದಲ್ಲಿ, ಮಾರುತಿ ಸುಜುಕಿ ಕಳೆದ ತಿಂಗಳು 132,395 ಕಾರುಗಳು, ವ್ಯಾನ್‌ಗಳು ಮತ್ತು ಎಸ್‌ಯುವಿಗಳನ್ನು ಮಾರಾಟ ಮಾಡುವ ಮೂಲಕ ಭಾರತದ ಕಾರು ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ ಎಂದು ಹೇಳಬಹುದು. ನವೆಂಬರ್ 2021ಕ್ಕೆ ಹೋಲಿಸಿದರೆ ದೇಶೀಯ ಕಾರು ಮಾರಾಟವು ವರ್ಷದಿಂದ ವರ್ಷಕ್ಕೆ ಶೇಕಡ 20.66 ರಷ್ಟು ಅಥವಾ 22,669 ಯುನಿಟ್‌ಗಳಷ್ಟು ಹೆಚ್ಚಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಮಾರುತಿ 1,09,726 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿತ್ತು.

ಆದಾಗ್ಯೂ, ಹಿಂದಿನ ತಿಂಗಳ ಮಾರಾಟಕ್ಕೆ ಹೋಲಿಸಿದರೆ, ಮಾರುತಿ ಸುಜುಕಿಯ ಮಾರಾಟವು ಅಷ್ಟೊಂದು ಉತ್ತಮವಾಗಿಲ್ಲ ಎಂದು ಹೇಳಬಹುದು. ದಸರಾ ದೀಪಾವಳಿ ಹಬ್ಬಗಳಿಂದ ಮಾರಾಟ ಪ್ರಮಾಣ ಉತ್ತಮವಾಗಿದ್ದರೂ ಅಕ್ಟೋಬರ್ 2022ಕ್ಕೆ ಹೋಲಿಸಿದರೆ ತಿಂಗಳಿಂದ-ತಿಂಗಳಿಗೆ ಮಾರಾಟವು ಶೇಕಡ 5.66 ಅಥವಾ 7,942 ಯುನಿಟ್‌ಗಳಷ್ಟು ಕಡಿಮೆಯಾಗಿದೆ. ಕಂಪನಿಯು ಒಟ್ಟು 1,40,337 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಅಲ್ಲದೆ, ಎಂಟ್ರಿ ಲೆವೆಲ್ ವಾಹನಗಳಾದ ಆಲ್ಟೊ ಮತ್ತು ಎಸ್-ಪ್ರೆಸ್ಸೋ ಹ್ಯಾಚ್‌ಬ್ಯಾಕ್‌ಗಳ ಮಾರಾಟವು ಶೇಕಡ 4.4 ಅಥವಾ 778 ಯುನಿಟ್‌ಗಳು ಏರಿದ್ದು, ವರ್ಷದಿಂದ ವರ್ಷಕ್ಕೆ 18,251 ಯುನಿಟ್‌ಗಳಿಗೆ ಹೆಚ್ಚಾಗಿದೆ.

ಮಾರುತಿಯ ಕಾಂಪ್ಯಾಕ್ಟ್ ಕಾರುಗಳ (ಸೆಲೆರಿಯೊ, ಸ್ವಿಫ್ಟ್, ವ್ಯಾಗನಾರ್, ಡಿಜೈರ್, ಟೂರ್ ಎಸ್, ಇಗ್ನಿಸ್, ಬಲೆನೊ) ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 27.82ರಷ್ಟು ಏರಿಕೆಯಾಗಿದ್ದು, 72,844 ಯುನಿಟ್‌ಗಳಿಗೆ ಹೆಚ್ಚಳವಾಗಿದೆ. ಸಿಯಾಜ್ ಸೆಡಾನ್‌ನ ಮಾರಾಟವು ವರ್ಷದಿಂದ ವರ್ಷಕ್ಕೆ ಶೇಕಡ 42.69 ಅಥವಾ 1,554 ಯುನಿಟ್‌ಗಳಿಗೆ ಏರಿಕೆಯಾಗಿದೆ. ಆದಾಗ್ಯೂ, ಮಾರುತಿಯ ಏಕೈಕ ವ್ಯಾನ್, Eecoನ ಮಾರಾಟವು ನವೆಂಬರ್ 2021ಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಸುಮಾರು ಶೇಕಡ 25 ಅಥವಾ 7,183 ಯುನಿಟ್‌ಗಳಿಗೆ ಇಳಿಕೆಯಾಗಿದೆ.

