2023ಕ್ಕೆ ಬಹುನಿರೀಕ್ಷಿತ ಮಹೀಂದ್ರಾ ಥಾರ್ 5-ಡೋರ್ ಎಸ್‌ಯುವಿ ಬಿಡುಗಡೆ: ಬೆಲೆ ಎಷ್ಟಿರಬಹುದು?
ಭಾರತೀಯ ಕಾರು ತಯಾರಕ ಕಂಪನಿ ಮಹೀಂದ್ರಾ, 2023ರಲ್ಲಿ ತನ್ನ ಬಹುನಿರೀಕ್ಷಿತ ಆಫ್-ರೋಡ್ ಎಸ್‌ಯುವಿ 5-ಡೋರ್ ಥಾರ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದು ಶೀಘ್ರದಲ್ಲೇ ಲಾಂಚ್ ಆಗಲಿರುವ ಮಾರುತಿ ಸುಜುಕಿ ಜಿಮ್ನಿ ಎಸ್‌ಯುವಿಗೆ ಭಾರೀ ಪೈಪೋಟಿ ನೀಡಲಿದೆ. ಮುಂಬರುವ ಥಾರ್ ಬೆಲೆ, ವಿನ್ಯಾಸ ಹಾಗೂ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ.
ಮಹೀಂದ್ರಾ ಥಾರ್ 5-ಡೋರ್ - ನಿರೀಕ್ಷಿತ ಬೆಲೆ:
ಬ್ರ್ಯಾಂಡ್ ಅಧಿಕೃತವಾಗಿ ಈ ಎಸ್‌ಯುವಿ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಆದರೆ, ಮುಂದಿನ ವರ್ಷ ಇದು ಮಾರಾಟವಾಗಲಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿನ ಮಹೀಂದ್ರಾ ಥಾರ್ 5-ಡೋರ್ ಎಸ್‌ಯುವಿ ಬೆಲೆಯು ಪ್ರಸ್ತುತವಿರುವ ಥಾರ್ 3-ಡೋರ್ ಮಾಡೆಲ್‌ಗಿಂತ ರೂ.70,000 - ರೂ.80,000ರಷ್ಟು ಹೆಚ್ಚಿರುವ ಸಾಧ್ಯತೆಯಿದ್ದು, ಅದು ರೂ.13.59 ಲಕ್ಷದಿಂದ ರೂ.16.29 ಲಕ್ಷದವರೆಗೆ (ಎರಡೂ ಬೆಲೆಗಳು ಎಕ್ಸ್ ಶೋರೂಂ ಪ್ರಕಾರ) ಇರಲಿದೆ.

ವಿನ್ಯಾಸ & ಸುತ್ತಳತೆ:
ಮಹೀಂದ್ರಾ ಥಾರ್ 5-ಡೋರ್ ಎಸ್‌ಯುವಿ ದೇಶದ ರಸ್ತೆಗಳಲ್ಲಿ ಪರೀಕ್ಷಾರ್ಥ ನಡೆಸುವಾಗ ಹಲವು ಬಾರಿ ಕಂಡುಬಂದಿದೆ. ಈ ಎಸ್‌ಯುವಿ ಸ್ಕ್ವಾರಿಶ್ LED ಟೈಲ್-ಲ್ಯಾಂಪ್‌ಗಳು, ಟೈಲ್‌ಗೇಟ್-ಮೌಂಟೆಡ್ ಸ್ಪೇರ್ ವೀಲ್, ಹೈ-ಮೌಂಟೆಡ್ ಸ್ಟಾಪ್ ಲ್ಯಾಂಪ್ ಅನ್ನು ಹೊಂದಿರಬಹುದು. ಪ್ರಸ್ತುತ ಮಾದರಿಗೆ ಹೋಲಿಸಿದರೆ, ಮಹೀಂದ್ರಾ ಥಾರ್ 5-ಡೋರ್ ಎಸ್‌ಯುವಿ ಉದ್ದದಲ್ಲಿ 15% ದೊಡ್ಡದಾಗಿದ್ದು, 22% ಹೆಚ್ಚಿನ ಉದ್ದದ ವೀಲ್‌ಬೇಸ್ ಅನ್ನು ಪಡೆದಿರಲಿದೆ. 3-ಡೋರ್ ಮಹೀಂದ್ರಾ ಥಾರ್ 3,985 ಎಂಎಂ ಉದ್ದ ಹಾಗೂ 2,450 ಎಂಎಂ ವ್ಹೀಲ್‌ಬೇಸ್ ಹೊಂದಿದೆ.
ಎಂಜಿನ್ ಸಾಮರ್ಥ್ಯ:
ಮುಂಬರುವ ಬಹುನಿರೀಕ್ಷಿತ ಮಹೀಂದ್ರಾ ಥಾರ್ 5-ಡೋರ್ ಎಸ್‌ಯುವಿಯ ಎಂಜಿನ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, 3-ಡೋರ್ ಥಾರ್‌ನಂತೆ ಅದೇ 2.2-ಲೀಟರ್ mHawk ಡೀಸೆಲ್ ಎಂಜಿನ್ ಹಾಗೂ 2.0-ಲೀಟರ್ mStallion ಪೆಟ್ರೋಲ್ ಎಂಜಿನ್ ಹೊಂದಿರಬಹುದು. ಆದಾಗ್ಯೂ, ಹೊಸ ಥಾರ್ ಹೆಚ್ಚು ಪವರ್ ಔಟ್ ಪುಟ್ ನೀಡುವ ಸಾಧ್ಯತೆ ಇದೆ. ಇದು 6 ಮತ್ತು 7-ಸೀಟ್ ಕಾನ್ಫಿಗರೇಶನ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ ಎಂದು ಹೇಳಲಾಗಿದೆ. ಇದು ಗ್ರಾಹಕರಿಗೆ ಖಂಡಿತ ಇಷ್ಟವಾಗುತ್ತದೆ ಎಂದು ಹೇಳುವುದರಲ್ಲಿ ತಪ್ಪಿಲ್ಲ.
