ಮುಂದಿನ ತಿಂಗಳು ಬಹುನೀರಿಕ್ಷಿತ ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ: ಬೆಲೆ ಎಷ್ಟು?
ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಎಲೆಕ್ಟ್ರಿಕ್ ವಾಹನಗಳು ತಮ್ಮ ಅಧಿಪತ್ಯ ಸಾಧಿಸಲು ಮುಂದಾಗುತ್ತಿವೆ. ಅದರಂತೆ ಗ್ರಾಹಕರ ಆಸಕ್ತಿಗಳು ಕೂಡ ಬದಲಾಗುತ್ತಿದೆ. ಇದಕ್ಕೆ ತಕ್ಕಂತೆ ದೇಶೀಯ ವಾಹನ ತಯಾರಿಕ ಕಂಪನಿಗಳು ಸಹ ಎಲೆಕ್ಟ್ರಿಕ್ ವೆಹಿಕಲ್ (ಇವಿ)ಗಳನ್ನು ತಯಾರಿಸುತ್ತಿದ್ದಾರೆ. ಇದೀಗ ಮಹೀಂದ್ರಾದ XUV400 ಎಲೆಕ್ಟ್ರಿಕ್ ಎಸ್‌ಯುವಿ ಹೊಸ ವರ್ಷಕ್ಕೆ ಬಿಡುಗಡೆಯಾಗಬಹುದು.
ಮಹೀಂದ್ರಾ ಈ ವರ್ಷದ ಸೆಪ್ಟೆಂಬರ್‌ನಲ್ಲಿ ತನ್ನ ಮೊದಲ ಸಂಪೂರ್ಣ ಎಲೆಕ್ಟ್ರಿಕ್ ಎಸ್‌ಯುವಿ 'XUV400' ಅನ್ನು ಬಹಿರಂಗಪಡಿಸಿತ್ತು. XUV300 ICE ಆಧರಿಸಿ, ರೆಡಿಯಾಗುತ್ತಿರುವ XUV400, ಟಾಟಾ ನೆಕ್ಸಾನ್ EVಗೆ ಮಾರುಕಟ್ಟೆಯಲ್ಲಿ ನೇರವಾದ ಪೈಪೋಟಿ ನೀಡಲಿದೆ ಎಂದು ಹೇಳಲಾಗಿದೆ. ಭಾರತದ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರು ಟಾಟಾ ನೆಕ್ಸಾನ್ ಆಗಿದೆ. ಮಹೀಂದ್ರಾ ಕಂಪನಿ XUV400 ಎಸ್‌ಯುವಿಯ ಎಲ್ಲಾ ವಿಶೇಷತೆಗಳನ್ನು ಬಹಿರಂಗಪಡಿಸಿದ್ದರೂ, ಇನ್ನೂ ಖಚಿತಪಡಿಸಬೇಕಾದ ಒಂದು ವಿಷಯವೆಂದರೆ ಅದು ಬೆಲೆ.

ಬಹುನೀರಿಕ್ಷಿತ XUV400 ಎಲೆಕ್ಟ್ರಿಕ್ ಎಸ್‌ಯುವಿ ಬೆಲೆಗಳನ್ನು ಮುಂದಿನ ತಿಂಗಳು ಬಹಿರಂಗಪಡಿಸಲಾಗುವುದು ಎಂದು ಮಹೀಂದ್ರಾ ಕಂಪನಿ ಹೇಳಿದೆ. ಆದರೆ, XUV400 ಎಸ್‌ಯುವಿ ಬೆಲೆ ಸುಮಾರು 15 ಲಕ್ಷ ರೂಪಾಯಿಯಿಂದ ಆರಂಭವಾಗಬಹುದು ಎಂದು ಅಂದಾಜಿಸಲಾಗಿದೆ. ಮಾರುಕಟ್ಟೆಯಲ್ಲಿರುವ ಟಾಟಾ ನೆಕ್ಸಾನ್ EV, ಇದರ ಪ್ರತಿಸ್ಪರ್ಧಿ ಎಂದೇ ಹೇಳಲಾಗಿದ್ದು, ಅದರ ಬೆಲೆ ಪ್ರಸ್ತುತ ರೂ.14.99 ಲಕ್ಷದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿಗೆ ರೂ.20.04 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇದೆ.
ಮಹೀಂದ್ರಾ XUV400, 39.4 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಖರೀದಿಗೆ ಸಿಗಲಿದೆ. ಅದನ್ನು ಸಂಪೂರ್ಣ ಚಾರ್ಜ್ ಮಾಡಿದರೆ 456 ಕಿ.ಮೀ ಮೈಲೇಜ್ ನೀಡಲಿದೆ. ಇದಲ್ಲದೆ, ಈ ಬ್ಯಾಟರಿ ಪ್ಯಾಕ್ ಅನ್ನು ಡಿಸಿ ಫಾಸ್ಟ್ ಚಾರ್ಜರ್ ಮೂಲಕ 50 ನಿಮಿಷಗಳಲ್ಲಿ 0% ರಿಂದ 80% ವರೆಗೆ ಚಾರ್ಜ್ ಮಾಡಬಹುದು. ಇದು 150 PS (110 kW) ಪವರ್ ಮತ್ತು 310 Nm ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಇದಕ್ಕಾಗಿ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟರ್ ಅನ್ನು ಬಳಸಲಾಗುತ್ತಿದೆ.