ಮುಂಬರುವ ದಿನಗಳಲ್ಲಿ ಹೊಸ Eeco ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಮೂಲಕ ಮಾರಾಟ ಪ್ರಮಾಣ ಏರಿಕೆಯಾಗುವ ನಿರೀಕ್ಷೆಯಿದೆ. ಮಾರುತಿ ಸುಜುಕಿಯ MPV (ಎರ್ಟಿಗಾ, XL6) ಮತ್ತು SUV (ಬ್ರೆಝಾ, S-ಕ್ರಾಸ್, ಗ್ರ್ಯಾಂಡ್ ವಿಟಾರಾ)ಗಳ ಕಾರ್ಯಕ್ಷಮತೆ ಗ್ರಾಹಕರಿಗೆ ತುಂಬಾ ಇಷ್ಟವಾಗಿದ್ದು, ಇದು ಕಾರು ತಯಾರಿಕ ಸಂಸ್ಥೆಗೆ ಖುಷಿಗೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಯುಟಿಲಿಟಿ ವೆಹಿಕಲ್ ವಿಭಾಗದಲ್ಲಿ ಮಾರಾಟ ದ್ವಿಗುಣಗೊಂಡಿದ್ದು, ಮಾರುತಿಯ ಯುಟಿಲಿಟಿ ವಾಹನಗಳ ಮಾರಾಟವು ಶೇಕಡ 32.5ರಷ್ಟು ಏರಿಕೆಯಾಗಿದ್ದು, ಕಳೆದ ತಿಂಗಳು 32,563 ಯುನಿಟ್‌ಗಳಿಗೆ ಹೆಚ್ಚಳವಾಗಿದೆ.

ಇತರ ಕಂಪನಿಯ ವಾಹನಗಳಿಗೆ (ಅವುಗಳೆಂದರೆ ಟೊಯೊಟಾ) ಹೋಲಿಸಿದರೆ ಮಾರುತಿ ಸಾಗಣೆ ವಾಹನಗಳ ಮಾರಾಟವು ವರ್ಷದಿಂದ ವರ್ಷಕ್ಕೆ ಸ್ವಲ್ಪಮಟ್ಟಿಗೆ ಕುಸಿತಕಂಡಿದೆ. ಶೇಕಡ 11 ರಷ್ಟು ಅಥವಾ 4,225 ಯುನಿಟ್‌ಗಳಿಗೆ ಇಳಿದಿದೆ. ಮಾರುತಿ ಸುಜುಕಿಯ ಏಕೈಕ ವಾಣಿಜ್ಯ ವಾಹನವಾದ ಸೂಪರ್ ಕ್ಯಾರಿಯ ಮಾರಾಟವು 2,660 ಯುನಿಟ್‌ ಅಥವಾ 19 ಪ್ರತಿಶತದಷ್ಟು ಕಡಿಮೆಯಾಗಿದೆ. ರಫ್ತು ಮಾಡುವ ವಾಹನಗಳ ಪ್ರಮಾಣವು ಇಳಿಕೆಯಾಗಿದ್ದು, ಕಳೆದ ತಿಂಗಳು 19,738 ಯುನಿಟ್‌ ಮಾತ್ರ ಇದ್ದು, ವರ್ಷದಿಂದ ವರ್ಷಕ್ಕೆ 7.7 ಪ್ರತಿಶತದಷ್ಟು ಇಳಿದಿದೆ.

ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾಗಿರುವ ಮಾರುತಿ ಸುಜುಕಿ, ನವೆಂಬರ್ 2022ರಲ್ಲಿ ಭಾರತೀಯ ಕಾರು ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ ಎಂದು ಹೇಳಿದರೆ ತಪ್ಪಾಗುವದಿಲ್ಲ. ಮುಂದಿನ ವರ್ಷದ ಆರಂಭದಲ್ಲಿಯೇ ತನ್ನ ಮಾರಾಟ ಪ್ರಮಾಣವನ್ನು ಭರ್ಜರಿಯಾಗಿ ಹೆಚ್ಚಿಸಿಕೊಳ್ಳಲು ಆಟೋ ಎಕ್ಸ್‌ಪೋಗಳಲ್ಲಿ ಇನ್ನಷ್ಟು ಹೊಸ ವೈಶಿಷ್ಟ್ಯಗಳೊಂದಿಗೆ ಕಾರುಗಳನ್ನು ಹೊರತರಲು ಕಂಪನಿಯು ಸಜ್ಜಾಗುತ್ತಿದ್ದು, ತನ್ನದೇ ಗ್ರಾಹಕರನ್ನು ಸೆಳೆಯುವ ಮೂಲಕ ಎಷ್ಟರಮಟ್ಟಿಗೆ ತನ್ನ ಪ್ರಾಬಲ್ಯವನ್ನು ಮುಂದುವರಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
Maruti suzuki vehicles are selling very well in india record creation last month
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X