ಹೊಸ ಬದಲಾವಣೆಗಳನ್ನು ಹೊಂದಿರುವ 2022ರ ಮಾರುತಿ ಸುಜುಕಿ ವ್ಯಾಗನ್‌ಆರ್ ಬಿಡುಗಡೆ
ಮಾರುತಿ ಸುಜುಕಿ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳನ್ನು ವಿನೂತನ ಫೀಚರ್ಸ್‌ಗಳೊಂದಿಗೆ ಉನ್ನತೀಕರಿಸುತ್ತಿದ್ದು, ಕಂಪನಿಯು ಇದೀಗ ವ್ಯಾಗನ್ಆರ್ 2022ರ ಆವೃತ್ತಿಯನ್ನು ವಿನೂತನ ಫೀಚರ್ಸ್‌ಗಳೊಂದಿಗೆ ಬಿಡುಗಡೆ ಮಾಡಿದೆ.

ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಕಂಪನಿಯು 2022ರ ಮಾದರಿಗಳನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆ ಹಲವಾರು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆ ಮಾಡುತ್ತಿದ್ದು, ಹೊಸ ಬಲೆನೊ ಹ್ಯಾಚ್‌ಬ್ಯಾಕ್ ಬಿಡುಗಡೆಯ ಬೆನ್ನಲ್ಲೇ ಇದೀಗ ವ್ಯಾಗನ್‌ಆರ್ ಹ್ಯಾಚ್‌ಬ್ಯಾಕ್ ಮಾದರಿಗಳನ್ನು ಉನ್ನತೀಕರಿಸಿ ಬಿಡುಗಡೆಗೊಳಿಸಿದೆ.
ಹೊಸ ವ್ಯಾಗನ್ಆರ್ ಕಾರು ಮಾದರಿಯು ಎಲ್ಎಕ್ಸ್ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ ಪ್ಲಸ್ ಎನ್ನುವ ನಾಲ್ಕು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 5.40 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.10 ಲಕ್ಷ ಬೆಲೆ ಹೊಂದಿದೆ.

ಮಾರುತಿ ಸುಜುಕಿ ಕಂಪನಿಯು ಹೊಸ ಕಾರು ಮಾದರಿಯಲ್ಲಿ ಈ ಬಾರಿ ಸಿಎನ್‌ಜಿ ಆವೃತ್ತಿಗಳ ಆಯ್ಕೆ ಹೆಚ್ಚಿಸಿದ್ದು, ವ್ಯಾಗನ್ಆರ್ ಮಾದರಿಯಲ್ಲಿ 1.0 ಲೀಟರ್ ಮತ್ತು 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಸಿಎನ್‌ಜಿ ಮಾದರಿಯು ಖರೀದಿಗೆ ಲಭ್ಯವಿವೆ.
1.0 ಲೀಟರ್ ಎಲ್ಎಕ್ಸ್ಐ ಮತ್ತು ವಿಎಕ್ಸ್ಐ ಮಾದರಿಗಳಲ್ಲಿ ಸಿಎನ್‌ಜಿ ಮಾದರಿಯು ಖರೀದಿಗೆ ಲಭ್ಯವಿದ್ದು, ವಾಣಿಜ್ಯ ಬಳಕೆದಾರರ ಬೇಡಿಕೆ ಅನುಸಾರವಾಗಿ ಸಿಎನ್‌ಜಿ ಮಾದರಿಯಲ್ಲಿ ವಿಶೇಷವಾಗಿ ಎಲ್ಎಕ್ಸ್ಐ ಸಿಎನ್‌ಜಿ ಟೂರ್ ಹೆಚ್3 ಎನ್ನುವ ವೆರಿಯೆಂಟ್ ಅಭಿವೃದ್ದಿಪಡಿಸಿದೆ.

1.2 ಲೀಟರ್ ಪೆಟ್ರೋಲ್ ಮಾದರಿಯಲ್ಲಿ ಕಂಪನಿಯು ಈ ಬಾರಿಗೆ ಹೊಸದಾಗಿ ಜೆಡ್ಎಕ್ಸ್ಐ ಮಾದರಿಯನ್ನು ಪರಿಚಯಿಸಿದ್ದು, ಈ ಹಿಂದಿನ ವಿಎಕ್ಸ್ಐ ಮಾದರಿಯನ್ನು ಸ್ಥಗಿತಗೊಳಿಸಿ ಹೊಸ ಮಾದರಿಯಲ್ಲಿ ಡ್ಯುಯಲ್ ಟೋನ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ಇದರೊಂದಿಗೆ ಹೊಸ ಕಾರಿನಲ್ಲಿ ಈ ಹಿಂದಿನ ಮಾದರಿಯಲ್ಲಿವಂತೆಯೇ ಪ್ರಮುಖ ವಿನ್ಯಾಸಗಳೊಂದಿಗೆ ಗಲ್ಯಾಂಟ್ ರೆಡ್ ಮತ್ತು ಬ್ಲ್ಯಾಕ್ ರೂಫ್, ಮ್ಯಾಗ್ಮಾ ಗ್ರೇ ಮತ್ತು ಬ್ಲ್ಯಾಕ್ ರೂಫ್ ನೀಡಲಾಗಿದ್ದು, ಡ್ಯುಯಲ್ ಟೋನ್ ಹೊಂದಿರುವ ಜೆಡ್ಎಕ್ಸ್ಐ ಪ್ಲಸ್ ಮಾದರಿಯ ಸ್ಟ್ಯಾಂಡರ್ಡ್ ಮಾದರಿಗಿಂತಲೂ ರೂ. 12 ಸಾವಿರದಷ್ಟು ದುಬಾರಿಯಾಗಿರಲಿದೆ.

ಇದರೊಂದಿಗೆ ಹೊಸ ಕಾರಿನಲ್ಲಿ ಪ್ರಮುಖ ಬದಲಾವಣೆಯೆಂದರೆ ಕಂಪನಿಯು ಮುಂಬರುವ ಏಪ್ರಿಲ್‌ನಿಂದ ಜಾರಿಗೆ ಬರಲಿರುವ ಹೊಸ ಎಮಿಷನ್ ನಿಯಮ ಅನುಸಾರವಾಗಿ ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಅಳವಡಿಸಿಕೊಂಡಿದ್ದು, ಹೊಸ ಎಮಿಷನ್ ಮಾನದಂಡ ಪರಿಣಾಮ ಮಾಲಿನ್ಯ ಹೊರಸೂಸುವಿಕೆ ಪ್ರಮಾಣವು ಹೊಸ ಕಾರುಗಳಲ್ಲಿ ಗಣನೀಯ ಇಳಿಕೆಯಾಗಲಿದೆ.

ಹೊಸ ಎಮಿಷನ್ ಮಾನದಂಡವನ್ನು ಈಗಾಗಲೇ ಬಹುತೇಕ ಕಾರು ಕಂಪನಿಗಳು ಅಳವಡಿಸಿಕೊಂಡಿದ್ದು, 2022ರ ಮಾದರಿಗಳು ಬಹುತೇಕ ಹೊಸ ಎಮಿಷನ್ ಮಾನದಂಡದೊಂದಿಗೆ ಉನ್ನತೀಕರಣಗೊಂಡಿವೆ.
ಮಾರುತಿ ಸುಜುಕಿಯು ಸಹ ಹೊಸ ಮಾದರಿಗಳಲ್ಲಿ ನವೀಕೃತ ಮಾಲಿನ್ಯ ನಿಯಂತ್ರಕ ಮಾನದಂಡಗಳನ್ನು ಅಳವಡಿಸಿಕೊಂಡಿದ್ದು, ವ್ಯಾಗನ್ಆರ್ ಮಾದರಿಯು 1.0-ಲೀಟರ್ ಮತ್ತು 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ.

ಆರಂಭಿಕ ಮಾದರಿಗಳಲ್ಲಿ 1.0 ಲೀಟರ್ ಮತ್ತು ಟಾಪ್ ಎಂಡ್ ಮಾದರಿಗಳಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಖರೀದಿಗೆ ಲಭ್ಯವಿದ್ದು, ಹೊಸ ಕಾರು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿವೆ.
ಕಂಪನಿಯು ಹೊಸ ಕಾರಿನಲ್ಲಿ ಈ ಹಿಂದಿನ 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಮಾದರಿಯನ್ನು ಸ್ಥಗಿತಗೊಳಿಸಿದ್ದು, ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿರುವ 5-ಸ್ಪೀಡ್ ಎಎಂಟಿಗೆ ಬದಲಾಯಿಸಿದೆ.

ಹೊಸ ಕಾರಿನಲ್ಲಿ 1.0 ಲೀಟರ್ ಪೆಟ್ರೋಲ್ ಮಾದರಿಯ ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠ 24.35 ಕಿ.ಮೀ ಮೈಲೇಜ್ ನೀಡಿದ್ದಲ್ಲಿ ಆಟೋಮ್ಯಾಟಿಕ್ ಮಾದರಿಯು ಪ್ರತಿ ಲೀಟರ್‌ಗೆ 25.19 ಕಿ.ಮೀ ಮೈಲೇಜ್ ನೀಡಲಿದೆ.
ಹಾಗೆಯೇ 1.2 ಲೀಟರ್ ಪೆಟ್ರೋಲ್ ಕಾರಿನ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ 23.56 ಕಿ.ಮೀ ಮೈಲೇಜ್ ನೀಡಿದರೆ ಆಟೋಮ್ಯಾಟಿಕ್ ಮಾದರಿಯು ಪ್ರತಿ ಲೀಟರ್‌ಗೆ 24.43 ಕಿ.ಮೀ ಮೈಲೇಜ್ ನೀಡುತ್ತದೆ.

ವ್ಯಾಗನ್ಆರ್ ಸಿಎನ್‌ಜಿ ಮಾದರಿಯು ಸಹ ತನ್ನ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚು ಮೈಲೇಜ್ ಖಾತ್ರಿಪಡಿಸಿದ್ದು, ಎಲ್ಎಕ್ಸ್ಐ ಮಾದರಿಯು ಪ್ರತಿ ಕೆಜಿಗೆ ಸಿಎನ್‌ಜಿಗೆ 34.05 ಕಿ.ಮೀ ಮೈಲೇಜ್ ನೀಡಿದರೆ ಎಲ್ಎಕ್ಸ್ಐ ಟೂರ್ ಹೆಚ್3 ಮಾದರಿಯು ಪ್ರತಿ ಕೆಜಿ ಸಿಎನ್‌ಜಿಗೆ 34.73 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಇದರೊಂದಿಗೆ ಹೊಸ ಕಾರಿನಲ್ಲಿ ಮಾರುತಿ ಸುಜುಕಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿದ್ದು, ಸ್ಟ್ಯಾಂಡರ್ಡ್ ಆಗಿ ಪ್ರತಿ ವೆರಿಯೆಂಟ್‌ನಲ್ಲೂ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಎಂಜಿನ್ ಇಮ್‌ಮೊಬಿಲೈಸರ್, ಆಟೋಮ್ಯಾಟಿಕ್ ಹಿಲ್ ಸ್ಟಾರ್ಟ್ ಅಸಿಸ್ಟ್ ಸೇರಿದಂತೆ ಪ್ರಮುಖ ಸುರಕ್ಷಾ ಫೀಚರ್ಸ್ ಜೋಡಣೆ ಮಾಡಿದೆ.


Click it and Unblock the Notifications








