ಸ್ಲಾವಿಯಾ ಸೆಡಾನ್ ಸೇಫ್ಟಿ ಫೀಚರ್ಸ್ ವಿಡಿಯೋ ಬಿಡುಗಡೆ ಮಾಡಿದ ಸ್ಕೋಡಾ
ಸ್ಕೋಡಾ ಆಟೋ ಇಂಡಿಯಾ ಕಂಪನಿಯು ಹೊಸ ಸ್ಲಾವಿಯಾ ಕಾರು ಬಿಡುಗಡೆಯ ಮೂಲಕ ಮಧ್ಯಮ ಕ್ರಮಾಂಕದ ಸೆಡಾನ್ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಜೊತೆಗೆ ಗರಿಷ್ಠ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಸ್ಲಾವಿಯಾ ಮಾದರಿಯಲ್ಲಿನ ಹೊಸ ಸೇಫ್ಟಿ ಫೀಚರ್ಸ್ ಕುರಿತಂತೆ ವಿಡಿಯೋ ಒಂದನ್ನು ಹಂಚಿಕೊಂಡಿರುವ ಸ್ಕೋಡಾ ಕಂಪನಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ. ಹೊಸ ಕಾರು ಬಿಡುಗಡೆಯೊಂದಿಗೆ ಈಗಾಗಲೇ ಕಂಪನಿಯು ವಿತರಣೆಯನ್ನು ಸಹ ಆರಂಭಿಸಿದ್ದು, ಹೊಸ ಕಾರು ಆಕರ್ಷಕ ಬೆಲೆಯಲ್ಲಿ ಮಾರುಕಟ್ಟೆ ಪ್ರವೇಶಿಸಿದೆ.

ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದ್ದು, ಸ್ಲಾವಿಯಾ ಹೈ ಎಂಡ್ ಮಾದರಿಯಲ್ಲಿ ಆರು ಏರ್‌ಬ್ಯಾಗ್‌ಗಳು ಇಎಸ್‌ಸಿ, ಇಡಿಎಸ್, ಟೈರ್ ಪ್ರೆಷರ್ ಮಾನಿಟರ್, ಹಿಲ್ ಹೋಲ್ಡ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆ್ಯಂಟಿ ಥೇಪ್ಟ್ ಅಲಾರಾಂ, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಮಲ್ಟಿ ಕೂಲಿಷನ್ ಬ್ರೇಕ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್, ರೈನ್ ಸೆನ್ಸಿಂಗ್ ವೈಪ್ಸ್ ಸೇರಿದಂತೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದೆ.

ಇದರೊಂದಿಗೆ ಹೊಸ ಕಾರಿನ ಒಳಾಂಗಣ ಸೌಲಭ್ಯವು ಆಕ್ಟಿವಿಯಾ ಸೆಡಾನ್ ಮಾದರಿಯನ್ನು ನೆನಪಿಸಲಿದ್ದು, 10 ಇಂಚಿನ ಇನ್ಪೋಟೈನ್‌ಮೆಂಟ್, 8 ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಮೈ ಸ್ಕೋಡಾ ಕಾರ್ ಕನೆಕ್ಟೆಡ್ ನೊಂದಿಗೆ ವೆಂಟಿಲೆಟೆಡ್ ಲೆದರ್ ಆಸನಗಳು, ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕೀ ಲೆಸ್ ಎಂಟ್ರಿ, ಆಟೋ ಡಿಮ್ಮಿಂಗ್ ಹೊಂದಿರುವ ರಿಯರ್ ವ್ಯೂ ಮಿರರ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಹೊಂದಿದೆ.
ಹೊಸ ಕಾರು ಟೊರ್ನಾಟ್ ರೆಡ್, ಕ್ರಿಸ್ಟಲ್ ಬ್ಲ್ಯೂ, ಕ್ಯಾಂಡಿ ವೈಟ್, ರೆಫ್ಲೆಕ್ಸರ್ ಸಿಲ್ವರ್ ಮತ್ತು ಕಾರ್ಬನ್ ಸ್ಟೀಲ್ ಬಣ್ಣದಲ್ಲಿ ಖರೀದಿಗೆ ಲಭ್ಯವಿರಲಿದ್ದು, ಸಿಗ್ನಿಚೆರ್ ಬಟರ್‌ಪ್ಲೈ ಗ್ರಿಲ್, ಸ್ಲಿಕ್ ಹೆಡ್‌ಲ್ಯಾಂಪ್, ಎಲ್ ಆಕಾರದಲ್ಲಿರುವ ಡೇ ಟೈಮ್ ರನ್ನಿಂಗ್ ಲ್ಯಾಂಪ್ ಸ್ಟ್ರೀಪ್, ಸ್ಪೋರ್ಟಿ ಫ್ರಂಟ್ ಬಂಪರ್, ಫಾಗ್ ಲ್ಯಾಂಪ್ ಹೌಸ್, ಎಲ್ಇಡಿ ಟೈಲ್ ಲೈಟ್ಸ್‌ನೊಂದಿಗೆ ಒಳಾಂಗಣವು ಕೂಡಾ ಸಾಕಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿದೆ.

ಸ್ಲಾವಿಯಾ ಸೆಡಾನ್ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿನ ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್, ಹ್ಯುಂಡೈ ವೆರ್ನಾ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಹೊಸ ಕಾರು 4,541 ಎಂಎಂ ಉದ್ದ, 1,752 ಅಗಲ ಮತ್ತು 1,487 ಎಂಎಂ ಎತ್ತರ ಮತ್ತು 2,651 ಎಂಎಂ ವ್ಹೀಲ್‌ಬೇಸ್‌ನೊಂದಿಗೆ 560 ಲೀಟರ್ ನಷ್ಟು ಬೂಟ್‌ಸ್ಪೆಸ್ ಹೊಂದಿದೆ.

ಸ್ಕೋಡಾ ಕಂಪನಿಯು ಸ್ಲಾವಿಯಾ ಸೆಡಾನ್ ಮಾದರಿಯನ್ನು 1.0-ಲೀಟರ್ ಟಿಎಸ್ಐ ಮತ್ತು 1.5 ಲೀಟರ್ ಟರ್ಬೊ ಪೆಟ್ರೋಲ್ ಮಾದರಿಗಳೊಂದಿಗೆ ಅಭಿವೃದ್ದಿಗೊಳಿಸಿದ್ದು, ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ ವಿವಿಧ ಎಂಜಿನ್ ಮಾದರಿಗಳನ್ನು ಆಯ್ಕೆ ಮಾಡಬಹುದಾಗಿದೆ.

ಸ್ಲಾವಿಯಾ ಕಾರು ಮಾದರಿಯು ಆಕ್ಟಿವಾ, ಆ್ಯಂಬಿಷನ್ ಮತ್ತು ಸ್ಟೈಲ್ ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಕಾರುಗಳಲ್ಲಿ 1.0 ಲೀಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 10.69 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 15.39 ಲಕ್ಷ ಬೆಲೆ ಹೊಂದಿದ್ದರೆ 1.5 ಲೀಟರ್ ಮಾದರಿಯು ಆರಂಭಿಕವಾಗಿ ರೂ. 16.19 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.79 ಲಕ್ಷ ಬೆಲೆ ಹೊಂದಿದೆ.

1.0 ಲೀಟರ್ ಮಾದರಿಯು ಆಕ್ಟಿವಾ, ಆ್ಯಂಬಿಷನ್ ಮತ್ತು ಸ್ಟೈಲ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದರೆ 1.5 ಲೀಟರ್ ಮಾದರಿಯು ಕೇವಲ ಸ್ಟೈಲ್ ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿದ್ದು, 1.5 ಲೀಟರ್ ಮಾದರಿಯು 1.0 ಲೀಟರ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಹೊಂದಿದೆ.

ಹೊಸ ಕಾರಿನಲ್ಲಿ 1.0 ಲೀಟರ್ ಮಾದರಿಯು ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದ್ದು, 115 ಬಿಹೆಚ್‍ಪಿ ಪವರ್ ಮತ್ತು 178 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

1.5 ಲೀಟರ್ ಮಾದರಿಯು ನಾಲ್ಕು ಸಿಲಿಂಡರ್ ಎಂಜಿನ್‌ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, 150 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಸ್ಲಾವಿಯಾ ಸೆಡಾನ್ ಆವೃತ್ತಿಯನ್ನು ಸ್ಕೋಡಾ ಕಂಪನಿಯು ಫೋಕ್ಸ್‌ವ್ಯಾಗನ್ ಕಂಪನಿ ಜೊತೆಗಿನ ಸಹಭಾಗಿತ್ವ ಯೋಜನೆ ಅಡಿ ಅಭಿವೃದ್ದಿಗೊಳಿಸಿದ್ದು, ಸ್ಕೋಡಾ ಕಂಪನಿಯು ಫೋಕ್ಸ್‌ವ್ಯಾಗನ್ ಕಂಪನಿಗಳು ಇಂಡಿಯಾ 2.0 ಪ್ರೊಜೆಕ್ಟ್ ಯೋಜನೆ ಅಡಿಯಲ್ಲಿ ಒಟ್ಟು ನಾಲ್ಕು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿವೆ.

ಹೊಸ ಯೋಜನೆಯಡಿ ಈಗಾಗಲೇ ಮೂರು ಕಾರು ಮಾದರಿಗಳು ಬಿಡುಗಡೆಗೊಂಡಿದ್ದು, ಸ್ಕೋಡಾ ಕಂಪನಿಯು ಕುಶಾಕ್ ಮತ್ತು ಸ್ಲಾವಿಯಾ ಮಾದರಿಯನ್ನು ಬಿಡುಗಡೆ ಮಾಡಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಸಹ ಹೊಸ ಯೋಜನೆಯ ಭಾಗವಾಗಿ ಟೈಗುನ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಸ್ಲಾವಿಯಾ ಮಾದರಿಯನ್ನು ಆಧರಿಸಿರುವ ವರ್ಟಸ್ ಮಾದರಿಯನ್ನು ಕೂಡಲೇ ಬಿಡುಗಡೆ ಮಾಡಲಿದೆ.

ಕುಶಾಕ್, ಟೈಗುನ್ ಮತ್ತು ಸ್ಲಾವಿಯಾ, ವಿರ್ಟಸ್ ಮಾದರಿಗಳು ಬ್ರಾಂಡ್ ವಿನ್ಯಾಸ ಹೊರತುಪಡಿಸಿ ಒಂದೇ ಮಾದರಿಯ ಎಂಜಿನ್ ಆಯ್ಕೆ ಹೊಂದಿದ್ದು, ಹೊಸ ಮಾದರಿಗಳೊಂದಿಗೆ ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಗಳು ಭಾರತದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿವೆ.


Click it and Unblock the Notifications








