ಬಿಡುಗಡೆಗೂ ಮುನ್ನ ಮಾರುತಿ ಸುಜುಕಿ ಹೊಸ ಎರ್ಟಿಗಾ ಎಂಜಿನ್ ಮಾಹಿತಿ ಬಹಿರಂಗ
ಮಾರುತಿ ಸುಜುಕಿ ಕಂಪನಿಯು ಇದೇ ತಿಂಗಳು 15ರಂದು ತನ್ನ ಜನಪ್ರಿಯ ಎಂಪಿವಿ ಮಾದರಿಯಾದ ಎರ್ಟಿಗಾ 2022ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಈ ಬಾರಿ ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಹೊಸ ಕಾರು ಬಿಡುಗಡೆಗೂ ಮುನ್ನ ಕಂಪನಿಯು ರೂ.11 ಸಾವಿರ ಮುಂಗಡದೊಂದಿಗೆ ಬುಕಿಂಗ್ ಪ್ರಕ್ರಿಯೆಗೂ ಸಹ ಚಾಲನೆ ನೀಡಿದ್ದು, 2022ರ ಆವೃತ್ತಿಯಲ್ಲಿ ಕಂಪನಿಯು ಎಂಜಿನ್ ಬದಲಾವಣೆ ಸೇರಿದಂತೆ ಹೆಚ್ಚುವರಿ ಸುರಕ್ಷಾ ಸೌಲಭ್ಯಗಳು ಮತ್ತು ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ನೀಡುವ ಸುಳಿವು ನೀಡಿದೆ.

2022ರ ಎರ್ಟಿಗಾ ಮಾದರಿಯಲ್ಲಿ ಪ್ರಮುಖವಾಗಿ ಎಂಜಿನ್ ವಿಭಾಗದಲ್ಲಿ ಬದಲಾವಣೆಯು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದ್ದು, ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಪ್ರಸ್ತುತ ಮಾರುಕಟ್ಟೆಯಲ್ಲಿನ 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಬದಲಾಗಿ 1.5 ಲೀಟರ್ ಕೆ15ಸಿ ಡ್ಯುಯಲ್‌ಜೆಟ್ ಪೆಟ್ರೋಲ್ ಮಾದರಿಯನ್ನು ಅಳವಡಿಸುತ್ತಿದೆ.

ಹೊಸ ಪೆಟ್ರೋಲ್ ಎಂಜಿನ್ ಮಾದರಿಯು ಹಳೆಯ ಮಾದರಿಗಿಂತಲೂ ಹೆಚ್ಚುವರಿಯಾಗಿ 10 ಬಿಎಚ್‌ಪಿ ಉತ್ಪಾದನೆಯೊಂದಿಗೆ ಇಂಧನದಲ್ಲೂ ಉತ್ತಮ ದಕ್ಷತೆ ಹೊಂದಿದ್ದು, ಹೊಸ ಎಂಜಿನ್ ಮಾದರಿಯು 113.4 ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ.

103.5 ಬಿಎಚ್‌ಪಿ ಉತ್ಪಾದಿ 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಮಾದರಿಗಿಂತಲೂ ಕೆ15ಸಿ ಡ್ಯುಯಲ್‌ಜೆಟ್ ಪೆಟ್ರೋಲ್ ಹೆಚ್ಚು ಶಕ್ತಿಶಾಲಿಯಾಗಿದ್ದು, ಹೊಸ ಎಂಜಿನ್ ಮಾದರಿಯನ್ನು ಕೇವಲ ಎರ್ಟಿಗಾ ಮಾದರಿಯಲ್ಲಿ ಅಲ್ಲದೆ ಮಾರ್ಟಿಗಾ ಮುಂದುವರಿದ ಆವೃತ್ತಿ ಎಕ್ಸ್ಎಲ್6 ಮಾದರಿಯು ಸಹ ಅಳವಡಿಸಲಾಗುತ್ತಿದೆ.

ಇದರ ಜೊತೆಗೆ ಹೊಸ ಕಾರಿನಲ್ಲಿ ಮಾರುತಿ ಸುಜಕಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಬಹುದಾಗಿದೆ. ಕಂಪನಿಯು ಈ ಹಿಂದಿನ 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಮಾದರಿಯನ್ನು ಹಳೆಯ ಮಾದರಿಯಲ್ಲಿ ತೆಗೆದುಹಾಕಿದ್ದು, ಇದಕ್ಕಾಗಿಯೇ ಹೊಸ ಮಾದರಿಯು ಉತ್ತಮ ಎಂಜಿನ್ ದಕ್ಷತೆಯನ್ನು ಖಾತ್ರಿಪಡಿಸಲಿದೆ ಎನ್ನಬಹುದು.

