2022ರ ಪೋರ್ಷೆ 911 ಜಿಟಿ3 ಮತ್ತು ಜಿಟಿ3 ಟೂರಿಂಗ್ ಕಾರುಗಳು ಭಾರತದಲ್ಲಿ ಬಿಡುಗಡೆ
ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಜರ್ಮನ್ ಬ್ರಾಂಡ್ ಪೋರ್ಷೆ ತನ್ನ ಜನಪ್ರಿಯ ಐಷಾರಾಮಿ ಸ್ಪೋರ್ಟ್ ಕಾರು ಮಾದರಿಗಳಾದ 911 ಜಿಟಿ3 ಮತ್ತು ಟೂರಿಂಗ್ ಆವೃತ್ತಿಯಾದ ಜಿಟಿ3 ಟೂರಿಂಗ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಹೊಸ ನವೀಕರಣ ಪಡೆದುಕೊಂಡಿರುವ ಪೋರ್ಷೆ 911 ಜಿಟಿ3 ಮತ್ತು ಜಿಟಿ3 ಟೂರಿಂಗ್ ಕಾರುಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 2.50 ಕೋಟಿ ಬೆಲೆ ಹೊಂದಿದ್ದು, ಹೊಸ ಕಾರುಗಳು ಹಳೆಯ ಮಾದರಿಗಿಂತಲೂ ಹೆಚ್ಚು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಹೊಸ 911 ಜಿಟಿ3 ಮತ್ತು ಜಿಟಿ3 ಟೂರಿಂಗ್ ಕಾರು ಮಾದರಿಗಳ ಬಾಹ್ಯವಾಗಿ ವಿನ್ಯಾಸವು ದೂರದಿಂದ ಒಂದೇ ಮಾದರಿಯಲ್ಲಿ ಕಂಡರೂ ಕಂಪನಿಯು ಗ್ರಾಹಕರ ವಿಭಿನ್ನ ಬೇಡಿಕೆಗೆ ಅನುಗುಣವಾಗಿ ಹೊಸ ಕಾರುಗಳನ್ನು ಸಿದ್ದಪಡಿಸಿದೆ.

911 ಜಿಟಿ3 ಮಾದರಿಯು ಸಂಪೂರ್ಣವಾಗಿ ಟ್ರ್ಯಾಕ್ ಮಾದರಿಯಾಗಿ ಗುರುತಿಸಿಕೊಂಡಿದ್ದು, ಸ್ಟ್ಯಾಂಡರ್ಡ್ ಮಾದರಿಯಾಗಿರುವ ಜಿಟಿ3 ಟೂರಿಂಗ್ ಕಾರು ಮಾದರಿಯು ಟೂರಿಂಗ್ ಉದ್ದೇಶಗಳಿಗಾಗಿ ಮಾರಾಟಗೊಳ್ಳಲಿದೆ.

ಪೋರ್ಷೆ ಕಂಪನಿಯು ಹೊಸ 911 ಜಿಟಿ3 ಮತ್ತು ಜಿಟಿ3 ಟೂರಿಂಗ್ ಕಾರುಗಳಲ್ಲಿ 4.0-ಲೀಟರ್ ಫ್ಲ್ಯಾಟ್ ಸಿಕ್ಸ್ ಎಂಜಿನ್ ಜೋಡಣೆ ಮಾಡಲಾಗಿದ್ದು, 6-ಸ್ಪೀಡ್ ಮ್ಯಾನುವಲ್ ಅಥವಾ ಪೋರ್ಷೆ ನಿರ್ಮಾಣದದ ಹೊಸ ಪಿಡಿಕೆ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಆಯ್ಕೆ ಹೊಂದಿದೆ.

4.0-ಲೀಟರ್ ಫ್ಲ್ಯಾಟ್ ಸಿಕ್ಸ್ ಎಂಜಿನ್ ಆಯ್ಕೆಯೊಂದಿಗೆ ಹೊಸ ಕಾರುಗಳು 503 ಬಿಎಚ್‌ಪಿ ಮತ್ತು 470 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಅತ್ಯುತ್ತಮ ಏರೋಡೈನಾಮಿಕ್ ವಿನ್ಯಾಸದೊಂದಿಗೆ ಹೊಸ ಕಾರುಗಳು ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿವೆ.

ಹೊಸ ಕಾರುಗಳಲ್ಲಿ ಕಂಪನಿಯ ಪರ್ಫಾಮೆನ್ಸ್ ಸುಧಾರಿಸಲು ಡಬಲ್ ವಿಶ್‌ಬೊನ್ ಸಸ್ಷೆಷನ್ ಆಯ್ಕೆ ನೀಡಿರುವುದು ಕೂಡಾ ಕಾರಿನ ಆಕ್ಸೆಲ್ ಕಾರ್ಯಕ್ಷಮತೆಯು ಮತ್ತಷ್ಟು ಹೆಚ್ಚಳವಾಗಿದ್ದು, ಹೊಸ ಕಾರು 3.4 ಸಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗದಲ್ಲಿ ಚಲಿಸಬಲ್ಲವು.

ಡಬಲ್ ವಿಶ್‌ಬೊನ್ ಸಸ್ಷೆಷನ್ ಆಯ್ಕೆಯನ್ನು ಪ್ರಮುಖ ಐಷಾರಾಮಿ ಸ್ಪೋರ್ಟ್ ಮತ್ತು ಆಫ್ ರೋಡ್ ಕಾರುಗಳಲ್ಲಿ ಇದೀಗ ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗುತ್ತಿದ್ದು, ವಿಶ್‌ಬೊನ್ ಸಸ್ಷೆಷನ್ ಸೌಲಭ್ಯವು ಕಾರಿನಲ್ಲಿ ಕುಳಿತಾಗ ಆಫ್ ರೋಡ್‌ನಲ್ಲೂ ಹೆಚ್ಚು ಆಯಾಸವಿಲ್ಲದೆ ಪ್ರಯಾಣ ಒದಗಿಸುತ್ತದೆ.

ತಗ್ಗು ದಿಣ್ಣೆ ಹೊಂದಿರುವ ರಸ್ತೆಗಳಲ್ಲೂ ಯಾವುದೇ ಆಯಾಸವಿಲ್ಲದೆ ಪ್ರಯಾಣಿಸಲು ವಿಶ್‌ಬೊನ್ ಸಸ್ಷೆಷನ್ ಸೌಲಭ್ಯವು ಉಪಯೋಗಕಾರಿಯಾಗಿದ್ದು, ವಿಶ್‌ಬೊನ್ ಸಸ್ಷೆಷನ್ ಸೇರಿದಂತೆ ಪೋರ್ಷೆ ಕಂಪನಿಯು ಹೊಸ ಕಾರುಗಳಲ್ಲಿ ಇನ್ನು ಹಲವಾರು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಜೋಡಣೆ ಮಾಡಿದೆ.

911 ಜಿಟಿ3 ಮತ್ತು ಜಿಟಿ3 ಟೂರಿಂಗ್ ಕಾರುಗಳಲ್ಲಿ ಪೋರ್ಷೆ ಕಂಪನಿಯು ರೋಲ್ ಕೇಜ್, ಸಿಕ್ಸ್ ಪಾಯಿಂಟ್ ರೇಸಿಂಗ್ ಕಿಟ್ ಮತ್ತು ಸಕ್ರಿಯವಾಗಿರುವ ಅಗ್ನಿ ರಕ್ಷಣಾ ಸಾಧನವನ್ನು ಒಳಗೊಂಡಂತೆ ಆಯ್ಕೆ ರೂಪದಲ್ಲಿ ಕ್ಲಬ್‌ಸ್ಪೋರ್ಟ್ ಪ್ಯಾಕೇಜ್ ಹೊಂದಿದೆ.

ಕ್ಲಬ್‌ಸ್ಪೋರ್ಟ್ ಪ್ಯಾಕೇಜ್ ಅನ್ನು ಕಂಪನಿಯು ಆಸಕ್ತ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಮೊತ್ತವಿಲ್ಲದೆ ಜೋಡಣೆ ಮಾಡುವುದಾಗಿ ಕಂಪನಿಯು ಹೇಳಿಕೊಂಡಿದ್ದು, ಹೊಸ ಕಾರುಗಳ ವಿತರಣೆಯು ಕೆಲವೇ ತಿಂಗಳಿನಲ್ಲಿ ಅಧಿಕೃತವಾಗಿ ಆರಂಭವಾಗಲಿದೆ.


Click it and Unblock the Notifications








