Mahindra: ಈ ಮಾದರಿಯ 1 ಲಕ್ಷಕ್ಕೂ ಅಧಿಕ ಕಾರುಗಳನ್ನು ಪರೀಕ್ಷಿಸಲಿದೆ ಮಹೀಂದ್ರಾ, ನಿಮ್ಮ ವೆಹಿಕಲ್ ಇದ್ಯಾ?
ದೇಶದಲ್ಲಿ (Mahindra) ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಮಹೀಂದ್ರಾ ಗುರುತಿಸಿಕೊಂಡಿದೆ. ಇದೀಗ, ಎಕ್ಸ್ಯುವಿ (XUV) ಸರಣಿಯ ಆಯ್ದ ಕಾರುಗಳನ್ನು ಪರೀಕ್ಷಿಸುವುದಾಗಿ ಘೋಷಿಸಿದೆ. ಎಕ್ಸ್ಯುವಿ700 (XUV700) ಹಾಗೂ ಎಕ್ಸ್ಯುವಿ400 (XUV400) ಎಲೆಕ್ಟ್ರಿಕ್ ಕಾರಿನಲ್ಲಿ ತಾಂತ್ರಿಕ ದೋಷವಿದ್ದರೆ ಅದನ್ನು ಪರಿಶೀಲಿಸಿ, ಅಗತ್ಯವಿದ್ದರೆ ಉಚಿತವಾಗಿ ಸರಿಪಡಿಸಲಾಗುವುದು ಎಂದು ತಿಳಿಸಿದೆ.
ಮಹೀಂದ್ರಾ ಕಂಪನಿಯು ಜೂನ್ 8, 2021ರಿಂದ ಜೂನ್ 28, 2023ರ ನಡುವಿನ ಅವಧಿಯಲ್ಲಿ ಉತ್ಪಾದಿಸಿದ ಎಕ್ಸ್ಯುವಿ700 ಕಾರಿನ 1,08,306 ಯುನಿಟ್‌ಗಳ ಎಂಜಿನ್ ಬೇನಲ್ಲಿ ವೈರಿಂಗ್ ಲೂಮ್ ರೂಟಿಂಗ್ (wiring loom routing engine bay) ಪರಿಶೀಲಿಸಬೇಕಾಗಿದೆ ಎಂದು ಹೇಳಿದೆ. ಒಂದೊಮ್ಮೆ ಅಲ್ಲಿ ದೋಷವಿದ್ದರೆ, ಅಪಾಯವಾಗಬಹುದು ಮುನ್ನೆಚ್ಚರಿಕೆಯಾಗಿ ಈ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ.

ಇದರೊಟ್ಟಿಗೆ, ಫೆಬ್ರವರಿ 16, 2023 ಹಾಗೂ ಜೂನ್ 5, 2023ರ ಮಧ್ಯೆ ತಯಾರಿಸಿರುವ XUV400 ಎಲೆಕ್ಟ್ರಿಕ್ ಕಾರಿನ 3,560 ಯುನಿಟ್‌ಗಳ ಬ್ರೇಕ್ ಪೊಟೆನ್ಟಿಯೊಮೀಟರ್‌ನ ಸ್ಪ್ರಿಂಗ್ ರಿಟರ್ನ್ (spring return action brake potentiometer) ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಪಾಸಣೆ ಮಾಡಬೇಕು ಎಂದು ತಿಳಿಸಿದೆ. ಸ್ವತಃ ಗ್ರಾಹಕರನ್ನು ಮಹೀಂದ್ರಾ ಕಂಪನಿಯೇ ಸಂಪರ್ಕಿಸಲಿದ್ದು, ಕಾರುಗಳನ್ನು ಪರಿಶೀಲನೆ ನಡೆಸಿ, ಅಗತ್ಯವಿದ್ದರೆ ಮಾತ್ರ ಉಚಿತವಾಗಿ ದುರಸ್ತಿ ಕಾರ್ಯಗಳನ್ನು ನಡೆಸಲಿದೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಹೀಂದ್ರಾ ಎಕ್ಸ್ಯುವಿ700 ಎಸ್‌ಯುವಿ ರೂ.ರೂ.14.01 ಲಕ್ಷದಿಂದ ರೂ.26.18 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಇದು, 2.0 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಪೆಟ್ರೋಲ್, 2.2 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಸಿಗಲಿದ್ದು, 6 ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಮಹೀಂದ್ರಾ ಎಕ್ಸ್ಯುವಿ700 ಎಸ್‌ಯುವಿ ಪಡೆದುಕೊಂಡಿರುವ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಈ ಕಾರು 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸನ್ ರೂಫ್, ಡ್ಯೂಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್ ಅನ್ನು ಹೊಂದಿದೆ. ಸುರಕ್ಷತೆಯ ಸಲುವಾಗಿ 7 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬೇಕಿಂಗ್ ಸಿಸ್ಟಮ್) ಅನ್ನು ಒಳಗೊಂಡಿದೆ.
ಮಹೀಂದ್ರಾ ಎಕ್ಸ್ಯುವಿ400 ಎಲೆಕ್ಟ್ರಿಕ್ ಕಾರು, ರೂ.15.99 ಲಕ್ಷದಿಂದ ರೂ.19.39 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಈ ಕಾರು, 34.5 kWh ಮತ್ತು 39.4 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿದ್ದು, ಇವುಗಳಿಗೆ ಅಳವಡಿಸಿರುವ ಎಲೆಕ್ಟ್ರಿಕ್ ಮೋಟಾರ್, 150 hp ಪವರ್, 310 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಮೂರು ಡ್ರೈವ್ ಮೋಡ್ ಹೊಂದಿದೆ. ಅವುಗಳೆಂದರೆ, ಫನ್, ಫಾಸ್ಟ್ ಮತ್ತು ಫಿಯರ್‌ಲೆಸ್.
ರೇಂಜ್ ವಿಷಯವಾಗಿ ಮಾತನಾಡುವುದಾದರೆ, 34.5kWh ಬ್ಯಾಟರಿ ಪ್ಯಾಕ್ ಪಡೆದಿರುವ ಕಾರು, 375 km ಹಾಗೂ 39.4kWh ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು, 456 km ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ. 150 kmph ಟಾಪ್ ಸ್ವೀಡ್ ಪಡೆಯಲಿದೆ. ಮನೆ ವಿದ್ಯುತ್ ಬಳಕೆಯಲ್ಲಿ ಎಕ್ಸ್ಯುವಿ400 ಬ್ಯಾಟರಿ ಫುಲ್ ಚಾರ್ಜ್ ಆಗಲು 13 ಗಂಟೆಬೇಕು. 7-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಇನ್ನು, ಮಹೀಂದ್ರಾ ಕಂಪನಿ ದೇಶೀಯ ಮಾರುಕಟ್ಟೆಯಲ್ಲಿ ಎಸ್‌ಯುವಿ ಮಾರಾಟದಲ್ಲಿ ಐತಿಹಾಸಿಕ ದಾಖಲೆಯನ್ನು ನಿರ್ಮಾಣ ಮಾಡಿದೆ. ಕಳೆದ ಜುಲೈ ತಿಂಗಳು 36,205 ಯುನಿಟ್ ಎಸ್‌ಯುವಿಗಳನ್ನು ಸೇಲ್ ಮಾಡಿದೆ. ಕಳೆದ ವರ್ಷದ ಇದೇ ಅವಧಿಗೆ (27,584 ಯುನಿಟ್) ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 30% ಪ್ರಗತಿ ಸಾಧಿಸಿದೆ. ಇದಕ್ಕೆ ಕಂಪನಿಯ ಸ್ಕಾರ್ಪಿಯೋ, ಎಕ್ಸ್ಯುವಿ700 ಎಸ್‌ಯುವಿಗಳು ಪ್ರಮುಖ ಕಾರಣವಾಗಿವೆ.
ಆಗಸ್ಟ್ 4 ರಂದು ಕಂಪನಿಯು 2023-24ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇಕಡ 98% ನಿವ್ವಳ ಲಾಭವು ಹೆಚ್ಚಳವಾಗಿ ರೂ.2,774 ಕೋಟಿ ಆದಾಯ ಬಂದಿದೆ ಎಂದು ತಿಳಿಸಿತ್ತು. ಈ ಹಿಂದೆಯು ಕಳೆದ ವರ್ಷದ ಡಿಸೆಂಬರ್‌ನಲ್ಲಿ, ಜುಲೈ 1 ರಿಂದ ನವೆಂಬರ್ 11, 2022ರ ನಡುವೆ ಉತ್ಪಾದಿಸಿದ 6,618 ಯುನಿಟ್ ಸ್ಕಾರ್ಪಿಯೋ ಎನ್ ಮತ್ತು 12,566 ಯುನಿಟ್ ಎಕ್ಸ್ಯುವಿ700 ಕಾರುಗಳನ್ನು ಪರೀಕ್ಷಿಸಲು ಅವುಗಳನ್ನು ಹಿಂಪಡೆದಿತ್ತು.


Click it and Unblock the Notifications