Auto Expo 2023: ಐಷಾರಾಮಿ ಲೆಕ್ಸಸ್ RX ಎಸ್‌ಯುವಿಗಳು ಪ್ರದರ್ಶನ
ಜಪಾನ್ ಮೂಲದ ಲೆಕ್ಸಸ್ ಕಂಪನಿ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ತನ್ನ 'RX' ಎಸ್‌ಯುವಿಯನ್ನು ಅನಾವರಣ ಮಾಡಿದೆ. ಇದು ಎರಡು ಟ್ರಿಮ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೇ, RX 350h ಲಕ್ಸುರಿ ಮತ್ತು RX 500h F ಸ್ಪೋರ್ಟ್ ಪರ್ಫಾರ್ಮೆನ್ಸ್. ಹೊಸ RX ಕಾರಿನ ಬುಕಿಂಗ್‌ಗಳು ಮಾರ್ಚ್ 2023ರ ಅಂತ್ಯದೊಳಗೆ ಪ್ರಾರಂಭವಾಗಲಿದೆ.
RX 350h ಲಕ್ಸುರಿ ಎಂಜಿನ್ ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, ಇದು 2.5 - ಲೀಟರ್ ಟರ್ಬೊ - ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 247hp ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, CVT ಗೇರ್‌ಬಾಕ್ಸ್‌ನೊಂದಿಗೆ ಖರೀದಿಗೆ ಲಭ್ಯವಿದೆ. ಇದು ಎರಡು ಪವರ್‌ಟ್ರೇನ್‌ಗಳ ಆಯ್ಕೆಯನ್ನು ಹೊಂದಿದೆ. ಅವುಗಳೆಂದರೆ, ಫ್ರಂಟ್-ವೀಲ್ ಡ್ರೈವ್ ಮತ್ತು ಆಲ್-ವೀಲ್ ಡ್ರೈವ್. ಇದು 8.1 ಸೆಕೆಂಡುಗಳಲ್ಲಿ 0-100 kph ವೇಗವನ್ನು ಪಡೆಯಲಿದೆ ಎಂದು ಹೇಳಬಹುದು.

RX 500h F ಸ್ಪೋರ್ಟ್ ಪರ್ಫಾರ್ಮೆನ್ಸ್, ಉನ್ನತ ಕಾರ್ಯಕ್ಷಮತೆ ಹೊಂದಿರುವ ಆವೃತ್ತಿ ಆಗಿದೆ. ಇದು 2.4-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದ್ದು, ಅದನ್ನು 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಅದರ ಪವರ್ ಫುಲ್-ಹೈಬ್ರಿಡ್ ಸಿಸ್ಟಮ್ ನೊಂದಿಗೆ 366hp ಗರಿಷ್ಠ ಪವರ್ ಮತ್ತು 460Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆಲ್-ವೀಲ್ ಡ್ರೈವ್ ಸಿಸ್ಟಂನೊಂದಿಗೆ ಖರೀದಿಗೆ ಲಭ್ಯವಿದ್ದು, 6.2 ಸೆಕೆಂಡುಗಳಲ್ಲಿ 0-100kph ವೇಗವನ್ನು ಪಡೆಯಲಿದೆ.
ಲೆಕ್ಸಸ್ ಹೊಸ RX ಎಸ್‌ಯುವಿಯಲ್ಲಿ ಹೈ-ಪವರ್ ಬೈಪೋಲಾರ್ ನಿಕಲ್ - ಮೆಟಲ್ ಹೈಡ್ರೈಡ್ ಬ್ಯಾಟರಿಯನ್ನು ಉಪಯೋಗ ಮಾಡಲಾಗಿದೆ. ಈ ಕಾರು, GA-K ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ವ್ಹೀಲ್‌ಬೇಸ್ ಅನ್ನು 60mm ಹೆಚ್ಚಿಸಲಾಗಿದೆ. ಅಲ್ಲದೆ, ಈ ಎಸ್‌ಯುವಿಯ ಒಟ್ಟಾರೆ ಉದ್ದ ಮತ್ತು ಎತ್ತರವನ್ನು ಸಹ ಹೆಚ್ಚಳ ಮಾಡಲಾಗಿದೆ. ಜೊತೆಗೆ ಹಿಂದಿನ ಆವೃತ್ತಿಗಿಂತ 25mm ಅಗಲವಾಗಿದೆ. ಫ್ರಂಟ್ ಮತ್ತು ರೇರ್ ಟ್ರ್ಯಾಕ್ ಅನ್ನು ಕ್ರಮವಾಗಿ 20mm ಮತ್ತು 65mm ಹೆಚ್ಚಿಸಲಾಗಿದೆ.

ಲೆಕ್ಸಸ್ RX ಎಸ್‌ಯುವಿ ಎಂಟು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳಲ್ಲಿ ಸೋನಿಕ್ ಕ್ವಾರ್ಟ್ಜ್, ಸೋನಿಕ್ ಕ್ರೋಮ್, ಸೋನಿಕ್ ಇರಿಡಿಯಮ್, ಗ್ರ್ಯಾಫೈಟ್ ಬ್ಲಾಕ್, ರೆಡ್ ಮೈಕಾ, ಸೋನಿಕ್ ಟೈಟಾನಿಯಂ ಮತ್ತು ಡೀಪ್ ಬ್ಲೂ ಮೈಕಾ ಬಣ್ಣಗಳು ಹಿಂದಿನ ಮಾದರಿಯಲ್ಲೂ ಲಭ್ಯವಿತ್ತು. ಲೆಕ್ಸಸ್ ತನ್ನ 'RX' ಎಸ್‌ಯುವಿಗೆ ಎಂಟನೇ ಬಣ್ಣವಾಗಿ ಹೊಸ ಸೋನಿಕ್ ಕಾಪರ್ ಅನ್ನು ಸೇರಿಸಿದೆ. ಅಲ್ಲದೆ, RX ಎಫ್-ಸ್ಪೋರ್ಟ್ ರೂಪಾಂತರವು ಆರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಅದರಲ್ಲಿ ಎರಡು ವಿಶೇಷ ಬಣ್ಣಗಳನ್ನು ಪಡೆದಿದೆ. ಅವುಗಳೆಂದರೆ, ವೈಟ್ ನೋವಾ ಮತ್ತು ಹೀಟ್ ಬ್ಲೂ.
RX ಎಸ್‌ಯುವಿಯ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ವೈರ್‌ಲೆಸ್ ಚಾರ್ಜಿಂಗ್, Apple CarPlay ಜೊತೆಗೆ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಲ್ಲಿ 14-ಇಂಚಿನ ಟಚ್‌ಸ್ಕ್ರೀನ್ ಅನ್ನು ಹೊಂದಿದೆ, ಆದರೆ, ಟೆಥರ್ಡ್ ಆಂಡ್ರಾಯ್ಡ್ ಆಟೋವನ್ನು ಮಾತ್ರ ಪಡೆಯಲಿದೆ. ಲೆಕ್ಸಸ್ RX ಎಸ್‌ಯುವಿಯನ್ನು ಮೂರು ಇಂಟೀರಿಯರ್ ಬಣ್ಣಗಳ ಆಯ್ಕೆಯನ್ನು ನೀಡುತ್ತಿದೆ. ಅವುಗಳೆಂದರೆ, ಬ್ಲ್ಯಾಕ್, ಡಾರ್ಕ್ ಸೆಪಿಯಾ ಮತ್ತು ಸೊಲಿಸ್ ವೈಟ್. ಇಷ್ಟೇಅಲ್ಲದೆ, RX ಎಸ್‌ಯುವಿ ಪನೋರಮಿಕ್ ಸನ್‌ರೂಫ್ ಅನ್ನು ಸಹ ಹೊಂದಿರುತ್ತದೆ.

ಈ ಬಗ್ಗೆ ಮಾತನಾಡಿದ ಲೆಕ್ಸಸ್ ಇಂಡಿಯಾ ಅಧ್ಯಕ್ಷ ನವೀನ್ ಸೋನಿ, 'ಲೆಕ್ಸಸ್ ಇದೇ ಮೊದಲ ಬಾರಿಗೆ ಆಟೋ ಎಕ್ಸ್‌ಪೋದ ಭಾಗವಾಗಿದ್ದು, ನಮಗೆ ಸಂತೋಷ ತಂದಿದೆ. ಹೊಸ ಲೆಕ್ಸಸ್ RX ಈಗಾಗಲೇ ಪ್ರಪಂಚದಾದ್ಯಂತ ಭಾರಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಹಲವಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದ್ದು, RX 350h ಲಕ್ಸುರಿ ಮತ್ತು RX 500h F ಸ್ಪೋರ್ಟ್ ಪರ್ಫಾರ್ಮೆನ್ಸ್ ಕಾರುಗಳನ್ನು ಗ್ರಾಹಕರು ಖಂಡಿತ ಸ್ವೀಕರಿಸಲಿದ್ದಾರೆ. ಈ ಎರಡು ರೂಪಾಂತರಗಳು ಭಾರತೀಯ ಐಷಾರಾಮಿ ಕಾರು ವಿಭಾಗದಲ್ಲಿ ತನ್ನದೇ ಆದ ಛಾಪು ಮಾಡಿಸುವ ವಿಶ್ವಾಸವಿದೆ' ಎಂದು ಹೇಳಿದ್ದಾರೆ.
ಲೆಕ್ಸಸ್ ಕಂಪನಿ ಈವರೆಗೆ RX 350h ಲಕ್ಸುರಿ ಮತ್ತು RX 500h F ಸ್ಪೋರ್ಟ್ ಪರ್ಫಾರ್ಮೆನ್ಸ್ ಎಸ್‌ಯುವಿಗಳ ಬೆಲೆಯನ್ನು ಬಹಿರಂಗಪಡಿಸಿಲ್ಲ. ಲೆಕ್ಸಸ್ RX ಎಸ್‌ಯುವಿಗಳು ಮರ್ಸಿಡಿಸ್-ಬೆನ್ಜ್ GLE, BMW X5, Audi Q7 ಮತ್ತು ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರುಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆಯಾಗಿ ದುಬಾರಿ ಬೆಲೆಯ ಈ ಕಾರುಗಳನ್ನು ದೇಶದ ಯಾವ ಶ್ರೀಮಂತರು ಖರೀದಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








