Mahindra Scorpio N: ಬಹು ಬೇಡಿಕೆಯ ಮಹೀಂದ್ರಾ ಸ್ಕಾರ್ಪಿಯೋ ಎನ್ Z6 ರೂಪಾಂತರ ವಿತರಣೆ ಪಡೆದ ಮೊದಲ ಗ್ರಾಹಕ
ಭಾರತದ ಪ್ರಮುಖ ವಾಹನ ತಯಾರಕ ಕಂಪನಿ ಮಹೀಂದ್ರಾ, ಬಹುನೀರಿಕ್ಷಿತ ಸ್ಕಾರ್ಪಿಯೋ ಎನ್ 'Z6' ರೂಪಾಂತರದ ವಿತರಣೆಯನ್ನು ಪ್ರಾರಂಭಿಸಿದೆ. ಮೊದಲ ಗ್ರಾಹಕ ಖುಷಿಯಿಂದಲೇ ಡೆಲಿವರಿ ಪಡೆದಿದ್ದಾರೆ. ಈ ಎಸ್‌ಯುವಿ ಪ್ರಸ್ತುತ ಗರಿಷ್ಠ ಕಾಯುವಿಕೆ ಅವಧಿಯನ್ನು ಹೊಂದಿದೆ. ಜೊತೆಗೆ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ.
ಮಹೀಂದ್ರಾ ಸ್ಕಾರ್ಪಿಯೋ ಎನ್ Z6 MT ಡೀಸೆಲ್ ರೂಪಾಂತದ ಮೊದಲ ಯುನಿಟ್‌ನ್ನು ಮಾಲೀಕನಿಗೆ ಡೆಲಿವರಿ ನೀಡಲಾಗಿದೆ. ಇದರ ಎಕ್ಸ್ ಶೋರೂಂ ಬೆಲೆ ರೂ.14.99 ಲಕ್ಷ ಇದ್ದು, ಆನ್-ರೋಡ್ ದರ ರೂ.18.63 ಲಕ್ಷವಾಗಿದೆ. ಆದರೆ, ಪ್ರಾರಂಭದಲ್ಲಿಯೇ ಬುಕಿಂಗ್ ಮಾಡಿರುವುದರಿಂದ ಈ ಬೆಲೆಯಲ್ಲಿ ಸಿಕ್ಕಿದೆ. ಜನವರಿಯಲ್ಲಿ ದರ ಏರಿಕೆಯಾದ ಹಿನ್ನೆಲೆ, ಸ್ಕಾರ್ಪಿಯೋ ಎನ್' Z6 ರೂಪಾಂತರದ ಬೆಲೆ ರೂ.15.64 ಲಕ್ಷ ಆಗಿದ್ದು, ಬುಕಿಂಗ್ ದರಕ್ಕೆ ಹೋಲಿಸಿದರೆ, ಸುಮಾರು ರೂ.60 ಸಾವಿರ ಹೆಚ್ಚಳವಾಗಿದೆ.

ದೇಶೀಯ ಮಾರುಕಟ್ಟೆಯಲ್ಲಿ 2022ರಲ್ಲಿ ಬಿಡುಗಡೆಯಾದ ಮಹೀಂದ್ರಾ ಸ್ಕಾರ್ಪಿಯೋ ಎನ್ 6 ಹಾಗೂ 7 ಆಸನ ವ್ಯವಸ್ಥೆಯಲ್ಲಿ ಒಟ್ಟು 5 ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, Z2, Z4, Z6, Z8, ಹಾಗೂ Z8 L. ರೂ.12.74 ಲಕ್ಷದಿಂದ ರೂ.24.05 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, Z8 ಟಾಪ್ ಎಂಡ್ ರೂಪಾಂತರವಾಗಿದೆ.
ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‍ಯುವಿಯ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು ಎರಡು ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. 2.2-ಲೀಟರ್ ಡೀಸೆಲ್ ಎಂಜಿನ್, 132 PS ಗರಿಷ್ಠ ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹಿಂದಿದೆ. ಟಾಪ್ ಎಂಡ್ ಮಾದರಿಯು 175 PS ಪವರ್, 400 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಮತ್ತೊಂದು 2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 200 PS ಗರಿಷ್ಠ ಪವರ್ ಹಾಗೂ 370 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಮಹೀಂದ್ರಾ ಈಗಾಗಲೇ ಸ್ಕಾರ್ಪಿಯೋ ಎನ್ ಎಂಜಿನ್ ಅನ್ನು ದೇಶಾದ್ಯಂತ ಏಪ್ರಿಲ್ 1ರಿಂದ ಜಾರಿಯಾಗಲಿರುವ BS6 ಹಂತ 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಿದೆ.
ಮಹೀಂದ್ರಾ ಸ್ಕಾರ್ಪಿಯೋ ಎನ್ ಗ್ರಾಹಕರನ್ನು ಆಕರ್ಷಿಸುವಂತೆ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಸೆಮಿ ಡಿಜಿಟಲ್ ಇನ್ಸ್ರುಮೆಂಟಲ್ ಕ್ಲಸ್ಟರ್, 360-ಡಿಗ್ರಿ ಕ್ಯಾಮೆರಾ, ಸುರಕ್ಷತೆಯ ಸಲುವಾಗಿ 6 ಏರ್ ಬಾಗ್ಸ್ ಪಡೆದುಕೊಂಡಿದೆ.
ಮಹೀಂದ್ರಾ ಸ್ಕಾರ್ಪಿಯೋ ಎನ್ ವಿತರಣೆಯನ್ನು ಪಡೆಯಲು ಖರೀದಿದಾರರು ಗರಿಷ್ಠ ಸಮಯ ಕಾಯಬೇಕು. Z6, Z8 ರೂಪಾಂತರಗಳಿಗೆ 55 ರಿಂದ 60 ವಾರ, Z8 L ರೂಪಾಂತರಕ್ಕೆ 56 ರಿಂದ 58 ವಾರ ಹಾಗೂ Z2 ರೂಪಾಂತರ ವಿತರಣೆಯಾಗಲು 52 ರಿಂದ 54 ಸಮಯಬೇಕಾಗುತ್ತದೆ. ಇದರ ಜನಪ್ರಿಯತೆ ಯಾವ ಪ್ರಮಾಣದಲ್ಲಿದೆ ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಬಿಡುಗಡೆಗೊಂಡ ಕೇವಲ 30 ನಿಮಿಷಗಳಲ್ಲಿ 1 ಲಕ್ಷ ಮಂದಿ ಈ ಎಸ್‌ಯುವಿಗಾಗಿ ಬುಕ್ ಮಾಡಿದ್ದರು.
ಇಲ್ಲಿಯವರೆಗೆ ಗ್ರಾಹಕರಿಗೆ ಸ್ಕಾರ್ಪಿಯೋ ಎನ್ ಟಾಪ್ ಎಂಡ್ ಮಾದರಿ Z8 ರೂಪಾಂತರವನ್ನು ಮಾತ್ರ ವಿತರಣೆ ಮಾಡಲಾಗುತ್ತಿತ್ತು. ಇದೀಗ, Z6 ವಿತರಣೆಯನ್ನು ಮೊದಲ ಗ್ರಾಹಕ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇತರೆ ರೂಪಾಂತರಗಳ ಡಿಲಿವರಿಯು ಆರಂಭವಾಗಲಿದೆ. ಆದರೆ, ಸ್ಕಾರ್ಪಿಯೋ ಎನ್ ಬಹು ಬೇಡಿಕೆ ಹೊಂದಿರುವುದರಿಂದ ಅದು ಕೊಂಚ ನಿಧಾನವಾಗಬಹುದು. ಅಲ್ಲದೆ, ಇವತ್ತಿಗೂ ಈ ಎಸ್‌ಯುವಿಗಾಗಿ ಗ್ರಾಹಕರು ಬುಕಿಂಗ್ ಮಾಡುತ್ತಿದ್ದಾರೆ.


Click it and Unblock the Notifications