ಪ್ರತಿಸ್ಪರ್ಧಿಗಳಿಗೆ ಆತಂಕ: ಭಾರೀ ಮೈಲೇಜ್ ನೀಡುವ ಹೊಸ Honda ಎಸ್‍ಯುವಿ ನಾಳೆ ಅನಾವರಣ.. ವಿಶೇಷತೆಗಳೇನು?
ಭಾರತದ ಕಾರು ಮಾರುಕಟ್ಟೆ ನಾಳೆ (ಜೂನ್ 6) ದೊಡ್ಡ ಇತಿಹಾಸಕ್ಕೆ ಸಾಕ್ಷಿಯಾಗಲಿದೆ. ಹೋಂಡಾ (Honda) ಕಾರ್ಸ್ ಇಂಡಿಯಾ ತನ್ನ ನೂತನ 'ಎಲಿವೇಟ್' ಎಸ್‌ಯುವಿಯನ್ನು ಅನಾವರಣ ಮಾಡಲಿದ್ದು, ಈಗಾಗಲೇ ನಿರೀಕ್ಷೆಗಳು ಹೆಚ್ಚಾಗಿವೆ. ಹೊಸ ಎಸ್‌ಯುವಿ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರಲಿದ್ದು, ಗರಿಷ್ಠ ಮೈಲೇಜ್ ನೀಡುವ ಸಾಧ್ಯತೆಯಿದೆ.
ಹೋಂಡಾ, ಹಲವು ಕಾರಣಗಳಿಗೆ WR-V, CR-V ಹಾಗೂ BR-V ಎಸ್‌ಯುವಿಗಳ ಮಾರಾಟವನ್ನು ದೇಶೀಯವಾಗಿ ಸ್ಥಗಿತಗೊಳಿಸಿದ ಬಳಿಕ, 'ಎಲಿವೇಟ್' ಕಂಪನಿ ಕಡೆಯಿಂದ ಮಾರುಕಟ್ಟೆಗೆ ಬರುತ್ತಿರುವ ಏಕೈಕ ಎಸ್‌ಯುವಿಯಾಗಿದೆ. ಈ ವರ್ಷಾಂತ್ಯದಲ್ಲಿ ಅಥವಾ ಹಬ್ಬಗಳ ಸೀಸನ್ ವೇಳೆಗೆ ಬಿಡುಗಡೆಯಾಗುವ ನೀರಿಕ್ಷೆ ಇದ್ದು, ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮತ್ತು ಕಿಯಾ ಸೆಲ್ಟೋಸ್ ಕಾರುಗಳಿಗೆ ದೊಡ್ಡಮಟ್ಟದಲ್ಲಿ ಪೈಪೋಟಿ ನೀಡಬಹುದು ಎಂದು ಅಂದಾಜಿಸಲಾಗಿದೆ.

ಈ ಹೊಸ ಎಲಿವೇಟ್ ಎಸ್‌ಯುವಿ, ಹೋಂಡಾ ಕಂಪನಿ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ HR- V ಕಾರಿಗೆ ಹೋಲಿಕೆಯಾಗಲಿದ್ದು, ಫ್ರಂಟ್ ಆಕರ್ಷಕ LED ಹೈಡ್ ಲೈಟ್ಸ್, LED DRLs ಹಾಗೂ ದೊಡ್ಡದಾದ ಗ್ರೀಲ್ ಹೊಂದಿರುವ ಸಾಧ್ಯತೆಯಿದೆ. ರೇರ್, ಎಲಿವೇಟ್ ಬ್ಯಾಡ್ಜಿಂಗ್ ಮತ್ತು ರಿಫ್ಲೆಕ್ಟರ್‌ಗಳ ಜೊತೆಗೆ ಟೈಲ್‌ಲೈಟ್ಸ್ ಕನೆಕ್ಟ್ ಮಾಡುವ LED ಸ್ಟ್ರಿಪ್ ಅನ್ನು ಪಡೆದಿರುವ ನೀರಿಕ್ಷೆ ಇದೆ.
ಹೊಸ ಹೋಂಡಾ ಎಲಿವೇಟ್ ಎಸ್‌ಯುವಿ, ಗ್ರಾಹಕರನ್ನು ಆಕರ್ಷಿವ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದ್ದು, 12.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 10.2 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿರಲಿದೆ. ಇದರೊಟ್ಟಿಗೆ ಸನ್ ರೂಫ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ವೈರ್ ಲೆಸ್ ಚಾರ್ಜಿಂಗ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.
ಈ ಕಾರು, 1.5 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಹಾಗೂ ಸ್ಟ್ರಾಂಗ್ ಹೈಬ್ರಿಡ್ ಪೆಟೋಲ್ ಎಂಜಿನ್ ಆಯ್ಕೆಯಲ್ಲಿ ಅನಾವರಣಗೊಳ್ಳಬಹುದು. 1.5 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಪಡೆದಿರುವ ಕಾರು, 121 PS ಪವರ್, 145 Nm ಪೀಕ್ ಟಾರ್ಕ್ ಉತ್ಪಾದಿಸುವ ನಿರೀಕ್ಷೆಯಿದೆ. 6 ಸ್ವೀಡ್ ಮ್ಯಾನುವಲ್ ಮತ್ತು CVT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ದೊರೆಯಬಹುದು.
ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಕಾರಿನ ಪವರ್, ಟಾರ್ಕ್ ಉತ್ಪಾದನೆ ಹಾಗೂ ಮೈಲೇಜ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೂ ಕೆಲವೊಂದು ಮೂಲಗಳ ಪ್ರಕಾರ, 27.13 kmpl ಮೈಲೇಜ್ ನೀಡುತ್ತದೆ ಎಂದು ಅಂದಾಜಿಸಲಾಗಿದೆ ಎಲ್ಲದಕ್ಕೂ ನಾಳೆ ತೆರೆಬೀಳಲಿದೆ. ಒಂದೊಮ್ಮೆ ಈ ಕಾರು, ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ನೊಂದಿಗೆ ಅನಾವರಣಗೊಂಡರೆ, ಬಹುತೇಕ ಗ್ರಾಹಕರು ಇದನ್ನೇ ಆಯ್ಕೆಯಾಗಿ ಪರಿಗಣಿಸಬಹುದು.
ಹೋಂಡಾ ಎಲಿವೇಟ್ ಎಸ್‌ಯುವಿ, ಸುರಕ್ಷತೆ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿರಲಿದೆ ಎಂದು ಅಂದಾಜಿಸಲಾಗಿದ್ದು, ಅದಕ್ಕೆ ತಕ್ಕಂತೆಯೇ ಅತ್ಯಾಧುನಿಕ ಸೇಫ್ಟಿ ಫೀಚರ್ಸ್ ಹೊಂದಿದೆ. ಪ್ರಮುಖವಾಗಿ ಕಂಪನಿ ತಾನೇ ಅಭಿವೃದ್ಧಿ ಪಡಿಸಿರುವ ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ತಂತ್ರಜ್ಞಾನವನ್ನು ಎಲಿವೇಟ್ ಕಾರಿನಲ್ಲೂ ಪರಿಚಯಿಸುವ ನೀರಿಕ್ಷೆಯಿದೆ. ಭಾರತದಲ್ಲಿ ಸದ್ಯ ನ್ಯೂ ಜನರೇಶನ್ ಸಿಟಿ ಸೆಡಾನ್ ಇದೇ ತಂತ್ರಜ್ಞಾನವನ್ನು ಪಡೆದಿದೆ.
ಸದ್ಯ, ಬಹುತೇಕ ಖರೀದಿದಾರರಿಗೆ ಈ ಎಸ್‌ಯುವಿಯ ಬೆಲೆ ಎಷ್ಟಿರಬಹುದು ಎಂಬ ಕುತೂಹಲವಿದೆ. ಅದಕ್ಕೂ ಉತ್ತರ ನೀಡುವ ಪ್ರಯತ್ನ ಮಾಡಿದ್ದೇವೆ. ಬಹುತೇಕ ರೂ.8 ಲಕ್ಷ ಎಕ್ಸ್ ಶೋರೂಂ ದರಕ್ಕೆ ಸಿಗಬಹುದು. ಇದು ಆಕರ್ಷಕ ವೈಶಿಷ್ಟ್ಯದಿಂದ ಮಾರುಕಟ್ಟೆಯಲ್ಲಿ ಅನಾವರಣಗೊಳುವ ಸಾಧ್ಯತೆ ಇದ್ದು, ಹೆಚ್ಚಿನ ಯುವ ಗ್ರಾಹಕರನ್ನು ಸೆಳೆದು, ಪ್ರತಿಸ್ಪರ್ಧಿ ಕಂಪನಿಗಳಿಗೆ ಸರಿಯಾಗಿಯೇ ಠಕ್ಕರ್ ನೀಡಬಹುದು.


Click it and Unblock the Notifications