Auto Expo 2023: ಬಹುನಿರೀಕ್ಷಿತ ಮಾರುತಿ ಸುಜುಕಿ ಬ್ರೆಝಾ CNG ಪ್ರದರ್ಶನ.. ಬೆಲೆ ಎಷ್ಟಿರಬಹುದು?
ಭಾರತದ ಕಾರು ಖರೀದಿದಾರರಿಗೆ ಮಾರುತಿ ಸುಜುಕಿ ತಯಾರಿಸುವ ವಾಹನಗಳೆಂದರೇ ತುಂಬಾ ಅಚ್ಚುಮೆಚ್ಚು. ಇಷ್ಟಪಟ್ಟು ಅವುಗಳನ್ನು ಕೊಂಡುಕೊಳ್ಳುತ್ತಾರೆ. ಮಾರುತಿ ಸುಜುಕಿ ಕಂಪನಿ ಕಾರುಗಳ ಕಾರ್ಯಕ್ಷಮತೆ ಹಾಗೂ ಕೈಗೆಟುಕುವ ಬೆಲೆ ಪ್ರತಿಯೊಬ್ಬರನ್ನು ಸೆಳೆಯುತ್ತಿದೆ. ಅದರಂತೆ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಕಂಪನಿಯು ಯಾವಾಗಲು ಮುಂದಿರುತ್ತಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಬಹುನೀರಿಕ್ಷಿತ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ, ಬ್ರೆಝಾ ಸಿಎನ್‌ಜಿ ಎಸ್‌ಯುವಿಯನ್ನು ಪ್ರದರ್ಶಿಸಿದೆ. 2020ರಲ್ಲಿ ಡೀಸೆಲ್ ಆವೃತ್ತಿಯ ತಯಾರಿಕೆಯನ್ನು ಕಂಪನಿಯು ನಿಲ್ಲಿಸಿದ ನಂತರ, ಈ ಎಸ್‌ಯುವಿ ಎರಡು ಇಂಧನ ಆಯ್ಕೆಗಳನ್ನು ಪಡೆದುಕೊಂಡಿದೆ ಎಂದು ಹೇಳಬಹುದು. ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಮಾರುತಿ ಸುಜುಕಿಯು ಜನವರಿ 2022ರಿಂದಲೇ ಬ್ರೆಝಾ ಸಿಎನ್‌ಜಿ ಆವೃತ್ತಿಯಲ್ಲಿ ಕೆಲಸ ಮಾಡುತ್ತಿತ್ತು. ಇದೀಗ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಿದ್ದು, ಗ್ರಾಹಕರು ಕಾತರದಿಂದ ಕಾಯುತ್ತಿದ್ದಾರೆ.

ಮುಂಬರಲಿರುವ ಬ್ರೆಝಾ ಸಿಎನ್‌ಜಿಯು 1.5-ಲೀಟರ್ ಕೆ15ಸಿ ಡ್ಯುಯಲ್‌ಜೆಟ್ ಎಂಜಿನ್ ಹೊಂದಿರುವ ಸಾಧ್ಯತೆಯಿದೆ. ಅದೇ ಎಂಜಿನ್ ಮೂಲಕ ಎರ್ಟಿಗಾ ಎಂಪಿವಿಯ ಸಿಎನ್‌ಜಿ ಆವೃತ್ತಿಯು ಚಾಲಿತವಾಗುತ್ತಿದೆ. ಎರ್ಟಿಗಾದಲ್ಲಿ, ಈ ಎಂಜಿನ್ ಪೆಟ್ರೋಲ್ ಮೋಡ್‌ನಲ್ಲಿ 100 hp ಗರಿಷ್ಠ ಪವರ್ ಮತ್ತು 136 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. CNG ಮೋಡ್‌ನಲ್ಲಿ 88 hp ಗರಿಷ್ಠ ಪವರ್ ಮತ್ತು 121.5 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಹೊಸ ಬ್ರೆಝಾ CNGಯು ಅದೇ ರೀತಿಯ ಪವರ್ ಉತ್ಪಾದಿಸುವ ನಿರೀಕ್ಷೆಯಿದೆ.
ಎರ್ಟಿಗಾ ಸಿಎನ್‌ಜಿ 26.11 ಕಿಮೀ/ಕೆಜಿ ಇಂಧನ ದಕ್ಷತೆಯನ್ನು ಹೊಂದಿದೆ ಎಂದು ಮಾರುತಿ ಸುಜುಕಿ ಕಂಪನಿ ಹೇಳಿದೆ. ಹೊಸ ಬ್ರೆಝಾ ಸಿಎನ್‌ಜಿ ಆವೃತ್ತಿಯು ಅದೇ ರೀತಿಯ ಇಂಧನ ದಕ್ಷತೆ ಹೊಂದಿರಬಹುದು ಅಥವಾ ಮತ್ತಷ್ಟು ಉತ್ತಮವಾಗಿರಬಹುದು ಎಂದು ಅಂದಾಜಿಸಲಾಗಿದೆ. ಗೇರ್‌ಬಾಕ್ಸ್ ಕುರಿತು ಹೇಳುವುದಾದರೆ, ನೂತನ ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ ಮ್ಯಾನುವಲ್ ಜೊತೆಗೆ ಆಟೋಮೆಟಿಕ್ ಆಯ್ಕೆಯನ್ನು ಹೊಂದುವ ನಿರೀಕ್ಷೆಯಿದೆ. ಅಲ್ಲದೆ, ಇದು ಆಟೋಮೆಟಿಕ್ ಟ್ರಾನ್ಸ್ಮಿಷನ್ ಹೊಂದಿರುವ ಭಾರತದ ಮೊದಲ ಸಿಎನ್‌ಜಿ-ಚಾಲಿತ ಕಾರಾಗಲಿದೆ.

ಹೊಸ ಬ್ರೆಝಾ ಸಿಎನ್‌ಜಿ ಹೊರಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಪೆಟ್ರೋಲ್ ಮಾದರಿಗೆ ಹೋಲಿಸಿದರೆ, ಸಿಎನ್‌ಜಿ ಟ್ಯಾಂಕ್ ಇರುವುದರಿಂದ ಬೂಟ್ ಸ್ಪೇಸ್ ಕಡಿಮೆ ಇರುತ್ತದೆ. ಹೊಸ ಬ್ರೆಝಾ ಸಿಎನ್‌ಜಿ ಒಳಭಾಗದಲ್ಲಿ ಫುಲ್ ಬ್ಲ್ಯಾಕ್ ಇಂಟೀರಿಯರ್ ಇರಲಿದೆ. ಇತರೆ ಮಾರುತಿ ಸುಜುಕಿಯ ಸಿಎನ್‌ಜಿ ಮಾದರಿಗಳಂತೆಯೇ, ಬ್ರೆಝಾ ಸಿಎನ್‌ಜಿಯನ್ನು ಮಿಡ್-ಸ್ಪೆಕ್ ವಿಎಕ್ಸ್‌ಐ ಮತ್ತು ಝಡ್‌ಎಕ್ಸ್‌ಐ ರೂಪಾಂತರಗಳಲ್ಲಿ ಗ್ರಾಹಕರಿಗೆ ಖರೀದಿಗೆ ನೀಡಬಹುದು. ಸ್ಮಾರ್ಟ್‌ಪ್ಲೇ ಪ್ರೊ+ನೊಂದಿಗೆ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ವಾಯ್ಸ್ ಅಸಿಸ್ಟೆಂಟ್, ಒಟಿಎ ಅಪ್‌ಡೇಟ್‌ಗಳೊಂದಿಗೆ ಸಂಪರ್ಕಿತ ಕಾರ್ ತಂತ್ರಜ್ಞಾನದಂತಹ ವೈಶಿಷ್ಟ್ಯಗಳನ್ನು ಹೊಂದಿರಬಹುದು.
ಸುರಕ್ಷತಾ ದೃಷ್ಟಿಯಿಂದ ಸ್ಟಾರ್ಟ್/ಸ್ಟಾಪ್ ಬಟನ್, ಆರು ಏರ್‌ಬ್ಯಾಗ್‌ಗಳು ಮತ್ತು ರಿಯರ್ ವ್ಯೂ ಕ್ಯಾಮೆರಾವನ್ನು ಹೊಂದಿರಲಿದೆ. ಪೆಟ್ರೋಲ್ ಆವೃತ್ತಿಗೆ ಹೋಲಿಸಿದರೆ, ಬ್ರೆಝಾ ಸಿಎನ್‌ಜಿ ದರ 95,000 ರೂಪಾಯಿ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಪೆಟ್ರೋಲ್ ಆವೃತ್ತಿ ಬೆಲೆ ರೂ.7.99 ಲಕ್ಷದಿಂದ ಆರಂಭವಾಗಲಿದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ.12.30 ಲಕ್ಷ(ಎಕ್ಸ್-ಶೋರೂಂ, ದೆಹಲಿ) ಇದೆ. ಅದೇ ರೀತಿ, ಬ್ರೆಝಾ CNG ಬೆಲೆ ರೂ.10.97 ಲಕ್ಷದಿಂದ ಆರಂಭವಾಗುವ ಸಾಧ್ಯತೆ ಇದೆ.

ಸದ್ಯ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಮಾರುತಿ ಬ್ರೆಝಾ ಪೆಟ್ರೋಲ್ ಆವೃತ್ತಿಯು 11 ರೂಪಾಂತರಗಳು ಮತ್ತು 9 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. 1462ಸಿಸಿ BS6 ಕಂಪ್ಲೈಂಟ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 101.65 bhp ಗರಿಷ್ಠ ಪವರ್ ಮತ್ತು 136.8 nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 20.15kmpl ಮೈಲೇಜ್ ನೀಡಲಿದೆ. ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೊತೆಗೆ ಲಭ್ಯವಿದ್ದು, 328 ಲೀಟರ್ ಬೂಟ್ ಸ್ಪೇಸ್ ಹೊಂದಿದೆ .
ಮುಂಬರಲಿರುವ ಬ್ರೆಝಾ ಸಿಎನ್‌ಜಿ ಎಸ್‌ಯುವಿ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಎಸ್‌ಯುವಿಗಳಾದ ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಟಾಟಾ ನೆಕ್ಸನ್ ಕಾರುಗಳಿಗೆ ಭಾರೀ ಪೈಪೋಟಿ ನೀಡಲಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಇವುಗಳಲ್ಲಿ ಯಾವುದು ಸಿಎನ್‌ಜಿ ಆಯ್ಕೆಯನ್ನು ಹೊಂದಿಲ್ಲ. ಸಿಎನ್‌ಜಿ ಇಂಧನ ಬೆಲೆ ಕಡಿಮೆ ಇರುವುದರಿಂದ ಈ ಕಾರನ್ನು ಖರೀದಿಸಲು ಗ್ರಾಹಕರು ಇಷ್ಟಪಡಬಹುದು ಎಂದು ಹೇಳಬಹುದು.


Click it and Unblock the Notifications








