ಬರೋಬ್ಬರಿ 5 ಲಕ್ಷ ಕಾರು ಹಿಂಪಡೆಯಲು ಮುಂದಾದ ಹೋಂಡಾ: ಕಾರಣವೇನು?
ಜಪಾನ್‌ನ ಪ್ರಮುಖ ವಾಹನ ತಯಾರಕ ಕಂಪನಿ 'ಹೋಂಡಾ' ದೊಡ್ಡ ಸಂಖ್ಯೆಯಲ್ಲಿ ಕಾರುಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಈಗಾಗಲೇ ಮಾರಾಟವಾಗಿರುವ ಕಾರುಗಳನ್ನು ಸರ್ವೀಸ್ ಸೆಂಟರ್‌ಗಳಿಗೆ ತರಲು ಕಂಪನಿ ತನ್ನ ಗ್ರಾಹಕರಿಗೆ ತಿಳಿಸಿದೆ ಎಂದು ವರದಿಯಾಗಿದೆ. ಅದಕ್ಕೆ ಕಾರಣವೇನು? ಎಲ್ಲಿ ಈ ಹಿಂಪಡೆಯುವಿಕೆ ಎಂಬುದನ್ನು ತಿಳಿಯೋಣ.
ಇವತ್ತಿನ ದಿನಗಳನ್ನು ಪ್ರತಿಯೊಬ್ಬರು ಸೇಫ್ಟಿಗೆ ಆದ್ಯತೆ ನೀಡುತ್ತಾರೆ. ಆದರೆ, ತನ್ನ ಕೆಲವು ಕಾರುಗಳಲ್ಲಿ ಅಂತಹ ಸುರಕ್ಷತಾ ಸಾಧನದಲ್ಲಿ ತೊಂದರೆ ಕಂಡುಬಂದ ಹಿನ್ನೆಲೆ, ಹೋಂಡಾ ಕಂಪನಿ ಈ ತೀರ್ಮಾನಕ್ಕೆ ಬಂದಿದೆಯಂತೆ. ಪ್ರಮುಖವಾಗಿ ಫ್ರಂಟ್ ಸೀಟ್ ಬೆಲ್ಟ್‌ಗಳಲ್ಲಿ ಸಮಸ್ಯೆಯಾಗಿದೆ ಎಂದು ತಿಳಿದುಬಂದಿದೆ. ಇದಕ್ಕಾಗಿ ಬರೋಬ್ಬರಿ 5 ಲಕ್ಷ ಕಾರು ಹಿಂಪಡೆಯಲಾಗುತ್ತಿದ್ದು, ಗ್ರಾಹಕರು ಸಹಕರಿಬೇಕೆಂದು ಮನವಿ ಮಾದಿದೆ.

ಪ್ರತಿಯೊಂದು ಕಾರಿನಲ್ಲಿ ಅಪಘಾತ ತಪ್ಪಿಸಲು ಸೀಟ್ ಬೆಲ್ಟ್ ಪ್ರಮುಖ ಸಾಧನವಾಗಿದ್ದು, ಇದನ್ನು ಸರಿಯಾಗಿ ಧರಿಸಿದರೇ ಪ್ರಾಣಾಪಾಯದಿಂದ ಪಾರಾಗಬಹುದು. ಸದ್ಯ, ಸೀಟ್ ಬೆಲ್ಟ್‌ನಲ್ಲಿಯೇ ಸಮಸ್ಯೆ ಕಾಣಿಸಿಕೊಂಡಿದೆ. ಆದರೆ, ಎಲ್ಲಿ ನಮ್ಮ ಕಾರನ್ನು ಹಿಂಪಡೆಯಲಾಗುತ್ತದೆ ಎಂದು ಭಾರತದಲ್ಲಿನ ಹೋಂಡಾ ಮಾಲೀಕರು ಭಯಪಡುವ ಅಗತ್ಯವಿಲ್ಲ. ಇದು ಕೇವಲ ಅಮೆರಿಕ ಹಾಗೂ ಕೆನಡಾ ದೇಶಗಳಿಗೆ ಮಾತ್ರ ಅನ್ವಯಿಸುತ್ತದೆ. ಈಗಾಗಲೇ ಹೋಂಡಾ ಡೀಲರ್ ಶಿಪ್ ಸಿಬ್ಬಂದಿ ತಮ್ಮ ಗ್ರಾಹಕರಿಗೆ ಮಾಹಿತಿ ನೀಡುತ್ತಿದ್ದಾರೆ.
ಅಮೆರಿಕ ಹಾಗೂ ಕೆನಡಾದಲ್ಲಿ ಯಾವೆಲ್ಲ ಕಾರುಗಳನ್ನು ಹಿಂಪಡೆಯಲಾಗಿದೆ ಎಂಬುದನ್ನು ನೋಡುವುವುದಾದರೆ, 2017 ರಿಂದ 2020ರವರೆಗೆ ಮಾರಾಟ ಮಾಡಿದ CR-V, 2018 ರಿಂದ 2019 ರವರೆಗಿನ ಅಕಾರ್ಡ್, 2018 ರಿಂದ 2020 ರವರೆಗಿನ ಒಡಿಸ್ಸಿ, 2019ರ ಇನ್ಸೈಟ್ ಹಾಗೂ 2019 ರಿಂದ 2020 ಮಾರಾಟ ಮಾಡಿದ ಅಕ್ಯುರಾ RDX ಕಾರುಗಳನ್ನು ಹಿಂಪಡೆಯಲಾಗಿದೆ. ಕೆಲವೇ ದಿನಗಳಲ್ಲಿ ಕಂಪನಿಯು ಈ ದೋಷವನ್ನು ಸರಿಪಡಿಸಲು ಮುಂದಾಗಿದೆ.

ಸದ್ಯ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ CR-V ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಅದಕ್ಕೂ ಮೊದಲು ರೂ.28.34 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿತ್ತು. ಇದು ಐದು ರೂಪಾಂತರಗಳಲ್ಲಿ ಪೆಟ್ರೋಲ್, ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಸಿಗುತ್ತಿತ್ತು. 118 ರಿಂದ 152 bhp ಗರಿಷ್ಠ ಪವರ್ ಹಾಗೂ 189 ರಿಂದ 300 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. FWD (ಫ್ರಂಟ್ ವೀಲ್ ಡ್ರೈವ್) ಹಾಗೂ AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದುಕೊಂಡಿತ್ತು.
ಹೋಂಡಾ, ಪ್ರಮುಖ ಕಾರದ 'ಅಕಾರ್ಡ್' ಅನ್ನು ಮಾರಾಟ ಮಾಡುತ್ತಿಲ್ಲ. ಇದು ರೂ.38 ರಿಂದ ರೂ.43.21 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿತ್ತು. ಐದು ಆಸನಗಳ ಆಯ್ಕೆಯನ್ನು ಹೊಂದಿದ್ದ ಈ ಕಾರು, 10.7 - 23.1 kmpl ಮೈಲೇಜ್ ನೀಡುವ ಸಾಮರ್ಥ್ಯ ಪಡೆದುಕೊಂಡಿತ್ತು. ಜೊತೆಗೆ 1993 ಸಿಸಿಯಿಂದ 3471 ಸಿಸಿಯ ಪೆಟ್ರೋಲ್ ಎಂಜಿನ್ ಅನ್ನು ಹೊಂದಿತ್ತು. ಇದೀಗ ಈ ಕಾರನ್ನು ಕೂಡ ಹಿಂಪಡೆಯಲಾಗುತ್ತಿದೆ.
ನವೀಕರಿಸಿದ ಒಡಿಸ್ಸಿ ಕಾರನ್ನು ಹೋಂಡಾ ಕಂಪನಿ ಅಮೆರಿಕ ಹಾಗೂ ಕೆನಡಾ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಇದು 3.5 ಲೀಟರ್ ಡೈರೆಕ್ಟ್ ಇಂಜೆಕ್ಷನ್ SOHC i-VTEC ಪೆಟ್ರೋಲ್ ಎಂಜಿನ್ ಹೊಂದಿದ್ದು, 280 HP ಪವರ್ ಉತ್ಪಾದಿಸಲಿದ್ದು, 10 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಇಷ್ಟೇ ಅಲ್ಲದೆ, ಕಳೆದ ವರ್ಷ ಹೋಂಡಾ ಕಂಪನಿ ಇನ್ಸೈಟ್ ಕಾರನ್ನು ಮಾರಾಟದಿಂದ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.
ಇನ್ನು, ಹೋಂಡಾ ನವೀಕರಿಸಿದ ಅಕ್ಯುರಾ RDX ಕಾರನ್ನು ಮಾರಾಟ ಮಾಡುತ್ತಿದೆ. ಇದು ಐದು ಆಸನಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಫ್ರಂಟ್ ಸೀಟ್ ಬೆಲ್ಟ್ ಸಮಸ್ಯೆಯನ್ನು ಸರಿಪಡಿಸಲು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹಿಂಪಡೆಯಲು ಮುಂದಾಗಿರುವುದು ಉತ್ತಮ ನಿರ್ಧಾರವೇ ಸರಿ ಎಂದು ಹೇಳಬಹುದು. ಮುಂಬರುವ ದಿನಗಳಲ್ಲಿ ಹೊಸ ಕಾರುಗಳಲ್ಲಿ ತಯಾರಿಸುವಾಗ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಿರಲಿ ಎಂಬುದು ಗ್ರಾಹಕರ ಅಭಿಪ್ರಾಯವಾಗಿದೆ.


Click it and Unblock the Notifications