ಮಾರುತಿ ಸುಜುಕಿ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಸಿಎನ್‌ಜಿ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಬಿಎಸ್-6 ಜಾರಿ ನಂತರ ಕಂಪನಿಯು ಎಲ್ಲಾ ಕಾರು ಮಾದರಿಗಳಲ್ಲೂ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿದೆ.

ಸದ್ಯಕ್ಕೆ ಪೆಟ್ರೋಲ್, ಪೆಟ್ರೋಲ್ ಮಾದರಿಗಳೊಂದಿಗೆ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಮತ್ತು ಸಿಎನ್‌ಜಿ ಆಯ್ಕೆಗಳನ್ನು ನೀಡುತ್ತಿದ್ದು, ಬಿಡುಗಡೆಯಾಗಲಿರುವ ಎರ್ಟಿಗಾ ಹೊಸ ಮಾದರಿಯಲ್ಲೂ ಕಂಪನಿಯು ಪೆಟ್ರೋಲ್ ಮಾದರಿಯ ಜೊತೆ ಸಿಎನ್‌ಜಿ ಮಾದರಿಯನ್ನು ಬಿಡುಗಡೆ ಮಾಡಲಿದೆ.

ಎರ್ಟಿಗಾ ಕಾರಿನ ವಿಎಕ್ಸ್ಐ ಮತ್ತು ಜೆಎಕ್ಸ್ಐ ಮಾದರಿಗಳನ್ನು ಆಧರಿಸಿ ಎರ್ಟಿಗಾ ಸಿಎನ್‌ಜಿ ಖರೀದಿಗೆ ಲಭ್ಯವಿರಲಿದ್ದು, ಸಿಎನ್‌ಜಿ ಮಾದರಿಯು ಹೆಚ್ಚಿನ ಮಟ್ಟದ ಮೈಲೇಜ್ ಮೂಲಕ ವ್ಯಯಕ್ತಿಕ ಮತ್ತು ಕ್ಯಾಬ್ ಸೇವಾ ಮಾದರಿಗಳ ಆಯ್ಕೆಗೆ ಸಹಕಾರಿಯಾಗಿದೆ.

ಇನ್ನು 2022ರ ಎರ್ಟಿಗಾ ಮಾದರಿಯಲ್ಲಿ ಕಂಪನಿಯು ಹೊರ ಭಾಗದಲ್ಲಿ ಮತ್ತು ಒಳಭಾಗದ ತಾಂತ್ರಿಕ ಸೌಲಭ್ಯದಲ್ಲೂ ಕೆಲವು ಬದಲಾವಣೆಗಳನ್ನು ಮಾಡಬಹುದಾಗಿದ್ದು, ಹೊಸ ಕಾರಿನ ಒಳಭಾದಲ್ಲಿ ಈ ಬಾರಿ ಹೊಸ 7 ಇಂಚಿನ ಹೊಸ ಸ್ಮಾರ್ಟ್‌ಪ್ಲೇ ಪ್ರೊ ಟಚ್‌ಸ್ಕ್ರೀನ್ ಸೌಲಭ್ಯವನ್ನು ನೀಡಲಿದೆ.

ಹೊಸ ಕಾರಿನ ಚಾಲನೆಯನ್ನು ಮತ್ತಷ್ಟು ಸರಳವಾಗಿಸಲು ಕಂಪನಿಯು ಹೊಸ ಸುಜುಕಿ ಕನೆಕ್ಟ್ ಸರ್ಪೊಟ್ ಮಾಡುವ ಸ್ಮಾರ್ಟ್‌ಪ್ಲೇ ಪ್ರೊ ಟಚ್‌ಸ್ಕ್ರೀನ್ ನೀಡಲಾಗಿದ್ದು, ಹೊಸ ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.

