ಮಹೀಂದ್ರಾದ Scorpio N, ಥಾರ್‌ಗೆ ಎಲ್ಲಿಲ್ಲದ ಬೇಡಿಕೆ.. ಬೆಚ್ಚಿಬೀಳಿಸುವಷ್ಟಿದೆ ಆರ್ಡರ್ ಸಂಖ್ಯೆ!!!
ಭಾರತದಲ್ಲಿ ಮಹೀಂದ್ರಾದ ಕಾರುಗಳು ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿವೆ. ಅವುಗಳ ವಿನ್ಯಾಸ, ವೈಶಿಷ್ಟ್ಯ ಹಾಗೂ ಕಾರ್ಯಕ್ಷಮತೆ ಪ್ರತಿಯೊಬ್ಬ ಗ್ರಾಹಕರನ್ನು ಸೆಳೆಯುತ್ತದೆ. ಸದ್ಯ, ಕಂಪನಿಯ ಸ್ಕಾರ್ಪಿಯೋ ಎನ್, XUV700 ಮತ್ತು ಥಾರ್ ಎಸ್‌ಯುವಿಗಳು ದೊಡ್ಡಮಟ್ಟದ ಬೇಡಿಕೆ ಪಡೆದಿದ್ದು, ಕಂಪನಿಯು 2.5 ಲಕ್ಷಕ್ಕೂ ಹೆಚ್ಚಿನ ಆರ್ಡರ್ ಪೂರೈಸಬೇಕಾಗಿದೆ.
ಮೊದಲಿಗೆ ಮಹೀಂದ್ರಾದ ಜನಪ್ರಿಯ ಎಸ್‌ಯುವಿಯಾಗಿರುವ ಸ್ಕಾರ್ಪಿಯೋ (Scorpio) ಬಗ್ಗೆ ಮಾತನಾಡೋಣ. ಇದು ಹೆಚ್ಚಿನ ಡಿಮ್ಯಾಂಡ್ ಹೊಂದಿದ್ದು, ಕಂಪನಿಯು ಸುಮಾರು 1.17 ಲಕ್ಷ ಆರ್ಡರ್ ಗಳನ್ನು ಗ್ರಾಹಕರಿಂದ ಪಡೆಕೊಂಡಿದೆ. ಇದರಿಂದ ಹೊಚ್ಚ ಹೊಸ ಸ್ಕಾರ್ಪಿಯೋ ಎನ್ 75 ವಾರ ಹಾಗೂ ಸ್ಕಾರ್ಪಿಯೋ ಕ್ಲಾಸಿಕ್ ವಿತರಣೆಯಾಗಲು 30 ವಾರ ಬೇಕಾಗಿದ್ದು, ಬೇಡಿಕೆಯನ್ನು ಪೂರೈಸಲು ಮಹೀಂದ್ರಾ ತಿಂಗಳಿಗೆ 14,000ಕ್ಕೂ ಹೆಚ್ಚು ಸ್ಕಾರ್ಪಿಯೋಗಳನ್ನು ಉತ್ಪಾದಿಸುತ್ತಿದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್ ಐದು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದ್ದು, ರೂ.13.05 - ರೂ.24.51 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಸಿಗಲಿದೆ. ಜೊತೆಗೆ ಗ್ರಾಹರನ್ನು ಆಕರ್ಷಿಸುವ ಹತ್ತು ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಸ್ಕಾರ್ಪಿಯೋ ಕ್ಲಾಸಿಕ್ ಕೇವಲ 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, ರೂ.13 ಲಕ್ಷದಿಂದ 16.81 ಲಕ್ಷ ದರದಲ್ಲಿ ಸಿಗಲಿದೆ.
ಕಂಪನಿಯ XUV700 ಎಸ್‌ಯುವಿ ಕೂಡ ಬಿಡುಗಡೆಯಾದಾಗಿನಿಂದ ಭಾರೀ ಬೇಡಿಕೆಯನ್ನು ಹೊಂದಿದ್ದು, 78,000 ಆರ್ಡರ್ ಗಳನ್ನು ಪೂರೈಸಬೇಕಿದೆ. ಡಿಮ್ಯಾಂಡ್ ಗೆ ಅನುಗುಣವಾಗಿ ಮಹೀಂದ್ರಾ, ತಿಂಗಳಿಗೆ ಕನಿಷ್ಠವೆಂದರೂ 8,000 ಯುನಿಟ್ XUV700 ಕಾರುಗಳನ್ನು ಉತ್ಪಾದಿಸುತ್ತಿದೆ. ಇದರ ಕೆಲವೊಂದು ರೂಪಾಂತರಗಳನ್ನು ವಿತರಣೆ ಪಡೆಯಲು 13 ತಿಂಗಳು ಕಾಯಬೇಕು. ಈ ಎಸ್‌ಯುವಿ, ರೂ.14.01 ಲಕ್ಷದಿಂದ ರೂ.26.18 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ.

ಈ ಮಹೀಂದ್ರಾ XUV700 ಎಸ್‌ಯುವಿ ಬಗ್ಗೆ ಮಾತನಾಡುವುದಾದರೆ, ಇದು, 2.0 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಪೆಟ್ರೋಲ್, 2.2 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಜೊತೆಗೆ ಸುರಕ್ಷತೆಯ ದೃಷ್ಟಿಯಿಂದಲೂ ಅತ್ಯುತ್ತಮ ಕಾರೆಂದು ಹೆಸರು ಮಾಡಿದ್ದು, ಗ್ಲೋಬಲ್ NCAPಯಿಂದ 5 ಸ್ಟಾರ್ ರೇಟಿಂಗ್ ಪಡೆದಿದೆ.
ಮಹೀಂದ್ರಾದ ಆಫ್ ರೋಡ್ ಎಸ್‌ಯುವಿಯಾಗಿ ಸಖತ್ ಫೇಮಸ್ ಆಗಿರುವ ಥಾರ್ ಸಹ ಹೆಚ್ಚಿನ ಬೇಡಿಕೆ ಹೊಂದಿದ್ದು, ಕಂಪನಿಯು 58,000 ಹೆಚ್ಚು ಆರ್ಡರ್ ಗಳನ್ನು ಬಾಕಿ ಉಳಿಸಿಕೊಂಡಿದೆ. ಗ್ರಾಹಕರ ಡಿಮ್ಯಾಂಡ್ ಪೂರೈಸಲು ತಿಂಗಳಿಗೆ 14,000 ಯುನಿಟ್ ಥಾರ್ ಕಾರುಗಳನ್ನು ಉತ್ಪಾದಿಸುತ್ತಿದೆ. 2WD (ಟೂ ವೀಲ್ ಡ್ರೈವ್ ಡ್ರೈವ್) ರೂಪಾಂತರ ಸುಮಾರು ಒಂದು ವರ್ಷ ಕಾಯುವಿಕೆ ಅವಧಿ ಹೊಂದಿದೆ. 4WD (ಫೋರ್ ವೀಲ್ ಡ್ರೈವ್) ಒಂದೆರಡು ವಾರದಲ್ಲಿ ವಿತರಣೆಯಾಗಲಿದೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಹೀಂದ್ರಾ ಥಾರ್, ರೂ.10.54 ಲಕ್ಷದಿಂದ ರೂ.16.78 ಲಕ್ಷ ದರದಲ್ಲಿ ಲಭ್ಯವಿದ್ದು, ರೂಪಾಂತರಗಳಿಗೆ ಅನುಗುಣವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.
ಒಟ್ಟಾರೆ, ಮಹೀಂದ್ರಾದ ಸ್ಕಾರ್ಪಿಯೋ, XUV700 ಹಾಗೂ ಥಾರ್ ಎಸ್‌ಯುವಿಗಳು ಪಡೆದಿರುವ ಬೇಡಿಕೆಯನ್ನು ಗಮನಿಸಿದರೆ, ಮುಂಬರುವ ದಿನಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಇವೇ ನಂಬರ್ 1 ಆದ್ರೂ ಅಚ್ಚರಿಯಿಲ್ಲ. ಇವುಗಳ ವಿನ್ಯಾಸ ಹಾಗೂ ಕಾರ್ಯಕ್ಷಮತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲು ಕಾರಣವಾಗಿದೆ. ಮುಂಬರುವ ದಿನಗಳಲ್ಲೂ ಖರೀದಿದಾರರಿಂದ ಇದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತ ಎಂಬುದುದನ್ನು ಕಾದುನೋಡಬೇಕಾಗಿದೆ.


Click it and Unblock the Notifications