Mahindra Scorpio-N: ಪೆಟ್ರೋಲ್‌ಗಿಂತ ಡೀಸೆಲ್ ಮಾದರಿಯನ್ನು ಮುಗಿಬಿದ್ದು ಖರೀದಿಸುತ್ತಿರುವ ಗ್ರಾಹಕ.. ಕಾರಣವೇನು?
ಭಾರತೀಯ ಕಾರು ಖರೀದಿದಾರರು ದೊಡ್ಡ ಎಸ್‌ಯುವಿ ಕೊಂಡುಕೊಳ್ಳುವಾಗ ಪೆಟ್ರೋಲ್‌ಗಿಂತ ಡೀಸೆಲ್ ಮಾದರಿಯನ್ನು ಆಯ್ಕೆ ಮಾಡುತ್ತಾರೆ. ಅದು, ಮಹೀಂದ್ರಾ ಸ್ಕಾರ್ಪಿಯೋ-ಎನ್ (Mahindra Scorpio-N) ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಈ ವರ್ಷ ಜನವರಿಯಿಂದ ಅಕ್ಟೋಬರ್ ತಿಂಗಳವರೆಗೆ ಕಂಪನಿಯು ಈ ಎಸ್‌ಯುವಿಗಳ ಒಟ್ಟು 97,880 ಯುನಿಟ್ ಮಾರಾಟಗೊಳಿಸಿದೆ ಎಂದು ತಿಳಿದುಬಂದಿದೆ.
ಸರಿ, ಮಹೀಂದ್ರಾ ಕಂಪನಿ ಈ ಮಟ್ಟದಲ್ಲಿ ಸ್ಕಾರ್ಪಿಯೋ-ಎನ್ ಎಸ್‌ಯುವಿಯನ್ನು ಸೇಲ್ ಮಾಡಿದೆ. ಇದರಲ್ಲಿ ಶೇಕಡ 95% ಅಂದರೆ 93,025 ಯುನಿಟ್ ಡಿಸೇಲ್ ಮಾದರಿಗಳನ್ನು ಗ್ರಾಹಕರು ಖರೀದಿಸಿದ್ದು, ಪೆಟ್ರೋಲ್ ರೂಪಾಂತರಗಳು ಶೇಕಡ 5% (4,855 ಯುನಿಟ್) ಮಾರಾಟಗೊಂಡಿವೆ. ಪೆಟ್ರೋಲ್‌ಗೆ ಬದಲಾಗಿ ಡೀಸೆಲ್ ಎಸ್‌ಯುವಿಗಳನ್ನು ಖರೀದಿದಾರರು ಕೊಂಡುಕೊಳ್ಳಲು ನಾನಾ ಕಾರಣಗಳಿದ್ದು, ಆ ಬಗ್ಗೆ ಇಲ್ಲಿ ವಿವರಿಸಿದ್ದೇವೆ.

ಭಾರತದಲ್ಲಿ ಪೆಟ್ರೋಲ್‌ಗೆ ಹೋಲಿಸಿದರೆ, ಡಿಸೇಲ್ ಬೆಲೆ ಕೊಂಚ ಕಡಿಮೆಯಿದ್ದು, ಇದು ಕೊಡ ಮಹೀಂದ್ರಾ ಸ್ಕಾರ್ಪಿಯೋ-ಎನ್ ಎಸ್‌ಯುವಿಯ ಡಿಸೇಲ್ ರೂಪಾಂತರವನ್ನು ಗ್ರಾಹಕರು ಹೆಚ್ಚು ಖರೀದಿಸಲು ಕಾರಣ ಎಂದು ಹೇಳಬಹುದು. ಜೊತೆಗೆ ಮೈಲೇಜ್ ವಿಚಾರಕ್ಕೆ ಬರುವುದಾದರೆ, ಆಟೋಮೆಟಿಕ್ ಗೇರ್ ಬಾಕ್ಸ್ ಹೊಂದಿರುವ ಪೆಟ್ರೋಲ್ ರೂಪಾಂತರ 10.14 kmpl, ಡೀಸೆಲ್ ವೇರಿಯೆಂಟ್ 12.73 kmpl ಇಂಧನ ದಕ್ಷತೆಯನ್ನು ಹೊಂದಿದೆ.
ಮೈಲೇಜ್ ವಿಚಾರವನ್ನು ಹೊರತುಪಡಿಸಿದರೆ, ಮಹೀಂದ್ರಾ ಸ್ಕಾರ್ಪಿಯೋ-ಎನ್ ಎಸ್‌ಯುವಿಯ ಡೀಸೆಲ್ ಮಾದರಿಗಳಲ್ಲಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ಪೆಟ್ರೋಲ್ ಮಾದರಿಗೆ ಹೋಲಿಕೆ ಮಾಡಿದರೆ, ಡೀಸೆಲ್ ರೂಪಾಂತರ ಹೆಚ್ಚಿನ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಇದು, ಹೆದ್ದಾರಿಗಳಲ್ಲಿ ದೀರ್ಘವಾಧಿ ಚಾಲನೆ ಮಾಡಲು ನೆರವಾಗುತ್ತದೆ. ಈ ಕಾರಣಕ್ಕೆ ಏನೋ ಬಹುತೇಕ ಗ್ರಾಹಕರು, ಡೀಸೆಲ್ ರೂಪಾಂತರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.

ಹಲವಾರು, ಮಹೀಂದ್ರಾ ಸ್ಕಾರ್ಪಿಯೋ-ಎನ್ ಎಸ್‌ಯುವಿಯ ಡೀಸೆಲ್ ರೂಪಾಂತರಗಳನ್ನು ಖರೀದಿಸಲು ದೊಡ್ಡ ಕಾರಣವೆಂದರೆ ಪೆಟ್ರೋಲ್‌ಗೆ ಹೋಲಿಸಿದರೆ, ಡಿಸೇಲ್ ರೂಪಾಂತರಗಳಿಗೆ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಆಫ್-ರೋಡ್ ಚಾಲನೆ ಇಷ್ಟಪಡುವವರಿಗೆ ಕಂಪನಿಯು ಈ ಎಸ್‌ಯುವಿಯನ್ನು 4X4 ಆಯ್ಕೆಯೊಂದಿಗೆ ನೀಡುತ್ತಿದೆ. ಆದರೆ, ಇದು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಮಾತ್ರ ಲಭ್ಯವಿದೆ.
ಮಹೀಂದ್ರಾ ಸ್ಕಾರ್ಪಿಯೋ-ಎನ್ (Mahindra Scorpio-N) ಡೀಸೆಲ್ ರೂಪಾಂತರಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲು ಇನ್ನೊಂದು ಕಾರಣ, ರಾಷ್ಟ್ರ ರಾಜಧಾನಿ ದೆಹಲಿ ಹೊರತುಪಡಿಸಿ, ಬೇರೆಲ್ಲೂ ಡೀಸೆಲ್ ಕಾರುಗಳಿಗೆ 10 ವರ್ಷಗಳ ನಂತರ ಬಳಕೆಗೆ ನಿಷೇಧವನ್ನು ವಿಧಿಸಿಲ್ಲ. ದೆಹಲಿಯಲ್ಲಿ ಪೆಟ್ರೋಲ್ ಮಾದರಿಗಳನ್ನು ಗರಿಷ್ಠ 15 ವರ್ಷ, ಡಿಸೇಲ್ ರೂಪಾಂತರಗಳನ್ನು 10 ವರ್ಷ ರಸ್ತೆಗಿಳಿಸಲು ಅವಕಾಶವನ್ನು ನೀಡಲಾಗಿದೆ.

ಸದ್ಯ, ಭಾರತದಲ್ಲಿ ಖರೀದಿಗೆ ಸಿಗುವ ಮಹೀಂದ್ರಾ ಸ್ಕಾರ್ಪಿಯೋ-ಎನ್ ರೂ.13.26 ಲಕ್ಷದಿಂದ ರೂ.24.54 ಲಕ್ಷ ಏಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. 6, 7 ಆಸನ ಆಯ್ಕೆಯೊಂದಿಗೆ ಸಿಗುವ ಈ ಕಾರಿನ 2.2-ಡೀಸೆಲ್ ಎಂಜಿನ್, ರೂಪಾಂತರಗಳಿಗೆ ಅನುಗುಣವಾಗಿ 132 PS ಪವರ್, 300 Nm ಪೀಕ್ ಟಾರ್ಕ್/ 175 PS ಗರಿಷ್ಠ ಪವರ್ ಹಾಗೂ 400 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು, 203 PS ಗರಿಷ್ಠ ಪವರ್, 380 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ವೀಡ್ ಮ್ಯಾನುವಲ್/ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದ್ದು, 2WD (ಟೂ ವೀಲ್ ಡ್ರೈವ್) 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದೆ.
ಮಹೀಂದ್ರಾ ಸ್ಕಾರ್ಪಿಯೋ-ಎನ್, 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಫ್ರಂಟ್ & ರೇರ್ ಕ್ಯಾಮೆರಾ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಹೊಂದಿದೆ.


Click it and Unblock the Notifications