ಈ XUV400 ಎಸ್‌ಯುವಿ ಕೇವಲ 8.3 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ ವೇಗವನ್ನು ಪಡೆಯಲಿದೆ. ಇದರ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಿಕ್ ಸನ್‌ರೂಫ್, 16-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಸ್, ಹಿಂಬದಿ ಪಾರ್ಕಿಂಗ್ ಕ್ಯಾಮೆರಾ, ಮಹೀಂದ್ರಾದ ಅಡ್ರಿನೊ ಎಕ್ಸ್ ಸಾಫ್ಟ್‌ವೇರ್‌ನೊಂದಿಗೆ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಓವರ್-ನೊಂದಿಗೆ ಸಂಪರ್ಕಿತ ಕಾರ್ ಟೆಕ್ನಲಾಜಿಯನ್ನು ಒಳಗೊಂಡಿದ್ದು, ದಿ-ಏರ್ (OTA) ನವೀಕರಣಗಳು, ಡಿಸ್ಕ್ ಬ್ರೇಕ್‌ಗಳು ಮತ್ತು ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳನ್ನು ಹೊಂದಿದೆ ಎಂದು ಹೇಳಬಹುದು.
ತನ್ನ ಮುಂಬರುವ ಎಲೆಕ್ಟ್ರಿಕ್ ವಾಹನಗಳಿಗಾಗಿ ಪುಣೆಯಲ್ಲಿ ಬೃಹತ್ ಉತ್ಪಾದನಾ ಘಟಕ ಸ್ಥಾಪಿಸಲು ಮಹೀಂದ್ರಾ ಸಜ್ಜಾಗಿದ್ದು, ಇದರ ಅಭಿವೃದ್ಧಿಗಾಗಿ 10,000 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಈ ಹಿಂದೆ, ಮಹೀಂದ್ರಾ, ತನ್ನ ಎರಡು ಎಲೆಕ್ಟ್ರಿಕ್ ಎಸ್‌ಯುವಿ ಬ್ರ್ಯಾಂಡ್‌ಗಳನ್ನು ಬಹಿರಂಗಪಡಿಸಿತ್ತು. ಅವುಗಳೆಂದರೇ BE ಮತ್ತು XUV. ಇವುಗಳ ಅಡಿ ಮಹೀಂದ್ರಾ ಐದು ಹೊಸ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಬಿಡುಗಡೆ ಮಾಡಲು ಎದುರು ನೋಡುತ್ತಿದ್ದು, ಇದು XUV.e8, XUV.e9, BE.05, BE.07, ಮತ್ತು BE.09 ಅನ್ನು ಒಳಗೊಂಡಿದೆ.
ಮಹೀಂದ್ರಾ XUV400 ಮಾತ್ರವಲ್ಲದೆ ಹಲವು ಕಂಪನಿಗಳ ಎಲೆಕ್ಟ್ರಿಕ್ ಕಾರುಗಳು ಹೊಸ ವರ್ಷಕ್ಕೆ ಮಾರುಕಟ್ಟೆಯಲ್ಲಿ ಬಿಡುಗಡೆ ಹಾಗೂ ವಿತರಣೆಯಾಗಲಿವೆ. ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಟಾಟಾ ಟಿಯಾಗೊದ ವಿತರಣೆಗಳು ಮುಂದಿನ ತಿಂಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಇದರ ಬೆಲೆ ರೂ.8.49 ಲಕ್ಷ ಮತ್ತು ರೂ.11.79 ಲಕ್ಷ (ಎಕ್ಸ್ ಶೋ ರೂಂ) ಇರಲಿದೆ. ಟಾಟಾ ಟಿಯಾಗೊ EVಗಾಗಿ ಬುಕಿಂಗ್ ಪ್ರಕ್ರಿಯೆಗಳು ಸಹ ಭರದಿಂದ ಸಾಗುತ್ತಿದ್ದು, ಈ ಕಾರು 5 ಆಸನಗಳು ಎರಡು ಬ್ಯಾಟರಿ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಒಂದು ಸಂಪೂರ್ಣ ಚಾರ್ಜ್‌ನಲ್ಲಿ 315 ಕಿ.ಮೀ ವರೆಗೆ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.
MG ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಫೇಸ್‌ಲಿಫ್ಟ್ EVಗಳು ಮುಂದಿನ ತಿಂಗಳು ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳಿಸುವ ಸಾಧ್ಯತೆಯಿದೆ. ಈ ಕಾರುಗಳನ್ನು 2-ಡೋರ್ ಏರ್ ಇವಿ ಜೊತೆಗೆ ದೆಹಲಿಯಲ್ಲಿ ನಡೆಯುವ 2023 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಬಹುದು. ಮಧ್ಯಮ ಗಾತ್ರದ ಈ ಎಸ್‌ಯುವಿಗಳನ್ನು ಮರುವಿನ್ಯಾಸಗೊಳಿಸಲಾಗಿದೆ. ಈಗಾಗಲೇ BYD Atto 3 ದೇಶದಲ್ಲಿ ಖರೀದಿಗೆ ಲಭ್ಯವಿದೆ. ಇದೊಂದು ಎಲೆಕ್ಟ್ರಿಕ್ ಎಸ್‌ಯುವಿ ಆಗಿದ್ದು, ಇದರ ಬೆಲೆ ರೂ. 34 ಲಕ್ಷ (ಎಕ್ಸ್ ಶೋ ರೂಂ) ಇದೆ. 5-ಆಸನಗಳನ್ನು ಹೊಂದಿರುವ ಈ ಎಸ್‌ಯುವಿಯ ವಿತರಣೆಯು ಜನವರಿ 2023 ರಿಂದ ಆರಂಭವಾಗಲಿದೆ.


Click it and Unblock the Notifications