ಈ ಮೂಲಕ ಎರ್ಟಿಗಾ ಮಾದರಿಯು ಇದುವರೆಗೆ ಭಾರತದಲ್ಲಿ ಸುಮಾರು 7.50 ಲಕ್ಷ ಗ್ರಾಹಕರ ಹೊಂದಿರುವ ಪ್ರಮುಖ ಎಂಪಿವಿ ಮಾದರಿಯಾಗಿ ಹೊರಹೊಮ್ಮಿದ್ದು, ಅದು ವಿನೂತನ ಶೈಲಿ, ಸ್ಥಳಾವಕಾಶ, ತಂತ್ರಜ್ಞಾನ, ಸುರಕ್ಷತೆ, ಸೌಕರ್ಯ ಮತ್ತು ಒಟ್ಟಿಗೆ ಪ್ರಯಾಣಿಸುವ ಅನುಕೂಲತೆಯನ್ನು ಮರು ವ್ಯಾಖ್ಯಾನಿಸುತ್ತದೆ.

ಮಾರುತಿ ಸುಜುಕಿ ಕಾರುಗಳ ಮಾರಾಟದಲ್ಲಿ ಸದ್ಯ ಉತ್ತಮ ಬೇಡಿಕೆ ಪಡೆದುಕೊಂಡಿರುವ ಎರ್ಟಿಗಾ ಮಾದರಿಯ ಪ್ರಮುಖ ಎರಡು ಮಾದರಿಯಲ್ಲಿ ಮಾರಾಟಗೊಳ್ಳುತ್ತಿದ್ದು, ಸಾಮಾನ್ಯ ಎರ್ಟಿಗಾ ಮಾದರಿಯು ಮಾರುತಿ ಸುಜುಕಿ ಅರೆನಾ ಮಾರಾಟ ಮಳಿಗೆಯಲ್ಲಿ ಪ್ರೀಮಿಯಂ ಆವತ್ತಿಯಾದ ಎಕ್ಸ್‌ಎಲ್ 6 ಮಾದರಿಯು ಮಾರುತಿ ನೆಕ್ಸಾ ಮಾರಾಟ ಮಳಿಗೆಗಳಲ್ಲಿ ಮಾರಾಟಗೊಳ್ಳುತ್ತಿದೆ.

ಎರ್ಟಿಗಾ ಮಾದರಿಯಲ್ಲಿ ತುಸು ಹೆಚ್ಚುವರಿ ಪ್ರೀಮಿಯಂ ವೈಶಿಷ್ಟ್ಯತೆಗಳನ್ನು ಹೊಂದಿರುವ ಎಕ್ಸ್‌ಎಲ್6 ಮಾದದರಿಯು ಕೂಡಾ ಉತ್ತಮ ಬೇಡಿಕೆ ಹೊಂದಿದ್ದು, ಇದೀಗ ಎರಡು ಮಾದರಿಗಳು ಸಹ 2022ರ ಮಾದರಿಯೊಂದಿಗೆ ಹಲವು ಹೊಸ ಫೀಚರ್ಸ್ ನೀಡುತ್ತಿದೆ.

ಮಾರುತಿ ಸುಜುಕಿ ಕಂಪನಿಯು 2022ರ ಪ್ರಮುಖ ಕಾರು ಮಾದರಿಗಳಲ್ಲಿ ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್‌ಗಳನ್ನು ನೀಡುತ್ತಿದ್ದು, ಎರ್ಟಿಗಾ ಮಾದರಿಯ ಸಹ ಹೈ ಎಂಡ್ ಮಾದರಿಯಲ್ಲಿ 6 ಏರ್‌ಬ್ಯಾಗ್ ಮತ್ತು ಆಲ್‌ವ್ಹೀಲ್ ಡಿಸ್ಕ್ ಬ್ರೇಕ್ ಸೇರಿದಂತೆ ಇನ್ನು ಕೆಲವು ಪ್ರಮುಖ ಸೇಫ್ಟಿ ಫೀಚರ್ಸ್ ಹೊಂದಲಿದೆ.

ಹಾಗಾಯೇ ಹೊಸ ಕಾರಿನ ಒಳಭಾಗದಲ್ಲೂ ಪ್ರಮುಖ ಬದಲಾವಣೆಗಳನ್ನು ಪರಿಚಯಿಸುವ ಸುಳಿವು ನೀಡಿರುವ ಮಾರುತಿ ಸುಜುಕಿ ಕಂಪನಿಯು ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಸೇರಿದಂತೆ ಆಂಬಿಯೆಂಟ್ ಲೈಟಿಂಗ್ ಆಯ್ಕೆಯು ಕಾರು ಪ್ರಯಾಣವನ್ನು ಮತ್ತಷ್ಟು ಸುಖಕರವಾಗಿಸಲಿದೆ.


Click it and Unblock the Notifications