ಹ್ಯುಂಡೈ ಫೇಸ್‌ಲಿಫ್ಟ್ ಗ್ರಾಂಡ್ ಐ10 ನಿಯೋಸ್ ಅನಾವರಣ: ರೂ.11,000ಕ್ಕೆ ಬುಕ್ಕಿಂಗ್ ಆರಂಭ..
ಭಾರತದಲ್ಲಿ ಹ್ಯಾಚ್‌ಬ್ಯಾಕ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿವೆ. ಕೊಂಚ ಬೆಲೆ ಕಡಿಮೆಯಿರುವುದರಿಂದ ಇವುಗಳನ್ನು ಖರೀದಿಸಲು ಗ್ರಾಹಕರು ಇಷ್ಟಪಡುತ್ತಾರೆ. ದಕ್ಷಿಣ ಕೊರಿಯಾದ ಕಾರು ತಯಾರಕ ಕಂಪನಿ ಹ್ಯುಂಡೈ, ಫೇಸ್‌ಲಿಫ್ಟ್ ಗ್ರಾಂಡ್ ಐ10 ನಿಯೋಸ್ ಅನ್ನು ಅನಾವರಣಗೊಳಿಸಿದೆ. ಈ ಕಾರಿನ ಬುಕ್ಕಿಂಗ್ ರೂ.11,000 ಟೋಕನ್ ಮೊತ್ತಕ್ಕೆ ಆರಂಭವಾಗಿದೆ.
ಹ್ಯುಂಡೈ ಕಂಪನಿ, 2023ರ ಗ್ರಾಂಡ್ i10 ನಿಯೋಸ್ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್‌ನ ಲುಕ್ ಅನ್ನು ಅಪ್ಡೇಟ್ ಮಾಡಿದೆ. ಸದ್ಯ ಪ್ರತಿಯೊಬ್ಬರು ಕಾರಿನ ಬೆಲೆಗಿಂತ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಾರೆ. ಈ ಹೊಸ ಕಾರು ಅಧಿಕ ಸುರಕ್ಷತಾ ಮಾನದಂಡಗಳನ್ನು ಹೊಂದಿದ್ದು, ಅದನ್ನು ಮತ್ತಷ್ಟು ಉತ್ತಮಗೊಳಿಸಲು ವಿವಿಧ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ನೂತನ ಹ್ಯುಂಡೈ ಗ್ರಾಂಡ್ i10 ನಿಯೋಸ್ ಅನ್ನು ದೆಹಲಿಯಲ್ಲಿ ನಡೆಯುವ ಬಹುನೀರಿಕ್ಷಿತ ಆಟೋ ಎಕ್ಸ್‌ಪೋ (2023)ದಲ್ಲಿ ಪ್ರದರ್ಶಿಸಲಾಗುತ್ತದೆ. ಇದರಿಂದ ಗ್ರಾಹಕರಿಗೆ ನೀರಿಕ್ಷೆಗಳು ಹೆಚ್ಚಿಗಿದೆ ಎಂದು ಹೇಳಬಹುದು.

ಗ್ರಾಂಡ್ i10 ನಿಯೋಸ್ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್ ಪರಿಷ್ಕೃತ ಫ್ರಂಟ್ ಬಂಪರ್‌ನಲ್ಲಿ ದೊಡ್ಡದಾದ ಗ್ರಿಲ್ ಅನ್ನು ಪಡೆದುಕೊಂಡಿದೆ. ಫ್ರಂಟ್ ಬಂಪರ್‌ನ ಎರಡೂ ಅಂಚಿನಲ್ಲಿ ಏರ್ ಇನ್‌ಟೇಕ್‌ಗಳ ಪಕ್ಕದಲ್ಲಿ ಹೊಸ ಟ್ರೈ-ಆರೋ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಅಳವಡಿಸಲಾಗಿದೆ. ಈ ಕಾರು, ಹೊಸ 15-ಇಂಚಿನ ಅಲಾಯ್ ವೀಲ್ಸ್ ಹೊಂದಿದ್ದು, ನೋಡಲು ಚೆನ್ನಾಗಿ ಕಾಣುತ್ತದೆ. ರೇರ್ ನಲ್ಲಿ ಎಲ್ಇಡಿ ಟೈಲ್‌ಲೈಟ್‌ಗಳನ್ನು ಪಡೆದಿದ್ದು, ಅದು ಫುಲ್-ವಿಡ್ತ್ ಲೈಟ್‌ಬಾರ್‌ನಿಂದ ಸಂಪರ್ಕ ಹೊಂದಿದೆ.
ಹೊಸ ಹ್ಯುಂಡೈ ಗ್ರಾಂಡ್ i10 ನಿಯೋಸ್ ಫೇಸ್‌ಲಿಫ್ಟ್ ವಿವಿಧ ಆರು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಟೈಟಾನ್ ಗ್ರೇ, ಟೈಫೂನ್ ಸಿಲ್ವರ್, ಟೀಲ್ ಬ್ಲೂ, ಫಿಯರಿ ರೆಡ್, ಸ್ಪಾರ್ಕ್ ಗ್ರೆನ್ ಮತ್ತು ಪೋಲಾರ್ ವೈಟ್. ಕೊನೆಯ ಎರಡು ಬಣ್ಣಗಳು, ಡ್ಯುಯಲ್-ಟೋನ್ ಲುಕ್ ಗಾಗಿ ಬ್ಲ್ಯಾಕ್ ರೂಫ್ ಜೊತೆ ಲಭ್ಯವಿದೆ. ಸ್ಟೀರಿಂಗ್ ವೀಲ್ ಗೆ ಲೆದರ್ ಸುತ್ತಲಾಗಿದೆ. ಇಷ್ಟೇ ಅಲ್ಲದೆ, ಗ್ರ್ಯಾಂಡ್ i10 ನಿಯೋಸ್ ಕಾರು ಲಿಟ್ ಫುಟ್‌ವೆಲ್ ಮತ್ತು USB C ಚಾರ್ಜಿಂಗ್ ಪೋರ್ಟ್‌ಗಳನ್ನು ಸಹ ಹೊಂದಿದೆ.

ಹ್ಯುಂಡೈ ಗ್ರಾಂಡ್ i10 ನಿಯೋಸ್ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗೆ ಸಪೋರ್ಟ್ ಮಾಡುತ್ತದೆ. ಟಾಪ್-ಎಂಡ್ ರೂಪಾಂತರಗಳು ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಅಂತಹ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಇದು ಖಂಡಿತ ಗ್ರಾಹಕರಿಗೆ ಇಷ್ಟವಾಗಿ ಈ ಕಾರನ್ನು ಖರೀದಿಸಲು ಮನಸ್ಸು ಮಾಡಬಹುದು ಎಂದು ಹೇಳಬಹುದು.
ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳಲು ರೆಡಿಯಾಗಿರುವ ಹೊಸ ಗ್ರ್ಯಾಂಡ್ i10 ನಿಯೋಸ್ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದು ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವಾಗಿದೆ. ಈ ಹಿಂದಿನ ಮಾದರಿ 4 ಏರ್‌ಬ್ಯಾಗ್‌ಗಳನ್ನು ಮಾತ್ರ ಹೊಂದಿತ್ತು. ಅದನ್ನು 6ಕ್ಕೆ ಏರಿಸಲಾಗಿದೆ. EBD ಜೊತೆಗೆ ABS (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ. ಅಲ್ಲದೆ, ಕ್ರೂಸ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಡೇ-ನೈಟ್ ರಿಯರ್ ವ್ಯೂ ಮಿರರ್ ಅನ್ನು ಪಡೆದಿದೆ.

ಈ ಕಾರಿನ ಎಂಜಿನ್ ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, ಹಿಂದಿನ ಆವೃತ್ತಿಯಂತೆ ಅದೇ 1.2-ಲೀಟರ್ ಎಂಜಿನ್‌ನಿಂದ ಚಾಲಿತವಾಗಲಿದ್ದು, ಅದು ಪೆಟ್ರೋಲ್ ಆವೃತ್ತಿಯಲ್ಲಿ 82bhp ಪವರ್ ಮತ್ತು 113.8Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. CNG ಆವೃತ್ತಿ 68bhp ಪವರ್ ಮತ್ತು 95.2Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಪೆಟ್ರೋಲ್ ಆವೃತ್ತಿಯು ಮ್ಯಾನ್ಯುವಲ್ ಮತ್ತು AMT ಗೇರಾಕ್ಸ್ (ಎರಡೂ 5-ಸ್ಪೀಡ್) ಜೊತೆಗೆ ಖರೀದಿಗೆ ಲಭ್ಯವಿದ್ದರೆ, CNG ಆವೃತ್ತಿಯು ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸಿಗಲಿದೆ.
ಹ್ಯುಂಡೈ ಗ್ರಾಂಡ್ i10 ನಿಯೋಸ್ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್‌ನ ನಿರೀಕ್ಷಿತ ಬೆಲೆ 6 ಲಕ್ಷ ದಿಂದ 9 ಲಕ್ಷವರೆಗೆ (ಎಕ್ಸ್ ಶೋರೂಂ) ಇರಬಹುದು ಎಂದು ಅಂದಾಜಿಸಲಾಗಿದೆ. ಇದು ಮಾರುಕಟ್ಟೆಯಲ್ಲಿ ಈಗಾಗಲೇ ಖರೀದಿಗೆ ಲಭ್ಯವಿರುವ ಟಾಟಾ ಟಿಯಾಗೊ ಮತ್ತು ಮಾರುತಿ ಸುಜುಕಿ ಸ್ವಿಫ್ಟ್ ಕಾರುಗಳಿಗೆ ತೀವ್ರ ಪೈಪೋಟಿ ನೀಡಬಹುದು. ಹೊಸ ಗ್ರಾಂಡ್ i10 ನಿಯೋಸ್ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದ್ದು, ಅದರ ನವೀನ ಲುಕ್ ಗ್ರಾಹಕರಿಗೆ ಇಷ್ಟವಾಗಹುದು. ಜೊತೆಗೆ ಕೈಗೆಟುಕುವ ಬೆಲೆಯಲ್ಲಿ ಇರುವುದರಿಂದ ಖರೀದಿಸಲುಬಹುದು.


Click it and Unblock the Notifications