ಮಹೀಂದ್ರಾ ಥಾರ್ 5-ಡೋರ್ ಒಳಾಂಗಣ:
ಮಹೀಂದ್ರಾ ಥಾರ್ 5 - ಡೋರ್ ಇಂಟೀರಿಯರ್ ಕುರಿತು ಮಾತನಾಡುವುದಾದರೆ, ಈ ಎಸ್‌ಯುವಿ ಹೆಚ್ಚುವರಿ ಸೆಕೆಂಡ್ ರೋವನ್ನು ಹೊರತುಪಡಿಸಿ ಬಹುತೇಕ 3 - ಡೋರ್ ಎಸ್‌ಯುವಿಯ ಇಂಟೀರಿಯರ್ ಅನ್ನು ಹೋಲುತ್ತದೆ ಎಂದು ಹೇಳಬಹುದು. ಹೊಸ 5 - ಡೋರ್ ಥಾರ್ ವಿಶಾಲವಾದ ಕ್ಯಾಬಿನ್ ಮತ್ತು ಹೆಚ್ಚಿನ ಬೂಟ್ ಸ್ಪೇಸ್ ಅನ್ನು ಹೊಂದಿರುತ್ತದೆ ಎಂದು ಸ್ಪೈ ಶಾಟ್ ಚಿತ್ರಗಳ ಮೂಲಕ ತಿಳಿಯುತ್ತದೆ.
ವೈಶಿಷ್ಟ್ಯಗಳು:
5 - ಡೋರ್ ಮಹೀಂದ್ರಾ ಥಾರ್ ಹೊಸ ಸ್ಕಾರ್ಪಿಯೋ-ಎನ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಎನ್ನಲಾಗಿದೆ. ಫೋರ್-ವೀಲ್-ಡ್ರೈವ್ ಆಯ್ಕೆಯನ್ನು ಹೊಂದಿರುವ ಥಾರ್ 5-ಡೋರ್, ಸದ್ಯ ಮಾರುಕಟ್ಟೆಯಲ್ಲಿರುವ ಮಹೀಂದ್ರಾ 3-ಡೋರ್ ಥಾರ್ ಎಸ್‌ಯುವಿಯಂತೆ ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ನ್ಯಾವಿಗೇಷನ್, ಕ್ರೂಸ್ ಕಂಟ್ರೋಲ್, ಫಾಲೋ-ಮಿ-ಹೋಮ್ ಹೆಡ್‌ಲ್ಯಾಂಪ್‌ಗಳು, ಟೈರ್ ಡೈರೆಕ್ಷನ್ ಮಾನಿಟರಿಂಗ್ ಸಿಸ್ಟಮ್, ಡ್ಯುಯಲ್ ಏರ್‌ಬ್ಯಾಗ್ ಹಾಗೂ ರಿವರ್ಸ್ ಪಾರ್ಕಿಂಗ್ ಸೆನ್ಸರ್ಸ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿರಲಿದೆ.
ಇಷ್ಟೇಅಲ್ಲದೆ, ಮಹೀಂದ್ರಾ ಕಂಪನಿಯ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ XUV400 ಜನವರಿ 2023ರಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಆರ್ಕ್ಟಿಕ್ ಬ್ಲೂ, ಎವರೆಸ್ಟ್ ವೈಟ್, ಗ್ಯಾಲಕ್ಸಿ ಗ್ರೇ, ನಪೋಲಿ ಬ್ಲಾಕ್ & ಇನ್ಫಿನಿಟಿ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. IP 67 ಕಂಪ್ಲೈಂಟ್ 39.5 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದು 149.5PS ಪವರ್ ಮತ್ತು 310Nm ಟಾರ್ಕ್ ಉತ್ಪಾದಿಸುತ್ತದೆ. ಈ ಎಸ್‌ಯುವಿಯನ್ನು ಸಂಪೂರ್ಣ ಚಾರ್ಜ್ ಮಾಡಿದರೇ 456 ಕಿ.ಮೀ ಮೈಲೇಜ್ ನೀಡಬಹುದು.
ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಥಾರ್‌ನ ಕೈಗೆಟುಕುವ ರೂಪಾಂತರವಾದ ಥಾರ್ 2WDಯನ್ನು ಮಹೀಂದ್ರಾ ಬಿಡುಗಡೆ ಮಾಡಲಿದೆ. ಈ ಎಸ್‌ಯುವಿ 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಮಾತ್ರ ಹೊಂದಿರಲಿದ್ದು, ಇದು 116 bhp ಗರಿಷ್ಠ ಪವರ್ ಮತ್ತು 300 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಮಹೀಂದ್ರಾ XUV 300 ಮತ್ತು ಮರಾಝೋಗೆ ಪವರ್ ಒದಗಿಸುವ ಅದೇ ಎಂಜಿನ್ ಅನ್ನು ಇದರಲ್ಲಿಯೂ ಉಪಯೋಗ ಮಾಡಲಾಗಿದೆ. ಒಟ್ಟಾರೆಯಾಗಿ 2023ರಲ್ಲಿ ಮಹೀಂದ್ರಾ ಗ್ರಾಹಕರ ನಿರೀಕ್ಷೆಯನ್ನು ಎಂದಿಗೂ ಹುಸಿ ಮಾಡುವುದಿಲ್ಲ ಎಂದು ಹೇಳಬಹುದು.


Click it and Unblock the Notifications