Maruti Jimny: ಭಾರತದ ಸೇನೆಗೆ ಜಬರ್ದಸ್ತ್ ಮಾರುತಿ ಸುಜುಕಿ ಜಿಮ್ನಿ? ಇಲ್ಲಿದೆ ಪ್ರಮುಖ ಮಾಹಿತಿ
ಭಾರತದ ಆಟೋಮೊಬೈಲ್ ಉದ್ಯಮದಲ್ಲಿ ಆಫ್ ರೋಡ್ ಎಸ್‌ಯುವಿ 'ಮಾರುತಿ ಸುಜುಕಿ ಜಿಮ್ನಿ 5 ಡೋರ್' ಸಖತ್ ಕ್ರೇಜ್ ಹುಟ್ಟುಹಾಕಿದೆ. ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಯುವ ಖರೀದಿದಾರರೂ ಭಾರೀ ನೀರಿಕ್ಷೆ ಇಟ್ಟುಕೊಂಡಿದ್ದಾರೆ. ಈ ಜಿಮ್ನಿ ನಮ್ಮ ಹೆಮ್ಮೆಯ 'ಭಾರತೀಯ ಸೇನೆ' ಸೇರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂಬುದು ಸದ್ಯ ವರದಿಯಾಗಿದೆ.
ಜಿಮ್ನಿ ಸೇರ್ಪಡೆಗೆ ಭಾರತೀಯ ಸೇನೆ ಆಸಕ್ತಿ ತೋರಿಸಿದೆ ಎಂಬ ಮಾಹಿತಿಯನ್ನು ಸ್ವತಃ ಮಾರುತಿ ಸುಜುಕಿಯ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಅವರೇ ಬಹಿರಂಗಪಡಿಸಿದ್ದಾರೆ. ಸೇನೆಯ ಅಗತ್ಯಕ್ಕೆ ತಕ್ಕಂತೆ ಜಿಮ್ನಿಯಲ್ಲಿ ಕೆಲವು ಮಾರ್ಪಾಡುಗಳನ್ನು ತರಲು ಅಧ್ಯಯನ ನಡೆಯುತ್ತಿದೆ ಎಂದು ಹೇಳಿದ್ದಾರೆ. ಆದರೆ, ಜಿಮ್ನಿ ಭಾರತದ ಸೇನೆಗೆ ಯಾವಾಗ ಸೇರ್ಪಡೆಯಾಗಲಿದೆ ಎಂಬುದರ ಬಗ್ಗೆ ಖಚಿತವಾಗಿ ತಿಳಿದಿಲ್ಲ.

ಜಿಮ್ನಿ ಸೇನಾ ವಾಹನವಾಗಬೇಕಾದರೆ, ಅದರಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಬೇಕಾಗಿದೆ. ಪ್ರಮುಖವಾಗಿ ಸಾಫ್ಟ್ ಟಾಪ್, ಎಂಜಿನ್ ಹಾಗೂ ಸಸ್ಪೆಷನ್ ಸೆಟಪ್ ಗೆ ಸಂಬಂಧಿಸಿದಂತೆ ಹಲವು ಕೆಲಸಗಳು ಆಗಬೇಕಾಗಿದೆ. ಪ್ರತಿಸ್ಪರ್ಧಿ ಕಂಪನಿ ಟಾಟಾದ ಸಫಾರಿ ಕಾರು, ಸೇನೆಯ ಭಾಗವಾಗಿದ್ದರೂ ಮಾರುತಿ ಸುಜುಕಿ ಸರಿ ಸುಮಾರು ಎರಡು ದಶಕ ತನ್ನದೇ 35,000 ಯುನಿಟ್ 'ಜಿಪ್ಸಿ'ಗಳನ್ನು ಆಲಿವ್ ಗ್ರೀನ್ ಬಣ್ಣದ ಆಯ್ಕೆಯಲ್ಲಿ ಆರ್ಮಿಗೆ ನೀಡಿದೆ.
ಭಾರತದ ಸೇನೆಯ ಪ್ರಮುಖ ವಾಹನವಾಗಿ ಗುರುತಿಸಿಕೊಂಡಿರುವ ಮಾರುತಿ ಸುಜುಕಿಯ 'ಜಿಪ್ಸಿ' ಜಾಗವನ್ನು ತುಂಬಲು ಜಿಮ್ನಿ ಬರುತ್ತಿದ್ದು, ಇದು ಉತ್ತಮ ಬೆಳವಣಿಗೆಯಾಗಿದೆ. ಆದರೆ, ಕೆಲವೊಂದು ಮಾರ್ಪಾಡುಗಳನ್ನು ಹೊಂದಿರಲಿದೆ. ಇದೀಗ, ಬಿಡುಗಡೆಗೆ ಸನಿಹವಾಗಿರುವ ಜಿಮ್ನಿ 5 ಡೋರ್ ಬಗ್ಗೆ ಮಾತನಾಡುವುದಾದರೇ, ಇದು ರೂ.10 - 12 ಲಕ್ಷ ಆರಂಭಿಕ ದರದಲ್ಲಿ ಭಾರತದ ಗ್ರಾಹಕರಿಗೆ ಸಿಗಬಹುದು.
ಮಾರುತಿ ಸುಜುಕಿ ಜಿಮ್ನಿಯಲ್ಲಿ ಆಫ್ ರೋಡ್ ಚಾಲನೆಗೆ ಸಾಧ್ಯವಾಗುವಂತೆ ಪವರ್ ಫುಲ್ ಎಂಜಿನ್ ಅಳವಡಿಸಲಾಗಿದ್ದು, 1.5 ಲೀಟರ್ ಪೆಟ್ರೋಲ್ ಎಂಜಿನ್, 103 bhp ಗರಿಷ್ಠ ಪವರ್ ಹಾಗೂ 134 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದೆ.
ಜಿಮ್ನಿ ಮೈಲೇಜ್ ವಿಚಾರದಲ್ಲೂ ಅತ್ಯುತ್ತಮವಾಗಿದ್ದು, ಕಂಪನಿ ಪ್ರಕಾರ, ಮ್ಯಾನುವಲ್ ರೂಪಾಂತರ 16.94 km/l ಹಾಗೂ ಆಟೋಮೆಟಿಕ್ ರೂಪಾಂತರ 16.39 km/l ಮೈಲೇಜ್ ನೀಡಲಿದೆ. ಜೊತೆಗೆ 40 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದ್ದು, ರೂಪಾಂತರಗಳಿಗೆ ಅನುಗುಣವಾಗಿ 656 ರಿಂದ 678 ಕಿಲೋಮೀಟರ್ ಓಡುತ್ತದೆ. ಬೇರೆ ಕಾರುಗಳಿಗೆ ಹೋಲಿಸಿದರೆ, ಆಫ್ ರೋಡ್ ಎಸ್‌ಯುವಿಯಾಗಿರುವುದರಿಂದ ಕಡಿಮೆ ಇಂಧನ ದಕ್ಷತೆ ಹೊಂದಿದೆ.
ನೂತನ ಮಾರುತಿ ಸುಜುಕಿ ಜಿಮ್ನಿ 5 ಡೋರ್, AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನ ಆಯ್ಕೆಯನ್ನು ಹೊಂದಿದೆ. ವೈಶಿಷ್ಟ್ಯಗಳ ವಿಚಾರದ ಬಗ್ಗೆ ಮಾತನಾಡುವುದಾದರೆ, 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್ ಹೊಂದಿದೆ.
ಇನ್ನು, ಅನಾವರಣಗೊಂಡ ದಿನದಿಂದ ಈವರೆಗೆ ಮಾರುತಿ ಸುಜುಕಿ ಜಿಮ್ನಿ 5 ಡೋರ್ 30,000ಕ್ಕೂ ಹೆಚ್ಚು ಬುಕಿಂಗ್ ಪಡೆದುಕೊಂಡಿದೆ. ಆಸಕ್ತ ಗ್ರಾಹಕರು, ರೂ.25,000 ಮುಂಗಡ ಹಣ ಪಾವತಿಸುವ ಮೂಲಕ ಆರ್ಡರ್ ಮಾಡಬಹುದು. ಒಂದೊಮ್ಮೆ ಜಿಮ್ನಿ ಭಾರತದ ಸೇನೆ ಸೇರ್ಪಡೆಗೊಂಡರೆ, ಕಂಪನಿಯ ಇತಿಹಾಸದಲ್ಲಿ ಅದು ಮಹತ್ವದ ಮೈಲಿಗಲ್ಲು ಆಗಲಿದೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications