Hyundai Exter: ಕಡಿಮೆ ಬೆಲೆಯ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿಗೆ ಭರ್ಜರಿ ಡಿಮ್ಯಾಂಡ್, ಇಲ್ಲಿದೆ ಮಾಹಿತಿ
ದೇಶದಲ್ಲಿ ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ಟಾಟಾ ಪಂಚ್ ದೊಡ್ಡಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಅದಕ್ಕೆ ಪೈಪೋಟಿ ನೀಡಲು ಹ್ಯುಂಡೈ (Hyundai) ಕಂಪನಿ ಎಕ್ಸ್‌ಟರ್ (Exter) ಕಾರನ್ನು ಕಳೆದ ಜುಲೈ ತಿಂಗಳು ಮಾರುಕಟ್ಟೆಯಲ್ಲಿ ಲಾಂಚ್ ಮಾಡಿತ್ತು. ಸದ್ಯ, ಈ ಎಸ್‌ಯುವಿ, ಭರ್ಜರಿ ಬೇಡಿಕೆ ಪಡೆದುಕೊಂಡಿದ್ದು, ಕಾಯುವಿಕೆ ಅವಧಿ ಹೆಚ್ಚಾಗಿದೆ.
ಪ್ರಸ್ತುತ, ಹ್ಯುಂಡೈ ಎಕ್ಸ್‌ಟರ್ ಕಾರಿನ ಎಂಟ್ರಿ ಲೆವೆಲ್ ಮಾದರಿಗಳಾದ ಇಎಕ್ಸ್, ಇಎಕ್ಸ್ (ಒ) ಭೋಪಾಲ್‌ನಲ್ಲಿ ವಿತರಣೆಯಾಗಲು ಈ ಸೆಪ್ಟೆಂಬರ್ ತಿಂಗಳಲ್ಲಿ 50 ವಾರಗಳವರೆಗೆ ಕಾಲಾವಕಾಶ ಬೇಕು. ಆದರೆ ಟಾಪ್ ಎಂಡ್ ವೇರಿಯೆಂಟ್ ಎಸ್ಎಕ್ಸ್ (ಒ) 22 ವಾರಗಳಲ್ಲಿಯೇ ವಿತರಣೆಯಾಗಲಿದೆ. ನಿಮಗೆ ಗೊತ್ತಿರಲಿ... ಈ ಕಾಯುವಿಕೆ ಅವಧಿ ರಾಜ್ಯದಿಂದ ರಾಜ್ಯಕ್ಕೆ, ರೂಪಾಂತರ ಹಾಗೂ ಡೀಲರ್ ಶಿಪ್ ಅನುಗುಣವಾಗಿ ಬೇರೆ ಇರುತ್ತದೆ.

ಹ್ಯುಂಡೈ ಎಕ್ಸ್‌ಟರ್ ಬಿಡುಗಡೆಯಾಗಿ ತಿಂಗಳು ಕಳೆಯುವುದರಲ್ಲಿ 50,000ಕ್ಕೂ ಹೆಚ್ಚಿನ ಬುಕ್ಕಿಂಗ್ ಸ್ವೀಕರಿಸುವುದನ್ನು ನೋಡಿದಾಗಲೇ ಅದರ ಡಿಮ್ಯಾಂಡ್ ಎಷ್ಟಿದೆ ಎಂಬುದು ಸುಲಭವಾಗಿ ಗೊತ್ತಾಗುತ್ತಿತ್ತು. ಭಾರತದ ಮಾರುಕಟ್ಟೆಯಲ್ಲಿ ಈ ಎಕ್ಸ್‌ಟರ್ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ರೂ.6 ರಿಂದ ರೂ.10.10 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ.
ಈ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 1.2 - ಲೀಟರ್, 4 ಸಿಲಿಂಡರ್ ಎಂಜಿನ್ ಪೆಟ್ರೋಲ್ ಎಂಜಿನ್ ಹೊಂದುದ್ದು, 81.8 bhp ಗರಿಷ್ಠ ಪವರ್ ಹಾಗೂ 113.8 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಿದೆ.
ಸಿಎನ್‌ಜಿ ಕಿಟ್ ಹೊಂದಿರುವ ಎಕ್ಸ್‌ಟರ್ ಕಾರು, ಅದೇ ಎಂಜಿನ್ ಪಡೆದಿದೆ. ಆದರೆ, ಕೊಂಚ ಕಡಿಮೆ ಪವರ್ ಹೊರಹಾಗುತ್ತದೆ. 67.7 bhp ಪವರ್ ಮತ್ತು 95.2 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು, ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುವುದಿಲ್ಲ. ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಸಿಗುತ್ತದೆ.
ಹ್ಯುಂಡೈ ಎಕ್ಸ್‌ಟರ್ ಮೈಲೇಜ್ ಬಗ್ಗೆ ಹೇಳುವುದಾದರೆ, ಇದು ಯಾವ ಬೈಕಿಗೂ ಕಮ್ಮಿ ಇಲ್ಲದಂತಹ ಇಂಧನ ದಕ್ಷತೆಯನ್ನು ಹೊಂದಿದೆ. ಪೆಟ್ರೋಲ್ ವೇರಿಯೆಂಟ್ಸ್ 19.2kmpl ರಿಂದ 19.4kmpl, ಸಿಎನ್‌ಜಿ ರೂಪಾಂತರ 27.1 km/kg ಮೈಲೇಜ್ ನೀಡುತ್ತದೆ. ಈ ಕಾರು, ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಮುಖ್ಯವಾಗಿ, 8 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿದೆ.
ಇದರೊಟ್ಟಿಗೆ, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಎಲೆಕ್ಟ್ರಿಕ್ ಸನ್‌ರೂಫ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಹಾಗೂ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ಫೀಚರ್ಸ್ ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಸೀಟ್‌ಬೆಲ್ಟ್ ರಿಮೈಂಡರ್, ISOFIX ಚೈಲ್ಡ್ ಸೀಟ್ ಆಂಕರ್ ಅನ್ನು ಒಳಗೊಂಡಿದೆ.
ಇನ್ನು, ವಿವಿಧ ರಾಜ್ಯಗಳಲ್ಲಿ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ ಪಡೆದುಕೊಂಡಿರುವ ಬೇಡಿಕೆಯನ್ನು ಗಮನಿಸಿದರೆ, ಅದು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಬಹುದು. ಈ ಕಾರು, ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯದೊಂದಿಗೆ ಖರೀದಿಗೆ ಸಿಗುವುದರಿಂದ ಹೆಚ್ಚಿನ ಗ್ರಾಹಕರಿಗೆ ಇಷ್ಟವಾಗುತ್ತಿದೆ. ಹೀಗೆ ಡಿಮ್ಯಾಂಡ್ ಮುಂದುವರಿದರೆ, ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ಪ್ರತ್ಯೇಕ ಸ್ಥಾನ ಗಳಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications