ಟಾಟಾ ಪವರ್ ಜೊತೆಗೂಡಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದೆ ಅಪೊಲೊ ಟೈರ್ಸ್
ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡಲಾಗುತ್ತಿದೆ.

ಇಂಧನ ಚಾಲಿತ ವಾಹನಗಳ ಬಳಕೆಯನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆ ಸಾಕಷ್ಟು ಸಹಕಾರಿಯಾಗಿದ್ದು, ಇವಿ ವಾಹನಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣವು ಇದೀಗ ಹೊಸ ಸವಾಲಾಗಿದೆ.

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡುವ ಗ್ರಾಹಕರಿಗೆ ಮಾತ್ರವಲ್ಲ ಇವಿ ವಾಹನ ಉತ್ಪಾದಕ ಕಂಪನಿಗಳಿಗೂ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಇವಿ ವಾಹನಗಳು ಹೆಚ್ಚಿದಂತೆ ಅವುಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ.

ಸದ್ಯ ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಅನುಗುಣವಾಗಿ ವಿವಿಧ ನಗರಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಖಾಸಗಿ ಮತ್ತು ಸರ್ಕಾರಿ ಸಹಭಾಗೀತ್ವದಲ್ಲಿ ಚಾರ್ಜಿಂಗ್ ನಿಲ್ದಾಣಗಳು ಒಂದೊಂದಾಗಿ ಕಾರ್ಯನಿರ್ವಹಣೆ ಆರಂಭಿಸುತ್ತಿವೆ.

ಇತ್ತೀಚೆಗೆ ಇವಿ ವಾಹನಗಳಿಗೆ ಸೂಕ್ತವಾದ ಚಾರ್ಜಿಂಗ್ ಸೌಲಭ್ಯವನ್ನು ತೆರೆಯಲು ಉದ್ದೇಶದೊಂದಿಗೆ ಟಾಟಾ ಪವರ್ ಜೊತೆಗೂಡಿರುವ ಅಪೊಲೊ ಟೈರ್ಸ್ ಕಂಪನಿಯು ಫಾಸ್ಟ್ ಚಾರ್ಜಿಂಗ್ ತೆರೆಯುವ ಯೋಜನೆಗಾಗಿ ಹೊಸ ಪಾಲುದಾರಿಕೆಗೆ ಒಪ್ಪಿಗೆ ಸೂಚಿಸಿವೆ.

ಟಾಟಾ ಪವರ್ ಕಂಪನಿಯು ದೇಶಾದ್ಯಂತ ಈಗಾಗಲೇ ಪ್ರಮುಖ ಕಂಪನಿಗಳ ಜೊತೆಗೂಡಿ ಒಂದು ಸಾವಿರಕ್ಕೂ ಅಧಿಕ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆದಿದ್ದು, ಇದೀಗ ಅಪೊಲೊ ಟೈರ್ಸ್ ಜೊತೆಗೂಡಿ ಮತ್ತಷ್ಟು ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಿಗೆ ಚಾಲನೆ ನೀಡಲು ಸಿದ್ದವಾಗಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ ಗ್ರಾಹಕರ ಬೇಡಿಕೆ ಅನುಸಾರವಾಗಿ ಟಾಟಾ ಪವರ್ ಕಂಪನಿಯು ಅಪೊಲೊ ಟೈರ್ಸ್ ಮಾರಾಟ ಮಳಿಗೆಗಳ ಪಾರ್ಕಿಂಗ್ ಆವರಣಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ನಿರ್ಧರಿಸಲಾಗಿದ್ದು, ವಿದ್ಯುತ್ ಪೂರೈಕೆ ಲಭ್ಯತೆ ಆಧಾರದ ಮೇಲೆ ಡಿಸಿ 001, ಎಸಿ, ಟೈಪ್2, ಫಾಸ್ಟ್ ಡಿಸಿ ಚಾರ್ಜರ್‌ಗಳು 50kwh ಯಿಂದ 240kwh ಸಾಮರ್ಥ್ಯ ಹೊಂದಿರಲಿವೆ.

ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಅಪೊಲೊ ಟೈರ್ಸ್ ಕಂಪನಿಯ ಅಧಿಕೃತ 150ಕ್ಕೂ ಹೆಚ್ಚು ಮಾರಾಟ ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದು, ಮಾರಾಟ ಮಳಿಗೆಗಳಲ್ಲಿ ಸ್ಥಳದ ಲಭ್ಯತೆ ಆಧಾರದ ಮೇಲೆ ವಿವಿಧ ಮಾದರಿಯ ಚಾರ್ಜಿಂಗ್ ನಿಲ್ದಾಣಗಳನ್ನು ಟಾಟಾ ಪವರ್ ಜೋಡಣೆ ಮಾಡಲಿದೆ.

ಟಾಟಾ ಪವರ್ ಕಂಪನಿಯು ದೇಶಾದ್ಯಂತ ಪ್ರಮುಖ ಕಂಪನಿಗಳೊಂದಿಗೆ ಸುಮಾರು 1 ಸಾವಿರಕ್ಕೂ ಹೆಚ್ಚು ಚಾರ್ಜಿಂಗ್ ನಿಲ್ದಾಣಗಳನ್ನು ಆರಂಭಿಸಿದ್ದು, ಫಾಸ್ಟ್ ಚಾರ್ಜಿಂಗ್ ವಿಭಾಗದಲ್ಲಿ ಸದ್ಯ ಹೆಚ್ಚಿನ ಬೇಡಿಕೆ ಹೊಂದಿದೆ.

ವಿವಿಧ ಕಂಪನಿಗಳ ಜೊತೆಗೂಡಿ ಪಾಲುದಾರಿಕೆ ಪ್ರಕಟಿಸಿರುವ ಟಾಟಾ ಪವರ್ ಕಂಪನಿಯು ಮಾಲ್, ರೆಸ್ಟೊರೆಂಟ್, ಶಾಪಿಂಗ್ ಕಾಂಪ್ಲೆಕ್ಸ್, ಹೋಟೆಲ್‌ಗಳ ಆವರಣಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳನ್ನು ಜೋಡಣೆ ಮಾಡಿ ನಿರ್ವಹಣೆ ಮಾಡುತ್ತಿದೆ.

ಈ ಮೂಲಕ ಎಲೆಕ್ಟ್ರಿಕ್ ವಾಹನಗಳಿಗೆ ಕೊನೆಯ ಮೈಲಿ ತನಕವೂ ಚಾರ್ಜಿಂಗ್ ಸೌಲಭ್ಯ ದೊರೆಯುವಂತೆ ಯೋಜನೆ ರೂಪಿಸಲಾಗುತ್ತಿದ್ದು, ಪ್ರಮುಖ ಇವಿ ಕಂಪನಿಗಳು ಕೂಡಾ ಸ್ಥಳ ಲಭ್ಯತೆ ಮತ್ತು ವಿದ್ಯುತ್ ಪೂರೈಕೆ ಆಧರಿಸಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ನಿರ್ಮಾಣಕ್ಕೆ ಚಾಲನೆ ನೀಡಿವೆ.

ಅತಿ ಕಡಿಮೆ ಅವಧಿಯ ಹೆಚ್ಚಿನ ಪ್ರಮಾಣದ ಚಾರ್ಜ್ ಮಾಡಬಹುದಾದ ಫಾಸ್ಟ್ ಚಾರ್ಜಿಂಗ್ ಪರಿಚಯಿಸಲಾಗುತ್ತಿದ್ದು, ಇವಿ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ಒದಗಿಸಲು ಸಹಕಾರಿಯಾಗುವಂತೆ ಹೊಸ ಯೋಜನೆ ರೂಪಿಸಲಾಗಿದೆ.

ಇದರಿಂದ ಕೇವಲ ನಗರಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುವ ಇವಿ ವಾಹನಗಳ ಮೂಲಕ ದೂರದ ಪ್ರಯಾಣಕ್ಕೂ ಅನುಕೂಲಕರವಾಗಲಿದ್ದು, ಹೆಚ್ಚುತ್ತಿರುವ ಇಂಧನ ಬೆಲೆ ತಗ್ಗಿಸಲು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಮಟ್ಟದ ವಿನಾಯ್ತಿಗಳನ್ನು ನೀಡುತ್ತಿದೆ.


Click it and Unblock the Notifications