Mahindra Scorpio N: ಆಘಾತ.. ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಎನ್ ಬೆಲೆ ಹೆಚ್ಚಳ
ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಮಹೀಂದ್ರಾ ಖ್ಯಾತಿಗಳಿಸಿದೆ. ಇದೀಗ, ತನ್ನ ಬಹುಬೇಡಿಕೆಯ ಸ್ಕಾರ್ಪಿಯೋ ಎನ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದೆ. ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯ ಹೊಂದಿರುವ ಈ ಕಾರಿನ ಬೆಲೆ ಏರಿಕೆಯಾಗಿರುವುದು ಗ್ರಾಹಕರಿಗೆ ಬೇಸರ ಉಂಟು ಮಾಡಿದ್ದು, ಇಲ್ಲಿದೆ ಹೆಚ್ಚಿನ ವಿವರ.
ಮಹೀಂದ್ರಾ ಸ್ಕಾರ್ಪಿಯೋ ಎನ್ (Mahindra Scorpio N) ದರ ರೂ.51,000 ವರೆಗೆ ಹೆಚ್ಚಳವಾಗಿದೆ. ಇದರಿಂದಾಗಿ ಈ ಎಸ್‌ಯುವಿ ಆರಂಭಿಕ ಬೆಲೆ ರೂ.13.05 ಲಕ್ಷವಾಗಿದೆ (ಎಕ್ಸ್ ಶೋರೂಂ). ಡೀಸೆಲ್ ಪವರ್‌ಟ್ರೇನ್, 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನ ಹಾಗೂ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರುವ Z8L ರೂಪಾಂತರದ ಬೆಲೆ ರೂ.24.51 ಲಕ್ಷ ಆಗಿದೆ. ಈ ವರ್ಷದಲ್ಲಿ ಜನವರಿ ಬಳಿಕ, ಇದು ಎರಡನೇ ಬಾರಿಗೆ ದರ ಏರಿಕೆಯಾಗಿದೆ.

ಭಾರತದ ಮಾರುಕಟ್ಟೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‌ಯುವಿ, ಬಿಡುಗಡೆಯಾದಾಗಿನಿಂದಲೂ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದಿರುವುದರಿಂದ ಗರಿಷ್ಠ ಕಾಯುವಿಕೆ ಅವಧಿಯನ್ನು ಹೊಂದಿದೆ. ಕೆಲವೊಂದು ರೂಪಾಂತರಗಳಿಗೆ ಇವತ್ತು ಬುಕ್ ಮಾಡಿದರೂ ಕನಿಷ್ಠವೆಂದರೂ 60 ವಾರಗಳು ಕಾಯಬೇಕು. ಇತ್ತೀಚೆಗೆ ಕಂಪನಿಯು Z6 ರೂಪಾಂತರದ ವಿತರಣೆಯನ್ನು ಪ್ರಾರಂಭಿಸಿದೆ. ಇದು ರೂ.16.05 ಲಕ್ಷ ಬೆಲೆಯನ್ನು ಹೊಂದಿದ್ದು, ಮ್ಯಾನುವಲ್ ಆವೃತ್ತಿ ಬೆಲೆ ರೂ.18.01 ಲಕ್ಷವಿದೆ.
ಮಹೀಂದ್ರಾ ಸ್ಕಾರ್ಪಿಯೋ ಎನ್ ಎರಡು ಪವರ್‌ಟ್ರೇನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. 2.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 200 bhp ಗರಿಷ್ಠ ಪವರ್ ಹಾಗೂ 380 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 6 ಸ್ವೀಡ್ ಆಟೋಮೆಟಿಕ್ ಅಥವಾ 6 ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದೆ.

ಮತ್ತೊಂದು ಪವರ್‌ಟ್ರೇನ್ ಆಯ್ಕೆ ಬಗ್ಗೆ ಮಾತನಾಡುವುದರೆ, 2.2 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿರುವ ಸ್ಕಾರ್ಪಿಯೋ ಎನ್, 172 bhp ಗರಿಷ್ಠ ಪವರ್ ಹಾಗೂ 370 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಅಲ್ಲದೆ, 6 ಸ್ವೀಡ್ ಅಟೋಮೆಟಿಕ್ ಟ್ರಾಸ್ಮಿಷನ್ ಆಯ್ಕೆ ಹೊಂದಿರುವ ಕಾರು, 400 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ.
ಮಹೀಂದ್ರಾ ಸ್ಕಾರ್ಪಿಯೋ ಎನ್ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ನೋಡುವುದಾದರೆ, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಸೆಮಿ ಡಿಜಿಟಲ್ ಇನ್ಸ್ರುಮೆಂಟಲ್ ಕ್ಲಸ್ಟರ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, 360-ಡಿಗ್ರಿ ಕ್ಯಾಮೆರಾ ಸೇರಿದಂತೆ ಭಾರತದ ಗ್ರಾಹಕರನ್ನು ತನ್ನತ್ತ ಆಕರ್ಷಿಸುವ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಸ್ಕಾರ್ಪಿಯೋ ಎನ್ ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು, ಗ್ಲೋಬಲ್ ಎನ್‌ಸಿಎಪಿಯಿಂದ ವಯಸ್ಕರ ರಕ್ಷಣೆ ವಿಭಾಗದಲ್ಲಿ 34ಕ್ಕೆ 29.25 ಅಂಕಗಳನ್ನು ಪಡೆಯುವ ಮೂಲಕ 5 ಸ್ಟಾರ್ ರೇಟಿಂಗ್ ಪಡೆದಿದೆ. ಆದರೆ, ಮಕ್ಕಳ ರಕ್ಷಣೆ ವಿಭಾಗದಲ್ಲಿ 3 ಸ್ಟಾರ್ ರೇಟಿಂಗ್ ಗಳಿಸಿದ್ದು, ಸುರಕ್ಷತೆ ಸಲುವಾಗಿ ಆರು ಏರ್ ಬ್ಯಾಗ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಮಹೀಂದ್ರಾ, ಈ ವರ್ಷದಲ್ಲಿ ಸ್ಕಾರ್ಪಿಯೋ ಎನ್ ಬೆಲೆಯನ್ನು ಎರಡನೇ ಬಾರಿಗೆ ಏರಿಕೆ ಮಾಡಿದ್ದು, ಅದು ಕೊಂಚ ಪ್ರಮಾಣದಲ್ಲಿ ಹೆಚ್ಚಳವಾಗಿರುವುದರಿಂದ ಗ್ರಾಹಕರ ಮೇಲೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಜೊತೆಗೆ ಸ್ಕಾರ್ಪಿಯೋ ಎನ್ ತನ್ನದೇ ಅಭಿಮಾನಿ ಬಳಗವನ್ನು ಹೊಂದಿರುವುದರಿಂದ ಅವರಿಗೆ ಈ ಬೆಲೆ ಏರಿಕೆ ದೊಡ್ಡ ವಿಚಾರವೇ ಆಗುವುದಿಲ್ಲ. ಜೊತೆಗೆ ಕೆಲವು ಮಾದರಿಗಳನ್ನು ಇವತ್ತು ಬುಕ್ ಮಾಡಿದರೂ 60 ವಾರಗಳು ಕಾಯಬೇಕು.


Click it and Unblock the Notifications