ಸ್ಕಾರ್ಪಿಯೋ ಫ್ಲಾಪ್ ಆಗಿದ್ದಿದ್ದರೆ ಕಂಪನಿ ಬೋರ್ಡ್ ನನ್ನನ್ನು ಫೈರ್ ಮಾಡುತ್ತಿತ್ತು: ಆನಂದ್ ಮಹೀಂದ್ರಾ
ಮಹೀಂದ್ರಾ ಅಂದರೆ ನಮಗೆ ನೆನಪಾಗುವುದು ಮಹೀಂದ್ರಾ ವಾಹನಗಳು ಮತ್ತು ಆನಂದ್ ಮಹೀಂದ್ರಾ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಒಂದಿಲ್ಲೊಂದು ವಿಷಯಗಳಿಂದ ಚರ್ಚೆಯಲ್ಲಿರುವ ಇವರು ವಾಹನ ಪ್ರೇಮಿಗಳಿಗೆ ಚಿರ ಪರಿಚಿತರು. ದೇಶಿ ಪ್ರತಿಭೆಗಳು ಸಾಧನೆ ಮಾಡಿದಾಗ ಅವರನ್ನು ಗುರುತಿಸುವುದರಲ್ಲಿ ಆನಂದ್ ಮಹೀಂದ್ರಾ ಸಿದ್ದ ಹಸ್ತರು.
ಇತ್ತೀಚಿನ ದಿನಗಳಲ್ಲಿ ಮಹೀಂದ್ರಾ ಕಂಪನಿಯ ಸಾಧನೆ ಆಕಾಶದೆತ್ತರಕ್ಕೆ ಸಾಗುತ್ತಿದೆ. ಒಂದಿಲ್ಲೊಂದು ರೀತಿಯಲ್ಲಿ ಪ್ರಯೋಗಗಳನ್ನು ಮಾಡುತ್ತಾ ಭಾರತೀಯ ಮಾರುಕಟ್ಟೆಗೆ ಉತ್ತಮ ವಾಹನಗಳನ್ನು ಪರಿಚಯಿಸುತ್ತಿದ್ದು, ಅವುಗಳನ್ನು ಜನರು ಎರಡೂ ಕೈಯಿಂದ ಸ್ವೀಕರಿಸುತ್ತಿರುವುದನ್ನು ಕಾಣಬಹುದು. ಇತ್ತೀಚೆಗಷ್ಟೇ ಮಹೀಂದ್ರಾ ಕಂಪನಿಯು ೯ ಲಕ್ಷ ಸ್ಕಾರ್ಪಿಯೋ ಎಸ್‌ಯುವಿಯನ್ನು ಮಾರಾಟ ಮಾಡಿ ಮೈಲುಗಲ್ಲು ಸೃಷ್ಟಿಸಿತ್ತು.

ಈ ಕುರಿತಾಗಿ ಆನಂದ್ ಮಹೀಂದ್ರಾ ಅವರು ಮಾಡಿದ ಟ್ವೀಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಗಮನ ಸೆಳೆದಿದೆ. ಆ ಟ್ವೀಟ್‌ನಲ್ಲಿರುವ ಪ್ರಮುಖ ಅಂಶವೇನೆಂದರೆ, ಇಂದು ಇಷ್ಟೊಂದು ಪ್ರಸಿದ್ದವಾಗಿ ಮುನ್ನುಗ್ಗುತ್ತಿರುವ ಮಹೀಂದ್ರಾ ಸ್ಕಾರ್ಪಿಯೋ ಏನಾದರೂ ಒಂದೊಮ್ಮೆ ಮಾರುಕಟ್ಟೆಯಲ್ಲಿ ಫ್ಲಾಪ್ ಆಗಿದ್ದರೆ ಬೋರ್ಡ್ ನನ್ನನ್ನು ಫೈರ್ ಮಾಡುತ್ತಿತ್ತು ಎಂದು ಬರೆದುಕೊಂಡಿದ್ದಾರೆ.
ಇನ್ನು ಈ ಟ್ವೀಟ್‌ನಲ್ಲಿ ಮೊದಲೇ ಅವರು, ಇಡೀ ಮಹೀಂದ್ರಾ ಸಂಸ್ಥೆಯು ಮಹೀಂದ್ರಾ ಸ್ಕಾರ್ಪಿಯೋ ಕಾರಿನ ಯಶಸ್ಸಿಗೆ ಕಾಯುತ್ತಿತ್ತು. ಕಂಪನಿಯ ಮುಂದಿನ ಅಭಿವೃದ್ದಿಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಗೆಲುವು ಅತ್ಯವಶ್ಯಕವಾಗಿತ್ತು. ಹಾಗಾಗಿ ಎಲ್ಲರ ನಿರೀಕ್ಷೆಯೂ ಸ್ಕಾರ್ಪಿಯೋ ಮೇಲಿತ್ತು ಎಂದು ಅವರು ಇದೇ ಸಂಧರ್ಭದಲ್ಲಿ ತಿಳಿಸಿದ್ದಾರೆ.

ಸದ್ಯ ಮಹೀಂದ್ರಾ ಕಂಪನಿಯು ತನ್ನ ಸ್ಕಾರ್ಪಿಯೋ ಎಸ್‌ಯುವಿಯನ್ನು 900000 ಮನೆಗಳಿಗೆ ತಲುಪಿಸಿರುವ ಮೂಲಕ ಅಪರೂಪದ ಸಾಧನೆಯನ್ನು ಮಾಡಿದೆ. ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ (Mahindra Scorpio) ಎಸ್‌ಯುವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗಿನಿಂದ ಹಿಡಿದು ಸುಮಾರು 9 ಲಕ್ಷ ಕಾರುಗಳನ್ನು ಮಾರಾಟ ಮಾಡುವುದರ ಮೂಲಕ ಹೊಸ ಮೈಲುಗಲ್ಲು ಸೃಷ್ಟಿಸಿದೆ.
ಆನಂದ್ ಮಹೀಂದ್ರಾ ಅವರ ಈ ಟ್ವೀಟ್‌ನಿಂದ ಅವರು ಎಷ್ಟರ ಮಟ್ಟಿಗೆ ಸ್ಕಾರ್ಪಿಯೋ ಕಾರಿನ ಜೊತೆ ಆರಂಭದ ದಿನಗಳಿಂದಲೂ ಒಡನಾಟವನ್ನು ಇಟ್ಟುಕೊಂಡಿದ್ದರು ಎಂಬುದು ನಮಗೆ ಅರ್ಥ ಮಾಡಿಕೊಳ್ಳಬಹುದಾಗಿದೆ. ಈ ಮಟ್ಟಿನ ಪ್ರಾಮಾಣಿಕ ಪರಿಶ್ರಮ ಇದ್ದಿದ್ದಕ್ಕೆ ಮಹೀಂದ್ರಾ ಕಂಪನಿಯು ಇವತ್ತು ಪ್ರಮುಖ ವಾಹನ ನಿರ್ಮಾಣ ಕಂಪನಿಯಾಗಿ ಮಾರ್ಪಾಡಾಗಿರುವುದು.
ಈಗಿನ ಮಹೀಂದ್ರಾ ಸ್ಕಾರ್ಪಿಯೋ ಎನ್ 2.2 ಲೀಟರ್ ಡೀಸೆಲ್ ಇಂಜಿನ್ ಜೊತೆ ಬರುತ್ತಿದ್ದು, ಈ ಎಂಜಿನ್ ಸಹಾಯದಿಂದ ಸ್ಕಾರ್ಪಿಯೋ ಎನ್ 172 ಬಿಹೆಚ್‌ಪಿ ಪವರ್ ಮತ್ತು 370 ಎನ್‌ಎಮ್ ಟಾರ್ಕನ್ನು ಹೊರ ಹಾಕುವ ಸಾಮರ್ಥ್ಯವನ್ನು ಹೊಂದಿದೆ. ಇದೇ ಕಾರಿನ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಹೊಂದಿರುವ ವೇರಿಯಂಟ್‌ನ ಕಾರು ಸುಮಾರು 400 ಎನ್‌ಎಮ್ ಟಾರ್ಕನ್ನು ಉತ್ಪಾದಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications