Maruti Suzuki: ಮಾರುತಿ ಸುಜುಕಿ ವ್ಯಾಗನ್ ಆರ್ ಫೇಸ್‌ಲಿಫ್ಟ್ ರಸ್ತೆಯಲ್ಲಿ ಕಂಡು ಬಂತು.. ಖರ್ಚು ತುಂಬಾ ಕಡಿಮೆ?
ಮಾರುತಿ ಸುಜುಕಿಯ (Maruti Suzuki) ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿ ವ್ಯಾಗನ್ ಆರ್ (Wagon R) ಗುರುತಿಸಿಕೊಂಡಿದೆ. ಕಂಪನಿಯು ಈ ಕಾರನ್ನು ನವೀಕರಿಸಿದ್ದು, ಮತ್ತಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನೊಂದಿಗೆ ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ ಎಂಬ ವಿವರಗಳು ಲಭ್ಯವಾಗಿವೆ. ಮುಂಬರಲಿರುವ ಫೇಸ್‌ಲಿಫ್ಟ್ ವ್ಯಾಗನ್ ಆರ್ ಸುರಕ್ಷತೆಯಲ್ಲೂ ಅತ್ಯುತ್ತಮವಾಗಿರಲಿದೆಯಂತೆ.
ನೂತನ ಪವರ್‌ಟ್ರೇನ್ ಆಯ್ಕೆಯೊಂದಿಗೆ ಬರಲಿರುವ ಫೇಸ್‌ಲಿಫ್ಟ್ ಮಾರುತಿ ಸುಜುಕಿ ವ್ಯಾಗನ್ ಆರ್ (Facelift Maruti Suzuki Wagon R), ಇತ್ತೀಚೆಗೆ ಪರೀಕ್ಷಾರ್ಥ ಸಂಚಾರ ನಡೆಸುವ ಕಂಡುಬಂದಿದ್ದು, ಆ ಚಿತ್ರಗಳು ಆನ್‌ಲೈನ್ ನಲ್ಲಿ ಸೋರಿಕೆಯಾಗಿವೆ. ಅವುಗಳಲ್ಲಿ ಹಿಂಭಾಗದ ಬಂಪರ್ ವಿನ್ಯಾಸ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಕೊಂಚ ನವೀಕರಣವನ್ನು ಪಡೆದಿರುವುದನ್ನು ನೋಡಬಹುದು.

'ಟೈಲ್ ಲ್ಯಾಂಪ್ ಹೌಸಿಂಗ್' ಪ್ರಸ್ತುತ ಖರೀದಿಗೆ ಸಿಗುವ ವ್ಯಾಗನ್ ಆರ್ ಮಾದರಿಯಂತೆ ಇದ್ದು, ಸ್ವಲ್ಪಮಟ್ಟಿಗೆ ಪರಿಷ್ಕರಿಣೆಯನ್ನು ಹೊಂದಿದೆ. ಮುಂಭಾಗ ಸಹ ಹೊಸ ಕಾರು ಹಲವು ಬದಲಾವಣೆಗಳನ್ನು ಪಡೆದಿರಬಹುದು. ಜೊತೆಗೆ ನವೀನವಾದ ಅಲಾಯ್ ವೀಲ್ಸ್ ಹಾಗೂ ಒಳಭಾಗದಲ್ಲಿಯೂ ಯುವ ಗ್ರಾಹಕರನ್ನು ಆಕರ್ಷಿಸುವ ವಿವಿಧ ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ.
ಇದೇ ವರ್ಷದ ಜನವರಿ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಫ್ಲೆಕ್ಸ್ - ಫ್ಯುಯೆಲ್ (Flex - Fuel) ಚಾಲಿತ ಮಾರುತಿ ಸುಜುಕಿ ವ್ಯಾಗನ್ ಆರ್ ಹ್ಯಾಚ್‌ಬ್ಯಾಕ್ ಅನ್ನು ಪ್ರದರ್ಶನ ಮಾಡಲಾಗಿತ್ತು. ಈ ಕಾರು, 2024ರಲ್ಲಿ ಭಾರತ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಬಹುಶಃ ಈ ಕಾರು ಪ್ರಾಯೋಗಿಕ ಸಂಚಾರದ ವೇಳೆಯಲ್ಲಿ ಕಂಡುಬಂದಿರಬಹುದು. ಆದರೆ, ಸ್ಪಷ್ಟತೆ ಇಲ್ಲ.
ಫ್ಲೆಕ್ಸ್ - ಫ್ಯುಯೆಲ್ ಚಾಲಿತ ಕಾರುಗಳು, ಶೇಕಡ 80% ಪೆಟ್ರೋಲ್ ಹಾಗೂ ಶೇಕಡ 20% ಎಥೆನಾಲ್ ಇಂಧನ ಸಹಾಯದಿಂದ ಚಲಿಸಲಿವೆ. ಎಥೆನಾಲ್ ಅನ್ನು ಕೃಷಿ ತ್ಯಾಜ್ಯ (ಭತ್ತದ ಹುಲ್ಲು)ದಿಂದ ತಯಾರಿಸಲಾಗಿರುತ್ತದೆ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಬಗ್ಗೆ ಹೇಳುವುದಾದರೆ, ಇದು, ರೂ.5.54 ಲಕ್ಷದಿಂದ ರೂ.7.42 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.
ಈ ವ್ಯಾಗನ್ ಆರ್ ಹ್ಯಾಚ್‌ಬ್ಯಾಕ್ ಎಲ್ಎಕ್ಸ್ಐ, ವಿಎಕ್ಸ್ಐ ಸೇರಿದಂತೆ 4 ರೂಪಾಂತರ ಹಾಗೂ ಮೆಟ್ ಮ್ಯಾಗ್ಮಾ ಗ್ರೇ ಪ್ಲಸ್ ಬ್ಲಾಕ್, ಪ್ರೈಮ್ ಗ್ಯಾಲಂಟ್ ರೆಡ್ ಪ್ಲಸ್ ಬ್ಲಾಕ್, ಪೂಲ್‌ಸೈಡ್ ಬ್ಲೂ, ಸಾಲಿಡ್ ವೈಟ್, ಸಿಲ್ಕಿ ಸಿಲ್ವರ್, ಮ್ಯಾಗ್ಮಾ ಗ್ರೇ ಒಳಗೊಂಡಂತೆ 2 ಡ್ಯೂಯಲ್ ಟೋನ್, 6 ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.
ಮಾರುತಿ ಸುಜುಕಿ ವ್ಯಾಗನ್ ಆರ್, 1 - ಲೀಟರ್ ಪೆಟ್ರೋಲ್/ ಸಿಎನ್‌ಜಿ ಎಂಜಿನ್ ಮತ್ತು 1.2 - ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5 - ಸ್ವೀಡ್ ಮ್ಯಾನುವಲ್ ಹಾಗೂ 5 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಖರೀದಿಗೆ ದೊರೆಯುತ್ತದೆ. ಪೆಟ್ರೋಲ್ ರೂಪಾಂತರಗಳು 23.56 kmpl - 25.19 kmpl, ಸಿಎನ್‌ಜಿ ರೂಪಾಂತರಗಳು 34.05 km/kg ಮೈಲೇಜ್ ನೀಡುತ್ತವೆ.
ಮಾರುತಿ ಸುಜುಕಿ ವ್ಯಾಗನ್ ಆರ್ ಹ್ಯಾಚ್‌ಬ್ಯಾಕ್ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 7 -ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 4 -ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ಸ್ಟೀರಿಂಗ್ - ಮೌಂಟೆಡ್ ಆಡಿಯೋ ಮತ್ತು ಫೋನ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ 341 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಪಡೆದಿದೆ.
ಸುರಕ್ಷತೆಯ ದೃಷ್ಟಿಯಿಂದಲ್ಲೂ ಮಾರುತಿ ಸುಜುಕಿ ವ್ಯಾಗನ್ ಆರ್ ಅತ್ಯುತ್ತಮವಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ರೇರ್ ಪಾರ್ಕಿಂಗ್ ಸೇನಾರ್ಸ್, ಹಿಲ್ - ಹೋಲ್ಡ್ ಅಸಿಸ್ಟ್ ಒಳಗೊಂಡಂತೆ ವಿವಿಧ ಸೇಫ್ಟಿ ಫೀಚರ್ಸ್ ಇವೆ. ಈ ಕಾರಿಗೆ ಟಾಟಾ ಟಿಯಾಗೊ ಮತ್ತು ಸಿಟ್ರಸ್ ಸಿ3 ಪ್ರಬಲ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications